ಕೇಂದ್ರ ಪುರಸ್ಕೃತ; ವರ್ಷ ಕಳೆದರೂ ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಿಡಿಗಾಸೂ ಇಲ್ಲ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸಿರುವ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು 2024ರ ಮಾರ್ಚ್‌ ಅಂತ್ಯದವರೆಗೂ  ತನ್ನ ಪಾಲಿನ ಅನುದಾನದಲ್ಲಿ ಬಿಡಿಗಾಸನ್ನೂ ಬಿಚ್ಚಿಲ್ಲ.

 

ಅಲ್ಲದೇ ಹಿಂದುಳಿದ ವರ್ಗ ಕಲ್ಯಾಣ, ನಗರಾವೃದ್ಧಿ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಲಭ್ಯವಾಗಿರಿಸಿಕೊಂಡಿದ್ದ ಅನುದಾನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ. 2024ರ ಮಾರ್ಚ್‌ ಅಂತ್ಯದವ ರೆಗೂ ರಾಜ್ಯ ಮತ್ತು ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದ ಕಾರಣ, ಹಲವು ಯೋಜನೆಗಳು ಫಲಾನುಭವಿಗಳಿಗೆ ಲಭ್ಯವಿಲ್ಲದಂತಾಗಿದೆ.

 

ಬರ ಪರಿಹಾರ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರೋಪಿಸಿ ನಿರಂತರವಾಗಿ ಪ್ರತಿಭಟನೆ  ನಡೆಸುತ್ತಿರುವ ನಡುವೆಯೇ ಕೇಂದ್ರ ಪುರಸ್ಕೃತ ಯೋಜನೆಯ ಅನುದಾನ ಬಿಡುಗಡೆ ಸಂಬಂಧದ ದಾಖಲೆಗಳು ಮುನ್ನೆಲೆಗೆ ಬಂದಿವೆ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಏಪ್ರಿಲ್‌ನ 22ರಿಂದ 25ರವರೆಗೆ ನಡೆಸಲಿರುವ ಸಭೆಯಲ್ಲಿ ಇಲಾಖಾಧಿಕಾರಿಗಳು ಅನುದಾನದ ಸಮಗ್ರ ಚಿತ್ರಣವನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು 24,487.99 ಕೋಟಿ ರು. ಅನುದಾನ ಲಭ್ಯವಾಗಿರಿಸಿಕೊಂಡಿದೆ. ಕೇಂದ್ರ ಸರ್ಕಾರವು 22,368.85 ಕೋಟಿ ರು. ಅನುದಾನ ಲಭ್ಯವಾಗಿರಿಸಿಕೊಂಡಿದೆ. ಒಟ್ಟಾರೆ 55,632.64 ಕೋಟಿ ರು. ಅನುದಾನ ಲಭ್ಯವಿದೆ.

 

ಇದರಲ್ಲಿ ರಾಜ್ಯ ಸರ್ಕಾರವು 24,487.99 ಕೋಟಿ ರು. ನಲ್ಲಿ ಮಾರ್ಚ್‌ ಅಂತ್ಯಕ್ಕೆ 26,160.84 ಕೋಟಿ ರು ಬಿಡುಗಡೆ ಮಾಡಿದೆ. ಒಟ್ಟು ಲಭ್ಯವಿದ್ದ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ 1,672.85 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.

 

ಕೇಂದ್ರ ಸರ್ಕಾರವು ತನ್ನ ಪಾಲಿನ 22,368.84 ಕೋಟಿ ರು ನಲ್ಲಿ ಮಾರ್ಚ್‌ ಅಂತ್ಯಕ್ಕೆ 21,357.79 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 1,011.06 ಕೋಟಿ ರು ಬಾಕಿ ಇರಿಸಿಕೊಂಡಿದೆ. ಒಟ್ಟಾರೆ 47,518.63 ಕೋಟಿ ರುನಲ್ಲಿ 45,598.48 ಕೋಟಿ ರು ಖರ್ಚು ಮಾಡಿದೆ. ವೆಚ್ಚಕ್ಕೆ 1,920.15 ಕೋಟಿ ರು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.

 

ಜಲಸಂಪನ್ಮೂಲ ಇಲಾಖೆಗೆ ರಾಜ್ಯ ಸರ್ಕಾರವು 200.49 ಕೋಟಿ ರು, ಕೇಂದ್ರ ಸರ್ಕಾರವು 362.48 ಕೋಟಿ ಸೇರಿ ಒಟ್ಟಾರೆ 562.97 ಕೋಟಿ ಅನುದಾನವಿತ್ತು. ಮಾರ್ಚ್‌ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

 

ವೈದ್ಯಕೀಯ ಶಿಕ್ಷಣ ಇಲಾಖೆಗೆ ರಾಜ್ಯದ ಪಾಲು 27.80 ಕೋಟಿ ರು., ಕೇಂದ್ರದ ಪಾಲು 15.20 ಕೋಟಿ ರು. ಸೇರಿ 43.00 ಕೋಟಿ ರು ಅನುದಾನವಿದೆ. ಮಾರ್ಚ್‌ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸೂ ಬಿಚ್ಚಿಲ್ಲ.

 

ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ರಾಜ್ಯದ ಪಾಲು 196.01 ಕೋಟಿ ರು, ಕೇಂದ್ರದ ಪಾಲು 95.01 ಕೋಟಿ ರು ಸೇರಿ 291.02 ಕೋಟಿ ರು ಅನುದಾನವಿದೆ. ಇದರಲ್ಲಿ ರಾಜ್ಯವು ತನ್ನ ಪಾಲಿನ ಅನುದಾನದಲ್ಲಿ 113.37 ಕೋಟಿ ರು. ಬಿಡುಗಡೆ ಮಾಡಿದೆ. ಬಿಡುಗಡೆಗೆ 82.64 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

ವಿಶೇಷವೆಂದರೇ ಕೇಂದ್ರವು ತನ್ನ ಪಾಲಿನ 95.01 ಕೋಟಿ ರು. ಅನುದಾನ ಲಭ್ಯವಾಗಿರಿಸಿಕೊಂಡಿದ್ದರೂ 191.06 ಕೋಟಿ ರು ಬಿಡುಗಡೆ ಮಾಡಿತ್ತು. ಹೆಚ್ಚುವರಿಯಾಗಿ 96.05 ಕೋಟಿ ರು ಬಿಡುಗಡೆ ಮಾಡಿದೆ. ಒಟ್ಟಾರೆ 304.43 ಕೋಟಿ ರು ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

 

ಕೇಂದ್ರವು ಶೇ.201.09ರಷ್ಟು ಬಿಡುಗಡೆ ಮಾಡಿದೆ. ಆದರೆ ಮಾರ್ಚ್‌ ಅಂತ್ಯಕ್ಕೆ ಖರ್ಚಾಗಿದ್ದು ಕೇವಲ 11.17 ಕೋಟಿ ರು ಮಾತ್ರ. 293.26 ಕೋಟಿ ರು ವೆಚ್ಚವೇ ಆಗಿಲ್ಲ. ಇದು ಒಟ್ಟು ಅನುದಾನಕ್ಕೆ ಶೇ.3.84ರಷ್ಟು ಮಾತ್ರ ಪ್ರಗತಿ ಆಗಿದೆ.

 

ನಗರಾಭಿವೃದ್ದಿಗೆ ರಾಜ್ಯ ಸರ್ಕಾರವು 960.00 ಕೋಟಿ ರು. ಅನುದಾನ ಲಭ್ಯವಾಗಿರಿಸಿಕೊಂಡಿತ್ತು. ಮಾರ್ಚ್‌ ಅಂತ್ಯಕ್ಕೆ 297.50 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 662.5 ಕೋಟಿ ರು ಬಾಕಿ ಇರಿಸಿಕೊಂಡಿದೆ. ಕೇಂದ್ರವು 1,280.09 ಕೋಟಿ ರು ನಲ್ಲಿ 386.00 ಕೋಟಿ ರು ಬಿಡುಗಡೆ ಮಾಡಿ, ಇನ್ನೂ 894.09 ಕೋಟಿ ರು ಬಾಕಿ ಇರಿಸಿಕೊಂಡಿದೆ. ಒಟ್ಟಾರೆ 683.50 ಕೋಟಿ ರು.ನಲ್ಲಿ 1,008.03 ಕೋಟಿ ರು ವೆಚ್ಚವಾಗಿದೆ. ಅಂದರೆ ಬಿಡುಗಡೆಯಾಗಿದ್ದಕ್ಕಿಂತಲೂ 324.56 ಕೋಟಿ ರು ಹೆಚ್ಚುವರಿ ವೆಚ್ಚವಾಗಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರವು 83.00 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ ಮಾರ್ಚ್‌ ಅಂತ್ಯಕ್ಕೆ 15.56 ಕೋಟಿ ರೂ ಬಿಡುಗಡೆ ಮಾಡಿ ಇನ್ನೂ 67.44 ಕೋಟಿ ರು ಬಾಕಿ ಇರಿಸಿಕೊಂಡಿದೆ. ಕೇಂದ್ರ ಸರ್ಕಾರವು 100.00 ಕೋಟಿ ರು. ನಲ್ಲಿ 23.34 ಕೋಟಿ ರು ಬಿಡುಗಡೆ ಮಾಡಿ ಇನ್ನೂ 76.66 ಕೋಟಿ ರು ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ 38.90 ಕೋಟಿ ರು. ಖರ್ಚಾಗಿದೆ.

 

ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರವು ತನ್ನ ಪಾಲಿನ 90.49 ಕೋಟಿ ರು. ನಲ್ಲಿ 82.16 ಕೋಟಿ ರು. ಬಿಡುಗಡೆ ಮಾಡಿದೆ. ಬಿಡುಗಡೆಗೆ 8.33 ಕೋಟಿ ರು ಬಾಕಿ ಇರಿಸಿಕೊಂಡಿದೆ. ಕೇಂದ್ರವು 173.72 ಕೋಟಿ ರು ನಲ್ಲಿ 48.22 ಕೋಟಿ ರು. ಬಿಡುಗಡೆ ಮಾಡಿ, 125.5 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ 130.38 ಕೋಟಿ ರು ನಲ್ಲಿ 129.15 ಕೋಟಿ ರು ವೆಚ್ಚ ಮಾಡಿದೆ.

 

ಕಂದಾಯ ವಿಪತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ 5,900.50 ಕೋಟಿ ರು. ಒದಗಿಸಿಕೊಂಡಿತ್ತು. ಆದರೆ ಮಾರ್ಚ್‌ ಅಂತ್ಯಕ್ಕೆ 6,261.36 ಕೋಟಿ ರು ಬಿಡುಗಡೆ ಮಾಡಿಕೊಂಡಿತ್ತು. ಲಭ್ಯವಾಗಿದ್ದ ಅನುದಾನದ ಮೊತ್ತದಲ್ಲಿ ಹೆಚ್ಚುವರಿಯಾಗಿ 360.86 ಕೋಟಿ ರು ಬಿಡುಗಡೆಯಾಗಿತ್ತು.

 

ಕೇಂದ್ರ ಸರ್ಕಾರವು ತನ್ನ ಪಾಲಿನ 1,422.23 ಕೋಟಿ ರು.ನಲ್ಲಿ 902.67 ಕೋಟಿ ರು. ಬಿಡುಗಡೆ ಮಾಢಿತ್ತು. ಬಿಡುಗಡೆಗೆ ಇನ್ನೂ 519.56 ಕೋಟಿ ರು ಬಾಕಿ ಇರಿಸಿಕೊಂಡಿತ್ತು. ಒಟ್ಟಾರೆ 7,164.03 ಕೋಟಿ ರು. ನಲ್ಲಿ ಮಾರ್ಚ್‌ ಅಂತ್ಯಕ್ಕೆ 5,9546.06 ಕೋಟಿ ರು ಖರ್ಚು ಮಾಡಿ 1,207.97 ಕೋಟಿ ರು ಗಳನ್ನು ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

 

‘ಕೇಂದ್ರ ಸರ್ಕಾರದ ಮೊದಲ ಕಂತು ಎಲ್ಲಾ ಯೋಜನೆಗಳಲ್ಲಿ ಮುಂಗಡವಾಗಿ ಸಕಾಲಕ್ಕೆ ಬಿಡುಗಡೆ ಆಗುತ್ತದೆ. ಆದರೆ ರಾಜ್ಯ ಸರ್ಕಾರವು ನಿರ್ಧಾರಿತ ಪ್ರಗತಿ ಸಾಧಿಸದಿದ್ದರೇ ಮತ್ತು ಬಳಕೆ ಪ್ರಮಾಣ ಪತ್ರ ನೀಡದಿದ್ದರೇ ಮುಂದಿನ ಕಂತುಗಳು ಬಿಡುಗಡೆ ಆಗುವುದಿಲ್ಲ. ಮುಂದಿನ ವರ್ಷದ ಕಂತುಗಳೂ ಬಿಡುಗಡೆಯಾಗುವುದಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ತಪ್ಪೇ ಹೊರತು ಕೇಂದ್ರ ಸರ್ಕಾರದ ತಪ್ಪು ಇಲ್ಲ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

ಅಮೃತ್‌ ಮಿಷನ್‌, ತುಂಗಾ ಮೇಲ್ದಂಡೆ ಯೋಜನೆ, ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನದಲ್ಲಿ  ಬಿಡಿಗಾಸನ್ನೂ ಒದಗಿಸಿರಲಿಲ್ಲ.

 

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪೈಕಿ 7 ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು 2023-24ನೇ ಸಾಲಿನಲ್ಲಿ 1,221.49 ಕೋಟಿ ರು. ಅನುದಾನ ಒದಗಿಸಿಕೊಂಡಿತ್ತು. ಕೇಂದ್ರ ಸರ್ಕಾರವು ಇವೇ ಕಾರ್ಯಕ್ರಮಗಳಿಗೆ 1,917.48 ಕೋಟಿ ರು. ಅನುದಾನ ಮೀಸಲಿರಿಸಿತ್ತು. ಆದರೆ ಈ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಡಿಸೆಂಬರ್‌ ಅಂತ್ಯಕ್ಕೆ ನಯಾ ಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ.

ಕೇಂದ್ರ ಪುರಸ್ಕೃತ 7 ಕಾರ್ಯಕ್ರಮಗಳಿಗೆ ಬಿಡಿಗಾಸು ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರ

 

20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರವು 2023-24ನೇ ಸಾಲಿಗೆ 5,980.79 ಕೋಟಿ ರು. ಅನುದಾನ ಒದಗಿಸಿಕೊಂಡಿತ್ತು. ಇದರಲ್ಲಿ ಡಿಸೆಂಬರ್‌ ಅಂತ್ಯಕ್ಕೆ 1,566.76 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇನ್ನು 4,414.03 ಕೋಟಿ ರು.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿತ್ತು.

 

ಅದೇ ರೀತಿ ರಾಜ್ಯ ಸರ್ಕಾರವು ಇದೇ 20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2023-24ನೇ ಸಾಲಿಗೆ 9,511.38 ಕೋಟಿ ರು. ಅನುದಾನ ಒದಗಿಸಿತ್ತು. ಈ ಪೈಕಿ ಡಿಸೆಂಬರ್‌ ಅಂತ್ಯಕ್ಕೆ 7,064.03 ಕೋಟಿ ರು. ಬಿಡುಗಡೆ ಮಾಡಿದೆ. 2,447.35 ಕೋಟಿ ರು.ಗಳನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು.

 

ಶೂನ್ಯ ಬಿಡುಗಡೆ

 

ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿನ ಅಮೃತ್‌ ಮಿಷನ್‌ ಯೋಜನೆಗೆ ರಾಜ್ಯವು 320.00 ಕೋಟಿ ರು., ಕೇಂದ್ರವು 480.00 ಕೋಟಿ ರು., ಪ್ರಾಥಮಿಕ ಶಿಲ್ಕು 1,538.35 ಕೋಟಿ ರು ಸೇರಿ ಒಟ್ಟಾರೆ 2,338.05 ಕೋಟಿ ರು. ಒಟ್ಟು ಅನುದಾನವಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಡಿಸೆಂಬರ್‌ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿರಲಿಲ್ಲ.

 

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರಾಜ್ಯವು 316.00 ಕೋಟಿ ರು., ಕೇಂದ್ರವು 474.00 ಕೋಟಿ ರು.,ಪ್ರಾಥಮಿಕ ಶಿಲ್ಕು 355.31 ಕೋಟಿ ರು ಸೇರಿ ಒಟ್ಟಾರೆ 1,145.31 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿದೆ. ಇದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ಶೂನ್ಯ ಸಂಪಾದಿಸಿತ್ತು.

 

ಜಲಸಂಪನ್ಮೂಲ ಇಲಾಖೆಯ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯಲ್ಲಿ (ಇಆರ್‌ಎಂ)ನಲ್ಲಿ ರಾಜ್ಯವು 100 ಕೋಟಿ ರು.,. ಕೇಂದ್ರ ಸರ್ಕಾರವು 250 ಕೋಟಿ ರು., ಸೇರಿ ಒಟ್ಟಾರೆ 350 ಕೋಟಿ ರು. ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯವು ಈ ಯೋಜನೆಗೂ ತನ್ನ ಪಾಲಿನಲ್ಲಿ ನಯಾ ಪೈಸೆ ನೀಡಿರಲಿಲ್ಲ.

 

ವಸತಿ ಇಲಾಖೆಯ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ)ಯಲ್ಲಿ ರಾಜ್ಯವು 164.00 ಕೋಟಿ ರು., ಕೇಂದ್ರವು 246.00 ಕೋಟಿ ರು, ಪ್ರಾಥಮಿಕ ಶಿಲ್ಕು 838.10 ಕೋಟಿ ರು ಸೇರಿ ಒಟ್ಟು 1,248.10 ಕೋಟಿ ರು. ಅನುದಾನವಿದೆ. ಇಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರವು ತನ್ನ ಪಾಲಿನ ಹಣವನ್ನು ನೀಡಿರಲಿಲ್ಲ.

 

ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ (ನಗರ) ಯೋಜನೆಗೆ ರಾಜ್ಯವು 90 ಕೋಟಿ ರು., ಕೇಂದ್ರವು 200 ಕೋಟಿ ರು., ಪ್ರಾಥಮಿಕ ಶಿಲ್ಕು 747.75 ಕೋಟಿ ರು. ಅನುದಾನವಿದೆ. ಸ್ವಚ್ಛ ಭಾರತ ಯೋಜನೆಗೂ ಕೇಂದ್ರ ಸರ್ಕಾರವು ಬಿಡಿಗಾಸನ್ನು ನೀಡಿಲ್ಲ. ರಾಜ್ಯವೂ ಇದೇ ಹಾದಿಯನ್ನೇ ಹಿಡಿದಿತ್ತು.

 

ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ರಾಜ್ಯವು 100.49 ಕೋಟಿ ರು., ಕೇಂದ್ರ ಸರ್ಕಾರವು 112.46 ಕೋಟಿ ರು ಸೇರಿ ಒಟ್ಟು 212.97 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿದೆ. ಇದರಲ್ಲಿಯೂ ಎರಡೂ ಸರ್ಕಾರಗಳು ನಯಾಪೈಸೆಯನ್ನು ನೀಡಿರಲಿಲ್ಲ.

 

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಧಾನಮಂತ್ರಿ ಆದರ್ಶ ಯೋಜನೆಗೆ ಕೇಂದ್ರವು 100 ಕೋಟಿ ರು. ನೀಡಿದೆಯಾದರೂ ಡಿಸೆಂಬರ್‌ ಅಂತ್ಯಕ್ಕೆ ಬಿಡಿಗಾಸು ನೀಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ರಾಜ್ಯವು 131 ಕೋಟಿ ರು., ಕೇಂದ್ರವು 55 ಕೋಟಿ ರು. ಸೇರಿ ಒಟ್ಟಾರೆ 186 ಕೋಟಿ ರು. ಅನುದಾನ ನೀಡಬೇಕಿತ್ತು. ಆದರೆ ಡಿಸೆಂಬರ್‌ ಅಂತ್ಯಕ್ಕೆ ನಯಾಪೈಸೆಯೂ ಬಿಡುಗಡೆಯಾಗಿರಲಿಲ್ಲ.

the fil favicon

SUPPORT THE FILE

Latest News

Related Posts