ಅನುಮೋದನೆಯಿಲ್ಲದೇ ಪಿಪಿಇ ಕಿಟ್‌, ಮಾಸ್ಕ್‌ ಖರೀದಿ; 78 ಕೋಟಿ ಅಕ್ರಮದ ಬಗ್ಗೆ ತನಿಖಾ ವರದಿ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಆಡಳಿತಾತ್ಮಕ ಅನುಮೋದನೆ ಇಲ್ಲದೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ  78 ಕೋಟಿ ರು. ಮೊತ್ತದಲ್ಲಿ  ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌ಗಳ   ಖರೀದಿ ಪ್ರಕರಣವೂ ಸೇರಿದಂತೆ ಇನ್ನಿತರೆ  ಸಾಮಗ್ರಿಗಳ ಖರೀದಿಯಲ್ಲಿ  ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯ  ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

 

ಅದೇ ರೀತಿ ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ, ಬೋಧಕೇತರ ವರ್ಗ, ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೆಲವು ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ನೀಡಿರುವ ಬಗ್ಗೆಯೂ ಇದೇ ಸಮಿತಿಯು ತನಿಖಾ ವರದಿಯನ್ನು ಸಲ್ಲಿಸಿದೆ. ಈ ಎರಡೂ ವರದಿಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಕೋವಿಡ್‌ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೈಕೆಲ್‌ ಕುನ್ಹಾ ಅವರ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿರುವ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸಲ್ಲಿಸಿರುವ ತನಿಖಾ ವರದಿಯೂ ಮುನ್ನೆಲೆಗೆ ಬಂದಿದೆ.

 

 

ವಿಶೇಷವೆಂದರೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳ ಸಂಬಂಧ ಕರೆದಿದ್ದ ಟೆಂಡರ್‍‌ಗಳ ಮೂಲ ಕಡತವೇ ಲಭ್ಯವಿರಲಿಲ್ಲ.

 

 

ಟೆಂಡರ್‍‌ ಅರ್ಹತೆಗೆ ಕಡ್ಡಾಯಪಡಿಸಿದ್ದ ದಾಖಲೆಗಳು, ಡಿಎಂಇಯಿಂದ ತಯಾರಿಸಬೇಕಿದ್ದ ಅಗತ್ಯ ಮೌಲ್ಯಮಾಪನ, ತಾಂತ್ರಿಕ ವಿವರಣೆ, ಟೆಂಡರ್‍‌ ಪರಿಶೀಲನೆ ನಡವಳಿಗಳೂ ಸಹ ಕಡತದಲ್ಲಿ ಇರಲಿಲ್ಲ. ತಾಂತ್ರಿಕ ಅರ್ಹತೆ ಇರದಿದ್ದರೂ ಸಹ ತಾಂತ್ರಿಕವಾಗಿ ಅರ್ಹತೆ ನೀಡಿತ್ತು. ಕನಿಷ್ಟ ಮಾನದಂಡಗಳ ಪ್ರಕಾರ ದಾಖಲೆಗಳನ್ನೂ ಸಲ್ಲಿಸಿರಲಿಲ್ಲ ಎಂಬುದನ್ನು ತನಿಖಾ ಸಮಿತಿಯು ಪತ್ತೆ ಹಚ್ಚಿದೆ.

 

ಟೆಂಡರ್‍‌ ಪ್ರಕ್ರಿಯೆ, ಸರ್ಕಾರದಿಂದ ವಿವಿಧ ದಿನಾಂಕಗಳಂದು ಬಿಡುಗಡೆಯಾದ ಅನುದಾನದ ವಿವರ, ಸರಬರಾಜುದಾರಾರಿಗೆ ಪಾವತಿಸಿರುವ ಮೊತ್ತದ ವಿವರ, ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದ ಸಂಗ್ರಹಣ ಅಂಶಗಳು ಮತ್ತು ತನಿಖೆಯಲ್ಲಿ ಕಂಡು ಬಂದ ಅಂಶಗಳ ಕುರಿತು ವಿಸ್ತೃತವಾಗಿ ಈ ಸಮಿತಿಯು ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಪಿಪಿಇ ಕಿಟ್‌ಗಳು ಮತ್ತು ಇತರೆ ಸಾಮಗ್ರಿಗಳ ಸಂಗ್ರಹಣೆಯಲ್ಲಿ ಕೆಟಿಪಿಪಿ ಕಾಯ್ದೆ ಅನ್ವಯ ಕಾರ್ಯವಿಧಾನವನ್ನು ಪಾಲನೆ ಮಾಡಿರುವ ಮತ್ತು ಸರ್ಕಾರದ ಅನುಮೋದನೆ ಕುರಿತೂ ಈ ಸಮಿತಿಯು ತನಿಖೆ ವೇಳೆಯಲ್ಲಿ ಪರಿಶೀಲಿಸಿದೆ.

 

ಕೆಟಿಪಿಪಿ ಕಾಯ್ದೆಯ ಕಾರ್ಯ ವಿಧಾನ ಉಲ್ಲಂಘಿಸಿ ಮಾಡಿರುವ ಸಂಗ್ರಹಿಸಿರುವ ಟೆಂಡರ್‍‌ ಮೊತ್ತ, ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿ, ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋದನಾ ಸಂಸ್ತೆ, ಬೆಂಗಳೂರು, ಹುಬ್ಬಳ್ಳಿ ಇತರೆ ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ, ಬೋಧಕೇತರ ವರ್ಗ, ಹುದ್ದೆಗಳಿಗೆ ನೇಮಕಾತಿ ಮಾಡುವಾಗ ನೀಡಿರುವ ಆದೇಶ, ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೇ ಇರುವುದು, ಈ ನೇಮಕಾತಿಯಲ್ಲಿ ನಿಯಮ, ನಿಬಂಧನೆಗಳು ಮತ್ತು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಅನುಸರಿಸಲಾಗಿದೆಯೇ ಎಂಬುದರ ಕುರಿತೂ ಸಮಿತಿಯು ಒರೆಗೆ ಹಚ್ಚಿರುವುದು ಗೊತ್ತಾಗಿದೆ.

