ಆಯವ್ಯಯದ ಹೊರಗೆ 4,029 ಕೋಟಿ ರು ಸಾಲ; ವೈಯಕ್ತಿಕ ಠೇವಣಿಗಳಲ್ಲಿತ್ತು ದೊಡ್ಡ ಮೊತ್ತ

ಬೆಂಗಳೂರು; ಕಳೆದ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಸಾರ್ವಜನಿಕ ಸಾಲವು ವಾರ್ಷಿಕ ಶೇ. 19.11ರ ದರದಲ್ಲಿ ಬೆಳೆದಿದೆ. ಹಾಗೆಯೇ ಬಿಜೆಪಿ ಸರ್ಕಾರದ ಕಡೇ ಅವಧಿಯಲ್ಲಿ ಶಾಸಕಾಂಗದ ಹಣಕಾಸು ನಿಯಂತ್ರಣ ತತ್ವಕ್ಕೆ ವಿರುದ್ಧವಾಗಿ ದೊಡ್ಡ ಮೊತ್ತದ ಹಣವನ್ನು ವೈಯಕ್ತಿಕ ಠೇವಣಿಗಳಲ್ಲಿ ಉಳಿಸಿಕೊಂಡಿತ್ತು.

 

ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಪ್ಯಾರಾ ಸ್ಪಾಟಲ್‌ಗಳ ಮೂಲಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ  2022-23ರ ಅವಧಿಯಲ್ಲಿ 4,029 ಕೋಟಿ ರು ಗಳನ್ನು ಆಯವ್ಯಯದ ಹೊರಗಿನ ಸಾಲ ಮಾಡಿತ್ತು. ಇದು ರಾಜ್ಯದ ಸಂಚಿತ ನಿಧಿ ಮೂಲಕ ಹರಿದಿರಲಿಲ್ಲ.

 

ಮಾರ್ಚ್‌ 2023ರ ಅಂತ್ಯಕ್ಕೆ ಶಾಸನಸಭೆಗೆ ಸಿಎಜಿ ಮಂಡಿಸಿರುವ ವರದಿಯು ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿನ ಹಣಕಾಸಿನ ಅಶಿಸ್ತನ್ನು ಅನಾವರಣಗೊಳಿಸಿದೆ.

 

2022-23ರಲ್ಲಿ ರಾಜ್ಯ ಸರ್ಕಾರವು ಆಯವ್ಯಯ ಹೊರಗಿನ ಸಾಲಗಳ ಮರುಪಾವತಿ ಮತ್ತು ಋಣ ಸೇವೆಗಾಗಿ 4,621 ಕೋಟಿ ರು.ಗಳ ಸಹಾಯ, ಅನುದಾನ ಸಹಾಯವನ್ನು ಒದಗಿಸಿತ್ತು. ಇದು ಸರ್ಕಾರದ ಸಾಲಗಳ ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿತ್ತು.

 

‘ಸಾಲದ ಸ್ಥಿರೀಕರಣ ವಿಶ್ಲೇಷಣೆ ಪ್ರಕಾರ ಕರ್ನಾಟಕ ಸರ್ಕಾರದ ಸಾರ್ವಜನಿಕ ಋಣವು 2018-19ರಿಂದ 2022-23ರ ನಡುವೆ ವಾರ್ಷಿಕವಾಗಿ ಸರಾಸರಿ 19.11ರ ಶೇಕಡ ದರದಲ್ಲಿ ಬೆಳೆದಿದೆ. ಕರ್ನಾಟಕ ಸಾರ್ವಜನಿಕ  ಋಣ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು 2018-19ರಲ್ಲಿದ್ದ ಶೇ.14.12ರಿಂದ 2020-21ರಲ್ಲಿ ಶೇ.20.07ಕ್ಕೆ ಏರಿಕೆಯಾಗಿದೆ. ನಂತರ ಅದು ಕಡಿಮೆಯಾಗುವ ಪ್ರವೃತ್ತಿಯಲ್ಲಿತ್ತು. ಮತ್ತು 2022-23ರಲ್ಲಿ ಶೇ.19.27ಕ್ಕೆ ಇಳಿದಿದೆ,’ ಎಂದು ವಿವರಿಸಿದೆ.

 

ರಾಜ್ಯ ಸರ್ಕಾರವು ಸಂವಿಧಾನದ 204 ಮತ್ತು 205(1)(ಬಿ) ಅನುಚ್ಛೇಧದಗಳ ಅನ್ವಯ ಅನುದಾನಗಳು ಮತ್ತು ವಿನಿಯೋಗಗಳ ಅವಕಾಶದ ಮೇಲಿನ ಹೆಚ್ಚು ವೆಚ್ಚವನ್ನು ರಾಜ್ಯ ಶಾಸಕಾಂಗದಿಂದ ಸಕ್ರಮಗೊಳಿಸಿಕೊಳ್ಳಬೇಕು. ಆದರೆ 2022-3ರಲ್ಲಿನ 8 ಅನುದಾನಗಳಡಿಯಲ್ಲಿ 1,907.83 ಕೋಟಿ ರು. ಹೆಚ್ಚುವರಿ ವೆಚ್ಚವಾಗಿರುವುದನ್ನು ಸಿಎಜಿ ವರದಿಯಲ್ಲಿ ಗಮನಿಸಲಾಗಿದೆ.

 

‘ಇದನ್ನು ಸಕ್ರಮಗೊಳಿಸುವ ಅಗತ್ಯವಿದೆ. ಇದಲ್ಲದೇ 2020-21ಕ್ಕೆ ಸಂಬಂಧಿಸಿದಂತೆ 415.90 ಕೋಟಿ ರು. ಹೆಚ್ಚುವರಿ ವೆಚ್ಚವನ್ನು ಇನ್ನೂ ಸಕ್ರಮಗೊಳಿಸಬೇಕಾಗಿದೆ,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ವೈಯಕ್ತಿಕ ಠೇವಣಿಗಳ ಖಾತೆಗಳಲ್ಲಿನ ಅಂತಿಮ ಶಿಲ್ಕು 2020-21ರಿಂದಲೂ ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. 2022-23ರ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ದೊಡ್ಡ ಮೊತ್ತದ ಹಣವನ್ನು ವೈಯಕ್ತಿಕ ಠೇವಣಿಗಳಲ್ಲಿ ಉಳಿಸಿಕೊಂಡಿದೆ. ಈ ಪ್ರವೃತ್ತಿಯು ಶಾಸಕಾಂಗ ಹಣಕಾಸು ನಿಯಂತ್ರಣದ ತತ್ವಕ್ಕೆ ವಿರುದ್ಧವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಸಿಎಜಿ ವರದಿಯು ಪಿಡಿ ಖಾತೆಗಳ ಪರಿಶೀಲನೆ ಮಾಡಿದೆ. ಇದರ ಪ್ರಕಾರ 542.64 ಕೋಟಿ ರು ಶಿಲ್ಕನ್ನು ಹೊಂದಿತ್ತು. 29 ಚಾಲ್ತಿಯಲ್ಲಿಲ್ಲದ ಪಿಡಿ ಖಾತೆಗಳನನ್ನು ಸರ್ಕಾರವು ಮುಚ್ಚಿಲ್ಲ. ಅಲ್ಲದೇ 5,963 ಕೋಟಿ ರು.ಗಳ ಋಣಾತ್ಮಕ ಶಿಲ್ಕಿನ ಹನ್ನೆರಡು ಪಿಡಿ ಖಾತೆಗಳಿದ್ದವು. ಆಯವ್ಯಯ ಅವಕಾಶ ರದ್ದಾಗಿ ಹೋಗುವುದನ್ನು ತಪ್ಪಿಸಲು ರಾಜ್ಯವು 2018-19ರಿಂದ 2022-23ರ ಅವಧಿಯಲ್ಲಿ ಮಾರ್ಚ್‌ನಲ್ಲಿ ಪಿಡಿ ಖಾತೆಗಳಿಗೆ ಸಂಚಿತ ನಿಧಿಯಿಂದ 8,801.64 ಕೋಟಿ ರು.ಗಳನ್ನು ವರ್ಗಾಯಿಸಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಅಲ್ಲದೇ 13 ಇಲಾಖೆಗಳು/ ಸರ್ಕಾರಿ ಕಂಪನಿಗಳು ನಿಗಮಗಳಲ್ಲಿ ಸರ್ಕಾರದ ಅನುದಾನದ ಮೇಲೆ ಗಳಿಸಿದ 198.99 ಕೋಟಿ ರುಗ.ಳ ಬಡ್ಡಿಯನ್ನು ಆರ್ಥಿಕ ಇಲಾಖೆಯು ನೀಡಿದ ಸೂಚನೆಗಳ ಹೊರತಾಗಿಯೂ ಸರ್ಕಾರದ ಖಾತೆಗೆ ಸಂದಾಯ ಮಾಡಿರಲಿಲ್ಲ.

 

ರಾಜಸ್ವ ಹೆಚ್ಚಳವು 2018-19ರಲ್ಲಿನ 679 ಕೋಟಿ ರು.ಗಳಿಂದ 2022-23ರಲ್ಲಿ 13,496 ಕೋಟಿ ರು ಗೆ ಹೆಚ್ಚಿತ್ತು. ರಾಜ್ಯ ಸರ್ಕಾರವು ಬಂಡವಾಳ ಲೆಕ್ಕಕ್ಕೆ 60,599 ಕೋಟಿ ರು ಖರ್ಚು ಮಾಡಿದೆ. ಇದು 2022-23ರಲ್ಲಿ ಒಟ್ಟು ವೆಚ್ಚ ಶೇ.22ರಷ್ಟಿತ್ತು. ಬಂಡವಾಳ ವೆಚ್ಚವು 16,050 ಕೋಟಿಗಳಷ್ಟು ಋಣ ಮೊತ್ತವನ್ನು ಮೀರಿದೆ. ಹೀಗಾಗಿ ರಾಜಸ್ವ ಹೆಚ್ಚಳದ ಹಣವನ್ನು ಬಂಡವಾಳ ವೆಚ್ಚವನ್ನು ಪೂರೈಸಲು ಬಳಸಲಾಗುತ್ತಿತ್ತು.

 

ರಾಜ್ಯದ ಒಟ್ಟು ವೆಚ್ಚ ಮತ್ತು ಋಣೇತರ ಸ್ವೀಕೃತಿ ನಡುವಿನ ಅಂತರವು ವಿತ್ತೀಯ ಕೊರತೆಗೆ ಕಾರಣವಾಗಿತುತ್ತದೆ. ರಾಜ್ಯದ ವಿತ್ತೀಯ ಕೊರತೆಯು 2018-19ರಲ್ಲಿನ 38,442 ಕೋಟಿ ರು.ನಿಂದ 2022-23ರಲ್ಲಿ 46,623 ಕೋಟಿ ರು.ಗೆ ಏರಿಕೆಯಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

2018-19 ಮತ್ತು 2020-21ರಲ್ಲಿ ಬಡ್ಡಿ ಪಾವತಿಗಳು, ಸಂಬಳಗಳು ಮತ್ತು ಪಿಂಚಣಿಗಳ ಮೇಲಿನ ಬದ್ಧ ವೆಚ್ಚವು ರಾಜಸ್ವ ವೆಚ್ಚದ ಶೇ. 37ರಿಂದ 48ರಷ್ಟು ಹೊಂದಿದೆ. ಬದ್ಧ ವೆಚ್ಚವು 2018-19ರಲ್ಲಿದ್ದ 60,461 ಕೋಟಿ ರು.ಗಳಿಂದ 2022-23ರಲ್ಲಿ 92,219 ಕೋಟಿ ರುಗಳಿಗೆ ಏರಿಕೆಯಾಗಿದೆ.

 

ಅದೇ ರೀತಿ ‘ಬದ್ಧ ವೆಚ್ಚದ ಜತೆಗೆ 2018-19ರಿಂದ 2022-23ರ ಅವಧಿಯಲ್ಲಿ ರಾಜಸ್ವ ವೆಚ್ಚದ ಶೇ.33.26ರಿಂದ ಶೇ.35.92ರಷ್ಟು ಅನಮ್ಯ ವೆಚ್ಚವು ಹೆಚ್ಚಾಗಿ ಇದು ಅಧಿಕವಾಗುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ. ಅನಮ್ಯ ವೆಚ್ಚವು 2021-22ರಲ್ಲಿದ್ದ 73,799 ಕೋಟಿ ರು.ಗಳಿಂದ 2022-23ರಲ್ಲಿ 77,432 ಕೋಟಿ ರು ಗೆ ಏರಿಕೆಯಾಗಿದೆ. ಶೇ.4.92ರಷ್ಟು ಏರಿಕೆ ದಾಖಲಿಸಿದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಒಟ್ಟಾಗಿ ತೆಗೆದುಕೊಂಡರೇ 2022-23ರಲ್ಲಿದ್ದ ಬದ್ದ ಮತ್ತು ಅನಮ್ಯ ವೆಚ್ಚವು 1,69,651 ಕೋಟಿಯಷ್ಟಿದ್ದು ರಾಜಸ್ವ ವೆಚ್ಚದ ಶೇ.79ರಷ್ಟಿದೆ. ಮತ್ತು ಬದ್ದ ಮತ್ತು ಅನಮ್ಯ ವೆಚ್ಚದ ಮೇಲಿನ ಹೆಚ್ಚುತ್ತಿರುವ ಸರ್ಕಾರದ ಇತರೆ ಆಧ್ಯತೆಯ ವಲಯಗಳು ಮತ್ತು ಬಂಡವಾಳ ಸೃಷ್ಟಿಗೆ ಕಡಿಮೆ ನಮ್ಯತೆ ನೀಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಬದ್ದವಲ್ಲದ ವೆಚ್ಚದಲ್ಲಿ ಸಹಾಯಧನಗಳ ಪ್ರವೃತ್ತಿಯೂ ಹೆಚ್ಚುತ್ತಿದೆ. 2018-19ರಲ್ಲಿದ್ದ 15,400 ಕೋಟಿ ರುಗಳಿಂದ 2022-23ರಲ್ಲಿ 22,754 ಕೋಟಿ ರು ಗಳಿಗಿಂತ ಅಂದರೇ 2018-19ರಲ್ಲಿನ ಒಟ್ಟು ರಾಜಸ್ವ ವೆಚ್ಚದ ಶೇ. 9.37ರಿಂದ 2022-23ರಲ್ಲಿ ಶೇ.10.55ರಷ್ಟು ಹೆಚ್ಚಾಗಿತ್ತು. ಈ ಅವಧಿಯಲ್ಲಿನ ಒಟ್ಟು ಸಹಾಯಧನಗಳು ಶೇ. 49ರಿಂದ 52ರಷ್ಟು ವಿದ್ಯುತ್‌ ಸಕ್ತಿ ಸಹಾಯ ಧನಗಳು ಗಮನಾರ್ಹ ಭಾಗವನ್ನು ಒಳಗೊಂಡಿದೆ.

 

ಇದರ ಹೊರತಾಗಿ ರಾಜ್ಯ ಸರ್ಕಾರವು 2022-23ರ ಅವಧಿಯಲ್ಲಿ 3,010.86 ಕೋಟಿ ರು.ಗಳನ್ನು ಆರ್ಥಿಕ ನೆರವು, ಪ್ರೋತ್ಸಾಹ ಧನ ಇತ್ಯಾದಿಗಳ ರೂಪದಲ್ಲಿ ಸಹಾಯ ಧನಕ್ಕಾಗಿ ಖರ್ಚು ಮಾಡಿದೆ.

 

2022-23ರ ಅಂತ್ಯದ ವೇಳೆ ಸರ್ಕಾರದ ಖಾತರಿಗಳು 38,356 ಕೋಟಿ ರು ಗಳಾಗಿವೆ. ಒಟ್ಟು ಖಾತರಿ ಶುಲ್ಕದ ಅಂದಾಜು 594 ಕೋಟಿಗೆ ಪ್ರತಿಯಾಗಿ ರಾಜ್ಯವು 2022-23ರಲ್ಲಿ 341.91 ಕೋಟಿ ರು. ಪಡೆದುಕೊಂಡಿದೆ.

the fil favicon

SUPPORT THE FILE

Latest News

Related Posts