ಪುಸ್ತಕಗಳ ಖರೀದಿಯಲ್ಲಿ ಉಲ್ಲಂಘನೆ; ಮೌನ ಮುರಿಯದ ಕುಲಪತಿ, ಸರ್ಕಾರದ ಮೆಟ್ಟಿಲೇರಿದ ಕುಲಸಚಿವರು

ಬೆಂಗಳೂರು; ಕೆಟಿಪಿಪಿ ನಿಯಮಗಳನ್ನು ಪಾಲಿಸದೇ ಮೌಖಿಕ ಸೂಚನೆ ಮೇರೆಗೆ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸಿರುವ ಪ್ರಕರಣದ ಕುರಿತು ಕುಲಸಚಿವರು ಮತ್ತು ಕುಲಪತಿಗಳ ವಿಶೇಷಾಧಿಕಾರಿ ಮಧ್ಯೆ ಜಟಾಪಟಿ ನಡೆಯುತ್ತಿದ್ದರೂ ವಿಶ್ವವಿದ್ಯಾಲಯದ ಕುಲಪತಿಗಳು ಈವರೆವಿಗೂ ಮೌನ ಮುರಿದಿಲ್ಲ.

 

ಈ ಪ್ರಕರಣ ಕುರಿತಂತೆ ಕುಲಸಚಿವರು ಹಲವು ಬಾರಿ ಖುದ್ದು ಭೇಟಿ ಮಾಡಿ ನೆನಪಿಸಿದ್ದರೂ ಸಹ ಕುಲಪತಿಗಳು ಈ ಸಂಬಂಧ ಯಾವುದೇ ಮಾರ್ಗದರ್ಶನ ಮಾಡಿಲ್ಲ. ಹೀಗಾಗಿ ಕುಲಸಚಿವರು ಸರ್ಕಾರದ ಮೆಟ್ಟಿಲೇರಿದ್ದಾರೆ.

 

ಈ ಪ್ರಕರಣವು ಸರ್ಕಾರದ ಗಮನಕ್ಕೆ ಬಂದಿದ್ದರೂ ಸಹ ಕುಲಪತಿಯವರಿಂದ ವರದಿ ಪಡೆಯಲು ಇದುವರೆಗೂ ಯಾವುದೇ ನಿರ್ದೇಶನ ನೀಡಿಲ್ಲ. ಈ ಸಂಬಂಧ ಕುಲಸಚಿವರು ಬರೆದಿರುವ ಪತ್ರ ಮತ್ತಿತರೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಕುಲಪತಿಗಳಿಗೆ ಹಲವಾರು ಬಾರಿ ಖುದ್ದಾಗಿ ಭೇಟಿಯಾಗಿ ನೆನಪಿಸಿದ್ದಾಗ್ಯೂ ಯಾವುದೇ ಮಾರ್ಗದರ್ಶನ ನೀಡದೇ ಇರುವುದರಿಂದ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ,’ ಎಂದು ಕುಲಸಚಿವರಾದ ಅನುರಾಧ ವಸ್ತ್ರದ ಅವರು ಸರ್ಕಾರಕ್ಕೆ ವಿವರವಾಗಿ ಪತ್ರ ಬರೆದಿದ್ದಾರೆ.

 

ಕುಲಸಚಿವರು ಬರೆದಿರುವ ಪತ್ರದ ಕುರಿತು ಕಾನೂನು ಇಲಾಖೆಯು ತನ್ನ ಹಂತದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾರಂಭಿಸಿದೆ. ಕುಲಸಚಿವರು ನೀಡಿರುವ ದೂರರ್ಜಿ ಕುರಿತಂತೆ ವಿಶೇಷಾಧಿಕಾರಿಯಿಂದ ಸ್ಪಷ್ಟೀಕರಣ ಕೋರಬಹುದೇ ಅಥವಾ ಮುಂದಿನ ಆದೇಶ ಕೋರಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವರಿಗೆ ಕಡತ ಮಂಡಿಸಬಹುದೇ ಎಂದು ಪತ್ರ ವ್ಯವಹಾರ ನಡೆದಿರುವುದು ಗೊತ್ತಾಗಿದೆ.

 

ಕರ್ನಾಟಕ ರಾಜ್ಯ ಕಾನೂನು ವಿವಿ ಅಧಿನಿಯಮ 2009ರ ಕಲಂ 8ರ ಪ್ರಕಾರ ಕುಲಪತಿಯವರು ಈ ವಿಷಯದ ಬಗ್ಗೆ ಪರಿವೀಕ್ಷಣೆ ಮಾಡಿಸಲು ಅಧಿಕಾರ ಹೊಂದಿದ್ದಾರೆ. ಆದ್ದರಿಂದ ಈ ವಿಷಯದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಂಡು ಸರ್ಕಾರಕ್ಕೆ ವರದಿ ನೀಡುವಂತೆ ಕುಲಪತಿಯವರನ್ನು ಕೋರಬಹುದು ಎಂಬ ಅಭಿಪ್ರಾಯಗಳೂ ಇಲಾಖೆಯಲ್ಲಿ ವ್ಯಕ್ತವಾಗಿವೆ.

 

ಕಲಂ 8ರಲ್ಲೇನಿದೆ?

 

ಶಿಸ್ತು, ಪರಿವೀಕ್ಷಣೆ ಮತ್ತು ನಿಯಂತ್ರಣ ಅಧಿಕಾರವು ಕುಲಪತಿಯವರಿಗೆ. ಕುಲಾಧಿಪತಿಯವರು ತಾನಾಗಿಯೇ ಅಥವಾ ರಾಜ್ಯ ಸರ್ಕಾರದ ಶಿಫಾರಸ್ಸುಗಳ ಮೇಲೆ ತಾನು ನಿರ್ದೇಶಿಸಬಹುದಾದಂತೆ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳಿರುವ ಒಂದು ವಿಚಾರಣಾ ಆಯೋಗದಿಂದ, ವಿಶ್ವವಿದ್ಯಾಲಯದ ಅದರ ಕಟ್ಟಡಗಳ ಪ್ರಯೋಗ ಶಾಲೆಗಳ, ಗ್ರಂಥಾಲಯಗಳ, ವಸ್ತು ಸಂಗ್ರಹಾಲಯಗಳ, ಕಾರ್ಯಾಗಾರಗಳ ಮತ್ತು ಸಾಧನ ಸಾಮಗ್ರಿಗಳ ಹಾಗೂ ವಿಶ್ವವಿದ್ಯಾಲಯವು ನಿರ್ವಹಿಸುವ, ಆಡಳಿತ ನಡೆಸುವ, ಮನ್ನಣೆ ಕೊಟ್ಟಿರುವ ಅಥವಾ ಅನುಮೋದಿಸಿರುವ ಯಾವುದೇ ಸಂಸ್ಥೆ ಮತ್ತು ವಿಶ್ವವಿದ್ಯಾಲಯವು ನಡೆಸಿದ ಅಥವಾ ನಿರ್ವಹಿಸಿದ ಪರೀಕ್ಷೆಗಳ, ಬೋಧನೆಗಳ ಮತ್ತು ಇತರೆ ಕೆಲಸಗಳ ಪರಿವೀಕ್ಷಣೆ ಮಾಡಿಸಬಹುದು.

 

ಹಾಗೆಯೇ ವಿಶ್ವವಿದ್ಯಾಲಯದ ಯಾವೊಬ್ಬ ನೌಕರನ ವಿರುದ್ಧ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪೂರಕವಾಗಿ ಮಾಡಲಾದ ಯಾವುದೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪೂರಕವಾಗಿ ಮಾಡಲಾದ ಯಾವುದೇ ನಿರ್ದಿಷ್ಟ ಆಪಾದನೆಗಳ ಬಗ್ಗೆ ಅದೇ ರೀತಿ ಪರಿವೀಕ್ಷಣೆ ಮಾಡಿಸಬಹುದು.

 

ಆಯೋಗವು ಪರಿವೀಕ್ಷಣೆಯ ಅಥವಾ ವಿಚಾರಣೆಯ ಫಲಿತಾಂಶದ ವರದಿಯನ್ನು ಕುಲಾಧಿಪತಿಗೆ ಸಲ್ಲಿಸಬೇಕಕು. ಪರಿವೀಕ್ಷಣೆ ವರದಿ ಸ್ವೀಕರಿಸಿದ ನಂತರ ಕುಲಾಧಿಪತಿಯು ಅದರ ಮೇಲೆ ತನ್ನ ತೀರ್ಮಾನಗಳನ್ನು ದಾಖಲಿಸಬಹುದು. ಈ ರೀತಿ ಕ್ರಮವಹಿಸಲು ಕುಲಾಧಿಪತಿಯವರಿಗೆ ಅಧಿಕಾರವಿದೆ. ಅವರ ಹಂತದಲ್ಲಿಯೇ ಪರಿಶೀಲಿಸಿ, ಶಿಸ್ತು ಕ್ರಮ ವಹಿಸಲು ಹಾಗೂ ಆಪಾದಿತರಿಂದ ಆರ್ಥಿಕ ನಷ್ಟ ಉಂಟಾಗಿದ್ದಲ್ಲಿ ಬಡ್ಡಿ ಸಮೇತ ವಸೂಲಿ ಮಾಡಿ ಜಮಾ ಮಾಡಲು ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬಹುದು ಎಂದು ಅಧಿನಿಯಮದಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆ, ನಿಯಮಗಳ ಪಾಲನೆಯಾಗಿಲ್ಲ ಮತ್ತು ದರಪಟ್ಟಿಗಳನ್ನೂ ಪಡೆದಿರಲಿಲ್ಲ. ಪುಸ್ತಕಗಳ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಾದೇಶವನ್ನೂ ಹೊರಡಿಸಿರಲಿಲ್ಲ.

 

ಈ ಕುರಿತು ಕುಲಸಚಿವರು ಕುಲಪತಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ನೇರವಾಗಿ ಸರ್ಕಾರದ ಮೆಟ್ಟಿಲು ಹತ್ತಿದ್ದರು. ಈ ಪ್ರಕರಣದ ಕುರಿತು ವಿಶ್ವವಿದ್ಯಾಲಯದ ಕುಲಸಚಿವರಾದ ಕೆಎಎಸ್‌ ಅಧಿಕಾರಿ ಅನುರಾಧ ವಸ್ತ್ರದ ಅವರು ಸರ್ಕಾರಕ್ಕೆ 2024ರ ಫೆ.9ರಂದು ಪತ್ರ ಬರೆದಿದ್ದರು.

 

ನಿಯಮ ಮತ್ತು ಕಾಯ್ದೆ ಉಲ್ಲಂಘಿಸಿ ಪುಸ್ತಕಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ವಿವಿ ಕುಲಸಚಿವರಿಗೇ ಕುಲಪತಿಗಳ ವಿಶೇಷಾಧಿಕಾರಿಯು ಬೆದರಿಕೆ ಹಾಕಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.

 

ಪುಸ್ತಕಗಳ ಖರೀದಿಯಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂಬುದನ್ನು ಪತ್ತೆ ಹಚ್ಚಿದ್ದ ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯು ನೇರವಾಗಿ ಸಂಘರ್ಷಕ್ಕಿಳಿದಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts