ಟಿಎ ಬಿಲ್‌ಗಳ ಗೋಲ್ಮಾಲ್‌; ಪ್ರಯಾಣ ಉದ್ದೇಶ, ವಿವರಗಳಿಲ್ಲ, ಖಜಾನಾಧಿಕಾರಿಗಳ ಸಹಿಯೂ ಇಲ್ಲ

ಬೆಂಗಳೂರು; ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ, ನೌಕರರು ಪ್ರಯಾಣ ಭತ್ಯೆ ಸೇರಿದಂತೆ ಇನ್ನಿತರೆ ಭತ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಬಿಲ್‌ಗಳಿಗೆ ಖಜಾನಾಧಿಕಾರಿಗಳ ಸಹಿ ಇಲ್ಲದಿದ್ದರೂ ಹಣ ಪಾವತಿಯಾಗಿರುವುದು ಇದೀಗ ಬಹಿರಂಗವಾಗಿದೆ.

 

ಅಷ್ಟೇ ಅಲ್ಲದೇ ಅಧಿಕಾರಿ ನೌಕರರು ವೈದ್ಯಕೀಯ ವೆಚ್ಚ ಮರು ಪಾವತಿಯ ಬಿಲ್‌ಗಳು ಕ್ರಮಬದ್ಧವಾಗಿಲ್ಲ. ಖಜಾನಾಧಿಕಾರಿಗಳ ಸಹಿಯೂ ಇಲ್ಲ. ಅನೇಕ ಬಿಲ್‌ಗಳಿಗೆ ಸಕ್ಷಮ ಪ್ರಾಧಿಕಾರಗಳ ಮಂಜೂರಾತಿಯೂ ಇಲ್ಲ.

 

ಜೆರಾಕ್ಸ್‌ ಪ್ರತಿಗಳಲ್ಲೇ ಸಬ್‌ ವೋಚರ್‍‌ಗಳನ್ನು ಸಲ್ಲಿಸಲಾಗುತ್ತಿದೆ. ಬಿಲ್‌ಗಳ ಮೇಲ್ಭಾಗದಲ್ಲಿ ವರ್ಕ್‌ ಫ್ಲೋದಲ್ಲಿ ಯಾರೊಬ್ಬರ ಸಹಿಯೂ ಇಲ್ಲ. ಆದರೂ ಬಿಲ್‌ಗಳನ್ನು ನಿರಂತರವಾಗಿ ಅನುಮೋದಿಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸಲ್ಲಿಸುತ್ತಿರುವ ಬಿಲ್‌ಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಅಧಿಕಾರಿಗಳು  ಸಚಿವ ಈಶ್ವರ್‌ ಖಂಡ್ರೆ ಅವರ ಗಮನಕ್ಕೂ ತಂದಿದ್ದಾರೆ ಎಂದು ಗೊತ್ತಾಗಿದೆ.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿರುವ ಕೋಟ್ಯಂತರ ರುಪಾಯಿಗಳನ್ನು ಅನಧಿಕೃತ ಮತ್ತು ನಕಲಿ ಖಾತೆಗಳಿಗೆ ಜಮೆ ಮಾಡಿರುವ ಪ್ರಕರಣವು ಬಹಿರಂಗಗೊಂಡ ಬೆನ್ನಲ್ಲೇ ಇದೀಗ ಖಜಾನೆ ಇಲಾಖೆಯಲ್ಲಿಯೂ ಅಧಿಕಾರಿ, ನೌಕರರ ಬಿಲ್‌ಗಳ ಕರಾಮತ್ತೂ ಕೂಡ ಬಯಲಿಗೆ ಬಂದಿದೆ.

 

ವಿಭಾಗವಾರು ಮಟ್ಟದಲ್ಲಿ ಬಿಲ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಖಜಾನೆ ಆಯುಕ್ತರ ಅಧ್ಯಕ್ಷತೆಯಲ್ಲಿ 2024ರ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಅಧಿಕಾರಿ, ನೌಕರರ ಬಿಲ್ವಿದ್ಯೆ ಕುರಿತು ಚರ್ಚೆ ಆಗಿದೆ. ಈ ಮೂರು ತಿಂಗಳಲ್ಲಿ ಖಜಾನೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

2024ರ ಮಾರ್ಚ್‌ 5ರಂದು ನಡೆದಿದ್ದ ಸಭೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಿಲ್‌ಗಳ ಬಗ್ಗೆ ಚರ್ಚೆ ನಡೆದಿದೆ. ಅರಣ್ಯ ಇಲಾಖೆಯ ಟಿ ಎ ಬಿಲ್‌ಗಳಲ್ಲಿ ಪ್ರಯಾಣದ ಉದ್ದೇಶ ಇಲ್ಲದೇ ಬಿಲ್‌ಗಳಿಗೆ ಅನುಮೋದನೆ ದೊರೆತಿದೆ.

 

ಕೆಲವೊಂದು ಬಿಲ್‌ಗಳಲ್ಲಿ ಆದಾಯ ತೆರಿಗೆ ಕಟಾಯಿಸಿಲ್ಲ. ಸಬ್‌ ವೋಚರ್‍‌ ಮಾಡದೇ ಬಿಲ್‌ ಅನುಮೋದನೆಯಾಗಿದೆ. ಸೂಕ್ತ ಬಿಲ್‌ಗಳಿಲ್ಲದೇ ಮೊಬೈಲೈಷನ್‌ ಅಡ್ವಾನ್ಸ್‌ ಪಡೆದಿರುವುದು ತಿಳಿದು ಬಂದಿದೆ.

 

ಬಿಲ್‌ಗಳಲ್ಲಿ ಪೇ ಆರ್ಡರ್‍‌ ಖಜಾನಾಧಿಕಾರಿಗಳ ಸಹಿ ಇಲ್ಲದೇ ಪೂರ್ಣಗೊಳಲಿಸಲಾಗಿದೆ. ಜಿಲ್ಲಾ ಖಜಾನೆ ರಾಯಚೂರಿನ ಬಿಲ್‌ಗಳಲ್ಲಿ ಟಿ ಎ ಕ್ಲೈಮ್‌ ಗಳನ್ನು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿರುವುದಾಗಿ ಎಂಬ ಬಗ್ಗೆ ವಿವರಗಳನ್ನೇ ನಮೂದಿಸಿಲ್ಲ.  ಆದರೂ ಅಂತಹ ಬಿಲ್‌ಗಳನ್ನು ತೀರ್ಣಗೊಳಿಸಿದೆ. ಹಲವಾರು ಬಿಲ್‌ಗಳಲ್ಲಿ ಮುಖ್ಯ ಲೆಕ್ಕಿಗರ ಸಹಿತ, ಖಜಾನಾಧಿಕಾರಿಗಳ ಸಹಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಆದೇಶವಿಲ್ಲ.

 

ಖಜಾನೆಯ ಅಪರ ನಿರ್ದೇಶಕರು ಹಲವು ಬಿಲ್‌ಗಳನ್ನು ಗಮನಿಸಿದ್ದಾರೆ. ಟಾಪ್‌ ಶೀಟ್‌ನಲ್ಲಿ ವರ್ಕ್‌ ಫ್ಲೋದಲ್ಲಿ ಯಾರೂ ಸಹಿ ಮಾಡಿರುವುದಿಲ್ಲ. ಡಿಸಿಆರ್‍‌ಜಿ ನಲ್ಲಿ ಆಫೀಸ್‌ ಮೆಮೋರಂಡಮ್‌ ಇರುವುದಿಲ್ಲ. ಕೆಲವು ಬಿಲ್‌ಗಳಲ್ಲಿ ಕ್ಲೈಮ್‌ಗಳು ತಪ್ಪಿದೆ. ವೈದ್ಯಕೀಯ ವೆಚ್ಚ ಮರು ಪಾವತಿಯ ಬಿಲ್‌ಗಳಲ್ಲಿ ಬೇಸಿಕ್‌ ಫಾರ್ಮ್ ಇಲ್ಲ. ಕಾಯಿಲೆಯ ಸ್ವರೂಪವೇ ಇಲ್ಲ ಎಂದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

 

ಆಯುಕ್ತಾಲಯದ ಜಂಟಿ ನಿರ್ದೇಶಕರು ಸಹ ಹಲವು ಬಿಲ್‌ಗಳನ್ನು ಗಮನಿಸಿದ್ದಾರೆ. ಪಾವತಿಯ ಅಧಿಕೃತತೆಯ ಹಂತದಲ್ಲಿ ಬಿಲ್‌ಗಳು ಮೂವ್‌ ಆಗದೇ ಇದ್ದವು. ಖಜಾನೆ -3ರ ಉಪ ನಿರ್ದೇಶಕರು ಹೇಳಿರುವ ಪ್ರಕಾರ ಹಲವು ಬಿಲ್‌ಗಳಲ್ಲಿ ಜೆರಾಕ್ಸ್‌ ಪ್ರತಿಯಲ್ಲಿ ಸಬ್‌ ವೋಚರ್‍‌ ಸಲ್ಲಿಸಲಾಗಿವೆ. ಇಂತಹ ಬಿಲ್‌ಗಳನ್ನು ತೀರ್ಣಗೊಳಿಸಿದೆ.

 

ಟಾಪ್‌ ಶೀಟ್‌ನ ವರ್ಕ್‌ ಫ್ಲೋನಲ್ಲಿಯೂ ಯಾರೂ ಸಹ ಸಹಿ ಮಾಡಿಲ್ಲ. ಡಿಡಿಒ ಸಹಿ ಇರದ ಬಿಲ್‌ಗಳು ಸಹ ಇದ್ದವು. ವೈದ್ಯಕೀಯ ಮರು ಪಾವತಿಯ ಬಿಲ್‌ಗಳಲ್ಲಿ ಆಸ್ಪತ್ರೆಯ ಬಿಡುಗಡೆ ಸಾರಾಂಶವೇ ಇರುವುದಿಲ್ಲ ಎಂಬ ಬಗ್ಗೆಯೂ ನಡವಳಿಯಲ್ಲಿ ಉಲ್ಲೇಖಿಸಲಾಗಿದೆ.

 

ಎನ್‌ಪಿಎಸ್‌ ಸಂಬಂಧಿತ ಕುಟುಂಬ ಪಿಂಚಣಿ ಪ್ರಕರಣಗಳಲ್ಲಿ ಹಲವು ಜಿಲ್ಲೆಗಳಲ್ಲಿ ಬಾಕಿ ಇದ್ದವು. ಬೆಳಗಾವಿಯಲ್ಲಿ 6, ಬಾಗಲಕೋಟೆ ವ್ಯಾಪ್ತಿಯ ಜಮಖಂಡಿ, ಮುಧೋಳ ಮತ್ತು ಹುನಗುಂದದಲ್ಲಿ 5, ರಾಯಚೂರು ವ್ಯಾಪ್ತಿಯ ಮಾನ್ವಿಯಲ್ಲಿ 4, ವಿಜಯಪುರದಲ್ಲಿ 4, ಮಂಡ್ಯದಲ್ಲಿ 3, ಧಾರವಾಡದಲ್ಲಿ 3, ಹಾವೇರಿಯಲ್ಲಿ 3 ಪ್ರಕರಣಗಳು ಬಾಕಿ ಇದ್ದವು. ಹೀಗೆ ಹಲವು ಖಜಾನೆಗಳ್ಲಲಿ 50 ದಿನಗಳಿಗಿಂತಲೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ಡಿಡಿಓಗಳಿಂದ ಬಿಲ್‌ಗಳನ್ನು ಕ್ರಮಬದ್ಧವಾಗಿ ವಿಂಗಡಿಸುವ ವಿಧಾನ ಅನುಸರಿಸುತ್ತಿಲ್ಲ. ಟಾಪ್‌ ಶೀಟ್‌, ನಂತರ ಬಿಲ್‌ ಕಾಪಿ, ಮಂಜೂರಾತಿ ಆದೇಶ, ಸಪೋರ್ಟಿಂಗ್‌ ಸಬ್‌ ವೋಚರ್‍‌ಗಳು, ಕಟಾವಣೆ ಸರ್ಟಿಫಿಕೇಟ್‌, ಸ್ಟಾಕ್‌ ಸರ್ಟಿಫಿಕೇಟ್‌, ಅನೆಕ್ಷರ್‍‌ ಎ ಬಿಲ್‌ಗಳು ಕ್ರಮಬದ್ಧವಾಗಿಲ್ಲ ಎಂದೂ ನಡವಳಿಯಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts