ಬೆಂಗಳೂರು; ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದರೆ 10 ಕೋಟಿ ರುಪಾಯಿ ದಂಡ ಮತ್ತು 12 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಗೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಹೊರತುಪಡಿಸಿದರೇ ಉಳಿದ ಇಲಾಖೆಗಳು ತಮ್ಮ ಸ್ಪಷ್ಟ ಅಭಿಪ್ರಾಯವನ್ನೇ ನೀಡಿಲ್ಲ.
ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಸಾರ್ವಜನಿಕ ಪರೀಕ್ಷಾ (ಭ್ರಷ್ಟಾಚಾರ ತಡೆ) ವಿಧೇಯಕ ಸೇರಿದಂತೆ ಒಟ್ಟು 11 ವಿಧೇಯಕಗಳನ್ನು ಮತ್ತಷ್ಟು ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್ ಕಳಿಸಿದ್ದರು. ಬಿಜೆಪಿ ಶಾಸಕರ ಮಾತು ಕೇಳಿ ಬಿಲ್‌ಗಳನ್ನು ವಾಪಸ್ ಕಳಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಕರ್ನಾಟಕ ಸಾರ್ವಜನಿಕ ಪರೀಕ್ಷೆ, ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕಗಳ ಕ್ರಮಗಳ ಕುರಿತಾದ 2023ರ ವಿಧೇಯಕಕ್ಕೆ ಹಲವು ಇಲಾಖೆಗಳು ತಮ್ಮ ಸ್ಪಷ್ಟ ಅಭಿಪ್ರಾಯವನ್ನೇ ಸಲ್ಲಿಸಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಟಿಪ್ಪಣಿ ಹಾಳೆಯೊಂದು ಲಭ್ಯವಾಗಿದೆ.
ಈ ವಿಧೇಯಕದ ಬಗ್ಗೆ ಸ್ಪಷ್ಟನೆ ಕೋರಿದ್ದ ರಾಜ್ಯಪಾಲರು, ಕಳೆದ ನಾಲ್ಕು ತಿಂಗಳ ಹಿಂದೆಯೇ ಸರ್ಕಾರಕ್ಕೆ ಕಡತವನ್ನು ಹಿಂದಿರುಗಿಸಿದ್ದರು. ಈ ಕುರಿತು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಜುಲೈ 10ರಂದು ಸಭೆ ನಡೆದಿತ್ತು. ಹಲವು ಇಲಾಖೆಗಳು ಸ್ಪಷ್ಟವಾಗಿ ಅಭಿಪ್ರಾಯವನ್ನು ನೀಡಿರಲಿಲ್ಲ ಎಂದು ಗೊತ್ತಾಗಿದೆ.
‘ಡಿಜಿ ಮತ್ತು ಐಜಿಪಿ ಅವರನ್ನು ಹೊರತುಪಡಿಸಿ ಸಹಕಾರ ಇಲಾಖೆ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಸಾಕ್ಷರತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಸಿಐಡಿ ವಿಭಾಗದಿಂದಲೂ ಇದುವರೆಗೂ ಯಾವುದೇ ಮಾಹಿತಿ ಸ್ವೀಕೃತವಾಗಿರುವುದಿಲ್ಲ,’ ಎಂದು ಶಾಸನ ರಚನೆ ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
2024ರ ಜುಲೈ 10ರಂದು ನಡೆದಿದ್ದ ಸಭೆ ನಡವಳಿಗಳನ್ನೂ ಈ ಎಲ್ಲಾ ಇಲಾಖೆಗಳಿಗೆ ಕಳಿಸಿತ್ತು. ಇದಾದ ನಂತರ ಸ್ಪಷ್ಟ ಅಭಿಪ್ರಾಯಗಳಿಗಾಗಿ ನೆನಪೋಲೆ, ಅನಧಿಕೃತ ಟಿಪ್ಪಣಿಗಳನ್ನೂ ಕಳಿಸಿತ್ತು. ಆದರೂ ಈ ಇಲಾಖೆಗಳು ಸ್ಪಷ್ಟ ಅಭಿಪ್ರಾಯಗಳನ್ನೇ ಕಳಿಸಿರಲಿಲ್ಲ ಎಂದು ಗೊತ್ತಾಗಿದೆ.
ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತು, 2024 ಪ್ರಸಕ್ತ ಸಾಲಿನ ನೋಂದಣಿ ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನು ರಾಜ್ಯಪಾಲರು ಹಿಂದಕ್ಕೆ ಕಳಿಸಿದ್ದಾರೆ.
2024ರ ಮಾರ್ಚ್ 16 ಮತ್ತು 22ರಂದು ಈ ಮೂರು ವಿಧೇಯಕಗಳನ್ನು ಹಿಂದಕ್ಕೆ ಕಳಿಸಿರುವ ಕಾರಣ ಸರ್ಕಾರವು ಸಂಬಂಧಿಸಿದ ಇಲಾಖೆಗೆಳಿಗೆ ಸ್ಪಷ್ಟೀಕರಣ ಕೋರಿ ಕಡತಗಳನ್ನು ರವಾನಿಸಿದೆ. 2024ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಒಟ್ಟಾರೆ 7 ವಿಧೇಯಕಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳಿಸಿದ್ದರು.
ಸಚಿವ ಸಂಪುಟದ ಅನುಮೋದನೆ ಇಲ್ಲದೆಯೇ ವಿಧಾನಮಂಡಲದಲ್ಲಿ ವಿಧೇಯಕಗಳ ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಬೇಕು ಎಂದು ರಾಜ್ಯಪಾಲರು ನೀಡಿದ್ದ ಸಲಹೆಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿರುವ ಬೆನ್ನಲ್ಲೇ ಮಾರ್ಚ್ 2024ರಲ್ಲಿ ಮೂರು ಮಸೂದೆಗಳನ್ನು ಹಿಂದಕ್ಕೆ ಕಳಿಸಿದ್ದರು.
ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ನೋಂದಣಿಗಾಗಿ ಹಾಗೂ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳಿಗಾಗಿ ವೃತ್ತಿಪರ ನಡತೆಯ ಮಾನಕಗಳನ್ನು ಮತ್ತು ನೈತಿಕತೆ ಹಾಗೂ ನೀತಿ ನಿಯಮಗಳ ಸಂಹಿತೆಯನ್ನು ರೂಪಿಸಲು ‘ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತು’ ರಚಿಸಲು ಉದ್ದೇಶಿಸಿರುವ ‘2024ನೆ ಸಾಲಿನ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ವಿಧೇಯಕ’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು.
ಆದರೆ ಈ ಮಸೂದೆಯು ಕಟ್ಟಡಗಳ ವಿನ್ಯಾಸಗಳನ್ನು ಕೇವಲ ಪ್ರಮಾಣೀಕೃತ ಇಂಜಿನಿಯರ್‍ಗಳು ಮಾತ್ರ ಮಾಡಬೇಕು ಎಂದು ಹೇಳಿರುವುದು ಅನೇಕ ಗೊಂದಲಗಳನ್ನು ಸೃಷ್ಟಿಸಿತ್ತು. ಅಲ್ಲದೇ ಇದು ಅನಗತ್ಯವಾಗಿ ಹಲವು ರೀತಿಯಲ್ಲಿ ನಿರ್ಬಂಧಗಳನ್ನೂ ಹೇರಲಿದೆ. ಸೇವೆಗಳ ಬಗ್ಗೆ ರಕ್ಷಣೆ ಒದಗಿಸಿದೆಯಾದರೂ ಪರವಾನಿಗೆ ನೀಡುವ ವಿಚಾರದಲ್ಲಿ ಮಾತ್ರ ಭಾರೀ ಲೋಪವಿದೆ ಎಂದು ಇಂಜಿನಿಯರ್‍ಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಹೀಗಾಗಿ ರಾಜ್ಯಪಾಲರು 2024ರ ಮಾರ್ಚ್ 16ರಂದು ಹಿಂದಕ್ಕೆ ಕಳಿಸಿದ್ದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನೂ ರಾಜ್ಯಪಾಲರು ಹಿಂದಕ್ಕೆ ಕಳಿಸಿದ್ದರು. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆಯನ್ನು ವಾಪಸ್ ಕಳಿಸಿದ್ದರು.
ಹೈಕೋರ್ಟ್‌ನ ಧಾರವಾಡ ಪೀಠವು ರಿಟ್ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇತ್ತು. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಕಡತವನ್ನು 2024ರ ಮಾರ್ಚ್ 16ರಂದು ವಾಪಸ್ ಕಳುಹಿಸಿದ್ದರು.
ನೋಂದಣಿ ಇ-ಖಾತೆ ಕಡ್ಡಾಯಗೊಳಿಸುವ 2024 ಪ್ರಸಕ್ತ ಸಾಲಿನ ನೋಂದಣಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ನಗರ ಸಭೆಗಳಲ್ಲಿ ಇ-ಖಾತೆ ಇದ್ದರೆ ಮಾತ್ರ ನೋಂದಣಿ ಮಾಡುವದಕ್ಕೆ ಕಾನೂನು ಅನ್ವಯ ಎಂದು ವಿಧೇಯಕ ತಿದ್ದುಪಡಿಗೆ ತರಲಾಗಿತ್ತು.
ಈ ಬಗ್ಗೆ ಪರ್ಯಾಲೋಚನೆ ಮಾಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಹಣಕಾಸು ಇಲಾಖೆಯವರು ಡಿಸೆಂಬರ್ ನಲ್ಲಿ ನಮಗೆ ಪತ್ರ ಬರೆದು ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಒಂದೇ ತಿಂಗಳಲ್ಲಿ ಮೂರು ವಿಧೇಯಕ ವಾಪಸ್ ಕಳಿಸಿದ ರಾಜ್ಯಪಾಲರು; ಸ್ಪಷ್ಟೀಕರಣ ಕೋರಿದ ಸರ್ಕಾರ
ಇದೀಗ ಈ ಮಸೂದೆಯನ್ನೂ ರಾಜ್ಯಪಾಲರು 2024 ಮಾರ್ಚ್ 22ರಂದು ಹಿಂದಕ್ಕೆ ಕಳಿಸಿದ್ದರು.
ರಾಜ್ಯಪಾಲರಿಂದ ಹಿಂದಿರಿಗಿರುವ ಈ ಮೂರು ವಿಧೇಯಕಗಳನ್ನು 2024ರ ಮಾರ್ಚ್ 12 ಮತ್ತು ಮಾರ್ಚ್ 25ರಂದು ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟೀಕರಣ ಕೋರಿದ್ದರು.
ಕರ್ನಾಟಕ ಸಾರ್ವಜನಿಕ ಪರೀಕ್ಷಾ (ಭ್ರಷ್ಟಾಚಾರ ತಡೆ) ವಿಧೇಯಕ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗದಗ ಬೆಟಗೇರಿ ವ್ಯಾಪರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕಕ್ಕೂ ಇಲಾಖೆಗಳು ಸ್ಪಷ್ಟ ಅಭಿಪ್ರಾಯ ನೀಡಲು ಬಾಕಿ ಇದೆ ಎಂದು ಗೊತ್ತಾಗಿದೆ.
ಸಿಎಂ ಸಲಹೆಗಾರರ ಹುದ್ದೆಗೆ ಶಾಸಕರ ನೇಮಕ; ಅನರ್ಹತೆ ನಿವಾರಣೆಗೆ ವಿಧೇಯಕಕ್ಕೇ ತಿದ್ದುಪಡಿ!
ಈ ಮಧ್ಯೆ ಸಿಎಂ ಸಲಹೆಗಾರರ ಹುದ್ದೆಗೆ ಶಾಸಕರ ನೇಮಕ ಸಂಬಂಧ ಅನರ್ಹತೆ ನಿವಾರಣೆ ಹೆಸರಿನಲ್ಲಿ ವಿಧೇಯಕವನ್ನು ಮಂಡಿಸಿತ್ತು. ಇದಕ್ಕೂ ಸ್ಪಷ್ಟ ಅಭಿಪ್ರಾಯ ಕೋರಿರುವ ರಾಜ್ಯಪಾಲರು, ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.