ಕಾನೂನು ದುರ್ಬಳಕೆ, ಕಿರುಕುಳ; ಉತ್ಪಾದನಾ ಹೂಡಿಕೆ ಕಂಪನಿಯಿಂದ ಸಿಎಂಗೆ ದೂರು

ಬೆಂಗಳೂರು; ರಾಜ್ಯದಲ್ಲಿ ಉತ್ಪಾದನಾ ಘಟಕ ತೆರೆಯಲು ಹೂಡಿಕೆ ಮಾಡಲು ಯೋಜನೆ ರೂಪಿಸಿರುವ ಟೆಲ್ಟೋನಿಕಾ ಇಂಡಿಯಾ ಸಾಫ್ಟ್‌ವೇರ್‍‌ ಕಂಪನಿ ವಿರುದ್ಧವೇ ಸುಳ್ಳು, ಮೊಕದ್ದಮೆ ಹೂಡಿ ಕಿರುಕುಳ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರೊಂದು ಸಲ್ಲಿಕೆಯಾಗಿದೆ.

 

ಬೆಂಗಳೂರು ನಗರ ಸೇರಿದಂತೆ ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಣಾ ಜಾಲ ಹೊಂದಿರುವ ಟೆಲ್ಕೋನಿಕಾ ಇಂಡಿಯಾ ಕಂಪನಿ ವಿರುದ್ಧ ಅಶೋಕ ನಗರ ಪೊಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣವು ಸಾಫ್ಟ್‌ವೇರ್‍‌ ಕಂಪನಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.

 

ವಿವಿಧ ಕಾರಣಗಳನ್ನು ಮುಂದಿರಿಸಿಕೊಂಡು ಬೆಂಗಳೂರು ಮತ್ತು ರಾಜ್ಯದಿಂದ ಕಂಪನಿಗಳು ಹೊರ ರಾಜ್ಯಗಳತ್ತ ಮುಖ ಮಾಡಿರುವ ಹೊತ್ತಿನಲ್ಲೇ ಟೆಲ್ಕೋನಿಕಾ ಇಂಡಿಯಾ ಕಂಪನಿಯ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಬೆಂಗಳೂರಿನ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ 2024ರ ಜೂನ್‌ 12ರಂದು ಕಾಸರಗೋಡು ಮೂಲದ ಅಬ್ದುಲ್‌ ಮುನೀರ್‍‌ ಕಲ್ಲೋತ್ರ ಎಂಬುವರು ಟೆಲ್ಕೋನಿಕಾ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಶಾದಲಿ ಪುಕ್ಲಸರಿ ಎಂಬುವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ.

 

ಈ ಎಫ್‌ಐಆರ್‍‌ನ್ನು ದುರುದ್ದೇಶಪೂರ್ವಕವಾಗಿ ದಾಖಲಿಸಲಾಗಿದೆ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಕಂಪನಿಯ ಸಿಇಒ ನಿಶಾದಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರಿನಲ್ಲಿ ವಿವರಿಸಿದ್ದಾರೆ.

 

ನಿಶಾದಲಿ 2024ರ ಜುಲೈ 8ರಂದು ಸಲ್ಲಿಸಿರುವ ದೂರು ಆಧರಿಸಿ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ 2024ರ ಆಗಸ್ಟ್‌ 5ರಂದು ಟಿಪ್ಪಣಿ ಹೊರಡಿಸಿದ್ದಾರೆ.

 

ನಿಶಾದಲಿ ಅವರು ನೀಡಿರುವ ದೂರು, ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‍‌ ಮತ್ತು ವೆಂಕಟೇಶಯ್ಯ ಅವರು ಹೊರಡಿಸಿರುವ ಟಿಪ್ಪಣಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿಎಂಗೆ ಬರೆದಿರುವ ಪತ್ರದಲ್ಲೇನಿದೆ?

 

ಟೆಲ್ಟೋನಿಕಾ ಇಂಡಿಯಾ ಕಂಪನಿಯಲ್ಲಿ ಭಾರತದಲ್ಲಿ 70 ಮಂದಿ, ಜಗತ್ತಿನಾದ್ಯಂತ 2,800 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಮದಲೂ ಇಂಟರ್‍‌ನೆಟ್‌ ಆಫ್‌ ಥಿಂಗ್ಸ್‌ ಅಭಿವೃದ್ದಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಸರಬರಾಜು ಪಾಲುದಾರಿಕೆ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಈ ಕಂಪನಿಯು ಇತ್ತೀಚೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಪತ್ರದಿಂದ ಗೊತ್ತಾಗಿದೆ.

 

’30 ಮಿಲಿಯನ್‌ ಡಾಲರ್‍‌ ಹೂಡಿಕೆ ಮಾಡಿ ಉತ್ಪಾದನಾ ಘಟಕವನ್ನು ತೆರೆಯಲಿದೆ. ಆದರೆ ಸರಬರಾಜುದಾರ ಅಬ್ದುಲ್‌ ಮುನೀರ್‍‌ ಕಲ್ಲೋತ್ರಾ ತಮ್ಮ ವಿರುದ್ಧ ಹಲವೆಡೆ ಎಫ್‌ಐಆರ್‍‌ ದಾಖಲಿಸುತ್ತಿದ್ದಾರೆ. ವಾಸ್ತವಿಕ ಘಟನೆ, ಸತ್ಯಸಂಗತಿಗಳನ್ನು ಮರೆಮಾಚಲಾಗುತ್ತಿದೆ. ಕಾನೂನು ಮತ್ತು ವ್ಯವಸ್ಥೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತೊಂದರೆ ನೀಡಲಾಗುತ್ತಿದೆ,’ ಎಂದು ಕಂಪನಿ ಸಿಇಒ ನಿಶಾದಲಿ ಪುಕ್ಲಸರಿ ಎಂಬುವರು ಸಿಎಂಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

 

ಯಾವುದೇ ನೋಟೀಸ್‌ ನೀಡದೇ ನಿಶಾದಲಿ ಪುಕ್ಲಸರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ತಮ್ಮ ವ್ಯಾಪ್ತಿಗೆ ಒಳಪಡದ ಕಾರಣ ದೂರನ್ನು ಅಶೋಕ ನಗರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು ಎಂಬುದು ದೂರಿನಿಂದ ಗೊತ್ತಾಗಿದೆ.

 

ಈ ಬೆಳವಣಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ನಿಶಾದಲಿ ತಂದಿದ್ದಾರೆ. ಪೊಲೀಸ್‌ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಲಂಚ ಹಾಗೂ ಪ್ರಭಾವ ಬಳಸಿ ತಮ್ಮ ವಿರುದ್ಧ ಎಫ್‌ಐಆರ್‍‌ ದಾಖಲಿಸಲಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

‘ಹಣ ಮತ್ತ ಪ್ರಭಾವ ಬಳಸಿ ಕಾನೂನು ದುರ್ಬಳಕೆ ಮಾಡಿಕೊಂಡು ಹಲವಾರು ಪೊಲೀಸ್ ಮೊಕದ್ದಮೆ ಹೂಡಿ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಲೋಕಾಯುಕ್ತ ಅಥವಾ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು,’ ಎಂದು ದೂರಿನಲ್ಲಿ ಕೋರಿದ್ದಾರೆ.

 

ಈ ದೂರಿನಲ್ಲಿರುವ ಅಂಶಗಳನ್ನೇ ಉಲ್ಲೇಖಿಸಿರುವ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಅವರು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಟಿಪ್ಪಣಿ ಹೊರಡಿಸಿದ್ದಾರೆ.

 

‘ನಿಷ್ಪಕ್ಷಪಾವಾದ ತನಿಖೆ ನಡೆಸಬೇಕು. ಈ ಪ್ರಕರಣದಿಂದ ರಾಜ್ಯದಲ್ಲಿ ಜಾಗತಿಕ ಉತ್ಪಾದಕ ಘಟಕಗಳನ್ನು ತೆರೆಯಲು ಉದ್ದೇಶಿಸಿರುವ ಕಂಪನಿಗಳಿಗೆ ಹಿನ್ನಡೆಯಾಗಬಾರದು. ಮತ್ತು ಉತ್ಪಾದಕ ಘಟಕಗಳಿಗೆ ಪ್ರೋತ್ಸಾಹದಾಯಕವಾಗಿರಬೇಕು,’ ಎಂದು ನಿಶಾದಲಿ ಪುಕ್ಲಸರಿ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಎಫ್‌ಐಆರ್‍‌ನಲ್ಲೇನಿದೆ?

 

ಕಲ್ಲೋತ್ರ ಟೆಕ್ನಾಲಜೀಸ್‌ನಲ್ಲಿ ನಿಶಾದಲಿ ಕೆಲಸ ಮಾಡುತ್ತಿದ್ದರು. ಇವರು ಕಂಪನಿಯನ್ನು ಕಬಳಿಸಲು ಪೂರ್ವ ಯೋಜನೆ ಹಾಕಿಕೊಂಡಿದ್ದರು. 2023ರಿಂದಲೂ ಕಂಪನಿ ನಷ್ಟದಲ್ಲಿದೆ ಎಂದು ನಂಬಿಸಿ ಸುಳ್ಳು ಮಾಹಿತಿ ನೀಡಿದ್ದರು. 2024ರ ಮಾರ್ಚ್‌ 11ರಂದು ನಮ್ಮ ಕಂಪನಿಯೊಂದಿಗೆ ಎಂಒಯು ಮಾಡಿಕೊಂಡಿದ್ದರು.

 

ಈ ಎಂಒಯುನಲ್ಲಿ ಕಂಪನಿಗೆ ಮತ್ತು ಕಂಪನಿಗೆ ಸಂಬಂಧಪಟ್ಟಂತೆ ವಸ್ತುಗಳನ್ನು ಹಾಗೂ ಇತ್ಯಾದಿಗಳನ್ನು ಖರೀದಿಸಲು 8,46,31,722 ರು.ಗೆ ಮಾತುಕತೆ ಮಾಡಿಕೊಂಡಿದ್ದರು. ನಿಶಾದ್‌ ಆಲಿ ಮತ್ತು ಉಜ್ವಲ್‌ ದಸ್ತಕಿರ್‍‌ ಅರು ಸೇರಿಕೊಂಡು 3 ಕೋಟಿ ರು. ಚೆಕ್ ನೀಡಿದ್ದರು.

 

ಈ ಚೆಕ್ ನಗದೀಕರಣವಾಗಲಿಲ್ಲ. ಆರೋಪಿ ಅಕೌಂಟ್‌ ಕ್ಲೋಸ್‌ ಮಾಡಿದ್ದರು. ನಮ್ಮ ಕಂಪನಿಗಳು ದಾಸ್ತಾನುಗಳು ಮತ್ತು ವಸ್ತುಗಳನ್ನು ಇತ್ಯಾದಿಗಳ ಮೇಲೆ 8.46 ಕೋಟಿ ರು.ಷ್ಟು ಕಂಪನಿಗೆ ನಷ್ಟವುಂಟು ಮಾಡಿದ್ದಾರೆ.

ಇದು ನಂಬಿಕೆ ದ್ರೋಹವಾಗಿದೆ ಎಂದು ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಎಫ್‌ಐಆರ್‍‌ ದಾಖಲಾಗಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts