ಒಂದೇ ತಿಂಗಳಲ್ಲಿ ಮೂರು ವಿಧೇಯಕ ವಾಪಸ್‌ ಕಳಿಸಿದ ರಾಜ್ಯಪಾಲರು; ಸ್ಪಷ್ಟೀಕರಣ ಕೋರಿದ ಸರ್ಕಾರ

ಬೆಂಗಳೂರು; ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತು, 2024 ಪ್ರಸಕ್ತ ಸಾಲಿನ‌ ನೋಂದಣಿ ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನು ರಾಜ್ಯಪಾಲರು ಹಿಂದಕ್ಕೆ ಕಳಿಸಿದ್ದಾರೆ.

 

2024ರ ಮಾರ್ಚ್‌ 16 ಮತ್ತು 22ರಂದು ಈ ಮೂರು ವಿಧೇಯಕಗಳನ್ನು ಹಿಂದಕ್ಕೆ ಕಳಿಸಿರುವ ಕಾರಣ ಸರ್ಕಾರವು ಸಂಬಂಧಿಸಿದ ಇಲಾಖೆಗೆಳಿಗೆ ಸ್ಪಷ್ಟೀಕರಣ ಕೋರಿ ಕಡತಗಳನ್ನು ರವಾನಿಸಿದೆ. 2024ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಒಟ್ಟಾರೆ 7 ವಿಧೇಯಕಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್‌ ಕಳಿಸಿದ್ದಾರೆ.

 

ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ನಡೆಸಿರುವ ಪತ್ರ ವ್ಯವಹಾರಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಚಿವ ಸಂಪುಟದ ಅನುಮೋದನೆ ಇಲ್ಲದೆಯೇ ವಿಧಾನಮಂಡಲದಲ್ಲಿ ವಿಧೇಯಕಗಳ ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಬೇಕು ಎಂದು ರಾಜ್ಯಪಾಲರು ನೀಡಿದ್ದ ಸಲಹೆಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿರುವ ಬೆನ್ನಲ್ಲೇ ಮಾರ್ಚ್‌ 2024ರಲ್ಲಿ ಮೂರು ಮಸೂದೆಗಳನ್ನು ಹಿಂದಕ್ಕೆ ಕಳಿಸಿರುವುದು ಮುನ್ನೆಲೆಗೆ ಬಂದಿದೆ.

 

ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ನೋಂದಣಿಗಾಗಿ ಹಾಗೂ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳಿಗಾಗಿ ವೃತ್ತಿಪರ ನಡತೆಯ ಮಾನಕಗಳನ್ನು ಮತ್ತು ನೈತಿಕತೆ ಹಾಗೂ ನೀತಿ ನಿಯಮಗಳ ಸಂಹಿತೆಯನ್ನು ರೂಪಿಸಲು ‘ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತು’ ರಚಿಸಲು ಉದ್ದೇಶಿಸಿರುವ ‘2024ನೆ ಸಾಲಿನ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ವಿಧೇಯಕ’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು.

 

ಆದರೆ ಈ ಮಸೂದೆಯು ಕಟ್ಟಡಗಳ ವಿನ್ಯಾಸಗಳನ್ನು ಕೇವಲ ಪ್ರಮಾಣೀಕೃತ ಇಂಜಿನಿಯರ್‍‌ಗಳು ಮಾತ್ರ ಮಾಡಬೇಕು ಎಂದು ಹೇಳಿರುವುದು ಅನೇಕ ಗೊಂದಲಗಳನ್ನು ಸೃಷ್ಟಿಸಿತ್ತು. ಅಲ್ಲದೇ ಇದು ಅನಗತ್ಯವಾಗಿ ಹಲವು ರೀತಿಯಲ್ಲಿ ನಿರ್ಬಂಧಗಳನ್ನೂ ಹೇರಲಿದೆ. ಸೇವೆಗಳ ಬಗ್ಗೆ ರಕ್ಷಣೆ ಒದಗಿಸಿದೆಯಾದರೂ ಪರವಾನಿಗೆ ನೀಡುವ ವಿಚಾರದಲ್ಲಿ ಮಾತ್ರ ಭಾರೀ ಲೋಪವಿದೆ ಎಂದು ಇಂಜಿನಿಯರ್‍‌ಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

 

ಹೀಗಾಗಿ ರಾಜ್ಯಪಾಲರು 2024ರ ಮಾರ್ಚ್‌ 16ರಂದು ಹಿಂದಕ್ಕೆ ಕಳಿಸಿದ್ದಾರೆ.

 

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನೂ ರಾಜ್ಯಪಾಲರು ಹಿಂದಕ್ಕೆ ಕಳಿಸಿದ್ದರು. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆಯನ್ನು ವಾಪಸ್‌ ಕಳಿಸಿದ್ದರು.

 

ಹೈಕೋರ್ಟ್‌ನ ಧಾರವಾಡ ಪೀಠವು ರಿಟ್‌ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್‌ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

 

ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇತ್ತು. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಕಡತವನ್ನು 2024ರ ಮಾರ್ಚ್‌ 16ರಂದು ವಾಪಸ್ ಕಳುಹಿಸಿದ್ದಾರೆ.

 

ನೋಂದಣಿ ಇ-ಖಾತೆ ಕಡ್ಡಾಯಗೊಳಿಸುವ 2024 ಪ್ರಸಕ್ತ ಸಾಲಿನ‌ ನೋಂದಣಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ನಗರ ಸಭೆಗಳಲ್ಲಿ ಇ-ಖಾತೆ ಇದ್ದರೆ ಮಾತ್ರ ನೋಂದಣಿ ಮಾಡುವದಕ್ಕೆ ಕಾನೂನು ಅನ್ವಯ ಎಂದು ವಿಧೇಯಕ ತಿದ್ದುಪಡಿಗೆ ತರಲಾಗಿತ್ತು.

 

ಈ ಬಗ್ಗೆ ಪರ್ಯಾಲೋಚನೆ ಮಾಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಹಣಕಾಸು ಇಲಾಖೆಯವರು ಡಿಸೆಂಬರ್ ನಲ್ಲಿ ನಮಗೆ ಪತ್ರ ಬರೆದು ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ನಡೆಯುತ್ತಿದೆ.‌ ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

 

ಇದೀಗ ಈ ಮಸೂದೆಯನ್ನೂ ರಾಜ್ಯಪಾಲರು 2024 ಮಾರ್ಚ್‌ 22ರಂದು ಹಿಂದಕ್ಕೆ ಕಳಿಸಿದ್ದಾರೆ.

 

ರಾಜ್ಯಪಾಲರಿಂದ ಹಿಂದಿರಿಗಿರುವ ಈ ಮೂರು ವಿಧೇಯಕಗಳನ್ನು 2024ರ ಮಾರ್ಚ್‌ 12 ಮತ್ತು ಮಾರ್ಚ್‌ 25ರಂದು ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟೀಕರಣ ಕೋರಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts