ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಡಾ ಡಿ ಎಂ ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯು ನೀಡಿದ್ದ ವರದಿಯಂತೆ ಈಗಿನ ಕಾಂಗ್ರೆಸ್ ಸರ್ಕಾರವೂ ಅನುದಾನವನ್ನು ಹಂಚಿಕೆ ಮಾಡಿಲ್ಲ. ಅಲ್ಲದೇ ವರದಿಯ ವಿಭಾಗವಾರು ಹಾಗೂ ತಾಲೂಕು ದುಸ್ಥಿತಿಗಳ ಸೂಚ್ಯಂಕವನ್ನೂ ಬದಿಗೊತ್ತಿರುವುದು ಇದೀಗ ಬಹಿರಂಗವಾಗಿದೆ.
2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಭೀಮಾ ಯೋಜನೆಯಡಿ ವಿಶೇಷ ಅಭಿವೃದ್ದಿ ಯೋಜನೆ ಮತ್ತು ಮಹತ್ವಾಕಾಂಕ್ಷಿ ತಾಲೂಕುಗಳ ಅಭಿವೃದ್ದಿಗಾಗಿ ಹಂಚಿಕೆಯಾಗಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಹಲವು ಲೋಪಗಳು ಕಂಡು ಬಂದಿವೆ. ಡಾ ಡಿ ಎಂ ನಂಜುಂಡಪ್ಪ ವರದಿಯ ವಿಭಾಗವಾರು ಮತ್ತು ತಾಲೂಕು ದುಸ್ಥಿತಿಗಳ ಸೂಚ್ಯಂಕದ ಅನ್ವಯ 319.00 ಕೋಟಿ ರು.ಗಳನ್ನು ಹಂಚಿಕೆ ಮಾಡಿಲ್ಲ.
ಈ ಸಂಬಂಧ ಖುದ್ದು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಇಲಾಖೆಯ ಆಯುಕ್ತರಿಗೆ 2024ರ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
2024-25ನೇ ಸಾಲಿನ ವಿಶೇಷ ಅಭಿವೃದ್ದಿ, ಮಹತ್ವಾಕಾಂಕ್ಷಿ ತಾಲೂಕುಗಳ ಅಭಿವೃದ್ಧಿ ಯೋಜನೆಯಡಿ ಕೃಷಿ ಇಲಾಖೆಯ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜಜನೆಯ (ಲೆಕ್ಕ ಶೀರ್ಷಿಕೆ; 2401-110-0-07-133) 319 ಕೋಟಿ ರು. ಹಂಚಿಕೆಯಾಗಿದೆ. ಈಗಾಗಲೇ ಸಲ್ಲಿಸಿರುವ ಕ್ರಿಯಾ ಯೋಜನೆಯ ಪ್ರಸ್ತಾವನೆಯಲ್ಲಿ ಡಾ ಡಿ ಎಂ ನಂಜುಂಡಪ್ಪ ವರದಿ ವಿಭಾಗವಾರು ಹಾಗೂ ತಾಲೂಕು ದುಸ್ಥಿತಿ ಸೂಚ್ಯಂಕದ ಅನ್ವಯ ಅನುದಾನವನ್ನು ಹಂಚಿಕೆ ಮಾಡಿಕೊಂಡಿರುವುದಿಲ್ಲ ಎಂದು ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.
‘ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಡಾ ಡಿ ಎಂ ನಂಜುಂಡಪ್ಪ ವರದಿ ಅನ್ವಯ ವಿಭಾಗವಾರು ಹಾಗೂ ತಾಲೂಕು ದುಸ್ಥಿತಿ ಸೂಚ್ಯಂಕದ ಅನ್ವಯ ಅನುದಾನವನ್ನು ಹಂಚಿಕೆ ಮಾಡಿ ಮರು ಸಲ್ಲಿಸಬೇಕು’ ಎಂದು ಸರ್ಕಾರದ ಕಾರ್ಯದರ್ಶಿಯು ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.
ಈ ಪತ್ರದ ಕುರಿತು ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕೃಷಿ ಯಾಂತ್ರಿಕತೆ ಮೇಲಿನ ಉಪ ಅಭಿಯಾನಕ್ಕೆ ರಾಜ್ಯವು 2024-25ನೇ ಸಾಲಿಗೆ 104.16 ಕೋಟಿ ರು, ಕೇಂದ್ರ ಸರ್ಕಾರವು 156.25 ಕೋಟಿ, ಪ್ರಾಥಮಿಕ ಶಿಲ್ಕು 69.15 ಕೋಟಿ ರು ಸೇರಿ ಒಟ್ಟಾರೆ 329.56 ಕೋಟಿ ರು. ಅನುದಾನ ಲಭ್ಯವಿದೆ. ಈ ಪೈಕಿ ಜುಲೈ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ.
ಅದೇ ರೀತಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 69.08 ಕೋಟಿ ರು., ಕೇಂಧ್ರ ಸರ್ಕಾರವು 103.61 ಕೋಟಿ ರು., ಪ್ರಾಥಮಿಕ ಶಿಲ್ಕು 14.28 ಕೋಟಿ ರು. ಸೇರಿ ಒಟ್ಟಾರೆ 186.97 ಕೋಟಿ ರು. ಅನುದಾನ ಲಭ್ಯವಿದೆ. ಆದರೆ ಜುಲೈ ಅಂತ್ಯದವರೆಗೆ ಈ ಪೈಕಿ ನಯಾಪೈಸೆಯನ್ನೂ ನೀಡಿಲ್ಲ.
ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿದ್ದ ಡಾ ಡಿ ಎಂ ನಂಜುಂಡಪ್ಪ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಸಂಪನ್ಮೂಲ ವರ್ಗಾವಣೆ ಮಾಡುವಾಗ ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕು. ವಿಶೇಷ ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳು, ಉದ್ಯೋಗ ಸೃಜನೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಅವುಗಳನ್ನ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಬಳಸಬೇಕು ಎಂದು ಸಮಿತಿ ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.
ಅಭಿವೃದ್ಧಿ ಹೊಂದಿರುವ ಅಥವಾ ಉತ್ತಮ ಸ್ಥಿತಿಯಲ್ಲಿರುವ ಜಿಲ್ಲೆಗಳು, ತಾಲೂಕುಗಳ ಜನರಿಗಿರುವ ಸರಾಸರಿ ಸೌಕರ್ಯಗಳ ಮಟ್ಟಕ್ಕೆ ಹಿಂದುಳಿದ ಪ್ರದೇಶ ಅಥವಾ ಜಿಲ್ಲೆಗಳಲ್ಲಿರುವ ವಾಸ್ತವಿಕ ಸೌಕರ್ಯ ಅಥವಾ ಸೇವೆಗಳನ್ನು ಮಟ್ಟ ಸರಿದೂಗುವಂತೆ ಮಾಡಲು ಕಾರ್ಯನೀತಿಗಳನ್ನು ರೂಪಿಸಬೇಕು ಎಂದು ಡಾ ಡಿ ಎಂ ನಂಜುಂಡಪ್ಪ ಅವರ ವರದಿಯಲ್ಲಿ ಹೇಳಲಾಗಿತ್ತು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು 2016ರಲ್ಲಿ ಆರಂಭವಾಗಿತ್ತು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಕೃಷಿಯಲ್ಲಿ ಉತ್ಪಾದನೆಯನ್ನು ಬೆಂಬಲಿಸುವ ಗುರಿ ಹೊಂದಿದೆ. ಇದು ರೈತರ ಬೆಳೆಗಳಿಗೆ ಸಮಗ್ರ ಅಪಾಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕೈಗೆಟುಕುವ ಬೆಳೆ ವಿಮೆ ಒದಗಿಸಲಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಬ್ಯಾಂಕುಗಳು, ಸಿಎಸ್ಸಿಗಳು, ವಿಮಾ ಕಂಪನಿಗಳು, ರೈತರು ಈ ಯೋಜನೆಯ ಪಾಲುದಾರರಾಗಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಬೆಳೆ ವಿಮೆ ಯೋಜನೆ ಮತ್ತು ಜಾಗತಿಕವಾಗಿ, ಪ್ರೀಮಿಯಂ ವಿಷಯದಲ್ಲಿ ಮೂರನೇ ಅತಿದೊಡ್ಡ ಯೋಜನೆಯಾಗಿದೆ.
2016 ರಿಂದ ಪಿಎಂಎಫ್ಬಿವೈ ಅಡಿಯಲ್ಲಿ ಅವರ ಬೆಳೆಗಳು29.19 ಕೋಟಿ ರೈತರ ಅರ್ಜಿಗಳು ವಿಮೆ ಮಾಡಿಸಿಕೊಂಡಿವೆ. 2016ರಲ್ಲಿ ಈ ಯೋಜನೆ ಆರಂಭವಾದಾಗಿನಿಂದ ರೈತರಿಗೆ 95,000 ಕೋಟಿಗೂ ಅಧಿಕ ಮೊತ್ತದ ಕ್ಲೇಮ್‌ಗಳನ್ನು ನೀಡಿದೆ.