ಮೂಲಸೌಕರ್ಯಗಳಿಗಿಲ್ಲ ಅನುದಾನ; ಹಾಸಿಗೆ, ದಿಂಬು, ತಟ್ಟೆ, ಲೋಟ ಖರೀದಿಗೂ ಹಣವಿಲ್ಲವಾಯಿತೇ?

ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುರುಕು ಡೆಸ್ಕ್‌, ಹರಿದ, ಧೂಳು ಹಿಡಿದ ಹಾಸಿಗೆ, ದಿಂಬು, ಜಮಖಾನಾಗಳಲ್ಲೇ  ದಿನ ದೂಡುತ್ತಿದ್ದಾರೆ!

 

ಏಕೆಂದರೇ ವಸತಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ ಬಿಡಿಗಾಸಿನ ಅನುದಾನವನ್ನೇ ಒದಗಿಸಿಲ್ಲ.  ಹಾಸಿಗೆ, ದಿಂಬು, ತಟ್ಟೆ, ಲೋಟ, ಡೆಸ್ಕ್‌, ಟ್ರಂಕ್‌ ಸೇರಿದಂತೆ ಇನ್ನಿತರೆ 30 ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಂಶುಪಾಲರುಗಳು 464.60 ಕೋಟಿ ರು. ಅನುದಾನ ಕೋರಿದ್ದರು. ಆದರೆ 2024-25ನೇ ಸಾಲಿನ ಆಯವ್ಯಯದಲ್ಲಿ ಈ ಸಂಬಂಧ ನಯಾಪೈಸೆಯನ್ನೂ ನೀಡಿಲ್ಲ.

 

ಪ್ರಸಕ್ತ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಪೈಕಿ 14,000 ಕೋಟಿಗೂ ಹೆಚ್ಚು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿರುವುದು ವಿರೋಧಕ್ಕೆ ಕಾರಣವಾಗಿರುವ ಬೆನ್ನಲ್ಲೇ ವಸತಿ ಶಾಲೆಗಳ ಮೂಲಸೌಕರ್ಯಕ್ಕೂ ಅನುದಾನ ನೀಡದ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ಶಾಲೆ, ಕಾಲೇಜುಗಳಿಗೆ  ಸರ್ಕಾರವು ಅನುದಾನವನ್ನು ಒದಗಿಸುವವರೆಗೂ ಇರುವ ಸಾಮಗ್ರಿಗಳೊಂದಿಗೇ ವಿದ್ಯಾರ್ಥಿಗಳು ದಿನ ದೂಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

 

ಬಾಗಲಕೋಟೆ ಜಿಲ್ಲೆಯ ಅಂಕಿತ ಬಸಪ್ಪ ಅವರು ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಹಿಗ್ಗಿದ್ದರು.

 

ಅಲ್ಲದೇ ವಸತಿ ಶಾಲೆಗಳಿಗೆ ಎಲ್ಲಾ ರೀತಿಯಿಂದಲೂ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ   ಲಾಖೆಯು ವಿಧಾನಮಂಡಲದ ಎರಡು ಸಮಿತಿಗಳಿಗೆ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಬಿಡಿಗಾಸಿನ ಅನುದಾನವನ್ನೂ ನೀಡಿಲ್ಲ ಎಂದು ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡಿರುವ ಅನುಪಾಲನಾ ವರದಿಯು, ಸರ್ಕಾರದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿದೆ. ಈ ಎರಡೂ ಸಮಿತಿಗಳಿಗೆ ಇಲಾಖೆಯು ಒದಗಿಸಿರುವ ಅನುಪಾಲನಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಪ.ಜಾತಿ ಮತ್ತು ಪ.ಪಂಗಡ ವಸತಿ ಶಾಲೆ, ಕಾಲೇಜುಗಳಿಗೆ ಹಾಸಿಗೆ, ದಿಂಬು, ತಟ್ಟೆ, ಲೋಟ, ಬಕೆಟ್‌, ಜಗ್ಗು, ಡಸ್ಟ್‌ ಬಿನ್‌, ಜಮಖಾನಾ, ಶಾಲಾ ಬ್ಯಾಗ್‌, ಪಾಠೋಪಕರಣ, ಕಂಪ್ಯೂಟರ್‍‌ ಟೇಬಲ್‌ಗಳು ಸೇರಿದಂತೆ ಒಟ್ಟಾರೆ 30 ಬಗೆಯಲ್ಲಿ 5,96,318 ಪರಿಕರಗಳ ಬೇಡಿಕೆ ಇದೆ. 2024-25ನೇ ಸಾಲಿಗೆ ಈ ಸೌಕರ್ಯಗಳಿಗೆ ಅನುದಾನ ಒದಗಿಸಬೇಕು ಎಂದು ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಆಯವ್ಯಯದಲ್ಲಿ ಬಿಡಿಗಾಸಿನ ಅನುದಾನವನ್ನೂ ನೀಡಿಲ್ಲ ಎಂದು ತಿಳಿದು ಬಂದಿದೆ.

 

ಪರಿಶಿಷ್ಟ ಜಾತಿಯ ವಸತಿ ಶಾಲೆ, ಕಾಲೇಜುಗಳಲ್ಲಿ 19.603 ಡೆಸ್ಕ್‌ ಕಮ್‌ ಬೆಂಚ್‌ ಗಳಿವೆ. ಇನ್ನೂ 4,601 ಡೆಸ್ಕ್‌ ಕಮ್‌ ಬೆಂಚ್‌ಗಳ ಬೇಡಿಕೆ ಇದೆ. ಪರಿಶಿಷ್ಟ ವರ್ಗ ವಸತಿ ಶಾಲೆ, ಕಾಲೇಜುಗಳಲ್ಲಿ 6,044 ಡೆಸ್ಕ್‌ ಕಮ್‌ ಬೆಂಚ್‌ಗಳಿವೆ. ಇನ್ನೂ 316 ಬೇಡಿಕೆ ಇದೆ. ಒಟ್ಟಾರೆ ಈ ಎರಡೂ ವರ್ಗಗಳ ವಸತಿ ಶಾಲೆ, ಕಾಲೇಜುಗಳಿಗೆ 4,917 ಡೆಸ್ಕ್‌ ಕಮ್‌ ಬೆಂಚ್‌ಗಳ ಬೇಡಿಕೆ ಇರುವುದು ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ಪರಿಶಿಷ್ಟ ಜಾತಿಯ ವಸತಿ ಶಾಲೆ, ಕಾಲೇಜುಗಳಲ್ಲಿ 27,381 ಹಾಸಿಗೆ, 22,643 ದಿಂಬುಗಳಿವೆ. ಆದರೆ ಸದ್ಯದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 76,214 ಹಾಸಿಗೆ, 95,237 ದಿಂಬುಗಳ ಬೇಡಿಕೆ ಇದೆ. ಅದೇ ರೀತಿ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ 12,609 ಹಾಸಿಗೆ, 17,625 ದಿಂಬುಗಳಿವೆ. ವಾಸ್ತವದಲ್ಲಿ 93,839 ಹಾಶಿಗೆ, 1,13, 877 ದಿಂಬುಗಳ ಬೇಡಿಕೆ ಇದೆ.

 

ಪ.ಜಾತಿ ವಸತಿ ಶಾಲೆ, ಕಾಲೇಜುಗಳಲ್ಲಿ ಸದ್ಯ 24,890 ತಟ್ಟೆ ಲೋಟಗಳಿವೆ. ಇನ್ನು 46,122 ತಟ್ಟೆ ಲೋಟಗಳಿಗೆ ಬೇಡಿಕೆ ಇದೆ. ಅದೇ ರೀತಿ ಪ.ಪಂಗಡ ವಸತಿ ಶಾಲೆ, ಕಾಲೇಜುಗಳಲ್ಲಿ 6,475 ತಟ್ಟೆ ಲೋಟಗಳಿವೆ. ವಿದ್ಯಾರ್ಥಿಗಳ ಸಂಖ್ಯೆಗನುಣವಾಗಿ ಇನ್ನೂ 9,179 ತಟ್ಟೆ ಲೋಟಗಳ ಬೇಡಿಕೆ ಇದೆ. ಒಟ್ಟಾರೆಯಾಗಿ 55,301 ತಟ್ಟೆ ಲೋಟಗಳು ಬೇಡಿಕೆ ಇರುವುದು ಗೊತ್ತಾಗಿದೆ.

 

ಹಾಗೆಯೇ ಈ ಎರಡೂ ಪ್ರವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿ 8, 343 ಬಕೆಟ್‌, ಜಗ್ಗುಗಳ ಬೇಡಿಕೆ ಇದೆ. 2,714 ಡಸ್ಟ್‌ ಬಿನ್‌ಗಳು, 1,268 ಜಮಖಾನ, 1,27,184 ಶಾಲಾ ಬ್ಯಾಗ್‌ಗಳು, 8,491 ಕಂಪ್ಯೂಟರ್‍‌ಗಳು, 5,172 ಕಂಪ್ಯೂಟರ್‍‌ ಟೇಬಲ್‌, 5,332 ಕಂಪ್ಯೂಟರ್‍‌ ಚೇರ್‍‌ಗಳು, 1,05,106 ಟ್ರಂಕ್‌ಗಳು, 14,556 ಡೈನಿಂಗ್‌ ಟೇಬಲ್‌, 4,385 ಅಲ್ಮೇರಾ ರ್‍ಯಾಕ್ಸ್‌, 1,549 ಗ್ರೀನ್‌ ಮತ್ತು ವೈಟ್ ಬೋರ್ಡ್‌ಗಳ ಬೇಡಿಕೆ ಇದೆ.

 

ಅನುದಾನವನ್ನೇ ಒದಗಿಸದ ಸರ್ಕಾರ

 

ಈ ಎಲ್ಲಾ ಮೂಲಭೂತ ಸೌಕರ್ಯಗಳಿಗಾಗಿ 464.60 ಕೋಟಿ ರು. ಒದಗಿಸಬೇಕು ಎಂದು ಇಲಾಖೆಯು ಸರ್ಕಾರವನ್ನು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 2024-25ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ಅನುದಾನ ಒದಗಿಸಿಲ್ಲ.

 

‘ಪ್ರಾಂಶುಪಾಲರು ಸಲ್ಲಿಸಿರುವ ಬೇಡಿಕೆಯನುಸಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಸತಿ ಶಾಲೆ, ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 464.60 ಕೋಟಿ ರು.ಗಳ ಅವಶ್ಯಕತೆ ಇದೆ. ಈ ಅನುದಾನವನ್ನು 2024-25ನೇ ಸಾಲಿ ಆಯವ್ಯಯದಲ್ಲಿ ಒದಗಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಆಯವ್ಯಯದಲ್ಲಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಅನುದಾನವನ್ನು ಒದಗಿಸಿರುವುದಿಲ್ಲ. ಸರ್ಕಾರವು ಅನುದಾನ ಒದಗಿಸಿದ ನಂತರ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲು ನಿಯಮಾನುಸಾರ ಕ್ರಮ ವಹಿಸಲಾಗುವುದು,’ ಎಂದು ಇಲಾಖೆಯು ಈ ಎರಡೂ ಸಮಿತಿಗಳಿಗೂ ಉತ್ತರಿಸಿರುವುದು ಅನುಪಾಲನಾ ವರದಿಯಿಂದ ಗೊತ್ತಾಗಿದೆ.

 

ವಸತಿ ಶಾಲೆ, ಕಾಲೇಜಿಗೆ ತಲಾ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಸರಾಸರಿ (ಆಹಾರ, ಶೂ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ಸೇರಿದಂತೆ) 48,788.37 ರು ವೆಚ್ಚವಾಗಲಿದೆ. ಅಲ್ಲದೇ ಪ್ರತಿ ವಿದ್ಯಾರ್ಥಿಯ ನಿರ್ವಹಣೆಗೆ (ವೇತನ, ಶಾಲಾ ನಿರ್ವಹಣಾ ವೆಚ್ಚ ಇತರೆ ಆವರ್ತಕ-ಅನಾವರ್ತಕ ವೆಚ್ಚ) 77,362 ರು ಆಗಲಿದೆ. ಒಂದ ಶಾಲೆಗೆ ಒಂದು ವರ್ಷಕ್ಕೆ (ವೇತನ, ವಿದ್ಯಾರ್ಥಿ, ಶಾಲಾ ನಿರ್ವಹಣೆ, ಮೂಲಭೂತ ಸೌಕರ್ಯ ಒಳಗೊಂಡತೆ) ಅಂದಾಜು 2.30 ಕೋಟಿ ರು ಆಗಲಿದೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

 

ಪರಿಶಿಷ್ಟ ಜಾತಿಯ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಸರ್ಕಾರವು 2024ರ ಜುಲೈ 12ರಂದು ಮೊದಲನೇ ತ್ರೈಮಾಸಿಕ ಕಂತಿನಲ್ಲಿ 162.05 ಕೋಟಿ ರು. ಬಿಡುಗಡೆ ಮಾಡಿದೆ. ಈ ಪೈಕಿ 119.00 ಕೋಟಿ ರು. ಖರ್ಚಾಗಿದೆ. ಉಳಿದ 4,350.00 ಕೋಟಿ ರು.ಗಳನ್ನು ಕಟ್ಟಡ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಸಲು ಸಂಪೂರ್ಣವಾಗಿ ಖರ್ಚು ಮಾಡಲಿದೆ ಎಂದು ತಿಳಿದು ಬಂದಿದೆ.

 

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನಿರ್ವಹಣೆಗೆ 2024-25ನೇ ಸಾಲಿನ ಆಯವ್ಯಯದಲ್ಲಿ 222.90 ಕೋಟಿ ರು.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 2024ರ ಆಗಸ್ಟ್‌ 29ರ ಅಂತ್ಯಕ್ಕೆ 55.56 ಕೋಟಿ ರು. ಬಿಡುಗಡೆ ಮಾಡಿದೆ. ಇಷ್ಟೂ ಹಣವನ್ನು ಖರ್ಚು ಮಾಡಿರುವುದು ಗೊತ್ತಾಗಿದೆ.

 

ಆದರೆ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಈವರೆವಿಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. 2024ರ ಆಗಸ್ಟ್‌ 23ರ ಅಂತ್ಯಕ್ಕೆ ಆರಂಭಿಕ ಶಿಲ್ಕಿನಿಂದ 32.65 ಕೋಟಿ ರು.ಗಳನ್ನು ಖರ್ಚು ಮಾಡಿದೆ ಎಂದು ವರದಿಯಲ್ಲಿ ಇಲಾಖೆಯು ಉಲ್ಲೇಖಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts