ಲಕ್ಷಾಂತರ ರುಪಾಯಿ ಲಂಚ; ಹಣ್ಣು, ತರಕಾರಿ ಮಾರುಕಟ್ಟೆ ಮಳಿಗೆಗಳಿಗೆ ಅನಧಿಕೃತ ನೋಂದಣಿ, 4.74 ಕೋಟಿ ನಷ್ಟ

ಬೆಂಗಳೂರು; ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಸಹ ಲಕ್ಷಾಂತರ ರುಪಾಯಿ ಲಂಚ ಪಡೆದು ಎಪಿಎಂಸಿ ಮಳಿಗೆ ನೋಂದಣಿ ಮಾಡಿಕೊಟ್ಟಿರುವ ಪ್ರಕರಣವು ಬಹಿರಂಗವಾಗಿವೆ.

 

ಬೀದರ್‍‌ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಮಳಿಗೆದಾರರಿಂದ ಲಂಚ ಪಡೆದು ಅನಧಿಕೃತವಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಸಹಕಾರ ಇಲಾಖೆಗೆ ಕನ್ನಡ ಸಮರ ಸೇನೆಯ ಅಧ್ಯಕ್ಷ ಅವಿನಾಶ ದೀನೇ ಎಂಬುವರು ದೂರು ಸಲ್ಲಿಸಿದ್ದಾರೆ. 2024ರ ಆಗಸ್ಟ್‌ 26ರಂದು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

‘ಉಚ್ಛ ನ್ಯಾಯಾಲಯದ ಕಲ್ಬುರ್ಗಿ ಪೀಠದಲ್ಲಿ ಪ್ರಕರಣಗಳು ಬಾಕಿ ಇರುವಾಗಲೇ ಏಕಾಏಕೀ 2024 ಮೇ ಮತ್ತು ಜೂನ್‌ನಲ್ಲಿ ಎಲ್ಲಾ ವ್ಯಾಪಾರಸ್ಥರಿಂದ ಸುಮಾರು 2ರಿಂದ 3 ಲಕ್ಷ ರು ಲಂಚವನ್ನು ಪಡೆದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಎಲ್ಲರಿಗೂ ನೋಂದಣಿ ಮಾಡಿಕೊಟ್ಟಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಮದೀನಾ ಪ್ರೂಟ್‌ ಕಂಪನಿ, ಕೆ ಜಿ ಎನ್‌ ಫ್ರೂಟ್‌ ಕಮಿಷನ್ fಏಜೆಂಟ್‌, ಮಹ್ಮದ ಮುಜಮಿಲ್‌ ಅಹ್ಮದ್‌, ನ್ಯೂ ರಾಯಲ್‌ ಫ್ರೂಟ್‌, ಮಹ್ಮದ ಜಮೀಲ್‌ ಅಹ್ಮದ್‌, ನ್ಯೂ ಸ್ಟಾರ್‍‌ ಮದೀನಾ ಟ್ರೇಡರ್ಸ್‌, ಎಚ್‌ ಎಂ ಅಂಡ್‌ ಕಂಪನಿ, ಶ್ರೀ ಸಾಯಿ ಟ್ರೇಡಿಂಗ್‌ ಕಂಪನಿ, ಅಲ್‌ ಹಜ್‌ ಶೇಖ ಅಹ್ಮದ್‌ ಫ್ರೂಟ್‌ ಕಂಪನಿಗೆ ಅನಧಿಕೃತವಾಗಿ ನೋಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.

 

 

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರಮೇಶ್ವರಿ ಫುಲೇಕರ್‍‌ ಅವರು ಪ್ರತಿ ಒಂದು ಅಂಗಡಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಒಟ್ಟು ಮೌಲ್ಯ 13,00,000 ರು. ಮೇಲೆ ಶೇ.12ರಂತೆ ದಂಡ ವಸೂಲಿ ಮಾಡಬೇಕಾಗಿತ್ತು. ಈ ದಂಡವು ಒಂದು ವರ್ಷಕ್ಕೆ 1,56,000 ರು. ರ ಪ್ರಕಾರ ಇಲ್ಲಿಯವರೆಗೆ 8 ವರ್ಷಕ್ಕೆ 4,74,24,000 ರು. ಆಗಲಿದೆ. ಆದರೆ 4.74 ಕೋಟಿ ರು.ಗಳನ್ನು ವಸೂಲಿ ಮಾಡದೇ ಸರ್ಕಾರಕ್ಕೆ ನಷ್ಟವುಂಟಾಗಿದೆ. ಪ್ರತಿ ಅಂಗಡಿಯವರಿಂದ ಸುಮಾರು 5 ಲಕ್ಷ ರು. ಲಂಚ ಪಡೆದು ನೋಂದಣಿ ಮಾಡಿಸಿಕೊಡಲಾಗಿದೆ,’ ಎಂದು ಅವಿನಾಶ ದೀನೇ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ದೂರಿನಲ್ಲೇನಿದೆ?

 

ಬೀದರ್‍‌ನ ಹಳ್ಳದ ಕೇರಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ 36 ಮಳಿಗೆಗಳನ್ನು ನೋಂದಣಿ ಮಾಡಿಕೊಡಲಾಗಿದೆ. 2016ರಲ್ಲಿ ಒಟ್ಟು 38 ಮಳಿಗೆಗಳು ಹಂಚಿಕೆಯಾಗಿದ್ದವು. ಈ ಮಳಿಗೆಗಳಿಗೆ ಒಟ್ಟು 15,71,635 ಲಕ್ಷ ರು. ಎಂದು ನಿಗದಿಪಡಿಸಿತ್ತು. ನಂತರ ಸರ್ಕಾರವು ಇದನ್ನು ಪುನರ್‍‌ ಪರಿಶೀಲಿಸಿತ್ತು. ಇದರ ಪ್ರಕಾರ 13,00,000 ಲಕ್ಷ ರು. ಎಂದು ನಿಗದಿಪಡಿಸಿತ್ತು. ಅಲ್ಲದೇ ಕಟ್ಟದ ಮೌಲ್ಯವನ್ನು 6 ತಿಂಗಳೊಳಗಾಗಿ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಷರತ್ತು ಹಾಕಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಆದರೆ ಈ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರಸ್ಥರು ಮಳಿಗೆಗಳ ಉಳಿದ ಮೌಲ್ಯವನ್ನು ಸಮಿತಿಗೆ ತುಂಬಿಲ್ಲ. 38 ಮಳಿಗೆಗಳ ಪೈಕಿ ಇಬ್ಬರು ಮಾತ್ರ ಸರ್ಕಾರ ನಿಗದಿಪಡಿಸಿದ್ದ ಮೌಲ್ಯವನ್ನು ಪಾವತಿಸಿದ್ದರು. 36 ಮಂದಿ ವರ್ತಕರು ಸರ್ಕಾರವು ನಿಗದಿಪಡಿಸಿದ್ದ ಮೌಲ್ಯವನ್ನು ಪಾವತಿಸಿರಲಿಲ್ಲ. ಹೀಗಾಗಿ ಸಮಿತಿಯ ಹಿಂದಿನ ಕಾರ್ಯದರ್ಶಿ ಈ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ದೂರಿನಿಂದ ಗೊತ್ತಾಗಿದೆ.

 

ಕಾರ್ಯದರ್ಶಿಯ ಈ ಪ್ರಸ್ತಾವನೆಯನ್ನು 36 ಮಳಿಗೆಗಳ ಮಾಲೀಕರು ಹೈಕೋರ್ಟ್‌ನ ಕಲ್ಬುರ್ಗಿ ಪೀಠದಲ್ಲಿ ದಾವೆ ಹೂಡಿದ್ದರು. 2022ರ ಆಗಸ್ಟ್‌ 10ರಂದು ತೀರ್ಪು ನೀಡಿದ್ದ ಕಲ್ಬುರ್ಗಿ ಪೀಠವು 1.00 ಲಕ್ಷ ರು ಮೊತ್ತವನ್ನು ಒಂದು ತಿಂಗಳಿನ ಒಳಗೆ ಮತ್ತು ದಂಡದ ರೂಪವಾಗಿ 10,000 ರು.ಗಳನ್ನು 5 ತಿಂಗಳೊಳಗೇ ಪಾವತಿಸಬೇಕು ಎಂದು ಆದೇಶಿಸಿತ್ತು. ಆದರೂ ಸಹ ವ್ಯಾಪಾರಸ್ಥರು ಹೈಕೋರ್ಟ್‌ ಆದೇಶವನ್ನು ಪಾಲಿಸಿರಲಿಲ್ಲ.

 

ಇದಾದ ನಂತರ ಸಮಿತಿಯ ಕಾರ್ಯದರ್ಶಿ ಪರಮೇಶ್ವರಿ ಫುಲೇಕರ್‍‌ ಅವರು 2022ರ ಸೆ.22ರಂದು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಶೇಷವೆಂದರೇ 38 ಮಳಿಗೆಗಳ ಪೈಕಿ 17 ಮಳಿಗೆಗಳ ಮಾಲೀಕರು ಮಾತ್ರ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಉಳಿದ 21 ವ್ಯಾಪಾರಸ್ಥರು ಮುಟ್ಟುಗೋಲು ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಿಲ್ಲ. ಆದರೂ ಸಹ ಪರಮೇಶ್ವರಿ ಫುಲೇಕರ್‍‌ ಅವರು ಎಲ್ಲಾ 38 ವ್ಯಾಪಾರಸ್ಥರಿಗೆ ಅನಧಿಕೃತವಾಗಿ ಶೇ.12ರಷ್ಟು ದಂಡ ವಸೂಲಿ ಮಾಡದೇ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಪರಮೇಶ್ವರಿ ಫುಲೇಕರ್‍‌ ಅವರು ನೀತಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ 09 ಜನ ವ್ಯಾಪಾರಸ್ಥರಿಂದ ಸುಮಾರು 2ರಿಂದ 3 ಲಕ್ಷ ರು. ಹಣವನ್ನು ಪಡೆದು ನೋಂದಣಿ ಮಾಡಿಕೊಟ್ಟಿದ್ದಾರೆ,’ ಎಂದು ಅವಿನಾಶ್‌ ದೀನೇ ಅವರು ದೂರಿರುವುದು ಗೊತ್ತಾಗಿದೆ.

 

ಈ ಕುರಿತು ದೂರುದಾರರು ಜಿಲ್ಲಾ ಉಸ್ತುವಾರಿ  ಸಚಿವ ರಹೀಂ ಖಾನ್‌ ಅವರಿಗೂ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts