ಬೆಂಗಳೂರು; ಗುಜರಾತಿ ಮೂಲದ ಕಂಪನಿಯೊಂದು ಹೆದ್ದಾರಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಕ್ರಮ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಮೀನ ಮೇಷ ಎಣಿಸುತ್ತಿದೆ.
ಅಲ್ಲದೇ ಇದೇ ದೂರನ್ನಾಧರಿಸಿ ಕ್ರಮಕ್ಕೆ ಮುಂದಾಗಿದ್ದ ಬಿಬಿಎಂಪಿ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರಿಗೂ ಪಟ್ಟಭದ್ರರು ತಡೆಯೊಡ್ಡಿದ್ದರು ಮತ್ತು ಇದೇ ಪ್ರಕರಣದಲ್ಲಿ ಅವರನ್ನು ವಲಯ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿಸಲಾಗಿದೆ!
ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿ ನಾಗಸಂದ್ರ ಗ್ರಾಮದ ಸರ್ವೆ ನಂಬರ್ 98/3ರಲ್ಲಿ ಅರವಿಂದ್ ಸ್ಪೇಸ್ ಕಂಪನಿಯು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಬಿಬಿಎಂಪಿಯ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಕ್ರಮಕ್ಕೆ ಮುಂದಾಗಿದ್ದರು.
ಈ ಸಂಬಂಧ ನೋಟೀಸ್ ಜಾರಿಗೊಳಿಸಿದ್ದರೂ ಸಹ ಇದುವರೆಗೂ ಬಿಬಿಎಂಪಿಯಿಂದ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
ವಿಶೇಷವೆಂದರೇ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡವನ್ನೇಕೆ ತೆರವುಗೊಳಿಸಬಾರದು ಎಂದು ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ನೋಟೀಸ್ ಜಾರಿ ಮಾಡಿದ್ದರೇ ಅತ್ತ ಬಿಬಿಎಂಪಿಯ ಮತ್ತೊಂದು ಅಧಿಕಾರಿ ವರ್ಗ ಈ ಕಟ್ಟಡವು ಅನುಮೋದಿತ ನಕ್ಷೆಯಂತೆಯೇ ನಿರ್ಮಾಣವಾಗಿದೆ ಎಂದು ಪ್ರಮಾಣ ಪತ್ರ ನೀಡಿದೆ.
ಗೆಹ್ಲೋಟ್ ನೀಡಿದ್ದ ನೋಟೀಸ್‌ನಲ್ಲೇನಿತ್ತು?
ಹೆದ್ದಾರಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ನಿಮ್ಮ ಕಟ್ಟಡವನ್ನು ನಿರ್ಮಿಸಲಾಗಿದೆ. ಇದನ್ನು ಕಾನೂನಿಂತೆ ಯಾಕೆ ತೆರವು ಮಾಡಬಾರದು? ಸರ್ಕಾರದ ಅಧಿನಿಯಮಗಳಂತೆ ಒಂದೇ ವ್ಯಾಪ್ತಿಯಲ್ಲಿರುವ ಕಟ್ಟಡಕ್ಕೆ ಒಂದೇ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆದರೂ ಸಹ ಸರ್ಕಾರಕ್ಕೆ ಸಂಪೂರ್ಣವಾಗಿ ತಪ್ಪು ಮಾಹಿತಿ ನೀಡಿ ಎರಡೂ ಕಟ್ಟಡಗಳಿಗೆ (ಗೃಹ ಮತ್ತು ವಾಣಿಜ್ಯ ) ಬೇರೆ ಬೇರೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಬಹು ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಕಾನೂನಿನ ನಿಯಮಗಳನ್ನು ಪಾಲಿಸಿಲ್ಲ ಎಂದು ದೂರು ಬಂದಿದೆ. ಈ ಸಂಬಂಧ ತಮ್ಮ ಸಮಜಾಯಿಷಿ ನೀಡಬೇಕು ಎಂದು ಬಿಬಿಎಂಪಿಯ ದಾಸರಹಳ್ಳಿಯ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು 2024ರ ಮೇ 13ರಂದೇ ನೋಟೀಸ್ ಜಾರಿಗೊಳಿಸಿದ್ದರು.
ಸಹಾಯಕ ನಿರ್ದೇಶಕರು ನೀಡಿದ್ದ ಉತ್ತರವೇನು?
ಬೆಂಗಳೂರು ತುಮಕೂರು ಹೆದ್ದಾರಿಯ ಎಂಟನೇ ಮೈಲಿಯ ಬಳಿ ಶೆಲ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಅರವಿಂದ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಬೃಹತ್ ವಾಣಿಜ್ಯ ವಾಣಿಜ್ಯ ಕಟ್ಟಡ ಸಂಪೂರ್ಣವಾಗಿ ಕಟ್ಟಡ ನಿರ್ಮಾಣದ ಕಾನೂನುಗಳನ್ನು ನಿರ್ಲಕ್ಷ್ಯಿಸಿ ಕಟ್ಟಡ ನಿರ್ಮಾಣ ಮಾಡಿರುತ್ತಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಪರಿಶೀಲಿಸಲಾಗಿದೆ.
ಈ ಸ್ವತ್ತಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ (ಶೋರಂ ಮತ್ತು ಕಚೇರಿ) ಉಪಯೋಗದ ಕಟ್ಟಡಕ್ಕೆ (ಎಲ್‌ಪಿ ಸಂಖ್ಯೆ 0056/2018-19 ದಿನಾಂಕ 29.06.2019ರಂದು) ನಕ್ಷೆ ಮಂಜೂರಾತಿಯನ್ನು ಸಮುಚಿತ ಮಾರ್ಗದಲ್ಲಿ ಮುಖ್ಯ ಆಯುಕ್ತರ ಅನುಮೋದನೆ ಪಡೆದು ನಕ್ಷೆ ಮಂಜೂರಾತಿ ನೀಡಲಾಗಿದೆ.
ಹಾಗೆಯೇ ಈ ಸ್ಥಳದಲ್ಲಿ 4 ತಳ , ನೆಲ ಮತ್ತು ಮೇಲಿನ ದ13 ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಲು ಪರಿಷ್ಕೃತ ನಕ್ಷೆ ಮಂಜೂರಾತಿಯನ್ನೂ ನೀಡಲಾಗಿದೆ. 2022ರ ಜುಲೈ 20ರಂದು ಬಿಬಿಎಂಪಿ ಕಚೇರಿಯಿಂದ ಪ್ರಾರಂಭಿಕ ಪ್ರಮಾಣ ಪತ್ರವನ್ನೂ ನೀಡಲಾಗಿದೆ. ಅಲ್ಲದೇ ಈ ತಹಲ್‌ವರೆಗೂ ಸದರಿ ವಾಣಿಜ್ಯ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ನೀಡಲಾಗಿರುವುದಿಲ್ಲವೆಂಬ ಅಂಶವನ್ನು ಗಮನಕ್ಕೆ ತಂದಿತ್ತು.
ಅರ್ಜಿದಾರ ಅರವಿಂದ್ ಸ್ಮಾರ್ಟ್ ಸ್ಪೇಸ್ ಸಂಸ್ಥೆಯವರು 2024ರ ಮೇ 23ರಂದು ನೋಟೀಸ್ ಗೆ ಸೂಕ್ತ ಸಮಜಾಯಿಷಿಯನ್ನು ನೀಡಿದ್ದರು. ಈ ಕಚೇರಿಯಿಂದ ನೀಡಿರುವ ಮಂಜೂರಾತಿ ನಕ್ಷೆಯಲ್ಲಿ ತಿಳಿಸಿರುವ ನಿಯಮಗಳನ್ನು ಅನುಸರಿಸಿ 4 ತಳ, ನೆಲ ಮತ್ತು ಮೇಲಿನ 13 ಅಂತಸ್ತುಗಳ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದರು.
ಈ ಕಟ್ಟಡವು ಈ ಕಚೇರಿಗೆ ಒಳಪಡುವ ಅಂಶಗಳನ್ವಯ 2024ರ ಜೂನ್ 18ರಂದು ಖುದ್ದಾಗಿ ನಗರ ಯೋಜಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅನುಮೋದಿತ ನಕ್ಷೆಯೊಂದಿಗೆ ಪರಿಶೀಲಿಸಲಾಗಿತ್ತು. ಕಟ್ಟಡದ ಮಂಜೂರಾತಿ ನಕ್ಷೆಯಂತೆ ಸ್ವತ್ತಿನ ಸುತ್ತಲೂ ಅಗತ್ಯ ನಡುವಣ ಜಾಗವನ್ನು ಬಿಟ್ಟು ಅನುಮೋದಿತ ನಕ್ಷೆಯಂತೆ ಕಟ್ಟಡ ನಿರ್ಮಾಣ ಮಾಡಿದೆ.
ಸ್ವತ್ತಿನ ಮುಂಭಾಗದಲ್ಲಿ ಹಾದು ಹೋಗಿರುವ ರಸ್ತೆಯು ಪರಿಷ್ಕೃತ ಮಹಾಯೋಜನೆ 2015ರ ಅನ್ವಯ ರಾಷ್ಟ್ರೀಯ ಹೆದ್ದಾರಿಯಾಗಿದೆ. ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ 147.67 ಚ ಕಿ ಮೀ ನಷ್ಟು ಈ ಪ್ರದೇಶವನ್ನು ಪರಿತ್ಯಾಜನಾ ಪತ್ರದ ಮೂಲಕ ಪಾಲಿಕೆಗೆ ಹಸ್ತಾಂತರಿಸಿರುತ್ತಾರೆ ಎಂದು 2024ರ ಜುಲೈ 4ರಂದು ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.
ಆದರೆ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಸಹಾಯಕ ನಿರ್ದೇಶಕರ ಸಮಜಾಯಿಷಿಯನ್ನು ಒಪ್ಪಿರಲಿಲ್ಲ. ಮತ್ತೊಂದು ವರದಿ ಸಲ್ಲಿಸಲು 2024ರ ಜುಲೈ 11ರಂದೇ ಮತ್ತೊಂದು ಪತ್ರ ಬರೆದಿದ್ದರು.
‘ಅರವಿಂದ ಸಂಸ್ಥೆಯ ವತಿಯಿಂದ ನಿರ್ಮಾಣವಾಗುತ್ತಿರುವ ಬೃಹತ್ ವಾಣಿಜ್ಯ ಕಟ್ಟಡ ಸಂಪೂರ್ಣವಾಗಿ ಕಟ್ಟಡ ನಿರ್ಮಾಣದ ಕಾನೂನುಗಳನ್ನು ನಿರ್ಲಕ್ಷ್ಯಿಸಿ ಕಟ್ಟಡವನ್ನು ನಿರ್ಮಾಣ ಮಾಡಿರುವ ದೂರಿಗೆ ಸಂಬಂಧಿಸಿದಂತೆ ಸಹಾಯಕ ನಿರ್ದೇಶಕರು ವರದಿ ನೀಡಿದ್ದಾರೆ. ಈ ವರದಿ ಅನ್ವಯ ಕಟ್ಟಡದ ಅನುಮೋದಿತ ನಕ್ಷೆ ಹಾಗೂ ಕಟ್ಟಡ ಮಂಜೂರಾತಿ ನಕ್ಷೆ ಪಡೆದು ಸಂಪೂರ್ಣವಾಗಿ ಪರಿಶೀಲಿಸಬೇಕು. ಅಲ್ಲದೇ ಸ್ಪಷ್ಟ ಅಭಿಪ್ರಾಯದೊಂದಿಗೆ 5 ದಿನದೊಳಗೆ ವರದಿ ನೀಡಬೇಕು,’ ಎಂದು ಸೂಚಿಸಿರುವುದು ಗೊತ್ತಾಗಿದೆ.