ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು 2023-24ನೇ ಸಾಲಿನ ಆರ್ಥಿಕ ವರ್ಷ ಅಂತ್ಯಕ್ಕೆ ಒಟ್ಟು ಅನುದಾನದ ಪೈಕಿ 17,333.17 ಕೋಟಿ ರು.ಗಳನ್ನು ಬಿಡುಗಡೆಯನ್ನೇ ಮಾಡಿಲ್ಲ. ಅದೇ ರೀತಿ ಬಿಡುಗಡೆ ಮಾಡಿದ್ದ ಅನುದಾನದಲ್ಲಿ 6,902.14 ಕೋಟಿ ರು.ಗಳನ್ನು ಖರ್ಚು ಮಾಡಿಲ್ಲ. ಬಿಡುಗಡೆ ಮತ್ತು ವೆಚ್ಚ ಮಾಡಲು ಇನ್ನೂ 24,235.31 ಕೋಟಿ ರು. ಬಾಕಿ ಇರಿಸಿಕೊಂಡಿದೆ.
2023-24ನೇ ಸಾಲಿಗೆ ಸಂಬಂಧಿಸಿದಂತೆ ಲಭ್ಯವಿದ್ದ ಅನುದಾನ, ಬಿಡುಗಡೆ ಮತ್ತು 2024ರ ಮಾರ್ಚ್ ಅಂತ್ಯಕ್ಕೆ ವೆಚ್ಚ ಮಾಡಿರುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಭೆಯಲ್ಲಿ 45 ಆಡಳಿತ ಇಲಾಖೆಗಳ ಖರ್ಚು-ವೆಚ್ಚದ ಪರಾಮರ್ಶಿಸಿದೆ.
ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಗೆ ಇಲಾಖೆಗಳ ಮುಖ್ಯಸ್ಥರು ನೀಡಿರುವ ಅಂಕಿ ಅಂಶಗಳ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಒಟ್ಟು ಅನುದಾನಕ್ಕೆ ಶೇ.91.75ರಷ್ಟು ವೆಚ್ಚ ಮಾಡಿದೆ ಎಂದು ಇಲಾಖೆ ಮುಖ್ಯಸ್ಥರು ಅಂಕಿ ಅಂಶಗಳನ್ನು ನೀಡಿದ್ದಾರಾದರೂ ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮತ್ತು ವೆಚ್ಚಕ್ಕೆ 24,235.31 ಕೋಟಿ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.
2023-24ನೇ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟಾರೆ 2,93,742.75 ಕೋಟಿ ರು ಅನುದಾನ ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ ಮಾರ್ಚ್ ಅಂತ್ಯಕ್ಕೆ 2,76,409.58 ಕೋಟಿ ರು ಬಿಡುಗಡೆಯಾಗಿದೆ. ಈ ಅಂಕಿ ಅಂಶದ ಪ್ರಕಾರ ಮಾರ್ಚ್ ಅಂತ್ಯಕ್ಕೆ 17,333.17 ಕೋಟಿ ರು ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಬಿಡುಗಡೆಯಾಗಿದ್ದ 2,76,409.58 ಕೋಟಿ ರುನಲ್ಲಿ ಮಾರ್ಚ್ ಅಂತ್ಯಕ್ಕೆ 2,69,504.44 ಕೋಟಿ ರು.. ಖರ್ಚಾಗಿದೆ. ಇದರ ಪ್ರಕಾರ ಮಾರ್ಚ್ ಅಂತ್ಯಕ್ಕೆ ಇನ್ನೂ 6,902.14 ಕೋಟಿ ರು. ಖರ್ಚಾಗಿಲ್ಲ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಮತ್ತು ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಒಟ್ಟಾರೆ 24,235.31 ಕೋಟಿ ರು.ಗಳಷ್ಟಿದೆ ಎಂದು ತಿಳಿದು ಬಂದಿದೆ.
ಫೆಬ್ರುವರಿ ಅಂತ್ಯಕ್ಕೆ 2,17,267.79 ಕೋಟಿ ರು. ವೆಚ್ಚ ಮಾಡಿದ್ದರೇ ಮಾರ್ಚ್ ಅಂತ್ಯಕ್ಕೆ 2ಮ69,504.44 ಕೋಟಿ ರು.ಖರ್ಚಾಗಿದೆ. ಅಂದರೆ ಒಂದೇ ತಿಂಗಳಲ್ಲಿ 52,236.65 ಕೋಟಿಯಷ್ಟು ವೆಚ್ಚ ಮಾಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಫೆಬ್ರುವರಿ ತಿಂಗಳವರೆಗೆ ವೆಚ್ಚದ ಹಾದಿಯು ಮಧ್ಯಮ ವೇಗದಲ್ಲಿತ್ತು. ಮಾರ್ಚ್ ತಿಂಗಳಲ್ಲಿ ವೆಚ್ಚಕ್ಕೆ ವೇಗೋತ್ಕರ್ಷ ದೊರೆತಂತಾಗಿದೆ. ಫೆಬ್ರುವರಿ ತಿಂಗಳಿನಿಂದ ಮಾರ್ಚ್ ಅಂತ್ಯದವರೆಗೆ 45 ಆಡಳಿತ ಇಲಾಖೆಗಳ ಒಟ್ಟಾರೆ ವೆಚ್ಚವು ಶೇ.24.04ಕ್ಕೇರಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಇಲಾಖಾವಾರು ವೆಚ್ಚ
ಯೋಜನೆ ಇಲಾಖೆಗೆ ಒಟ್ಟು 6,682.10 ಕೋಟಿ ರು. ಅನುದಾನದ ಪೈಕಿ 3,810.36 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ ಅನುದಾನದ ಪೈಕಿ ಮಾರ್ಚ್ ಅಂತ್ಯಕ್ಕೆ 2,488.12 ಕೋಟಿ ರು. ವೆಚಚವಾಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ.37.24ರಷ್ಟು ಮಾತ್ರ ವೆಚ್ಚ ಮಾಡಿದಂತಾಗಿದೆ.
ವಸತಿ ಇಲಾಖೆಗೆ ಒಟ್ಟಾರೆ 4,849.25 ಕೋಟಿ ರು. ಅನುದಾನದ ಪೈಕಿ 2,323.67 ಕೋಟಿ ರು. ಬಿಡುಗಡೆ ಮಾಡಿತ್ತು. ಬಿಡುಗಡೆಗೆ 2,525.58 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಹೀಗಿದ್ದರೂ ಮಾರ್ಚ್ ಅಂತ್ಯಕ್ಕೆ 3,513.95 ಕೋಟಿ ರು ವೆಚ್ಚ ಮಾಡಿದೆ. ಅಂದರೆ ಬಿಡುಗಡೆ ಮಾಡಿದ್ದ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ 1,1190.28 ಕೋಟಿ ರು. ಖರ್ಚು ಮಾಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಆರೋಗ್ಯ ಇಲಾಖೆಗೆ 11,256.32 ಕೋಟಿ ರು. ಅನುದಾನದ ಪೈಕಿ 9,099.88 ಕೋಟಿ ರು. ಬಿಡುಗಡೆ ಮಾಡಿತ್ತು. ಈ ಪೈಕಿ ಮಾರ್ಚ್ ಅಂತ್ಯಕ್ಕೆ 9,063.65 ಕೋಟಿಯಷ್ಟು ವೆಚ್ಚ ಮಾಡಿದೆ. ಇದು ಒಟ್ಟು ಅನುದಾನಕ್ಕೆ ಶೇ.80.29ರಷ್ಟಿದೆ.
ನಗರಾಭಿವೃದ್ಧಿ ಇಲಾಖೆಗೆ 22,227.24 ಕೋಟಿ ರು ಅನುದಾನದಲ್ಲಿ ಮಾರ್ಚ್ ಅಂತ್ಯಕ್ಕೆ 15,369.06 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆಗೆ 6,858.18 ಕೋಟಿ ರು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ 15,369.06 ಕೋಟಿ ರು. ನಲ್ಲಿ ಮಾರ್ಚ್ ಅಂತ್ಯಕ್ಕೆ 16,499.74 ಕೋಟಿ ರು ಖರ್ಚಾಗಿದೆ. ಬಿಡುಗಡೆ ಮತ್ತು ವೆಚ್ಚಕ್ಕೆ ಹೋಲಿಸಿದರೆ 1,128.68 ಕೋಟಿ ರು. ಹೆಚ್ಚುವರಿಯಾಗಿ ವೆಚ್ಚ ಮಾಡಿದೆ.
ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 18,156.61 ಕೋಟಿ ರು ಅನುದಾನದಲ್ಲಿ 15,913.00 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 2,243.61 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ 15,913.00 ಕೋಟಿ ರು ನಲ್ಲಿ ಮಾರ್ಚ್ ಅಂತ್ಯಕ್ಕೆ 14,577.57 ಕೋಟಿ ರು ಖರ್ಚು ಮಾಡಿ 1,335.43 ಕೋಟಿ ರು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ.
ಅಲ್ಪಸಂಖ್ಯಾತರಿಗೆ ಅನುದಾನ; 2,101.20 ಕೋಟಿ ರು.ನಲ್ಲಿ ಬಿಡುಗಡೆ ಮಾಡಿದ್ದು ಕೇವಲ 421.60 ಕೋಟಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2,025.70 ಕೋಟಿ ರು ಅನುದಾನ ಪೈಕಿ 1,930.11 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ ಮಾರ್ಚ್ ಅಂತ್ಯಕ್ಕೆ 1,865.37 ಕೋಟಿ ರು. ವೆಚ್ಚ ಮಾಡಿದೆ.