ಕಲ್ಲಿದ್ದಲು ಸಂಗ್ರಹ, ಬಳಕೆ; ಅದಾನಿ ಒಡೆತನದ ಯುಪಿಸಿಎಲ್‌ನಿಂದ ಷರತ್ತುಗಳ ಉಲ್ಲಂಘನೆ

ಬೆಂಗಳೂರು; ಉಡುಪಿಯ ಯಳ್ಳೂರು ಗ್ರಾಮದಲ್ಲಿರುವ ಅದಾನಿಯವರ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ ದೇಶೀಯ ಕಲ್ಲಿದ್ದಲಿನ ಸಂಗ್ರಹಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಪಿಪಿಎ ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಯುಪಿಸಿಎಲ್) ವಿಸ್ತರಣೆಗೆ ಸಂಬಂಧಿಸಿದಂತೆ 2017ರ ಆಗಸ್ಟ್ 1ರಂದು ನೀಡಿದ್ದ ಪರಿಸರ ಅನುಮತಿಯು  ಅಮಾನತುಗೊಂಡಿರುವ ಬೆನ್ನಲ್ಲೇ ಇದೀಗ ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯ ಷರತ್ತಗಳನ್ನು ಉಲ್ಲಂಘಿಸಿರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಸಿಎಜಿಯು 2024ರ ಆಗಸ್ಟ್‌ 29ರಂದು ಪಿಸಿಕೆಎಲ್‌ಗೆ ಪತ್ರ ಬರೆದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಲ್ಲಿದ್ದಲು ಆಧಾರಿತ ಥರ್ಮಲ್‌ ಪವರ್‌ ಪ್ಲಾಂಟ್‌ನಿಂದ ಉತ್ಪತ್ತಿಯಾಗುವ ಶೇ.90ರಷ್ಟು ವಿದ್ಯುತ್‌ನ್ನು ಎಸ್ಕಾಂಗಳಿಗೆ ಮಾರಾಟ ಮಾಡಲು ಯುಪಿಸಿಎಲ್‌ 2005ರ ಡಿಸೆಂಬರ್‌ 26ರಂದು ಪಿಸಿಕೆಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದೇ ರೀತಿ ಪಂಜಾಬ್‌ ರಾಜ್ಯದ ವಿದ್ಯುತ್‌ ನಿಗಮದೊಂದಿಗೂ ಸಹ 2006ರ ಸೆ.9ರಂದು ಮತ್ತೊಂದು ಒಪ್ಪಂದ ಮಾಡಿಕೊಂಡಿತ್ತು. ಇದರ ಪ್ರಕಾರ ಪಂಜಾಬ್‌ ರಾಜ್ಯದ ವಿದ್ಯುತ್‌ ನಿಗಮದೊಂದಿಗೆ ಶೇ.10ರಷ್ಟು ಮಾತ್ರ ವಿದ್ಯುತ್‌ ಮಾರಾಟಕ್ಕಷ್ಟೆ ಸೀಮಿತವಾಗಿತ್ತು.

 

ಯುಪಿಸಿಎಲ್‌ನ ಆರ್ಟಿಕಲ್ 4.7(ಡಿ) ಪ್ರಕಾರ ಎಸ್ಕಾಂಗಳ ಪರವಾಗಿ ಕಂಪನಿಯು ಕಲ್ಲಿದ್ದಲು ಸಂಗ್ರಹಣೆಗೆ ಪೂರ್ವಾನುಮತಿ ಪಡೆಯಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಕಲ್ಲಿದ್ದಲು ಸಂಗ್ರಹಣೆ, ಖರೀದಿ, ಸಾಗಣೆ, ಸಾಗಣೆ ಮತ್ತು ವಿಮೆಯ ಪ್ರತಿ ಹಂತದಲ್ಲಿ ಮಾರಾಟಗಾರನು ಪ್ರಧಾನ ಖರೀದಿದಾರರ ಅನುಮೋದನೆ/ಸಮ್ಮತಿಯನ್ನು ಪಡೆಯಬೇಕು ಎಂದಿದೆ.

 

ಕಲ್ಲಿದ್ದಲು ಸಂಗ್ರಹಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಪ್ರಧಾನ ಖರೀದಿದಾರರು ಮತ್ತು ಮಾರಾಟಗಾರರು ಪರಸ್ಪರ ಚರ್ಚಿಸಿದ ನಂತರ ಅಂತಿಮಗೊಳಿಸುತ್ತಾರೆ ಎಂದು ಆರ್ಟಿಕಲ್‌ 4.7(ಡಿ)ಯಲ್ಲಿ ಸ್ಪಷ್ಟಪಡಿಸಿತ್ತು. ಆದರೀಗ ಇದನ್ನು ಯುಪಿಸಿಎಲ್‌ ನೇರವಾಗಿ ಉಲ್ಲಂಘಿಸಿದೆ ಎಂದು ಸಿಎಜಿಯು ಪತ್ತೆ ಹಚ್ಚಿದೆ.

 

 

 

ಭಾರತೀಯ ದೇಶೀಯ ಕಲ್ಲಿದ್ದಲನ್ನು ಸುಧಾರಿತ ಕಲ್ಲಿದ್ದಲು ಮಿಶ್ರಣ ಮಾಡುವ ಮೂಲಕ ಪ್ರಾಯೋಗಿಕವಾಗಿ ನಡೆಸಲಾಗುವುದು. ಮತ್ತುಈ ಸಂಬಂಧ ಎನ್‌ಸಿಎಲ್‌ ಕರೆದಿರುವ ಇ-ಟೆಂಡರ್‌ನಲ್ಲಿ 2021 ರ ಏಪ್ರಿಲ್‌ನಲ್ಲಿ ಭಾಗವಹಿಸಲಾಗುವುದು ಎಂದು ಯುಪಿಸಿಎಲ್‌, ಪಿಸಿಕೆಎಲ್‌ಗೆ 2023ರ ಮಾರ್ಚ್‌ 22ರಂದು ತಿಳಿಸಿತ್ತು.

 

ಅಲ್ಲದೇ ಇದೊಂದು ಪ್ರಾಯೋಗಿಕ ಆಧಾರದ ಮೇಲೆ 5,0o, 000 ಮೆಗಾ ವ್ಯಾಟ್ ದೇಶೀಯ ಕಲ್ಲಿದ್ದಲಿನ ಒಂದು ಬಾರಿ ಸಂಗ್ರಹಣೆಯ ಯೋಜನೆ ಎಂದು ಹೇಳಿತ್ತು. ನಂತರ ಇದು ಎನ್‌ಸಿಎಲ್‌ನ ಇ-ಹರಾಜಿನಲ್ಲಿ ಭಾಗವಹಿಸುವುದನ್ನು ಮುಂದುವರೆಸಿತ್ತು. ಆದರೆ ಏಪ್ರಿಲ್ 2021 ರಲ್ಲಿ ಜಿ-10 ದರ್ಜೆಯ ಸುಮಾರು 20000 ಕಲ್ಲಿದ್ದಲ್ಲನ್ನು ಪಡೆದುಕೊಂಡಿತು. 7, 983 ಮೆಟ್ರಿಕ್ ಟನ್ ದೇಶೀಯ ಕಲ್ಲಿದ್ದಲನ್ನು ಬಳಸಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

2021 ರ ಏಪ್ರಿಲ್‌ನಲ್ಲಿ ನಡೆಸಿದ ಕಿರು ಪರೀಕ್ಷೆಯ ಸಮಯದಲ್ಲಿ ಬಾಯ್ಲರ್ ಕಾರ್ಯಾಚರಣೆಯ ಮೂಲಭೂತ ಸುರಕ್ಷತೆ ಅಥವಾ ಪರಿಸರ ಅಂಶಗಳ ಮೇಲೆ ಯಾವುದೇ ಪ್ರಮುಖ ಪ್ರತಿಕೂಲ ಪರಿಣಾಮವಿಲ್ಲರಲಿಲ್ಲ. 20 ಪ್ರತಿಶತ ಮಿಶ್ರಣ ಕಾರ್ಯಾಚರಣೆಯು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ವರದಿ ಹೇಳಿತ್ತು. ಇದನ್ನಾಧರಿಸಿ ಯುಪಿಸಿಎಲ್‌ ತನ್ನ ವಿದ್ಯುತ್‌ ಸ್ಥಾವರದಲ್ಲಿ  ಪ್ರತಿಶತ 20ರಷ್ಟು ದೇಶಿಯ ಕಲ್ಲಿದ್ದಲ್ಲನ್ನು ಮಿಶ್ರಣಕ್ಕೆ ಅನುಮತಿ ನೀಡಬೇಕು ಎಂದು ಪಿಸಿಕೆಎಲ್‌ಗೆ 2021ರ ಅಕ್ಟೋಬರ್‌ 10ರಂದು ಕೋರಿಕೆ ಸಲ್ಲಿಸಿತ್ತು.

 

ಇದನ್ನು ಐಐಟಿ ಕಾನ್ಪುರದ ನೇತೃತ್ವದಲ್ಲಿ   ಮೇಲ್ವಿಚಾರಣೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 2022ರ ಜನವರಿ 1ರಂದು ಪತ್ರ ಬರೆದಿತ್ತು. ಅಲ್ಲದೇ ಮಿಶ್ರಿತ ಕಲ್ಲಿದ್ದಲಿನೊಂದಿಗೆ ಪ್ರಾಯೋಗಿಕವಾಗಿ ನಡೆಸಲು ಯುಪಿಸಿಎಲ್‌ಗೆ 45 ದಿನಗಳ ಅವಧಿಗೆ ಅನುಮತಿ ನೀಡಿತ್ತು.

 

ಈ ಅವಧಿಯಲ್ಲಿ ಯುಪಿಸಿಎಲ್‌, ಏಪ್ರಿಲ್ 2023 ರಲ್ಲಿ 5,00, 000 ಟನ್‌ ದೇಶೀಯ ಕಲ್ಲಿದ್ದಲನ್ನು ಸಂಗ್ರಹಿಸಿತ್ತು. 2023ರ ಏಪ್ರಿಲ್‌ 17ರಿಂದ 2023ರ ಜೂನ್‌ 1ರವರೆಗೆ ಐಐಟಿ ಕಾನ್ಪುರದ ಮೇಲ್ವಿಚಾರಣೆಯಲ್ಲಿ ಆಮದು ಕಲ್ಲಿದ್ದಲಿನೊಂದಿಗೆ ಕನಿಷ್ಟ 23.3 ಪ್ರತಿಶತದಿಂದ ಗರಿಷ್ಠ 44 ಪ್ರತಿಶತದಷ್ಟು ದೇಶಿಯ ಕಲ್ಲಿದ್ದಲಿನ ವಿಭಿನ್ನ ಅನುಪಾತಗಳಲ್ಲಿ ಭಾರತೀಯ ಕಲ್ಲಿದ್ದಲ್ಲನ್ನು ಮಿಶ್ರಣ ಮಾಡಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿತ್ತು.

 

ಐಐಟಿ ಕಾನ್ಪುರ ನೀಡಿದ್ದ ಅಧ್ಯಯನ ವರದಿಯನ್ನು ಪಿಸಿಕೆಎಲ್‌ಗೆ ಯುಪಿಸಿಎಲ್‌ ನೀಡಿತ್ತು. ಶೇ.40ರಷ್ಟು ಭಾರತೀಯ ಕಲ್ಲಿದ್ದಲ್ಲು ಮಿಶ್ರಣವನ್ನು ಬಳಸಿಕೊಳ್ಳುವ ಪ್ರಸ್ತಾವವನ್ನು ಪಿಸಿಕೆಎಲ್‌ಗೆ 2024ರ ಜನವರಿ 30ರಂದು ಸಲ್ಲಿಸಿತ್ತು. ಶೇ.40ರಷ್ಟು ದೇಶಿಯ ಕಲ್ಲಿದ್ದಲು ಬಳಕೆಯು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಇದಕ್ಕಾಗಿ ಪರಿಸರ ಮತ್ತು ಎಂಒಎಫ್‌ಎಫ್‌ ಮತ್ತು ಸಿಸಿಯಿಂದ ಅನುಮೋದನೆ ಪಡೆಯಬೇಕು ಎಂದು ಹೇಳಿತ್ತು.

 

ಇದಕ್ಕೆ ಸಂಬಂಧಿಸಿದಂತೆ ಸಿಎಜಿಯು ಅವಲೋಕಿಸಿದೆ.

 

ಆಡಿಟ್‌ ಅವಲೋಕನದಲ್ಲೇನಿದೆ?

 

2,00. 000 ಮೆ. ಟನ್ ದೇಶೀಯ ಕಲ್ಲಿದ್ದಲು ಮತ್ತು ಆರ್ ಮತ್ತು ಡಿ ಟ್ರಯಲ್ ರನ್ 7, 983 ಮೆಟ್ರಿಕ್ ಟನ್ ಬಳಸಿ 20 ಪ್ರತಿಶತ ಶಕ್ತಿಯುತ ಮಿಶ್ರಣ ಪ್ರಕ್ರಿಯೆಯನ್ನು ಪಿಸಿಕೆಎಲ್‌ ಮೂಲಕ ಅಂತಿಮಗೊಳಿಸಿಲ್ಲ. ಬದಲಿಗೆ ಯುಪಿಸಿಎಲ್‌ ನೇರವಾಗಿ ನಡೆಸಿದೆ. ಇದು ಕಲ್ಲಿದ್ದಲು ಸಂಗ್ರಹಣೆಯ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಾಗಿದೆ.

 

ಪ್ರಮುಖ ಖರೀದಿದಾರರು ಮತ್ತು ಮಾರಾಟಗಾರರಿಂದ ಪರಸ್ಪರ ಚರ್ಚಿಸಿ ಅಂತಿಮಗೊಳಿಸಬೇಕು ಎಂದು ಹೇಳಿದ್ದ ಒಡಂಬಡಿಕೆಯ ಷರತ್ತು 4.7 (ಡಿ) ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಅವಲೋಕಿಸಿದೆ.

 

ಈ ಸಂಬಂಧ ಪಿಸಿಕೆಎಲ್‌ ಕೂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಮರು ಪ್ರಶ್ನಿಸಿತ್ತು. ಯುಪಿಸಿಎಲ್‌ನ ಕೋರಿಕೆಯ ಮೇರೆಗೆ ದೇಶೀಯ ಕಲ್ಲಿದ್ದಲಿನ 20 ಪ್ರತಿಶತ ಮಿಶ್ರಣಕ್ಕೆ ಅನುಮತಿಸಿತ್ತು ಎಂದು ಮಂಡಳಿಯು ಉತ್ತರಿಸಿತ್ತು. ಆದರೆ ಈ ಮಿಶ್ರಣ ಮತ್ತು ಪ್ರಾಯೋಗಿಕ ಕಾರ್ಯಾಚರಣೆಯ ವಿವರಗಳನ್ನು ಪಿಸಿಕೆಎಲ್‌ನ ಗಮನಕ್ಕೆ ತಂದಿರಲಿಲ್ಲ.

 

ಆದರೂ ಶೇ.44ರಷ್ಟು ಮಿಶ್ರಣ ಮಾಡುವ ಮೂಲಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಿತ್ತು ಎಂದು ಸಿಎಜಿಯ ಪತ್ರದಲ್ಲಿ ವಿವರಿಸಲಾಗಿದೆ. ಸಿಎಜಿ ಮಾಡಿರುವ ಅವಲೋಕನದ ಕುರಿತು ಪಿಸಿಕೆಎಲ್‌ ಮತ್ತು ಇಂಧನ ಇಲಾಖೆ ಅಧಿಕಾರಿಗಳು ಸಚಿವ ಕೆ ಜೆ ಜಾರ್ಜ್‌ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts