ರಾಜ್ಯಪಾಲರ ಹೆಸರಿನಲ್ಲೇ ‘ಕಾನೂನುಬಾಹಿರ ಕೃತ್ಯ’!; ‘ದಿ ಫೈಲ್‌’ ವರದಿ ಬೆನ್ನಲ್ಲೇ ರಾಜಭವನಕ್ಕೆ ದೂರು

ಬೆಂಗಳೂರು:  ಸರ್ಕಾರದ ಸುತ್ತೋಲೆ, ನಿರ್ದೇಶನ  ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರದ ಮೂಲಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು  3.16 ಎಕರೆ ಜಮೀನನ್ನು ಹಸ್ತಾಂತರಿಸಿಕೊಂಡಿದೆ ಎಂಬ ಆರೋಪ ಕುರಿತು ‘ದಿ ಫೈಲ್‌’ ವರದಿ ಪ್ರಕಟವಾದ ಬೆನ್ನಲ್ಲೇ ಈ ಪ್ರಕರಣವು ರಾಜ್ಯಪಾಲರ ಮೆಟ್ಟಿಲೇರಿದೆ.

 

ವ್ಯವಸಾಯ ಜಮೀನುಗಳಲ್ಲಿನ ಜಾಗವನ್ನು ರಸ್ತೆಯೆಂದು ಭೂ ಮಾಲೀಕರು ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ನಗರಾಭಿವೃದ್ಧಿ ಇಲಾಖೆಯು 2020ರಲ್ಲೇ ಸುತ್ತೋಲೆ ಮೂಲಕ ನೀಡಿದ್ದ ನಿರ್ದೇಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪ್ರಕರಣದಲ್ಲಿ  ಮುಡಾ ಉಲ್ಲಂಘಿಸಿದೆ ಎಂದು ಸ್ನೇಹಮಯಿ ಕೃಷ್ಣ ಅವರು ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

 

ಈ ದಾಖಲೆಗಳನ್ನಾಧರಿಸಿ ‘ದಿ ಫೈಲ್‌’ 2024ರ ಆಗಸ್ಟ್‌ 12ರಂದು ವರದಿ ಪ್ರಕಟಿಸಿತ್ತು.

 

ಸಿಎಂ ಪತ್ನಿಯಿಂದ ಜಮೀನು ಹಸ್ತಾಂತರಿಸಿಕೊಂಡಿದ್ದ ಮುಡಾ; ಸರ್ಕಾರಿ ಆದೇಶ ಉಲ್ಲಂಘನೆ ಆರೋಪ

ಇದೀಗ ಸ್ನೇಹಮಯಿ ಕೃಷ್ಣ ಅವರು ಇದೇ ಪ್ರಕರಣವನ್ನು ರಾಜ್ಯಪಾಲರ ಮೆಟ್ಟಿಲೇರಿಸಿದ್ದಾರೆ. 2024ರ ಆಗಸ್ಟ್‌ 13ರಂದು ರಾಜ್ಯಪಾಲರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಅಪ್‌ಲೋಡ್‌ ಮಾಡಿರುವುದು ಗೊತ್ತಾಗಿದೆ.

 

‘ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರವನ್ನು ನೋಂದಾಯಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕರಾದ ಕೆ ಸಿ ಉಮೇಶ್‌ ಹಾಗೂ ಇತರೆ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತಿಯ ಕಲಂ 223 ಮತ್ತು ಇತರೆ ಸೂಕ್ತ ಕಲಂಗಳ ಪ್ರಕಾರ ಮೊಕದ್ದಮೆ ದಾಖಲಿಸಬೇಕು. ಈ ಪರಿತ್ಯಾಜನ ಪತ್ರವನ್ನು ಇದೇ ರೀತಿಯಲ್ಲಿ ಮುಡಾದಿಂದ ನಿಮ್ಮ ಪರವಾಗಿ ನೋಂದಾಯಿಸಿಕೊಂಡಿರುವ ಎಲ್ಎಲಾ ಪರಿತ್ಯಾಜನ ಪತ್ರಗಳನ್ನೂ ಕೂಡಲೇ ರದ್ದುಪಡಿಸಲು ಮುಖ್ಯ ಕಾರ್ಯದರ್ಶಿಗೆ ತುರ್ತು ಸೂಚನೆ ನೀಡಬೇಕು,’ ಎಂದು ಸ್ನೇಹಮಯಿ ಕೃಷ್ಣ ಅವರು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

 

ದೂರಿನಲ್ಲೇನಿದೆ?

 

ಸಿದ್ದರಾಮಯ್ಯ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಕುಟುಂಬದವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೋಟ್ಯಂತರ ರುಪಾಯಿ ಬೆಲೆಬಾಳುವ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಲಾಗಿದೆ.

 

ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು 2021ರ ನವೆಂಬರ್‍‌ 25ರಂದು ನಿಮ್ಮ ಪರವಾಗಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕರಾದ ಕೆ ಸಿ ಉಮೇಶ್‌ ಅವರ ಹೆಸರಿಗೆ, ಮೈಸೂರು ಜಿಲ್ಲೆ, ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂಬರ್‍‌ 464ರ 3.16 ಎಕರೆ ಜಮೀನಿಗೆ ಸಂಬಂಧಿಸಿದಂತೆ ಪರಿತ್ಯಾಜನ ಪತ್ರವನ್ನು ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ರಾಜ್ಯದಲ್ಲಿನ ಎಲ್ಲಾ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರ, ಯೋಜನಾ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧವಾದ ಕೃಷಿ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಹಸ್ತಾಂತರಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಸೂಚನೆಗಳನ್ನು ಪಾಲಿಸಬೇಕಿತ್ತು. ಅಲ್ಲದೇ ಸ್ಥಳೀಯ ಸಂಸ್ಥೆಗಳು, ವ್ಯವಸಾಯ ಜಮೀನುಗಳಲ್ಲಿನ ಜಾಗವನ್ನು ರಸ್ತೆಯೆಂದು ಭೂ ಮಾಲೀಕರು ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ತಿಳಿಸಿದೆ ಎಂದು ದೂರಿನಲ್ಲಿ ರಾಜ್ಯಪಾಲರ ಗಮನ ಸೆಳೆದಿರುವುದು ಗೊತ್ತಾಗಿದೆ.

 

‘ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಮುಡಾ ಪ್ರಥಮ ದರ್ಜೆ ಸಹಾಯಕ ಕೆ ಸಿ ಉಮೇಶ್‌ ಅವರು ನಿಮ್ಮ ಪರವಾಗಿ ಬಿ ಎಂ ಪಾರ್ವತಿಯವರಿಂದ ಪರಿತ್ಯಾಜನ ಪತ್ರವನ್ನು ನೋಂದಣಿ ಮಾಡಿಕೊಂಡಿರುತ್ತಾರೆ. ನಿಮ್ಮ ಹೆಸರಿನಲ್ಲೇ ಈ ಕಾನೂನುಬಾಹಿರ ಕೃತ್ಯ ನಡೆದಿರುವುದರಿಂದ ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಕೆ ಸಿ ಉಮೇಶ್‌, ಇತರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು,’ ಎಂದು ಕೋರಿರುವುದು ತಿಳಿದು ಬಂದಿದೆ.

 

ರಾಜ್ಯದ ಸ್ಥಳೀಯ ಸಂಸ್ಥೆಗಳು ಯಾವುದೇ ಕೃಷಿ ಜಮೀನನ್ನು ಭೂ ಮಾಲೀಕರಿಮದ ನೇರವಾಗಿ ಹಸ್ತಾಂತರಿಸಿಕೊಳ್ಳುವ ಸಂಬಂಧ 2020ರ ಸೆ.30ರಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧವಾದ ಕೃಷಿ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಹಸ್ತಾಂತರಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿತ್ತು.

 

ಇದರ ಪ್ರಕಾರ ಕೃಷಿ ಜಮೀನನ್ನು ಭೂ ಪರಿವರ್ತಿಸಿ ವಿನ್ಯಾಸ ಅನುಮೋದನೆ ಪಡೆಯದೇ ನೇರವಾಗಿ ಸ್ಥಳೀಯ ಸಂಸ್ಥೆಗಳು ರಸ್ತೆಗಾಗಿ ಭೂ ಮಾಲೀಕರುಗಳಿಂದ ಹಸ್ತಾಂತರಿಸಿಕೊಲ್ಳುವುದು ಯೋಜನಾ ದೃಷ್ಟಿಯಿಂದ ಸೂಕ್ತವಾಗಿರಲಿಲ್ಲ. ಹೀಗಾಗಿ ಯಾವುದೇ ಕೃಷಿ ಜಮೀನನ್ನು ರಸ್ತೆಗಾಗಿ ಹಸ್ತಾಂತರಿಸಿಕೊಳ್ಳಬೇಕಾದ ಅನಿವಾರ್ಯ ಸಂದರ್ಭಗಳು ಒದಗಿಬಂದಲ್ಲಿ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳು, ಸಹಾಯಕ ನಿರ್ದೇಶಕರುಗಳಿಂದ ಪರಿಶೀಲಿಸಿಕೊಂಡು ತಾಂತ್ರಿಕ ಅಭಿಪ್ರಾಯ ಪಡೆಯಬೇಕು.

 

ಅಲ್ಲದೇ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿದ ನಂತರ ಸ್ಥಳೀಯ ಸಂಸ್ಥೆಗಳು ಹಸ್ತಾಂತರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ವ್ಯವಸಾಯ ಜಮೀನುಗಳಲ್ಲಿನ ಜಾಗವನ್ನು ರಸ್ತೆಯೆಂದು ಭೂ ಮಾಲೀಕರು ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಿರ್ದೇಶಿಸಿತ್ತು.

 

ಉಲ್ಲಂಘನೆ ಆಗಿದೆಯೇ?

 

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2021ರ ನವೆಂಬರ್‍‌ 25ರಂದು ಪರಿತ್ಯಾಜನ ಪತ್ರದ ಮೂಲಕ ಜಮೀನನ್ನು ಹಸ್ತಾಂತರಿಸಿಕೊಂಡಿತ್ತು.

 

ಮುಡಾ ಆಯುಕ್ತರನ್ನು ಪ್ರತಿನಿಧಿಸಿದ್ದ ಪ್ರಥಮ ದರ್ಜೆ ಸಹಾಯಕ ಕೆ ಸಿ ಉಮೇಶ್‌ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರದ ಮೂಲಕ ಜಮೀನನ್ನು ಹಸ್ತಾಂತರಿಸಿಕೊಂಡಿದ್ದರು ಎಂಬುದು ಪರಿತ್ಯಾಜನ ಪತ್ರದಿಂದ ತಿಳಿದು ಬಂದಿತ್ತು.

 

‘ಮೊದಲನೇ ಪಕ್ಷಕಾರರು ಮತ್ತು ಎರಡನೇ ಪಕ್ಷಕಾರರು ಸಂಬೋಧಿಸಲ್ಪಡುವಾಗ ಅರ್ಥ, ಸಂದರ್ಭಾನುಸಾರವಾಗಿ, ಅರ್ಥ ಅಭಾಸವಾಗದಿದ್ದ ಪಕ್ಷದಲ್ಲಿ ಈ ದಾಖಲೆಯ ಪಕ್ಷಕಾರರು, ಅವರ ವಾರಸುದಾರರು ಅವರು ನೇಮಕಾತಿಗೊಳಿಸಿದ ಆಡಳಿತಾಧಿಕಾರಿಗಳು, ಅವರು ಅನುಮೋದಿಸಿರುವ ಪಕ್ಷಕಾರರು ಅವರ ಹಕ್ಕುಗಳನ್ನು ಜಾರಿಗೊಳಿಸುವಂತಹವರು, ಅಥವಾ ಅವರವರ ಹಾದಿಯಲ್ಲಿ ಕಾನೂನಾತ್ಮಕ ಹಕ್ಕುಳ್ಳವಾಗಿರುವಂತಹರು ಸಹಾ ಸೇರ್ಪಡೆಯಾಗುವಂತಹರೆಂದು ದೃಢೀಕರಿಸಲಾಗಿದೆ,’ ಎಂದು ಪಾರ್ವತಿ ಮತ್ತು ಕೆ ಸಿ ಉಮೇಶ್‌ ಅವರು ದೃಢೀಕರಿಸಿ ಸಹಿ ಮಾಡಿರುವುದನ್ನು ಸ್ಮರಿಸಬಹುದು.

 

SUPPORT THE FILE

Latest News

Related Posts