ಬ್ಯಾಂಕ್‌ನಲ್ಲಿ ನಕಲಿ ಖಾತೆ, ಆಧಾರ್‍‌ ಸೃಷ್ಟಿ; ರೈತರ ಪರಿಹಾರ ಹಣ ವಿತರಣೆಯಲ್ಲಿಯೂ 6 ಕೋಟಿ ಅಕ್ರಮ!

ಬೆಂಗಳೂರು; ಬಡ ರೈತರಿಗೆ ಪರಿಹಾರ ಹಣ ವಿತರಣೆಯಲ್ಲಿಯೂ ಅಕ್ರಮದ ವಾಸನೆ ಬಡಿದಿದೆ.  ಪರಿಹಾರ ಹಣ ವಿತರಣೆಗೆ ಸಂಬಂಧಿಸಿದಂತೆ   ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್‍‌ ಕಾರ್ಡ್‌ ಬಳಸಿ ಒಂದೇ ಒಂದು ಗ್ರಾಮ ಪಂಚಾಯ್ತಿಯಲ್ಲಿ 6 ಕೋಟಿ ರು.ಗೂ ಹೆಚ್ಚು ಹಣ ಡ್ರಾ ಮಾಡಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಯೂನಿಯನ್‌ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆದು ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿರುವ ಪ್ರಕರಣದಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ಅವರ ತಲೆದಂಡವಾಗಿದೆ.

 

ಇದರ ಬೆನ್ನಲ್ಲೇ ಬಡ ರೈತರಿಗೆ ಪರಿಹಾರ ಹಣ ವಿತರಣೆಯಲ್ಲಿಯೂ ಬ್ಯಾಂಕ್‌ಗಳಲ್ಲಿ ನಕಲಿ ಖಾತೆ ಮತ್ತು ನಕಲಿ ಆಧಾರ್ ಕಾರ್ಡ್‌ ಸೃಷ್ಟಿಸಿ ಕೋಟ್ಯಂತರ ರುಪಾಯಿಗಳನ್ನು ಡ್ರಾ ಮಾಡಿರುವ ಪ್ರಕರಣಕ್ಕೆ ಮಹತ್ವ ಬಂದಿದೆ.

 

ಚಿಕ್ಕಮಗಳೂರಿನ ಕಡೂರು ತಾಲೂಕಿನ ಗ್ರಾಮ ಪಂಚಾಯ್ತಿಗಳ ಪೈಕಿ ಕಲ್ಕೆರೆ ಗ್ರಾಮ ಪಂಚಾಯ್ತಿಯೊಂದರಲ್ಲೇ  ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್‍‌ ಕಾರ್ಡ್‌ ನೀಡಿದ್ದವರಿಗೆ  ರೈತರ ಪರಿಹಾರ ರೂಪದಲ್ಲಿ ನೀಡಬೇಕಿದ್ದ 6 ಕೋಟಿ ರು.ಗೂ ಹೆಚ್ಚಿನ ಮೊತ್ತ ವಿತರಣೆಯಾಗಿದೆ. ಈ ಪ್ರಕರಣ ಸಂಬಂಧ ಸೂಕ್ತ ಕ್ರಮಕೈಗೊಳ್ಳಳು ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ಕಡೂರು ತಾಲೂಕಿನ ತಹಶೀಲ್ದಾರ್‍‌ಗೆ ಸೂಚಿಸಿದ್ದಾರೆ.

 

ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು 2024ರ ಜನವರಿ 21ರಂದೇ ಈ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳ ಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯ್ತಿಯಲ್ಲಿ ರೈತರ ಪರಿಹಾರ ಹಣ 6 ಕೋಟಿಗೂ ಹೆಚ್ಚು ಹಣವನ್ನು ಕೆಲವರು ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್ ಕಾರ್ಡ್‌ ನೀಡಿ ಹಣ ಪಡೆದಿದ್ದು ಇದಕ್ಕೆ ಪಂಚಾಯ್ತಿ ಕಾರ್ಯದರ್ಶಿ, ಕಂಪ್ಯೂಟರ್‍‌ ಆಪರೇಟರ್‍‌ ಹೊಣೆಗಾರರಾಗಿದ್ದಾರೆ. ಅದ ಕಾರಣ ಬಡ ರೈತರಿಗೆ ಅನ್ಯಾಯವಾಗಿದ್ದು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು,’ ಎಂದು ಓಂಕಾರಪ್ಪ ಎಂಬುವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು.

 

ಈ ಮನವಿ ಆಧರಿಸಿ ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ತನಿಖೆ ನಡೆಸಲು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಈ ಪ್ರಕರಣ ಕುರಿತು ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಪ್ರತಿಕ್ರಿಯೆ, ವಿವರ ಮತ್ತು ಹೆಚ್ಚಿನ ಮಾಹಿತಿ ಬಯಸಿ ಇ-ಮೈಲ್‌ ಕಳಿಸಲಾಗಿತ್ತು. ವರದಿ ಪ್ರಕಟವಾಗುವ ಈ ದಿನದವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಆಯುಕ್ತಾಲಯವು ಮಾಹಿತಿ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.

 

ರಾಜ್ಯದ ಹಲವು ಗ್ರಾಮ ಪಂಚಾಯ್ತಿಗಳಲ್ಲಿಯೂ ಇಂತಹ ಹಲವು ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಕಳೆದ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ   ರಾಜ್ಯದ ಸುಮಾರು 34 ಲಕ್ಷ ರೈತರಿಗೆ  ಪರಿಹಾರ ಹಣ ಪಾವತಿಸಲು ಸರ್ಕಾರ ಮುಂದಾಗಿತ್ತು.  ಕೇಂದ್ರದಿಂದ ಬಂದಿರುವ 3,454 ಕೋಟಿ ರೂ. ಅನ್ನು ಇನ್‌ಪುಟ್‌ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲಿದೆ.

 

ರೈತರಿಗೆ ಈಗಾಗಲೇ  ವಿತರಿಸಿರುವ ಗರಿಷ್ಠ 2,000 ರೂ.ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತಿದೆ.  ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾಗಿರುವ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಿದೆ.

 

ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿನ ರೈತರಿಗೂ 2023ನೇ ಸಾಲಿನ  ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರವು ದೊರೆತಿಲ್ಲ. ಹೀಗಾಗಿ ಹಲವು ಶಾಸಕರು ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಗೆ ದಾಂಗುಡಿಯಿಟ್ಟಿದ್ದಾರೆ.

 

2023ರ ಬರ ಪರಿಹಾರವನ್ನು ರೈತರಿಗೆ ವಿತರಣೆ ಮಾಡುವ ಸಂಬಂಧ ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ವಿಪತ್ತು ನಿರ್ವಹಣೆ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ 2024ರ ಜನವರಿ 11ರಂದು ಪತ್ರ (ಸಂಖ್ಯೆ; ಕಂಇ 166 ಟಿಎನ್‌ಆರ್‍‌ 2024)  ಬರೆದಿದ್ದರು.

 

ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ತಮ್ಮ ಕ್ಷೇತ್ರದ ಕೆಲವು ರೈತರಿಗೆ ಬರ ಪರಿಹಾರ ವಿತರಣೆಯಾಗಿಲ್ಲ ಎಂದು ತಿಳಿಸಿದ್ದು, ಶಾಸಕರ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ ಮಾರ್ಗಸೂಚಿಗಳನ್ವಯ ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗಿರುವ ಅಧಿಸೂಚನೆ, ಆದೇಶ, ಸುತ್ತೋಲೆಗಳ ಅನ್ವಯ ಸಂಬಂಧಿಸಿದವರಿಗೆ ಹಿಂಬರಹ ನೀಡಬೇಕು ಎಂದು ಕಂದಾಯ ಇಲಾಖೆಯು ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿರುವುದನ್ನು ಸ್ಮರಿಸಬಹುದು.

ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ತಲುಪಿಲ್ಲ ಬರ ಪರಿಹಾರ

 

ಮೊದಲ ಹಂತದ ಇನ್‌ಪುಟ್‌ ಸಬ್ಸಿಡಿ ಪೈಕಿ 33.58 ಲಕ್ಷ ರೈತರಿಗೆ 636.45 ಕೋಟಿ ರು. ಪರಿಹಾರ ಮೊತ್ತ ಪಾವತಿಸಿದೆ. ಆದರೆ ಇದೇ ಮೊದಲ ಹಂತದಲ್ಲಿ ಪೂರ್ಣ ಮೊತ್ತವನ್ನು ಪಡೆದ ರೈತರ ಸಂಖ್ಯೆ ಕೇವಲ 4.36 ಲಕ್ಷ ಮಾತ್ರ. ಪೂರ್ಣ ಮೊತ್ತದ ಪರಿಹಾರ 29.22 ಲಕ್ಷ ರೈತರಿಗೆ ದೊರೆಯಬೇಕಿತ್ತು.

‘ನಿಮ್ಮ ಸರ್ಕಾರಕ್ಕಂತೂ ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ’; ‘ದಿ ಫೈಲ್‌’ ವರದಿ ಬೆನ್ನಲ್ಲೇ ಅಶೋಕ್‌ ಟೀಕೆ

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಸಚಿವಾಲಯವು 2024ರ ಮೇ 9ರಂದು ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಈ ದತ್ತಾಂಶಗಳನ್ನು ಮಂಡಿಸಲಾಗಿತ್ತು.  ಈ ದತ್ತಾಂಶಗಳ ಪ್ರಕಾರ ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ 3,52,205 ರೈತರಿಗೆ 65.47 ಕೋಟಿ ರು ಪಾವತಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 70,587 ರೈತರಿಗೆ ಮಾತ್ರ 12.01 ಕೋಟಿ ರು.ನ ಪೂರ್ಣ ಮೊತ್ತ ಪಾವತಿಸಿದೆ. ಇನ್ನೂ 2.81 ಲಕ್ಷ ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ದತ್ತಾಂಶಗಳಿಂದ ಕಂಡುಬಂದಿದೆ.

the fil favicon

SUPPORT THE FILE

Latest News

Related Posts