ಬೆಂಗಳೂರು; ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಭೂ ಸ್ವಾಧೀನಾಧಿಕಾರಿಗಳು ನ್ಯಾಯಾಲಯದ ಮಾರ್ಗಸೂಚಿ, ಆದೇಶಗಳನ್ನು ಉಲ್ಲಂಘಿಸಿ ಒಟ್ಟು ಜಮೀನಿನ ಪೈಕಿ 325.62 ಎಕರೆ ವಿಸ್ತೀರ್ಣದ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು ದೃಢಪಡಿಸಿತ್ತು.
ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಬಿಡಿಎ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಆಯೋಗ ಶಿಫಾರಸ್ಸುಮಾಡಿತ್ತು. ಆಯೋಗವು ಮಾಡಿದ್ದ ಶಿಫಾರಸ್ಸುಗಳನ್ನು ಸಿದ್ದರಾಮಯ್ಯ ಆದಿಯಾಗಿ ಆ ನಂತರ ಅಧಿಕಾರ ಹಿಡಿದಿದ್ದ ಯಾವ ಮುಖ್ಯಮಂತ್ರಿಗಳೂ ಜಾರಿಗೆ ತಂದಿರಲಿಲ್ಲ.
ಪ್ರವರ್ಗ-ಬಿ ಅಡಿಯಲ್ಲಿ 111.20 ಎಕರೆ ಮತ್ತು ಪ್ರವರ್ಗ-ಸಿ ಅಡಿಯಲ್ಲಿ 16.22 ಎಕರೆ, ಪ್ರವರ್ಗ ಡಿ ಅಡಿಯಲ್ಲಿ 198.20 ಎಕರೆ ವಿಸ್ತೀರ್ಣದ ಜಮೀನುಗಳನ್ನು ಕೈ ಬಿಟ್ಟಿರುವುದು ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ಇರಲಿಲ್ಲ ಎಂದು ಆಯೋಗವು ತನಿಖೆ ವೇಳೆ ಸಾಬೀತುಪಡಿಸಿತ್ತು.
ಅರ್ಕಾವತಿ ಡಿ ನೋಟಿಫಿಕೇಷನ್ ಕುರಿತಂತೆ ವಿಚಾರಣೆ ನಡೆಸಿದ್ದ ಕೆಂಪಣ್ಣ ನೇತೃತ್ವದ ಆಯೋಗವು ನೀಡಿದ್ದ ವರದಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ ಮಹೇಂದ್ರ ಜೈನ್ ಅವರು 2017ರಲ್ಲಿ ಹಲವು ಅಂಶಗಳು, ವಿವರಣೆಗಳು ಮತ್ತು ಅವಲೋಕನ ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಟಿಪ್ಪಣಿ (ಕಡತ ಸಂಖ್ಯೆ: UDD 480 MNX 2017) ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಅರ್ಕಾವತಿ ರಿ-ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವರದಿ ಕೇಳಿ ಸರ್ಕಾರಕ್ಕೆ ಬರೆದಿದ್ದ ಪತ್ರವು ಸರ್ಕಾರವನ್ನು ಸಿಟ್ಟಿಗೆಬ್ಬಿಸಿತ್ತು.
ಅರ್ಕಾವತಿ ಡಿ ನೋಟಿಫಿಕೇಷನ್; ಕೆಂಪಣ್ಣ ವರದಿಗೆ ಕೈ ಹಾಕಿದ ರಾಜ್ಯಪಾಲ, ಡಿಸಿಎಂಗೆ ದಾಖಲೆ ಸಲ್ಲಿಸಿದ ಇಲಾಖೆ
ಈ ವಿಷಯವೂ ಸೇರಿದಂತೆ ಮತ್ತಿತರೆ ವಿಷಯಗಳ ಕುರಿತು ರಾಜ್ಯಪಾಲರು ಕೋರುವ ಯಾವುದೇ ವಿವರಣೆ, ಮಾಹಿತಿ, ವರದಿಯನ್ನು ಸಚಿವ ಸಂಪುಟ ಗಮನಕ್ಕೆ ತರದೆಯೇ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಟ್ಟಪ್ಪಣೆ ಮಾಡಿತ್ತು.
ಈ ಬೆಳವಣಿಗೆಗಳ ನಡುವೆಯೇ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರು ಟಿಪ್ಪಣಿಯಲ್ಲಿ ದಾಖಲಿಸಿದ್ದ ಅಂಶಗಳು ಮುನ್ನೆಲೆಗೆ ಬಂದಿವೆ.
ವರ್ಗ- ಎ ಅಡಿಯಲ್ಲಿ 544.31 ಎಕರೆ ಜಮೀನುಗಳನ್ನು ನ್ಯಾಯಾಲಯದ ಮಾರ್ಗಸೂಚಿಗಳ ಆಧಾರದ ಮೇಲೆ ಭೂ ಸ್ವಾಧೀನಾಧಿಕಾರಿಗಳು ಕೈಬಿಟ್ಟಿದ್ದಾರೆ ಅಥವಾ ತೆಗೆದು ಹಾಕಿದ್ದಾರೆ. ಈ ಭೂಮಿಗಳು ಸಹ ಉಲ್ಲೇಖದ ನಿಯಮಗಳ (TOR) ಉಲ್ಲೇಖ ಸಂಖ್ಯೆ 2 ರಂತೆಯೇ ಇವೆ. ಆದರೆ ಈ ಪ್ರಕ್ರಿಯೆಯಲ್ಲಿ ಭೂ ಸ್ವಾಧೀನಾಧಿಕಾರಿಗಳು ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂದು ಆಯೋಗವು ತೀರ್ಮಾನಿಸಿದೆ ಎಂದು ಟಿಪ್ಪಣಿಯಲ್ಲಿ ಮಹೇಂದ್ರ ಜೈನ್ (ಟಿಪ್ಪಣಿಯ 15ನೇ ಕಂಡಿಕೆ) ಅವರು ಉಲ್ಲೇಖಿಸಿರುವುದು ಗೊತ್ತಾಗಿದೆ.
‘ಆದ್ದರಿಂದ ಆಯೋಗವು ತನ್ನ ವರದಿಯಲ್ಲಿ ಗಮನಿಸಿದಂತೆ ನ್ಯಾಯಾಲಯದ ಆದೇಶಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಡಿಎಯಲ್ಲಿ ಜವಾಬ್ದಾರಿಯನ್ನು ನಿಗದಿಪಡಿಸಲು ಅಧಿಕಾರಿಗಳ ಸಮಿತಿಯನ್ನು ಕೇಳಬಹುದು. ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಬಹುದು,’ ಎಂದು ಪ್ರಸ್ತಾಪಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಪ್ರವರ್ಗ-ಬಿ ಅಡಿಯಲ್ಲಿ, ಬಿಡಿಎಯ ಉಪ ಸಮಿತಿಯ ಶಿಫಾರಸಿನ ಮೇರೆಗೆ 140.32 ಎಕರೆ ಜಮೀನುಗಳನ್ನು ಕೈಬಿಡಲಾಗಿದೆ. ಅದೇ ರೀತಿ, ಪ್ರವರ್ಗ-ಸಿ ಅಡಿಯಲ್ಲಿ, 16.22 ಎಕರೆ ‘ಕಂದಾಯ ನಿವೇಶನ’ ಭೂಮಿಯನ್ನು ಬಿಡಿಎಯು ಹೊರಗಿಟ್ಟಿದೆ. ಈ ಭೂಮಿಯನ್ನು ಟಿಒಆರ್‍ನ ಉಲ್ಲೇಖ ಸಂಖ್ಯೆ 3 ರಲ್ಲಿ ಸೇರಿಸಿದೆ.
‘ಪ್ರವರ್ಗ-ಬಿ ಅಡಿಯಲ್ಲಿ 140.32 ಎಕರೆ ವಿಸ್ತೀರ್ಣದ ಜಮೀನುಗಳನ್ನು ಬಿಡಿಎ ಉಪ ಸಮಿತಿ ಪ್ರಕಾರ ತೆಗೆದು ಹಾಕಿತ್ತು. ಅದೇ ರೀತಿ 111.20 ಎಕರೆ, ಮತ್ತು ಪ್ರವರ್ಗ-ಸಿ ಅಡಿಯಲ್ಲಿ 16.22 ಎಕರೆಗಳು ಮಾರ್ಗಸೂಚಿಗಳ ಪ್ರಕಾರ ಇಲ್ಲ ಎಂದು ಆಯೋಗವು (ಟಿಪ್ಪಣಿ 16ನೇ ಕಂಡಿಕೆ ) ತೀರ್ಮಾನಿಸಿದೆ,’ ಎಂಬ ಅಂಶವನ್ನು ಮಹೇಂದ್ರ ಜೈನ್ ಅವರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಅದೇ ರೀತಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗವು ನೀಡಿರುವ ವರದಿಯ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅನುಪಾಲನೆ ಮಾಡಲು ಮೂವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು 2017ರ ಸೆ.4ರಂದು ನಡೆದಿದ್ದ ಸಚಿವ ಸಂಪುಟವು ಅನುಮೋದನೆಯನ್ನು (ಕಡತ ಸಂಖ್ಯೆ’; UDD 480 BEM BHU SWA 2017) ನೀಡಿತ್ತು.
ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರೂ ಸಹ ಯಾವುದೇ ಸಮಿತಿ ರಚನೆ ಆಗಲಿಲ್ಲ. ಮತ್ತು ಆ ನಂತರದ ವರ್ಷಗಳಲ್ಲೂ ಈ ಸಂಬಂಧ ಯಾವುದೇ ಸಮಿತಿಯನ್ನೂ ರಚಿಸಲು (ಟಿಪ್ಪಣಿ ಕಂಡಿಕೆ 12) ರಚಿಸಿರಲಿಲ್ಲ ಎಂದು ತಿಳಿದು ಬಂದಿದೆ.
ನ್ಯಾಯಮೂರ್ತಿ ಕೆಂಪಣ್ಣ ಆಯೋಗವು ಐದು ನಿಯಮಗಳ ಉಲ್ಲೇಖದ ಕುರಿತು ತನ್ನ ಸಂಶೋಧನೆಗಳೊಂದಿಗೆ ಬೃಹತ್ ವರದಿಯನ್ನು ಸಲ್ಲಿಸಿತ್ತು. (ಟಿಪ್ಪಣಿ ಕಂಡಿಕೆ 13) ಉಲ್ಲೇಖ 1 ಅಡಿಯಲ್ಲಿ ಕೈಬಿಡಲು /ಡಿ-ನೋಟಿಫಿಕೇಶನ್‌ಗೆ ಸಂಬಂಧಿಸಿದ ವಿವಿಧ ವರ್ಗಗಳ ಭೂಮಿ, ಒಟ್ಟು 983.33 ಎಕರೆ ಮತ್ತು ಈ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದೆಯೇ (ಟಿಪ್ಪಣಿ ಕಂಡಿಕೆ 14) ಎಂಬ ಕುರಿತು ವಿಚಾರಣೆ ನಡೆಸಿತ್ತು.
ಆದ್ದರಿಂದ ಆಯೋಗದ ವರದಿಯಲ್ಲಿ ಗಮನಿಸಿದಂತೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರ ವಿರುದ್ದ ಜವಾಬ್ದಾರಿಯನ್ನು ನಿಗದಿಪಡಿಸಲು ಮತ್ತು ಕರ್ತವ್ಯಲೋಪ ಎಸಗಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು (ಟಿಪ್ಪಣಿ ಕಂಡಿಕೆ- 17) ಸೂಚಿಸಿತ್ತು.
‘ಪ್ರವರ್ಗ-ಡಿ ಅಡಿಯಲ್ಲಿ 198.20 ಎಕರೆ ಭೂಮಿಯನ್ನು ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 48(1) ಅಡಿಯಲ್ಲಿ ಡಿ-ನೋಟಿಫೈ ಮಾಡಲಾಗಿದೆ. ನ್ಯಾಯಾಲಯದ ಮಾರ್ಗಸೂಚಿಗಳು ಮತ್ತು ಆದೇಶಗಳಿಗೆ ವಿರುದ್ಧವಾಗಿ ಡಿ-ನೋಟಿಫಿಕೇಶನ್ ಮಾಡಲಾಗಿದೆ ಎಂದು ಆಯೋಗವು ತೀರ್ಮಾನಿಸಿದೆ. ಅಧಿಕಾರಿಗಳ ಉಪ ಸಮಿತಿಯು ಆಯೋಗದ ಸಂಶೋಧನೆಗಳನ್ನು ಅಧ್ಯಯನ ಮಾಡಬಹುದು ಮತ್ತು ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಬಹುದು ಎಂದು ಸೂಚಿಸಿದೆ,’ ಎಂದು ಮಹೇಂದ್ರ ಜೈನ್ ಅವರು ಟಿಪ್ಪಣಿ ಹಾಳೆಯಲ್ಲಿ ( ಟಿಪ್ಪಣಿ ಕಂಡಿಕೆ- 18) ಉಲ್ಲೇಖಿಸಿರುವುದು ಗೊತ್ತಾಗಿದೆ.
ಪುನರ್ ಮಾರ್ಪಡಿಸಿದ ಯೋಜನೆಗೆ ಸರ್ಕಾರ ನೀಡಿರುವ ಅನುಮೋದನೆಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದೆಯೇ ಎಂದು ಆಯೋಗವು (ಉಲ್ಲೇಖ ಸಂಖ್ಯೆ 4 ರಲ್ಲಿ) ಗಮನಿಸಿದೆ. ಆದರೆ ಉಚ್ಚ ನ್ಯಾಯಾಲಯದ ಆದೇಶವು ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಗಮನದಲ್ಲಿರಿಸಿತ್ತು. “ಅಂತಹ ವರದಿಯನ್ನು ಸ್ವೀಕರಿಸಿದ ನಂತರ, ಯೋಜನೆಯು ನಿಲ್ಲದಂತೆ, ತಿದ್ದುಪಡಿಯನ್ನು ತರಬಹುದು ಎಂಬ ನಿರೀಕ್ಷೆಯಲ್ಲಿತ್ತು. ಮತ್ತು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಉಳಿದಿವೆ ಎಂದು ಆಯೋಗವು ಗಮನಿಸಿದೆ.
ಆಯೋಗವು ನ್ಯಾಯಾಲಯ ಹೊರಡಿಸಿದ ಮಾರ್ಗಸೂಚಿಗಳ ಅನುಸರಣೆ ಮಾಡಿ ಜಮೀನುಗಳನ್ನು ಹೊರತುಪಡಿಸಿ ನ್ಯಾಯಲಯದ ಆದೇಶದಂತೆ, ಬಿಡಿಎ ಕ್ರಮ ವಹಿಸಿದೆಯೇ ಎಂದು ಸರ್ಕಾರವು ಪರಿಗಣನೆಗೆ (ಟಿಪ್ಪಣಿ ಕಂಡಿಕೆ-19) ತೆಗೆದುಕೊಳ್ಳಬೇಕಾಗಿತ್ತು ಎಂದು ಜೈನ್ ಅವರು ಟಿಪ್ಪಣಿಯಲ್ಲಿ ವಿವರಿಸಿದ್ದರು.
ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸುವಾಗ ಯಾವುದೇ ಅನುಚಿತ ಲಾಭವನ್ನು ಭೂಮಾಲೀಕರಿಗೆ ತೋರಿಸಿದ್ದಾರೆಯೇ ಎಂದು ಆಯೋಗವು (ಉಲ್ಲೇಖ ಸಂಖ್ಯೆ 5ರಲ್ಲಿ) ಪರಿಶೀಲಿಸಿತ್ತು. ಆಯೋಗವು ಅಧಿಕಾರಿಗಳ ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ವರ್ಗ ಎ ಬಿ ನ್ನು ಉಲ್ಲೇಖಿಸಿ ಸಕಾರಾತ್ಮಕವಾಗಿ ತೀರ್ಮಾನಿಸಿದೆ. ಸಿ ಮತ್ತು ಪ್ರವರ್ಗ-ಡಿ ಜಮೀನುಗಳಿಗೆ ಸಂಬಂಧಿಸಿದಂತೆ ಆಯೋಗವು ತನ್ನ ವರದಿಯಲ್ಲಿ ಗಮನಿಸಿದಂತೆ ಮತ್ತು ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲು ಸೂಚಿಸಿದೆ ( ಟಿಪ್ಪಣಿ ಕಂಡಿಕೆ 20) ಇದನ್ನಾಧರಿಸಿ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ನ್ಯಾಯಮೂರ್ತಿ ಕೆಂಪಣ್ಣ ಅವರು ಸಲ್ಲಿಸಿದ ಬೃಹತ್ ವರದಿಯ ಮತ್ತು ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ವಿವರವಾಗಿ ಪರಿಶೀಲಿಸಬೇಕು. ಮತ್ತು ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಹಾಗೆಯೇ ‘ಮಾರ್ಗಸೂಚಿಗಳು, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವುಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನಿಗದಿಪಡಿಸಬೇಕು. ಈ ಮೂಲಕ ಆಯೋಗವು ನೀಡಿರುವ ವರದಿಯಲ್ಲಿ ಸೂಚಿಸಿರುವಂತೆ ಕ್ರಮಗಳನ್ನು ಅನುಸರಿಸಬೇಕು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು (ಟಿಪ್ಪಣಿ ಕಂಡಿಕೆ 21) ಟಿಪ್ಪಣಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಸಮಿತಿಯನ್ನು ರಚಿಸಬೇಕು. ಮುಖ್ಯ ಕಾರ್ಯದರ್ಶಿಗಳ ಸಮಿತಿಯಲ್ಲಿ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲು ( ಟಿಪ್ಪಣಿ ಕಂಡಿಕೆ- 22) ಪ್ರಸ್ತಾಪಿಸಬಹುದು. ಅಧಿಕಾರಿಗಳ ಸಮಿತಿಯನ್ನು ರಚಿಸುವುದು, ಅದರ ಸಮನ್ವಯತೆಯ ಕುರಿತಾಗಿ ಮುಖ್ಯ ಕಾರ್ಯದರ್ಶಿ ಪ್ರಸ್ತಾಪಿಸಬಹುದು. ನ್ಯಾಯಾಲಯದ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನಿಗದಿಪಡಿಸಬೇಕು.
ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಸಮಿತಿ ಮುಂದೆ ಪ್ರಸ್ತಾಪಿಸುವುದು ಮತ್ತು ಪ್ರವರ್ಗ ಎ, ಪ್ರವರ್ಗ ಬಿ ವರ್ಗ , ಸಿ ಮತ್ತು ಪ್ರವರ್ಗ ” ಡಿ” ವರ್ಗದ ಕುರಿತು ಆಯೋಗವು ನೀಡಿರುವ ವರದಿ ಕುರಿತು ಪರಿಶೀಲಿಸಬೇಕು. ಮತ್ತು ಅಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ಹಿಂಬಾಲಿಕ ಕ್ರಮಕ್ಕೆ ಸೂಚಿಸುವ ಸಂಬಂಧ ಕಡತದಲ್ಲಿ ಅನುಮೋದನೆ ಕೋರಿದ್ದರು (ಟಿಪ್ಪಣಿ ಕಂಡಿಕೆ-23) ಎಂಬುದು ಗೊತ್ತಾಗಿದೆ.