 

ಈ ಎಲ್ಲದರ ಕುರಿತು ನಾಲ್ಕು ಬಾರಿ ಸಭೆ ಸೇರಿರುವ ಸಮಿತಿಯು ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲು ಆಯುಕ್ತಾಲಯದಿಂದಲೂ ಹಿರಿಯ ಅಧಿಕಾರಿಗಳನ್ನು ನೇಮಿಸಿತ್ತು. ಈ ಸಮನ್ವಯ ತಂಡವು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ವಿವಿಧ ದಿನಾಂಕಗಳನ್ನು ಭೇಟಿ ನೀಡಿತ್ತು. 2023ರ ಆಗಸ್ಟ್‌ 11ರಂದು ಕಡತಗಳನ್ನು ವಶಕ್ಕೆ ಪಡೆದಿತ್ತು. ಆದರೆ ಟೆಂಡರ್‍‌ ಕರೆಯಲಾಗಿರುವ ಮೂಲ ಕಡತವೇ ಲಭ್ಯವಿರಲಿಲ್ಲ.

 

ಹೀಗಾಗಿ ಇ-ಪ್ರೊಕ್ಯೂರ್‍‌ಮೆಂಟ್‌ ಅಂತರ್ಜಾದಲ್ಲಿ ಟೆಂಡರ್‍‌ ನಡೆಸಿದ್ದ (ಸಂಖ್ಯೆ; ME/TENDER/97 (B) 2019-20 ಪಿಪಿಇ) ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಕಚೇರಿಯಿಂದ ಡೌನ್‌ ಮಾಡಿತ್ತು. ಇದನ್ನು ತನಿಖಾ ಸಮಿತಿಗೆ 2023ರ ಆಗಸ್ಟ್‌ 22ರಂದು ಪರಿಶೀಲನೆಗೆ ಸಲ್ಲಿಸಿತ್ತು ಎಂಬುದು ತಿಳಿದು ಬಂದಿದೆ.

 

10 ಕಡತಗಳ ಪರಿಶೀಲನೆ

 

ಈ ಸಮಿತಿಯು ಒಟ್ಟು 10 ಕಡತಗಳನ್ನು ಪರಿಶೀಲಿಸಿತ್ತು. ಇದರಲ್ಲಿ ರಾಜ್ಯ ಸರ್ಕಾರದ ಎಲ್ಲಾ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಖರೀದಿಸಿದ್ದ ಪಿಪಿಪಿ ಕಿಟ್‌ಗಳು (ME/TENDER/97 (B) 2019-20) , ಕೋವಿಡ್‌ 19ರ ಪಿಪಿಇ ಕಿಟ್‌ಗಳು ಸರಬರಾಜು (ME/TENDER/22/2020-21 (PART 1), ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಪಿಪಿಇ ಕಿಟ್‌ಗಳ ಖರೀದಿ (ME/TENDER/22/2020-21 (PART 2) ಕಡತಗಳನ್ನು ಪರಿಶೀಲಿಸಿದೆ.

 

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಗೆ ಪಿಪಿಇ ಕಿಟ್‌ಗಳ ಸರಬರಾಜು (ME/TENDER/22 (A)2020-21), ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದಂತೆ ಎನ್‌-95 ಮಾಸ್ಕ್‌ ಮತ್ತ ಪಿಪಿಇ ಕಿಟ್‌ ( ME/TENDER/09/2021-22), ಪಿಪಿಇ ಕಿಟ್‌ಗಳ ಖರೀದಿ ಮತ್ತು ಟ್ಯಾಕ್ಸ್‌ ಇನ್‌ವಾಯ್ಸ್‌, ಸರಬರಾಜು ಆದೇಶ, ಸರ್ಕಾರದ ಆದೇಶಗಳು ಮತ್ತು ಪತ್ರ ವ್ಯವಹಾರಗಳು (ME/TENDER/09 (A)2020-221) ಕಡತಗಳನ್ನು ವಶಕ್ಕೆ ಪಡೆದಿತ್ತು.

 

ಕೆಎಸ್‌ಎಂಎಸ್‌ಸಿಎಲ್‌ಗೆ ಪಿಪಿಇ ಕಿಟ್‌ಗಳ ಸರಬರಾಜು (ME/TENDER/09(B)2021-22, ಸಿಬ್ಬಂದಿ ಬಳಕೆಗೆ ಎನ್‌ 95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳು (ME/TENDER/09/2021-22), ಕೋವಿಡ್‌ 19 ನಿಯಂತ್ರಣಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸಿಬ್ಬಂದಿಗಾಗಿ ಖರೀದಿ ಮಾಡಿದ್ದ ಸಾಮಗ್ರಿಗಳ (MED/197/MPS/2021) ಕಡತವನ್ನು ಪರಿಶೀಲಿಸಿತ್ತು ಎಂಬುದು ಗೊತ್ತಾಗಿದೆ.

 

ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ ಖರೀದಿ ಪ್ರಕ್ರಿಯೆ ವೇಳೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೇ ಡಾ ಕೆ ಸುಧಾಕರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts