ಇವಿಎಂ, ವಿವಿ ಪ್ಯಾಟ್‌ ತಯಾರಕರು, ಪೂರೈಕೆದಾರರ ವಿವರ; ವಾಣಿಜ್ಯ ರಹಸ್ಯವೆಂದು ಮಾಹಿತಿ ನಿರಾಕರಣೆ

ಬೆಂಗಳೂರು; ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ಮತದಾನ ದೃಢೀಕರಣ ರಸೀತಿ ಯಂತ್ರಗಳ (ವಿವಿ-ಪ್ಯಾಟ್‌) ವಿವಿಧ ಘಟಕಗಳ ತಯಾರಕರು, ಪೂರೈಕೆದಾರರ ಹೆಸರುಗಳು ಮತ್ತು ಸಂಪರ್ಕ ವಿವರಗಳನ್ನು ಬಹಿರಂಗಪಡಿಸಲು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಿರಾಕರಿಸಿವೆ.

 

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ಮತದಾನ ದೃಢೀಕರಣ ರಸೀತಿ ಯಂತ್ರಗಳ (ವಿವಿ-ಪ್ಯಾಟ್‌_ ವಿಶ್ವಾಸರ್ಹತೆ ವಿಚಾರವಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದ ಕೇಂದ್ರ ಚುನಾವಣೆ ಆಯೋಗ ನಡೆ ಬಗ್ಗೆ ಕೇಂದ್ರ ಮಾಹಿತಿ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಇಎಲ್‌ ಮತ್ತು ಇಸಿಐಎಲ್‌ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಜೋಡಣೆಯಲ್ಲಿ ಬಳಸುವ ವಿವಿಧ ಘಟಕಗಳ ತಯಾರಕರು ಮತ್ತು ಪೂರೈಕೆದಾರರ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಇಸಿಐಎಲ್‌ ಮತ್ತು ಬಿಇಎಲ್‌ಗೆ ಪ್ರತ್ಯೇಕವಾಗಿ ಒಂದೇ ರೀತಿಯ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದ್ದರು.

 

ಈ ಅರ್ಜಿಗೆ ಉತ್ತರಿಸಿರುವ ಬಿಇಎಲ್‌, ವಾಣಿಜ್ಯ-ವ್ಯಾಪಾರ ರಹಸ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು ಹಾಗೂ ಮಾಹಿತಿ ಬಹಿರಂಗಪಡಿಸುವಿಕೆಯಿಂದ ಮೂರನೇ ವ್ಯಕ್ತಿಯ ಸ್ಪರ್ಧಾತ್ಮಕ ಸ್ಥಾನಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬ ಕಾರಣವನ್ನು ನೀಡಿದೆ.

 

ವೆಂಕಟೇಶ್‌ ನಾಯಕ್‌ ಅವರು  ಸಲ್ಲಿಸಿರುವ ಅರ್ಜಿ ಮತ್ತು ಬಿಇಎಲ್‌, ಇಸಿಐಎಲ್‌ ನೀಡಿರುವ ಮಾಹಿತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

‘ಕೋರಿರುವ ಮಾಹಿತಿಯು ವಾಣಿಜ್ಯ ರಹಸ್ಯಕ್ಕೆ ಸಂಬಂಧಿಸಿದೆ. ಆದ್ದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಡಿ) ಅಡಿಯಲ್ಲಿ ವಿವರಗಳನ್ನು ಒದಗಿಸಲಾಗುವುದಿಲ್ಲ,’ ಎಂದು ಬಿಇಎಲ್‌ ಉತ್ತರಿಸಿರುವುದು ಗೊತ್ತಾಗಿದೆ.

 

ಬಿಇಎಲ್‌ ನೀಡಿದ್ದ ಉತ್ತರವನ್ನೇ ಇಸಿಐಎಲ್‌ ಕೂಡ ನೀಡಿದೆ. ಕೋರಿರುವ ಮಾಹಿತಿ, ವಿವರಗಳು ಇಸಿಐಎಲ್‌ನಿಂದ ತಯಾರಿಸಿದ ಉತ್ಪನ್ನಕ್ಕೆ ಸಂಬಂಧಿಸಿದೆ. ಮತ್ತು ಇದು ಮೂರನೇ ವ್ಯಕ್ತಿಗೆ ಸಂಬಂಧಿಸಿದೆ. ಈ ವಿರಗಳನ್ನು ಬಹಿರಂಗಪಡಿಸುವುದು ಇಸಿಐಎಲ್‌ನ ಸ್ಪರ್ಧಾತ್ಮಕ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರ್‍‌ಟಿಐ ಕಾಯ್ದೆ 2005ರ ಸೆಕ್ಷನ್‌  8(1)ಡಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ, ‘ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ ಖರೀದಿ ಆದೇಶಗಳ ಬಹಿರಂಗಪಡಿಸುವಿಕೆಯು ಘಟಕಗಳ ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸುತ್ತದೆ ಮತ್ತು ಇದು ಅಪಾಯವನ್ನುಂಟುಮಾಡುತ್ತದೆ ಎಂದೂ ಇಸಿಐಎಲ್‌ ಹೇಳಿದೆ. ಇಸಿಐಎಲ್‌ ಉತ್ಪಾದಿಸಿದ ಯಂತ್ರಗಳು ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ಅದರ ಉತ್ತರದ ಸಹಿ ಮಾಡಿದ ಪ್ರತಿಯನ್ನೂ ಸಹ ಅಪ್‌ಲೋಡ್ ಮಾಡಿಲ್ಲ.

 

ಹಾಗೆಯೇ ಮಾಹಿತಿಯು ಇವಿಎಂ ಘಟಕಗಳ ವಿನ್ಯಾಸದ ವಿವರಗಳನ್ನು ನೀಡುತ್ತದೆ. ಇದು ಉತ್ಪಾದಿಸಿದ ಯಂತ್ರಗಳಿಗೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಮಾಹಿತಿಯು ಯು/ಎಸ್ 7(9) ಮತ್ತು ಸೆಕ್ಷನ್ 8(1)(ಡಿ) ಅಡಿಯಲ್ಲಿ ವಿನಾಯಿತಿ ಇದೆ ಎಂದು ಇಸಿಐಎಲ್‌ ಹೇಳಿದೆ.

 

ಇವಿಎಂಗಳ ಕುರಿತಾಗಿ ಹಲವು ವರ್ಷಗಳಿಂದಲೂ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಲೇ ಬಂದಿವೆ. ಆದರೆ ನಿರ್ದಿಷ್ಟ ಮತ್ತು ಸ್ಪಷ್ಟವಾಗಿ ಮಾಹಿತಿ ಒದಗಿಸಬೇಕಿದ್ದ ಸಕ್ಷಮ ಪ್ರಾಧಿಕಾರಗಳು ಮಾಹಿತಿಯನ್ನು ನಿರಾಕರಿಸುತ್ತಲೇ ಬಂದಿವೆ.

 

ಹಿಂದೊಮ್ಮೆ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು. ಮತದಾನದ ವೇಳೆ ಇವಿಎಂಗಳನ್ನು ಕುಲಗೆಡಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಆ ಇವಿಎಂಗಳು ನಮ್ಮ ಸಂಸ್ಥೆ ಉತ್ಪನ್ನಗಳಲ್ಲ. ಬಳಕೆ ವೇಳೆ ಸಣ್ಣಪುಟ್ಟ ದೋಷಗಳು ಎದುರಾಗಬಹುದು. ಆದರೆ ಯಾವುದೇ ಕಾರಣಕ್ಕೂ ಟ್ಯಾಂಪರ್‌ ಅಥವಾ ಹ್ಯಾಕ್‌ ಮಾಡಲು ಸಾಧ್ಯವಿಲ್ಲ,’ ಎಂಧು  ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಗೌತಮ್‌ ಸ್ಪಷ್ಟನೆ ನೀಡಿದ್ದರು.

 

‘ಬಿಇಎಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಇಸಿಐಎಲ್‌) ಸಂಸ್ಥೆಗಳು ತಯಾರು ಮಾಡುತ್ತವೆ. ಈ ಎರಡೂ ಸಂಸ್ಥೆಗಳು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದು, ವಿಶ್ವಾಸಾರ್ಹ ಸಂಸ್ಥೆಗಳಾಗಿವೆ. ತಜ್ಞರು ಹಲವು ಪರೀಕ್ಷೆಗಳನ್ನು ನಡೆಸಿದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ,’ ಎಂದು ಪ್ರತಿಕ್ರಿಯಿಸಿದ್ದರು.

 

ಅಲ್ಲದೇ ಬೇರೆ ಬೇರೆ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಪ್ರಯೋಗಗಳನ್ನು ಸಹ ನಡೆಸಿ, ಮಾರುಕಟ್ಟೆಗೆ ಬಿಡುತ್ತೇವೆ. ಬಳಸುವ ಮುನ್ನ ಹಲವು ಬಾರಿ ಜನಪ್ರತಿನಿಧಿಗಳು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಇವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನೆ ಮಾಡುವಾಗ ಹಾನಿಯುಂಟಾಗಬಹುದು. ಆದರೆ ಹದಗೆಡಿಸಲು ಅಸಾಧ್ಯ,” ಎಂದಿದ್ದರು.

 

ವಿವಿ ಪ್ಯಾಟ್‌ ಯಂತ್ರಗಳು ಬಂದ ಮೇಲೆ ಮತದಾನದ ವ್ಯವಸ್ಥೆ ಮತ್ತಷ್ಟು ಪಾರದರ್ಶಕವಾಗಿದೆ. ಮತದಾನದ ವಿವರಗಳು ಕರಾರುವಾಕ್ಕಾಗಿ ತೋರಿಸುತ್ತದೆ ಹಾಗೂ ವಿವರಗಳ ಮುದ್ರಣ ಸಹ ಹೊರಬರುತ್ತದೆ. ಆದರೆ ರಾಜಕೀಯ ಪಕ್ಷಗಳು ತಮ್ಮ ಸೋಲಿಗೆ ಮತಯಂತ್ರಗಳೇ ಕಾರಣ ಎಂದು ಆರೋಪಿಸಿದ್ದವು. ಯಂತ್ರಗಳನ್ನು ಟ್ಯಾಂಪರ್‌ ಮಾಡುವಂತೆ ಪಂಥಾಹ್ವಾನ ನೀಡಿದಾಗ ಕೇವಲ ಎರಡು ರಾಜಕೀಯ ಪಕ್ಷಗಳು ಮಾತ್ರ ಪರಿಶೀಲನೆ ನಡೆಸಿದ್ದವು. ಆದರೆ ಅವರಿಂದ ಟ್ಯಾಂಪರ್‌ ಮಾಡಲು ಸಾಧ್ಯವಾಗಲಿಲ್ಲ,” ಎಂದು ಗೌತಮ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts