ಅರಣ್ಯ ಸಚಿವ ಸೋದರನ ವಿರುದ್ಧ 27.54 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ; ರಾಜ್ಯಪಾಲರಿಗೆ ದೂರು

ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರಿರುವ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಹಂಚಿಕೆ ಪ್ರಕರಣವು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಚಿವ ಈಶ್ವರ್‍‌ ಖಂಡ್ರೆ ಅವರ ಸೋದರ ಹಾಗೂ ಬೀದರ್‍‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‍‌ ಖಂಡ್ರೆ ಅವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿದೆ.

 

ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವುದರ ಸಂಬಂಧ ಸಚಿವ ಈಶ್ವರ್‍‌ ಖಂಡ್ರೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ  ಸಚಿವರ ಸೋದರ ಅಮರ್‍‌ ಖಂಡ್ರೆ ಅವರ ವಿರುದ್ಧವೂ ಕೇಳಿ ಬಂದಿರುವ ಅರಣ್ಯ ಭೂಮಿ ಒತ್ತುವರಿ ಆರೋಪವು ಪ್ರತಿಪಕ್ಷಗಳ ಕೈಗೆ ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.

 

ಬೀದರ್‍‌ನ ರಾಜೇಂದ್ರ ಎಂಬುವರು ರಾಜ್ಯಪಾಲರಿಗೆ  2024ರ ಮೇ 28ರಂದೇ ಬೀದರ್‍‌ನ ಪ್ರಾದೇಶಿಕ ಅರಣ್ಯ ಕಚೇರಿ ಮೂಲಕ ದೂರು ಸಲ್ಲಿಸಿದ್ದಾರೆ. ದೂರಿನೊಂದಿಗೆ ಪಹಣಿಗಳು, ಜಂಗಲಾತ ಪಹಣಿ, ಗ್ರಾಮ ನಕಾಶೆ, ಟೊಂಚ ನಕಾಶೆ, ಗೂಗಲ್‌ ಮ್ಯಾಪ್‌, ಅನಧಿಕೃತವಾಗಿ ಕಬ್ಜ ಮಾಡಿರುವ ಅರಣ್ಯ ಇಲಾಖೆಯ ಭೂಮಿಯ ಪಹಣಿಗಳು, ಸ್ಥಳದ ವಿಡಿಯೋ ದೃಶ್ಯಾವಳಿ, ಫೋಟೋಗಳನ್ನು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜೇಂದ್ರ ಅವರು ವಲಯ ಅರಣ್ಯಾಧಿಕಾರಿಯ ಕಾರ್ಯಾಲಯದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರಿಗೆ ಬೀದರ್‍‌ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿಯವರು 2024ರ ಜೂನ್‌ 15ರಂದು ಹಿಂಬರಹ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿಯವರು ನೀಡಿರುವ ಹಿಂಬರಹವು ತಲುಪಿಯೇ ಇಲ್ಲ   ಎಂದು   ದೂರುದಾರ ರಾಜೇಂದ್ರ ಗೌಳಿ ಅವರು   ‘ದಿ ಫೈಲ್‌’ಗೆ  2024ರ ಸೆ. 9ರಂದು  ಖಚಿತಪಡಿಸಿದ್ದಾರೆ.

 

ಉಪ ವಲಯ ಅರಣ್ಯಾಧಿಕಾರಿಯವರು ಪರಿಶೀಲನೆ ಕೈಗೊಂಡು ಯಾವುದೇ ಒತ್ತುವರಿ ಆಗಿರುವುದಿಲ್ಲ ಎಂದು ತಿಳಿಸಿದ್ದನ್ನು ಹಿಂಬರಹದಲ್ಲಿ ಉಲ್ಲೇಖಿಸಿದ್ದಾರಾದರೂ  ಈ ಸಂಬಂಧ  ಪರಿಶೀಲನೆ ವರದಿಯನ್ನೇ  ಮೇಲಾಧಿಕಾರಿಗಳಿಗೆ  ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

 

ದೂರಿನಲ್ಲೇನಿದೆ?

 

ಬೀದರ್‍‌ ತಾಲೂಕಿನ ಹೊನ್ನಿಕೇರಿ ಗ್ರಾಮದ ಸರ್ವೆ ನಂಬರ್‍‌ 78ರಲ್ಲಿ 22 ಎಕರೆ 21 ಗುಂಟೆ ಮತ್ತು ಅತಿವಾಳ ಗ್ರಾಮದ ಸರ್ವೆ ನಂಬರ್‍‌ 21ರಲ್ಲಿ 2.18 ಎಕರೆ, ಸರ್ವೆ ನಂಬರ್‍‌ 22ರಲ್ಲಿ 3.23 ಎಕರೆ ವಿಸ್ತೀರ್ಣದ ಅರಣ್ಯ ಜಮೀನನ್ನು ಸಚಿವ ಈಶ್ವರ್‍‌ ಖಂಡ್ರೆ ಅವರ ಸೋದರ ಹಾಗೂ ಬೀದರ್‍‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‍‌ ಖಂಡ್ರೆ  ಒತ್ತುವರಿ ಮಾಡಿದ್ದಾರೆ ಎಂದು  ರಾಜೇಂದ್ರ ಎಂಬುವರು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

 

 

ಬೀದರ್‍‌ ತಾಲೂಕಿನ ಹೊನ್ನಿಕೇರಿ ಗ್ರಾಮದ ಸರ್ವೆ ನಂಬರ್‍‌ 81ರಲ್ಲಿ 36.38 ಎಕರೆ ಮತ್ತು ಸರ್ವೆ ನಂಬರ್‍‌ 80/ */*/ರಲ್ಲಿ 34.11 ಎಕರೆ, 79/*/*/ರಲ್ಲಿ 34.21 ಎಕರೆ ವಿಸ್ತೀರ್ಣದ ಜಮೀನನ್ನು ಖರೀದಿಸಿದ್ದಾರೆ. ಇದರೊಂದಿಗೇ ಹೊನ್ನಿಕೇರಿ ಗ್ರಾಮದ ಸರ್ವೆ ನಂಬರ್‍‌ 78ರಲ್ಲಿನ ಅರಣ್ಯ ಭೂಮಿ ಪೈಕಿ 22.21 ಎಕರೆ ಮತ್ತು ಅತಿವಾಳ ಗ್ರಾಮದ ಅರಣ್ಯ ಭೂಮಿ ಸರ್ವೆ ನಂಬರ್‍‌ 21ರಲ್ಲಿ 2.10 ಎಕರೆ ಮತ್ತು ಸರ್ವೆ ನಂಬರ್‍‌ 22ರಲ್ಲಿ 3.23 ಎಕರೆ ಜಮೀನು ಅರಣ್ಯ ಪ್ರದೇಶಕ್ಕೆ ಸೇರಿವೆ. ಈ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ ಅರಣ್ಯ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಕಾಂಪೌಂಡ್‌ ಕೂಡ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.

 

ದೂರಿನೊಂದಿಗೆ ಲಗತ್ತಿಸಿರುವ ಚಿತ್ರ

 

ಇದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೈವಾಡವೂ ಇದೆ ಎಂದು ಆರೋಪಿಸಿರುವ ದೂರುದಾರ, ಸಚಿವ ಈಶ್ವರ್‍‌ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿರುವುದು ಗೊತ್ತಾಗಿದೆ.

 

ಈ ದೂರಿಗೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿಯವರು ದೂರುದಾರನಿಗೆ ಹಿಂಬರಹ ನೀಡಿದ್ದಾರೆ. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಲಯ ಅರಣ್ಯಾಧಿಕಾರಿಯ ಹಿಂಬರಹದಲ್ಲೇನಿದೆ?

 

‘ಈ ವಿಷಯಕ್ಕೆ ಸಂಬಂಧಿಸಿದಂತೆ ಹೊನ್ನಿಕೇರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅವರು  2024ರ ಜೂನ್‌ 1ರಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದ ಬಗ್ಗೆ ಪರಿಶೀಲನೆ ಕೈಗೊಂಡು ಯಾವುದೇ ತರಹದ ಒತ್ತುವರಿ ಆಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಮುಂದುದವರೆದು ಹೊನ್ನಿಕೇರಿ ಗ್ರಾಮದ ಪಟ್ಟಾ ಸರ್ವೆ ನಂಬರ್‍‌ಗಳು 79, 80, 81 ಆಗಿದ್ದು ಪಟ್ಟಾ ಜಮೀನಿನಲ್ಲಿ ಮೋಜಣಿ ಮಾಡಿಸಿ ಹದ್ದುಬಸ್ತು ಮಾಡಿಸಿಕೊಂಡು ಕಾಂಪೌಂಡ್‌ ಕಾಮಗಾರಿ ಕೈಗೊಂಡಿರುತ್ತಾರೆ. ಇದರಿಮದ ಯಾವುದೇ ರೀತಿಯ ಅರಣ್ಯ ಜಮೀನು ಒತ್ತುವರಿ ಆಗಿರುವುದು ಕಂಡುಬಂದಿರುವುದಿಲ್ಲ,’ ಹಿಂಬರಹದಲ್ಲಿ ಹೇಳಲಾಗಿದೆ.

 

 

 

ಈ ಕುರಿತು ‘ದಿ ಫೈಲ್‌’ ಪ್ರತಿನಿಧಿಯೊಂದಿಗೆ ದೂರುದಾರ ರಾಜೇಂದ್ರ ಗೌಳಿ ಅವರು ಪ್ರತಿಕ್ರಿಯಿಸಿದ್ದಾರೆ.

 

‘ವಲಯ ಅರಣ್ಯಾಧಿಕಾರಿಯವರು ತಿಳಿಸಿರುವ ಹಾಗೆ ಯಾವುದೇ ಹಿಂಬರಹವು ತಮಗೆ ಬಂದಿಲ್ಲ. ಯಾವ ಅಧಿಕಾರಿಯೂ ನನ್ನನ್ನು ಕರೆಸಿಲ್ಲ. ದೂರು ನೀಡಿರುವುದು ನಿಜ. ನನ್ನನ್ನು ಯಾರೂ ಕೇಳಿಲ್ಲ. ಹಿಂಬರಹ ನೀಡಿರುವುದು  ಎಲ್ಲಾ ಸುಳ್ಳು,’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಈ ದೂರಿನಲ್ಲಿ ಉಲ್ಲೇಖಿಸಿರುವ ಸರ್ವೆ ನಂಬರ್‍‌ಗಳನ್ನು ‘ ದಿ ಫೈಲ್‌’ ಕೂಡ ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿದೆ. ಇದರ ಪ್ರಕಾರ ಹೊನ್ನಿಕೇರಿ ಗ್ರಾಮದ ಸರ್ವೆ ನಂಬರ್‍‌ 78ರಲ್ಲಿ 22.21 ಎಕರೆಯು ಜಂಗಲಾತ ಎಂದು ಅಂದರೆ ಅರಣ್ಯ ಭೂಮಿ ಎಂದು ನಮೂದಾಗಿರುವುದು ಗೊತ್ತಾಗಿದೆ.

 

 

ಅದೇ ರೀತಿ ಅತಿವಾಳ ಗ್ರಾಮದ ಸರ್ವೆ ನಂಬರ್‍‌ 21ರಲ್ಲಿ 2.10 ಎಕರೆ

 

 

22ರಲ್ಲಿ 3.23 ಎಕರೆಯೂ ಸಹ ಅರಣ್ಯ ಭೂಮಿ ಎಂದು ನಮೂದಾಗಿರುವುದು ತಿಳಿದು ಬಂದಿದೆ.

 

 

ಹಾಗೆಯೇ ದೂರಿನಲ್ಲಿ ಉಲ್ಲೇಖಿಸಿರುವ  ಸರ್ವೆ ನಂಬರ್‍‌ 81ರಲ್ಲಿ 18.19, 1.20, 16.69 ಎಕರೆ ವಿಸ್ತೀರ್ಣದ ಜಮೀನು ಅಮರ್‍‌ ಖಂಡ್ರೆ ಅವರ ಹೆಸರಿನಲ್ಲಿದೆ.

 

 

ಅದೇ ರೀತಿ ಸರ್ವೆ ನಂಬರ್‍‌ 80ರಲ್ಲಿ 17.17, 0.24, 16.33 ಎಕರೆ ವಿಸ್ತೀರ್ಣದ ಜಮೀನು ಅಮರ್‍‌ ಖಂಡ್ರೆ ಅವರ ಪುತ್ರಿ ಲಕ್ಷ್ಮಿ ಅವರ ಹೆಸರಿನಲ್ಲಿರುವುದು ಗೊತ್ತಾಗಿದೆ.

 

 

 

ಈ ಕುರಿತು ಸಚಿವ ಈಶ್ವರ್‍‌ ಖಂಡ್ರೆ ಅವರನ್ನು ‘ದಿ ಫೈಲ್‌’ ಸಂಪರ್ಕಿಸಲು ಯತ್ನಿಸಿತು.  ವಾಟ್ಸಾಪ್‌ನಲ್ಲಿ ಪ್ರತಿಕ್ರಿಯೆ ಕೋರಿ ಸಂದೇಶ ಕಳಿಸಲಾಗಿತ್ತು. ನಂತರ ‘ದಿ ಫೈಲ್‌’ ಪ್ರತಿನಿಧಿ ಮಾಡಿದ್ದ ಕರೆಯನ್ನು ಸ್ವೀಕರಿಸಲಿಲ್ಲ.  ಸಚಿವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕೃತಗೊಳಿಸಲಾಗುವುದು.

the fil favicon

SUPPORT THE FILE

Latest News

Related Posts