ಮೀಡಿಯಾ ಮಾನಿಟಿರಿಂಗ್‌ಗೆ 38.97 ಲಕ್ಷ ವೆಚ್ಚ; ಮೀಡಿಯಾ ಹ್ಯಾಂಗರ್‌ಗೆ 4(ಜಿ) ವಿನಾಯಿತಿ ನೀಡಿದ ಸರ್ಕಾರ

ಬೆಂಗಳೂರು; 2024ನೇ ಸಾಲಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೀಡಿಯಾ ಮಾನಿಟರಿಂಗ್‌ ಸೇವೆಯನ್ನು ಮೀಡಿಯಾ ಹ್ಯಾಂಗರ್‌ ಸಂಸ್ಥೆಯಿಂದ ಪಡೆಯಲು ರಾಜ್ಯ ಸರ್ಕಾರವು ಮುಂದಾಗಿದೆ.

 

ಲೋಕಸಭೆ ಚುನಾವಣೆಗೆ ಮತದಾರರ ಜಾಗೃತಿ, ಮತದಾರರನ್ನು ಸೆಳೆಯುವ ಉದ್ದೇಶದಿಂದ 49 ಲಕ್ಷ ರು ಮೊತ್ತದಲ್ಲಿ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ನ ಸೇವೆ ಪಡೆದಿರುವ ಬೆನ್ನಲ್ಲೇ ಮೀಡಿಯಾ ಮಾನಿಟರಿಂಗ್‌ಗಾಗಿ 2 ತಿಂಗಳ ಅವಧಿಗೆ 38.97 ಲಕ್ಷ ರು. ವೆಚ್ಚ ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.

 

ಅಧಿಸೂಚನೆಯಲ್ಲೇನಿದೆ?

 

2024ನೇ ಸಾಲಿನ ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಮೀಡಿಯಾ ಮಾನಿಟರಿಂಗ್‌ ಮಾಡಲು 2 ತಿಂಗಳ ಅಧಿಗೆ 38,97,832 (ಜಿಎಸ್‌ಟಿ ಒಳಗೊಂಡಂತೆ) ವೆಚ್ಚದಲ್ಲಿ ಮೀಡಿಯಾ ಹ್ಯಾಂಗರ್‌ ಸಂಸ್ಥೆಯ ಸೇವೆಯನ್ನು ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ರಡಿ ವಿನಾಯಿತಿ ನೀಡಿರುವುದು 2024ರ ಫೆ.28ರಂದು ಹೊರಡಿಸಿರುವ ಅಧಿಸೂಚನೆಯಿಂದ ಗೊತ್ತಾಗಿದೆ.

 

 

ಮೀಡಿಯಾ ಹ್ಯಾಂಗರ್‌ ಸಂಸ್ಥೆಯು ಸಾಮಾಜಿಕ ಜಾಲತಾಣ, ಸಾರ್ವಜನಿಕ, ಸಂಪರ್ಕ, ಸಿನಿಮಾ ವಲಯದಲ್ಲಿ ಕಾರ್ಯನಿರ್ವಹಿಸಿರುವುದು ಕಂಪನಿಯ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ. ಈ ಕಂಪನಿಯನ್ನು ಅನಿಲ್‌ ಬುದ್ದರ್‌ ಲುಲ್ಲಾ ಎಂಬುವರು ಮುನ್ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ಈ ಸಂಸ್ಥೆಯು  ಬಿಬಿಎಂಪಿ, ಬೆಂಗಳೂರು ಸ್ಮಾರ್ಟ್‌ ಸಿಟಿ, ಆರೋಗ್ಯ, ಹೋಟೆಲ್‌ ಉದ್ಯಮ ಸೇರಿದಂತೆ ಕಾರ್ಪೋರೇಟ್‌ ವಲಯದ ವಿವಿಧ ಕಂಪನಿಗಳಿಗೂ ಸೇವೆ ನೀಡಿದೆ. ಸಾಮಾಜಿಕ ಜಾಲತಾಣ ನಿರ್ವಹಿಸುವುದು, ರೀಲ್ಸ್‌ಗಳ ನಿರ್ಮಾಣ ಮಾಡುವುದು, ಸಮೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ವೆಬ್‌ಸೈಟ್‌ನಿಂದ ಗೊತ್ತಾಗಿದೆ.

 

ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತದಾರರ ಜಾಗೃತಿ, ಮತದಾರರನ್ನು ಸೆಳೆಯಲು ಶೀತಲ್‌ ಶೆಟ್ಟಿ ಅವರ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಸೇವೆ ಪಡೆಯುತ್ತಿದೆ.

 

ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಮೂರು ತಿಂಗಳವರೆಗೆ ಸೇವೆ ಪಡೆಯಲಿರುವ ಸರ್ಕಾರವು ಇದಕ್ಕಾಗಿ 49.00 ಲಕ್ಷ ರು. ವೆಚ್ಚ ಮಾಡುತ್ತಿದೆ.

ರಾಮ್ ಲಲ್ಲಾನ ವಿಡಿಯೋ ಪ್ರಸ್ತುತಿಪಡಿಸಿದ್ದ ಶೀಟೇಲ್ಸ್‌ಗೆ 4(ಜಿ) ವಿನಾಯಿತಿ; ಮತದಾರರ ಜಾಗೃತಿಗೆ 49 ಲಕ್ಷ ವೆಚ್ಚ

ಇದೇ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿವೆ ಎಂದು ಗೊತ್ತಿದ್ದರೂ ಸಹ ಸರ್ಕಾರವು ಈ ಸಂಬಂಧ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಅಲ್ಲದೇ ಯಾವುದೇ ಟೆಂಡರ್‌ ಆಗಲೀ, ಅಲ್ಪಾವಧಿ ಟೆಂಡರ್‌, ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ)ಯನ್ನೂ ಆಹ್ವಾನಿಸಿರಲಿಲ್ಲ ಎಂದು ಗೊತ್ತಾಗಿದೆ.

 

ಮೂಲತಃ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌, ಸಿನಿಮಾ ಸೇರಿದಂತೆ ಮನರಂಜನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಮತದಾರರ ಜಾಗೃತಿ ಕುರಿತು ಸರ್ಕಾರದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿಲ್ಲ. ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ, ವಿವರಗಳಿಲ್ಲ.

 

ವಿಶೇಷವೆಂದರೇ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಅಯೋಧ್ಯೆಯ ರಾಮ ಲಲ್ಲಾನ ಕುರಿತು ವಿಡಿಯೋವನ್ನು ಜನವರಿ 2024ರಲ್ಲಿ ಪ್ರಸ್ತುತಿ ಪಡಿಸಿತ್ತು.

 

‘ಪ್ರತಿ ಸ್ವರದಲ್ಲಿ ಸಂಭ್ರಮ, ಆಲಾಪದಲ್ಲಿ ಜೋಗುಳ, ನೂರಾರು ಕಾಲ ಕಾದು ಕುಳಿತ ಜನರಿಗೆ ಎದ್ದು ಕುಣಿದು ಜೈ ಶ್ರೀ ರಾಮ್ ಎನ್ನುತ್ತಾ ಅದ್ಧೂರಿಯಾಗಿ ಆಯೋಧ್ಯೆಗೆ ರಾಮ ಲಲ್ಲಾನನ್ನು ಈ ಹಾಡಿನೊಂದಿಗೆ ಬರ ಮಾಡಿಕೊಳ್ಳುವ ಸಮಯ. ಘರ್ಜಿಸಿ ಹೇಳಿ, ಜೈ ಶ್ರೀ ರಾಮ್!!,’ ಎಂದು ಪ್ರಚುರಪಡಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts