ಬೆಂಗಳೂರು; ಕಾರವಾರ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ಲಿಮಿಟೆಡ್‌ನ ಹಣಕಾಸಿನ ವ್ಯವಹಾರಗಳಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣದಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್ ಕಂಪನಿಯ ಹೆಸರು ತಳಕು ಹಾಕಿಕೊಂಡಿದೆ.
ರಾಜ್ಯ ಸರ್ಕಾರದ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳಲ್ಲಿನ ಕೋಟ್ಯಂತರ ರುಪಾಯಿಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿರುವ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ ಮತ್ತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಕಾರವಾರ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್‌ನ ಹಣವು ಹಂತಹಂತವಾಗಿ ಸಾಫ್ಟ್‌ವೇರ್ ಕಂಪನಿಗೆ ಪಾವತಿ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಈ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಣ ದುರುಪಯೋಗವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿದೆ. ಅಲ್ಲದೇ ಹಣದ ಅವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೇ ಸಾಬೀತಾಗಿದೆ. ಈ ಪ್ರಕರಣದ ಕುರಿತು ಸಚಿವ ಕೆ ಎನ್ ರಾಜಣ್ಣ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಅಧಿವೇಶನದಲ್ಲಿ ಚರ್ಚೆಗೆ ಬರಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಹಕಾರ ಇಲಾಖೆಯು ಕಾರವಾರ ಅರ್ಬನ್ ಕೋ ಆಪರೇಟೀವ್ ಸಹಕಾರ ಬ್ಯಾಂಕ್‌ನ ಅವ್ಯವಹಾರದ ಕುರಿತು ಸಲ್ಲಿಸಿರುವ ಪೂರಕ ಟಿಪ್ಪಣಿಯಲ್ಲಿ ಈ ಮಾಹಿತಿ ಇದೆ. ಪೂರಕ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಐಡಿಬಿಐ ಬ್ಯಾಂಕ್‌ನಿಂದ ಹೆಚ್ಚಿಗೆ ನಗದು ರೂಪದಲ್ಲಿ ಹಿಂಪಡೆದಿರುವುದು, ವಿವಿಧ ಖಾತೆಗಳಿಗೆ ಹಣ ವರ್ಗಾವಣೆ, ಅಡಾವೆ ಪತ್ರಿಕೆ ಮತ್ತು ಬ್ಯಾಂಕ್‌ನ ಬ್ಯಾಲೆನ್ಸ್ ಪ್ರಮಾಣ ಪತ್ರದಲ್ಲಿನ ವ್ಯತ್ಯಾಸ, ಹೂಡಿಕೆ ಕುರಿತಾದ ಲೆಕ್ಕದಲ್ಲಿ ಅಪರತಪರಾ, ಸಾಲ ನೀಡಿಕೆ ಸಂಬಂಧ ನೀಡಿರುವ ಅಂಕಿ ಅಂಶಗಳಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ಅಂಶಗಳನ್ನು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಬ್ಯಾಂಕ್‌ನ ವ್ಯವಹಾರಗಳನ್ನು SIDSOFT TECHNOLOGIES PVT LTD BENGALURU ಕಂಪನಿಯ ಸಾಫ್ಟ್‌ವೇರ್‍ನಲ್ಲಿ ಆಗಿನ ಪ್ರಧಾನ ವ್ಯವಸ್ಥಾಪಕರು ದಾಖಲು ಮಾಡಿದ್ದರು. ಈ ಸಾಫ್ಟ್‌ವೇರ್ ಕಂಪನಿಗೆ ಹೆಚ್ಚು ಮೊತ್ತದ ಹಣವು ಹಂತ ಹಂತವಾಗಿ ಪಾವತಿ ಮಾಡಲಾಗಿದೆ. ಈ ಕಂಪನಿಯ ಜೊತೆ ಮಾಡಲಾದ ಹಣಕಾಸಿನ ವ್ಯವಹಾರವು ಸಂಶಯಾಸ್ಪದವಾಗಿ ಕಂಡು ಬರುತ್ತದೆ ಎಂದು ಪೂರಕ ಟಿಪ್ಪಣಿಯಲ್ಲಿ ಹೇಳಲಾಗಿದೆ.
ಕಾರವಾರದಲ್ಲಿರುವ ಐಡಿಬಿಐ ಬ್ಯಾಂಕ್‌ನ ಶಾಖೆಯಲ್ಲಿನ ಖಾತೆಯಿಂದ ವಿವಿಧ ದಿನಾಂಕಗಳಂದು ಅಂದಾಜು 11.36 ಕೋಟಿ ರು ಗಳಿಗಿಂತಲೂ ಹೆಚ್ಚಿಗೆ ನಗದು ರೂಪದಲ್ಲಿ ಹಣವನ್ನು ಹಿಂಪಡೆಯಲಾಗಿದೆ. ಸದರಿ ಬ್ಯಾಂಕ್ ಐಡಿಬಿಐ ಬ್ಯಾಂಕ್‌ನ ಹುಬ್ಬಳ್ಳಿ ಶಾಖೆಯಿಂದ ಅಂದಾಜು 4.06 ಕೋಟಿ ರು ಗಳಿಗಿಂತಲೂ ಹೆಚ್ಚಿನ ಹಣವನ್ನು ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಟಿಪ್ಪಣಯಲ್ಲಿ ವಿವರಿಸಲಾಗಿದೆ.
2023ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‌ನಿಂದ ತಾತ್ಕಾಲಿಕ ಅಡಾವೆ ಪತ್ರಿಕೆ ಸಿದ್ಧಪಡಿಸಿದೆ. ಇದರಲ್ಲಿ ಕಾರವಾರದಲ್ಲಿರುವ ಎಸ್‌ಬಿಐನ ಶಾಖೆಯಲ್ಲಿ 28.22 ಲಕ್ಷ ರು. ಮೊತ್ತ ಇದೆ ಎಂದು ನಮೂದಿಸಿದೆ. ಆಧರೆ ಎಸ್‌ಬಿಐ ಬ್ಯಾಂಕ್ ನೀಡಿದ ಬ್ಯಾಲೆನ್ಸ್ ಪ್ರಮಾಣ ಪತ್ರದ ಪ್ರಕಾರ 5.21 ಲಕ್ಷ ಮಾತ್ರ ಇತ್ತು ಎಂಬುದನ್ನು ಪ್ರಾಥಮಿಕ ವಿಚಾರಣೆಯಲ್ಲಿ ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ಅದೇ ರೀತಿ 2023ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‌ನ ತಾತ್ಕಾಲಿಕ ಅಡಾವೆ ಪತ್ರಿಕೆ ಪ್ರಕಾರ 10.04 ಕೋಟಿ ರು.ಗಳಷ್ಟು ಮೊತ್ತವನ್ನು ಭದ್ರತಾ ಠೇವಣಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತೋರಿಸಿತ್ತು. ಆದರೆ ವಾಸ್ತವವಾಗಿ 30.00 ಲಕ್ಷ ರು.ಗಳನ್ನು ಮಾತ್ರ ಹೂಡಿಕೆ ಮಾಡಿರುವುದು ದಾಖಲಾತಿಯಿಂದ ಕಂಡು ಬಂದಿದೆ.
ಅದೇ ರೀತಿ ಇದೇ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟಾರೆ 44.08 ಕೋಟಿ ರು. ಸಾಲ ನೀಡಿದೆ ಎಂದು ತೋರಿಸಲಾಗಿದೆ. ಆದರೆ ವಾಸ್ತವವಾಗಿ ಕೇವಲ 9.69 ಕೋಟಿ ರು ಗಳಷ್ಟು ಸಾಲವನ್ನು ಮಾತ್ರ ನೀಡಿದೆ. ಆಭರಣಗಳ ಭದ್ರತೆ ಆಧಾರದ ಮೇಲೆ 37 ಕೋಟಿ ರು. ಸಾಲವನ್ನು ನೀಡಲಾಗಿದೆ ಎಂದು ತೋರಿಸಿದ್ದು ವಾಸ್ತವವಾಗಿ 4.15 ಕೋಟಿ ರು.ನಷ್ಟು ಮಾತ್ರ ಸಾಲ ನೀಡಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2024ರ ಮಾರ್ಚ್ 31ರ ಅಂತ್ಯಕ್ಕೆ ವಾಸ್ತವವಾಗಿ ಅಂದಾಜು 85 ಕೋಟಿ ರು. ಠೇವಣಿಯಯನ್ನು ಠೇವಣಿದಾರರಿಗೆ ಬಾಕಿ ನೀಡಬೇಕಿದೆ ಎಂದು ಪ್ರಸ್ತುತ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಮಾಹಿತಿ ಒದಗಿಸಲಾಗಿದೆ.