ಸಿಎಂ ಸಲಹೆಗಾರರ ಹುದ್ದೆಗೆ ಶಾಸಕರ ನೇಮಕ; ಅನರ್ಹತೆ ನಿವಾರಣೆಗೆ ವಿಧೇಯಕಕ್ಕೇ ತಿದ್ದುಪಡಿ!

ಬೆಂಗಳೂರು; ಮುಖ್ಯಮಂತ್ರಿಗಳ  ರಾಜಕೀಯ ಕಾರ್ಯದರ್ಶಿ, ಆರ್ಥಿಕ  ಸಲಹೆಗಾರರು, ಸಲಹೆಗಾರರು, ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ  ಹುದ್ದೆಗೆ ಶಾಸಕರ  ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ  ಅರ್ಜಿ ವಜಾಗೊಂಡಿರುವ  ಹೊತ್ತಿನಲ್ಲಿಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣೆ) ಅಧಿನಿಯಮ, 1956ಕ್ಕೆ ತಿದ್ದುಪಡಿ ತರಲು ಹೊರಟಿದೆ.

 

ಈ ಸಂಬಂಧ  ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ ) (ಎರಡನೇ ತಿದ್ದುಪಡಿ) ವಿಧೇಯಕ 2024ನ್ನು ಮಂಡಿಸಲು ಮುಂದಾಗಿದೆ.

 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ 1 ಮತ್ತು 2, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹುದ್ದೆ, ಮುಖ್ಯಮಂತ್ರಿಗಳ ಸಲಹೆಗಾರರು (ನೀತಿ ಮತ್ತು ಯೋಜನೆ) ಮತ್ತು ಕರ್ನಾಟಕ ರಾಜ್ಯ ನೀತಿ, ಯೋಜನಾ ಆಯೋಗದ ಉಪಾಧ್ಯಕ್ಷರ ಹುದ್ದೆಗೆ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಪ್ರಶ್ನಿಸಿ   ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ  ಅರ್ಜಿ ವಿಚಾರಣೆ ನಡೆಯುತ್ತಿದೆ.

 

ಇದರ ಬೆನ್ನಲ್ಲೇ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ವಿಧೇಯಕಕ್ಕೆ ತರುತ್ತಿರುವ  ಎರಡನೇ ತಿದ್ದುಪಡಿಯು ಚರ್ಚೆಗೆ ಗ್ರಾಸವಾಗಿದೆ.

 

ಈ ತಿದ್ದುಪಡಿ ವಿಧೇಯಕ ಮಂಡನೆ ಸಂಬಂಧ ಸಚಿವ ಸಂಪುಟಕ್ಕೆ ಸಲ್ಲಿಸಿರುವ  (ಸಂ ವ್ಯ ಶಾ ಇ ಶಾಸನ 2024) ಪ್ರಸ್ತಾವನೆ ಮತ್ತು ವಿಧೇಯಕದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ವಿಧಾನಸಭೆಯ ಅಥವಾ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿರುವವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ-1 ಮತ್ತು 2 ಹುದ್ದೆಗೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹುದ್ದೆಗೆ, ಮುಖ್ಯಮಂತ್ರಿಗಳ ಸಲಹೆಗಾರರು (ನೀತಿ ಮತ್ತು ಯೋಜನೆ) ಹುದ್ದೆಗೆ ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷರ ಹುದ್ದೆಗೆ ನೇಮಕಗೊಳ್ಳುವುದಕ್ಕಾಗಿ ಅನರ್ಹತೆ ವಿಧಿಸುವುದರಿಂದ ಇದಕ್ಕೆ ವಿನಾಯಿತಿ ನೀಡಲು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) ಅಧಿನಿಯಮ, 1956ರನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕ,’ ಎಂದು ವಿಧೇಯಕದಲ್ಲಿ ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ 1 ಮತ್ತು 2 ಹುದ್ದೆ ಜತೆಗೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಮುಖ್ಯಮಂತ್ರಿಗಳ ಸಲಹೆಗಾರರು (ನೀತಿ ಮತ್ತು ಯೋಜನೆ) ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರ ಹುದ್ದೆ ಎಂಬುದನ್ನು ಪ್ರಕರಣ 3ರಲ್ಲಿ ತಿದ್ದುಪಡಿ ತರಲು ಹೊರಟಿರುವುದು ತಿಳಿದು ಬಂದಿದೆ.

 

ಇದಕ್ಕೆ ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರು ಅನುಮೋದಿಸಿದ್ದಾರೆ.

 

ಕರ್ನಾಟಕ ವಿಧಾನಮಂಡಲದ (ಅನರ್ಹತೆ ನಿವಾರಣೆ) ಅಧಿನಿಯಮದ ಕಂಡಿಕೆ ಇ ನಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ, ಎಫ್‌ ನಲ್ಲಿ ಕಾನೂನು ಸಲಹೆಗಾರರ ಹುದ್ದೆ, ಜಿ ನಲ್ಲಿ ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹುದ್ದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

ವಿಧಾನಪರಿಷತ್‌ ಸದಸ್ಯ ಗೋವಿಂದರಾಜು, ನಜೀರ್‍‌ ಅಹ್ಮದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ. ಸುನಿಲ್‌ ಕುನುಗೋಲು ಅವರು ಮುಖ್ಯಮಂತ್ರಿಯವರ ಮುಖ್ಯ ಸಲಹೆಗಾರರಾಗಿದ್ದಾರೆ. ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು, ಬಿ ಆರ್‍‌ ಪಾಟೀಲ್‌ ಅವರು ನೀತಿ ಮತ್ತು ಯೋಜನೆ, ಶಾಸಕ ಎ ಎಸ್‌ ಪೊನ್ನಣ್ಣ ಅವರು ಕಾನೂನು ಸಲಹೆಗಾರರಾಗಿದ್ದಾರೆ.

 

ಸಲಹೆಗಾರರನ್ನು ನೇಮಿಸಿಕೊಳ್ಳುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರವಾಗಿದೆ. ಮುಖ್ಯಮಂತ್ರಿಗಳ ಮೇಲಿನ ಕಾರ್ಯದ ಒತ್ತಡ, ರಾಜಕೀಯ ಬೆಳವಣಿಗೆಗಳು ಮತ್ತು ಸರ್ಕಾರದ ಹಿತರಕ್ಷಣೆಗಾಗಿಯೇ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರವು ನೀಡಿದ್ದ ಸಮರ್ಥನೆಯನ್ನೇ ಈಗಿನ ಕಾಂಗ್ರೆಸ್‌ ಸರ್ಕಾರವೂ ನ್ಯಾಯಾಲಯದ ಮುಂದಿರಿಸಲು ಸಜ್ಜಾಗಿದೆ.

 

ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯವು ಸಲ್ಲಿಸಿದ್ದ ರಿಟ್‌  ಅರ್ಜಿಗೆ ಸಂಬಂಧಿಸಿದಂತೆ  ಹಿಂದಿನ ಬಿಜೆಪಿ ಸರ್ಕಾರವು  ನ್ಯಾಯಾಲಯಕ್ಕೆ  ಸಲ್ಲಿಸಿದ್ದ  ವಿವರಣಾತ್ಮಕ ಟಿಪ್ಪಣಿಯಲ್ಲಿ    3 ಪುಟಗಳಲ್ಲಿ ತನ್ನ ನಿಲುವನ್ನು ಈಗಾಗಲೇ  ಸಮರ್ಥಿಸಿಕೊಂಡಿದೆ.

 

ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ನೇಮಕ; ಬಿಜೆಪಿ ಸರ್ಕಾರದ ಸಮರ್ಥನೆಯನ್ನೇ ಮುಂದಿರಿಸುವುದೇ ಕಾಂಗ್ರೆಸ್‌?

ರಾಜಕೀಯ ಕಾಯದರ್ಶಿಗಳ ನೇಮಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೆ. ಮುಖ್ಯಮಂತ್ರಿಗಳ ಕಾರ್ಯಭಾರದ ಒತ್ತಡ ಕಡಿಮೆಗೊಳಿಸುವುದು, ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಣಯ ಕೈಗೊಳ್ಳುವುದು ಮತ್ತು ಸರ್ಕಾರದ ಹಿತರಕ್ಷಣೆ ಉದ್ದೇಶವಿದೆ. ಮತ್ತು ಅನುಭವ ಮತ್ತು ಜ್ಞಾನ ಆಧರಿಸಿ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲಾಗುತ್ತಿದೆ. ಹಾಗೆಯೇ ಇಂತಹ ನೇಮಕಾತಿ ಮಾಡುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರ. ಹೀಗಾಗಿ ಇದರಲ್ಲಿ ಅಧಿಕಾರ ದುರ್ಬಳಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

 

ಹಾಗೆಯೇ ಆಫೀಸ್‌ ಆಫ್‌ ಪ್ರಾಫಿಟ್‌, ಕರ್ನಾಟಕ ಕಾಯ್ದೆ ನಂ 7, 2019ರ ಅಡಿಯಲ್ಲಿ ರಾಜಕೀಯ ಕಾರ್ಯದರ್ಶಿಗಳು ಬರುವುದಿಲ್ಲ. ಕರ್ನಾಟಕ ವಿಧಾನಸಭೆ (ಅನರ್ಹತೆ ತಡೆಗಟ್ಟುವಿಕೆ) ಕಾಯ್ದೆ 1956 ಪ್ರಕಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಕರ್ನಾಟಕ ಶಾಸಕಾಂಗ ಸಭೆಯ ಸದಸ್ಯತ್ವದ ಅನರ್ಹತೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿತ್ತು.

 

ಹಿಂದಿನ ಸರ್ಕಾರಗಳ ಅವಧಿಯಿಂದಲೂ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಪರಿಪಾಠವಿದೆ. ಮುಖ್ಯಮಂತ್ರಿ ಕಚೇರಿ ಮತ್ತು ರಾಜಕೀಯ ವಿಷಯಗಳ ಕುರಿತು ರಾಜಕೀಯ ಕಾರ್ಯದರ್ಶಿಗಳು ವ್ಯವಹರಿಸುತ್ತಾರೆ ಮತ್ತು ಇಂತಹ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ನೆರವಾಗುತ್ತಾರೆ ಎಂದು ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಯು ನ್ಯಾಯಾಲಯಕ್ಕೆ ವಿವರಿಸಿದ್ದರು.

 

ಜನಸ್ಪಂದನ, ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವುದು, ಮುಖ್ಯಮಂತ್ರಿಗಳು ನಡೆಸುವ ಜಿಲ್ಲಾ ಭೇಟಿಗಳು, ಅಲ್ಲಿನ ಸ್ಥಳೀಯ ಸಮಸ್ಯೆಗಳು, ದೂರುಗಳನ್ನು ಮುಖ್ಯಮಂತ್ರಿಗಳು ಮತ್ತು ಇಲಾಖೆ ಮುಖ್ಯಸ್ಥರ ಗಮನಕ್ಕೆ ತಂದು ಪರಿಹರಿಸುವುದು, ಶಾಸಕರು ನೀಡುವ ಪತ್ರಗಳನ್ನು ಸ್ವೀಕರಿಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆಯುವುದು, ಸಾರ್ವಜನಿಕ ದೂರುಗಳು,ಮನವಿಗಳನ್ನು ಪರಿಶೀಲಿಸುವುದು, ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚನೆ ನಡೆಸುವುದು ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವುಗಳನ್ನು ಪರಿಹರಿಸುತ್ತಾರೆ.

 

ಪಕ್ಷದ ಸಭೆಗಳನ್ನು ಆಯೋಜಿಸುವುದು, ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಮಧ್ಯೆ ಸಂಪರ್ಕ ಸಂಹವನವಾಗಿ ಕಾರ್ಯನಿರ್ವಹಿಸುವುದು, ಮುಷ್ಕರಗಳ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ ಪರವಾಗಿ ಮನವಿಗಳನ್ನು ಸ್ವೀಕರಿಸಿ ಪರಿಹರಿಸುವ ಹೊಣೆಗಾರಿಕೆಗಳು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಮೇಲಿರುತ್ತದೆ ಎಂದು ಜವಾಬ್ದಾರಿಗಳ ಕುರಿತು ನ್ಯಾಯಾಲಯದ ಗಮನ ಸೆಳೆದಿದೆ.

 

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ 9 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದ ಕ್ರಮವು ಅಸಂವಿಧಾನಿಕ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಹಲವಾರು ವರ್ಷಗಳಿಂದ ಸಚಿವ ದರ್ಜೆಯ ಸ್ಥಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತಾ ಬಂದಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಶಾಶ್ವತವಾಗಿ ಇತಿಶ್ರೀ ಹಾಡಿತ್ತು. ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲುಅ ವಕಾಶ ನೀಡುತ್ತಿದ್ದ ಸಂಸದೀಯ ಕಾರ್ಯದರ್ಶಿಗಳ (ವೇತನ ಮತ್ತು ಉಪದಾನ ಅವಕಾಶಗಳು) ಕಾಯ್ದೆ 1963 ಹಾಗೂ ಅದಕ್ಕೆ 1999ರಲ್ಲಿ ತಂದಿದ್ದ ಏಳನೇ ತಿದ್ದುಪಡಿಯನ್ನೂ ರದ್ದುಗೊಳಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts