ಪಿಪಿಇ ಕಿಟ್‌ ಖರೀದಿ; 38.26 ಕೋಟಿ ರು ನಷ್ಟ ಪರಿಹಾರ ಪಾವತಿಗೆ ಅನುದಾನವೇ ಲಭ್ಯವಿಲ್ಲ

ಬೆಂಗಳೂರು; ಕೋವಿಡ್‌-19ರ ಸಮಯದಲ್ಲಿ  ಪಿಪಿಇ ಕಿಟ್‌ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದ ಕಂಪನಿಯೊಂದಕ್ಕೆ  ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯವು ನೀಡಿರುವ ಅದೇಶ ಪಾಲನೆ ಮಾಡಲು ಮುಂದಾಗಿರುವ  ವೈದ್ಯಕೀಯ ನಿರ್ದೇಶನಾಲಯದಲ್ಲಿ ಅನುದಾನವೇ ಲಭ್ಯವಿಲ್ಲ.

 

ಆದರೂ ನಿರ್ದೇಶನಾಲಯದಲ್ಲಿ ಲಭ್ಯವಿರುವ ಮೊತ್ತದಿಂದಲೇ 38.26 ಕೋಟಿ ರು.ಗಳನ್ನು ಪಾವತಿಸಬೇಕು ಎಂದು ಆರ್ಥಿಕ ಇಲಾಖೆಯು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸೂಚಿಸಿದೆ.

 

ಪಿಪಿಇ ಕಿಟ್‌ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದ ಪ್ರುಡೆಂಟ್‌ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್‌ ಬಾಕಿ ಹಣ ಸಂಬಂಧ ನ್ಯಾಯಾಲಯ ಮೆಟ್ಟಿಲೇರಿತ್ತು. ಈ ಸಂಬಂಧ  ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಕಂಪನಿಗೆ  76.51 ಕೋಟಿ ರು. ಪಾವತಿಸುವ ಸಂಬಂಧ ನ್ಯಾಯಾಲಯವು  ನಷ್ಟದ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಈ  ಆದೇಶವನ್ನು ಪಾಲನೆ ಮಾಡಲೂ ಸರ್ಕಾರದ ಬಳಿ ಅನುದಾನವಿಲ್ಲ.

 

ಅಷ್ಟೇ ಅಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಇದುವರೆಗೂ ಕ್ರಿಮಿನಲ್‌ ಮೊಕದ್ದಮೆಯನ್ನೂ ದಾಖಲಿಸಿಲ್ಲ. ಕೋವಿಡ್‌ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು  ನೀಡಿರುವ ತನಿಖಾ ವರದಿ ಆಧರಿಸಿ ಅಧಿಕಾರಿ, ನೌಕರರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

 

ಈ ಪ್ರಕರಣ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು (ಸಂಖ್ಯೆ; ಎಂಇಡಿ 566 ಎಂಎಂಸಿ 2022 (ಭಾಗ-1)  ಲಭ್ಯವಾಗಿವೆ.

 

ನಷ್ಟ ಪರಿಹಾರವನ್ನು ಪಾವತಿಸುವ ಸಂಬಂಧ ಅನುದಾನ ಲಭ್ಯವಿಲ್ಲದ ಕಾರಣ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಅರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ನ್ಯಾಯಾಲಯದ ಆದೇಶದಲ್ಲಿ ಪ್ರಸ್ತಾಪಿಸಿರುವ 38.26 ಕೋಟಿ ರು.ಗನ್ನು ನಿರ್ದೇಶನಾಲಯದಲ್ಲಿ ಲಭ್ಯವಿರುವ ಮೊತ್ತದಿಂದ ಭರಿಸಬೇಕು ಎಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ನ್ಯಾಯಾಲಯ ನೀಡಿದ್ದ ಆದೇಶದಲ್ಲೇನಿದೆ?

 

1 ನೇ ಅರ್ಜಿದಾರರಿಗೆ ನೇರವಾಗಿ ಹಣ  ಪಾವತಿ ಮಾಡಬೇಕು.  ಪರಿಹಾರದ ಪರಿಶೀಲನೆಯ ಮೇಲೆ ಮತ್ತು ರಾಜ್ಯದ ಖಜಾನೆಯ ಹಿತಾಸಕ್ತಿ ಸುರಕ್ಷಿತವಾಗಿದೆ ಎಂದು ಖಾತ್ರಿಪಡಿಸಿಕೊಂಡ ನಂತರ ಪಾವತಿಯನ್ನು ವಿವೇಚನಾಯುಕ್ತ ನಿರ್ವಹಣಾ ಪರಿಹಾರಗಳಿಗೆ ಮರುಹೊಂದಿಸಬಹುದು. ಇದಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮೋದನೆಯನ್ನು ಪಡೆದಿರಬೇಕು.

 

ಪಾವತಿಯ ವಿಧಾನ ಮತ್ತು ಅದಕ್ಕೆ ಅನುಮೋದನೆಗೆ ಸಂಬಂಧಿಸಿದಂತೆ 38.26 ಕೋಟಿಗಳ ಮೊದಲ ಠೇವಣಿಗೆ ಅನುಮೋದನೆ ಪಡೆಯಲು ಅನುಸರಿಸಿದ ಅದೇ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ಅಗತ್ಯವಾಗಿದೆ ಎಂದು ಆದೇಶದಲ್ಲಿ ವಿವರಿಸಿತ್ತು.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಪ್ರಸ್ತಾಪಿತ ನ್ಯಾಯಾಲಯದ ಆದೇಶವು ಮೇಲ್ಮನವಿಗೆ ಅರ್ಹವಾಗಿರುವುದೇ ಎಂಬ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

 

ಪ್ರಸ್ತಾಪಿತ ಪಾವತಿ ಮೊತ್ತವು ಸರಿಯಾಗಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಬೇಕು.

 

ಪ್ರಸ್ತುತ ಪ್ರಕರಣದಲ್ಲಿ ಕಡತದಲ್ಲಿ ಪ್ರಸ್ತಾಪಿಸಿರುವ 38.26 ಕೋಟಿ ರು.ಗಳನ್ನು ಹೊರತುಪಡಿಸಿ ಪಾವತಿಸಬೇಕಾದ ಮೊತ್ತವಿದೆಯೇ?

 

ಈ ನಿರ್ದಿಷ್ಟ ಪ್ರಕರಣದಲ್ಲಿ ಪುನಃ ಉದ್ಭವಿಸಬಹುದಾದ ಮತ್ಯಾವುದೇ ಬಾಕಿಯಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.

 

ಈ ಪ್ರಕರಣದ ಪರಿಣಾಮವು ಇಂತಹದೇ ಇತರೆ ಪ್ರಕರಣಗಳಿಗೆ ಪೂರ್ವ ನಿದರ್ಶನವಾಗುವ ಸಾಧ್ಯತೆಯಿದೆಯೇ ಎಂಬುದನ್ನು ಪರಿಶೀಲಿಸಬೇಕು.

 

ಈ ಕುರಿತು ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು.

 

ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವಾಸ್ತವಾಂಶಗಳು, ಕೈಗೊಂಡ ಕ್ರಮಗಳು, ಇನ್ನೂ ವಹಿಸಬೇಕಾದ ಕ್ರಮಗಳು ಮತ್ತು ಕೈಗೊಳ್ಳಲು ಪ್ರಸ್ತಾಪಿಸಬಹುದಾದ ಅಂಶಗಳ ಕುರಿತು ವಿವರವಾದ ಟಿಪ್ಪಣಿಯೊಂದಿಗೆ ಕಾನೂನು, ಹಣಕಾಸು ಮತ್ತು ಆಡಳಿತಾತ್ಮಕ ಪರಿಣಾಮಗಳನ್ನು ನಿರೂಪಿಸುವ ವಿಸ್ತೃತವಾದ ಸಚಿವ ಸಂಪುಟ ಟಿಪ್ಪಣಿ ತಯಾರಿಸಿ ಅನುಮೋದದೆ ಪಡೆದುಕೊಳ್ಳಬೇಕು.

 

ಈ ಅಭಿಪ್ರಾಯದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು 2024ರ ಏಪ್ರಿಲ್‌ 8,  ಮೇ 9, 21 ರಂದು ಪತ್ರ ಬರೆದಿದ್ದರೂ ಸಹ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ ಸುಜಾತ ರಾಠೋಡ್‌ ಅವರು  ಈ ಸಂಬಂಧ ದೋಷಾರೋಪಣೆ ಪಟ್ಟಿಯನ್ನು  ಸರ್ಕಾರಕ್ಕೆ ಸಲ್ಲಿಸಿಲ್ಲ  ಎಂದು ತಿಳಿದು ಬಂದಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆ ಮಾತ್ರವಲ್ಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಹ ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಅಕ್ರಮಗಳನ್ನು ನಡೆಸಿತ್ತು ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು.  ಅಂದಾಜು 150 ಕೋಟಿ ಮೊತ್ತದ ಪಿಪಿಇ ಕಿಟ್‌ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಆಹ್ವಾನಿಸಿದ್ದ  ದರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿದೆ.

 

ಸಾಕಷ್ಟು ಕಾಲಾವಕಾಶವಿದ್ದರೂ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಕರೆಯದ ಕಾರಣ ಸಾರ್ವಜನಿಕರ ತೆರಿಗೆ ಹಣ ಕಾಳಸಂತೆಕೋರರ ಪಾಲಾಗುತ್ತಿದೆ ಎಂದು ಆಪಾದಿಸಲಾಗಿತ್ತು.

 

ಪಿಪಿಇ ಕಿಟ್‌ಗಳನ್ನು ಉತ್ಪಾದಿಸುವ ಕಂಪನಿಗಳು ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡಲು ಆಸಕ್ತಿ ತೋರಿದ್ದರೂ ಸೊಸೈಟಿಯು ದರಪಟ್ಟಿಯನ್ನು ಆಹ್ವಾನಿಸುವ ಮೂಲಕ ಇಂತಹ ಕಂಪನಿಗಳನ್ನು ದೂರವಿಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದೆ. ಅಲ್ಲದೆ ದರ ಪಟ್ಟಿ ಆಹ್ವಾನಿಸುವ ಮುನ್ನವೇ ಸೊಸೈಟಿಯ ಉನ್ನತ ಅಧಿಕಾರಿಗಳು ನಿರ್ದಿಷ್ಟ ಸರಬರಾಜುದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಪರಿಣಾಮ ಪಿಪಿಇ ಕಿಟ್‌ ತಯಾರಿಕೆ ಕಂಪನಿಗಳಿಗೆ ಅವಕಾಶವೇ ಇಲ್ಲದಂತಾಗಿತ್ತು.

 

ಪಿಪಿಇ ಕಿಟ್‌ ಖರೀದಿ ಮತ್ತು ಸರಬರಾಜಿಗಾಗಿ 2020ರ ಆಗಸ್ಟ್‌ 5ರಂದು ದರಪಟ್ಟಿ ಆಹ್ವಾನಿಸುವ ಕೆಡಿಎಲ್‌ಡಬ್ಲ್ಯೂಎಸ್‌, 2020ರ ಆಗಸ್ಟ್‌ 6ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಮೊದಲೇ ಗೊತ್ತುಪಡಿಸಿರುವ ಬಿಡ್‌ದಾರರೊಂದಿಗೆ ಚರ್ಚಿಸುವ ಅಧಿಕಾರಿಗಳು, ಅವರ ಅನುಕೂಲಕ್ಕೆ ತಕ್ಕಂತೆ ದರಪಟ್ಟಿಯನ್ನು ಪ್ರಕಟಿಸಿದ್ದರು.

 

ಆಸಕ್ತ ಕಂಪನಿಗಳು, ಸರಬರಾಜುದಾರರು ದರಪಟ್ಟಿಗಳನ್ನು ಅನ್‌ಲೈನ್‌ ಮತ್ತು ಮ್ಯಾನುಯಲ್‌ ಮೂಲಕ ಸಲ್ಲಿಸಲು 2020ರ ಆಗಸ್ಟ್‌14ರ ಸಂಜೆ 5 ಗಂಟೆವರೆಗೆ ಕಾಲಾವಕಾಶ ನೀಡಲಾಗಿದೆ. ಏಕಕಾಲಕ್ಕೆ ಆನ್‌ಲೈನ್‌ ಮತ್ತು ಮ್ಯಾನುಯಲ್‌ ಮೂಲಕ ದರಪಟ್ಟಿಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿರುವ ಪ್ರಕ್ರಿಯೆಯೇ ಅಕ್ರಮಗಳಿಗೆ ದಾರಿಮಾಡಿಕೊಟ್ಟಿದೆ ಎಂಬ ಮಾತು ಕೇಳಿ ಬರುತ್ತಿದೆ.  ಇನ್ನು, ಮೊದಲು ಆಹ್ವಾನಿಸುವ ದರಪಟ್ಟಿಯಲ್ಲಿ 15,00,00,000.00 ಮೊತ್ತದಲ್ಲಿ 2,50,000 ಪಿಪಿಇ ಕಿಟ್‌ಗಳ ಖರೀದಿಸಲು ನಮೂದಿಸಲಾಗಿರುತ್ತದೆ.

 

ದರಪಟ್ಟಿ ಪ್ರಕಟಗೊಂಡ 6 ದಿನಗಳ ನಂತರ ಅಂದಾಜು ಮೊತ್ತ ರೂ 150,00,00,000.00 ರು. ಮೊತ್ತಕ್ಕೇರಿಸುವ ಅಧಿಕಾರಿಗಳು ಕಿಟ್‌ ಪ್ರಮಾಣವನ್ನೂ 25,00,000.00ಕ್ಕೇರಿಸಿ ತಿದ್ದುಪಡಿ ಸೂಚನೆ ಹೊರಡಿಸುತ್ತಾರೆ. ‘ಮೊದಲು 15 ಕೋಟಿಗೆ ದರಪಟ್ಟಿ ಆಹ್ವಾನಿಸಿ 6 ದಿನಗಳಾದ ನಂತರ ಉದ್ದೇಶಪೂರ್ವಕವಾಗಿಯೇ ಅದನ್ನು 150 ಕೋಟಿಗೇರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಪಿಪಿಇ ಕಿಟ್‌ ಖರೀದಿ; 150 ಕೋಟಿ ಮೊತ್ತಕ್ಕೂ ಟೆಂಡರ್‌ ಕರೆಯದ ಹಿಂದಿನ ಗುಟ್ಟೇನು?

ಅಸ್ಪಷ್ಟತೆಯ ನಿಯಮಗಳು

ಪಿಪಿಇ ಕಿಟ್‌ ಖರೀದಿ ಸಂಬಂಧ ಆಹ್ವಾನಿಸುವ ದರಪಟ್ಟಿಯಲ್ಲಿ ಸೂಚಿಸಿರುವ ನಿಯಮಗಳು ಅಸ್ಪಷ್ಟತೆಯಿಂದ ಕೂಡಿದ್ದವು.  ಪಿಪಿಇ ಕಿಟ್‌ಗೆ ಜಿಎಎಸ್‌ಎಂ ಇಂತಿಷ್ಟೇ ಇರಬೇಕು. ಸರಬರಾಜುದಾರರು ನೀಡುವ ದರಪಟ್ಟಿಯನ್ನು ಪರಿಶೀಲಿಸುವ ಅಧಿಕಾರಿಗಳು, ಕಮಿಷನ್‌ ವ್ಯವಹಾರ ಕುದುರದಿದ್ದರೆ ಜಿಎಸ್‌ಎಂ 60-65 ಇರಬೇಕು ಎಂದು ತಿರಸ್ಕರಿಸಿದ್ದರು.

 

ಅಲ್ಲದೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ  ಪಿಪಿಇ ಕಿಟ್‌ ಖರೀದಿ ಸಂಬಂಧ ಕರೆದಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಜಿಎಸ್‌ಎಂ ಪ್ರಮಾಣವನ್ನು ನಮೂದಿಸಿತ್ತು. ಆದರೆ ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಪಿಪಿಇ ಕಿಟ್‌ ವಿಶಿಷ್ಟತೆಯಲ್ಲಿ ಜಿಎಸ್‌ಎಂ ಪ್ರಮಾಣವನ್ನು ನಮೂದಿಸಿರಲಿಲ್ಲ. ವಿವಿಧ ಜಿಎಎಸ್‌ಎಂ ವಿವಿಧ ದರವಿರುತ್ತದೆ. 60 ಜಿಎಸ್‌ಎಂಗೆ ಒಂದು ದರ, 90 ಜಿಎಸ್‌ಎಂಗೆ ಮತ್ತೊಂದು ದರ ನಮೂದಿಸುವ ಮೂಲಕ ಸರಬರಾಜುದಾರರನ್ನೇ ಗೊಂದಲದಲ್ಲಿ ಮುಳುಗಿಸಿ ನಿರ್ದಿಷ್ಟ ಸರಬರಾಜುದಾರರಿಗೆ ಖರೀದಿ ಆದೇಶ ನೀಡಲಾಗಿತ್ತು.

 

ದುಪ್ಪಟ್ಟು ದರದಲ್ಲಿ ಪಿಪಿಇ ಕಿಟ್‌ ಖರೀದಿ; ಬೊಕ್ಕಸಕ್ಕೆ 4 ಕೋಟಿ ನಷ್ಟ

ಅಲ್ಲದೆ ಪಿಪಿಇ ಕಿಟ್‌ ಲ್ಯಾಮಿನೇಟ್‌ ಅಥವಾ ನಾನ್‌ ಲ್ಯಾಮಿನೇಟ್‌ ಎಂಬ ಬಗ್ಗೆ ಸ್ಪಷ್ಟತೆಯನ್ನು ಕೊಡುವುದಿಲ್ಲ. ಸಿಟ್ರಾ (SITRA- e South India Textile Research Association) ಡಿಆರ್‌ಡಿಓ (DRDO-Research& Development Organisation)ಬೆಂಚ್‌ ಮಾರ್ಕ್‌ನ ಪಿಪಿ ಕಿಟ್‌ ಬೇಕೆ ಅಥವಾ ಕಿಟ್‌ನ ವಿಶಿಷ್ಟತೆ, ನಿರ್ದಿಷ್ಟತೆಗಳನ್ನು ನಮೂದಿಸಿರಲಿಲ್ಲ.

 

4(ಜಿ) ವಿನಾಯಿತಿ ಅಧಿಸೂಚನೆ ಉಲ್ಲಂಘಿಸಿ ಮಾಸ್ಕ್‌, ಪಿಪಿಇ ಕಿಟ್‌ ಖರೀದಿ; 9 ಕೋಟಿ ನಷ್ಟ?

 

ಅಲ್ಲದೆ ಒಂದೊಮ್ಮೆ ಸರಬರಾಜುದಾರರು ಕಳಪೆ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿದ್ದೇ ಅದರೆ ಟೆಂಡರ್‌ ನಿಯಮಾನುಸಾರ ಸರಬರಾಜುದಾರರ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಕಂಪನಿ, ಸರಬರಾಜುದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿತ್ತು.

 

ದರ ಪಟ್ಟಿ ಮೂಲಕ ಖರೀದಿಸಿದರೆ ಕಳಪೆ ಗುಣಮಟ್ಟದ ಕಿಟ್‌ಗಳನ್ನು ಸರಬರಾಜು ಮಾಡಿದರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಇದರ ಗೊಡವೆಗೆ ಹೋಗದ ಸೊಸೈಟಿಯ ಅಧಿಕಾರಿಗಳು ದರಪಟ್ಟಿಗೆ ಜೋತುಬಿದ್ದು ತಮ್ಮ ಜೇಬುಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

the fil favicon

SUPPORT THE FILE

Latest News

Related Posts