‘ಸೋಮಣ್ಣ ಬೆಂಗಳೂರಿನ ಕೊಚ್ಚೆ ನೀರು’; ಅವಹೇಳನಕಾರಿ ಭಾಷಣ ಮಾಡಿದ್ದ ಶಾಸಕನ ವಿರುದ್ಧ ಎಫ್‌ಐಆರ್‍‌

ಬೆಂಗಳೂರು; ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಬೆಂಗಳೂರಿನ ಕೊಚ್ಚೆ ನೀರು ಎಂದು ಸಂಬೋಧಿಸಿ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ  ಗುಬ್ಬಿ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿರುವುದು ಇದೀಗ ಬಹಿರಂಗವಾಗಿದೆ.

 

ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ರಾಯಸಂದ್ರ ರವಿಕುಮಾರ್‍‌ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿಯೂ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿತ್ತು. ಇದರ ಬೆನ್ನಲ್ಲೇ ಅವಹೇಳನಕಾರಿಯಾಗಿ ಭಾಷಣ ಮಾಡಿರುವ ಆರೋಪದಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‍‌ ಮುನ್ನೆಲೆಗೆ ಬಂದಿದೆ.

 

ತುಮಕೂರಿನ ಹೆಗ್ಗೆರೆಯಲ್ಲಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಸಮಿತಿ ಚುನಾವಣೆ ಪ್ರಚಾರ ಸಭೆಯಲ್ಲಿ ಎಸ್‌ ಆರ್‍‌ ಶ್ರೀನಿವಾಸ್‌ ಅವರು ವಿ ಸೋಮಣ್ಣ ಅವರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಚುನಾವಣಾ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ತುಮಕೂರಿನ ಎಂಪ್ರೆಸ್‌ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಫ್ಲೈಯಿಂಗ್‌ ಸ್ಕ್ವಾಡ್‌ನ ಶಿವಪ್ಪ ಎಂಬುವರು ಭಾಷಣದ ತುಣುಕಿನೊಂದಿಗೆ ದೂರು ಸಲ್ಲಿಸಿದ್ದರು.

 

ಈ ದೂರನ್ನು ಪರಿಶೀಲಿಸಿದ್ದ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿದೆ. ಇವರ ವಿರುದ್ಧ ಅಸಂಜ್ಞೆಯ ಪ್ರಕರಣವನ್ನು ಸಂಜ್ಞೆಯ ಪ್ರಕರಣವನ್ನಾಗಿ ಪರಿವರ್ತಿಸಿ ಕಲಂ 171 (ಜಿ)ಐಪಿಸಿ 123(4) ಆರ್‍‌ ಪಿ ಆಕ್ಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

ಎಫ್‌ಐಆರ್‍‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಫ್‌ಐಆರ್‍‌ನಲ್ಲೇನಿದೆ?

 

ಹೆಗ್ಗೆರೆಯಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಸಮಿತಿ ಚುನಾವಣೆ ಪ್ರಚಾರ ಸಭೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 4.10 ಗಂಟೆ ಸಮಯದಲ್ಲಿ ಗುಬ್ಬಿ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರು ವಿ ಸೋಮಣ್ಣ ಅವರಿಗೆ ಬೆಂಗಳೂರಿನ ಕೊಚ್ಚೆ ನೀರು ಎಂದು ಹಾಗೂ ತುಮಕೂರಿನ ಜನ ಸ್ವಾಭಿಮಾನಿಗಳು ಪ್ರಜ್ಞಾವಂತರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಿ ಸೋಮಣ್ಣ ಅವರನ್ನು ಗೆಲ್ಲಿಸಬೇಡಿ ಎಂದು ಅವಹೇಳನಕಾರಿಯಾಗಿ ಭಾಷಣ ಮಾಡಿರುತ್ತಾರೆ.

 

ಇವರ ಭಾಷಣದಲ್ಲಿ ಉಪಯೋಗಿಸಿರುವ ಪದ ಬಳಕೆಯು ಭಾರತದ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ. ಸದರಿ ಭಾಷಣವನ್ನು ನನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾದಾಗ ತಾಲೂಕು ಕಚೇರಿ ಹಾಗೂ ಹೊರಗಿನಿಂದ ಫೋನ್‌ ಕಾಲ್‌ಗಳು ಬಂದ ಕಾರಣ ವಿಚಲಿತನಾಗಿ ಅಟೆಂಡ್ ಮಾಡಲು ಹೊರ ಹೋದಾಗ ಎಸ್‌ ಆರ್‍‌ ಶ್ರೀನಿವಾಸ್‌ ಅವರು ಮೇಲ್ಕಾಣಿಸಿದ ಅವಹೇಳನಕಾರಿ ಭಾಷಣ ಮಾಡಿರುತ್ತಾರೆ.

 

ಕರ್ತವ್ಯದ ಒತ್ತಡದಿಂದ 2024ರ ಮಾರ್ಚ್‌ 25ರ ರಂದು ನೀಡಿರುತ್ತೇನೆ. ಆದ್ದರಿಂದ ಗುಬ್ಬಿ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿದ್ದರು ಎಂಬುದು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

 

ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ರಾಯಸಂದ್ರ ರವಿಕುಮಾರ್‍‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗುಬ್ಬಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರ ವಿರುದ್ದ ಎಫ್‌ಐಆರ್‍‌ ದಾಖಲಾಗಿತ್ತು.

 

 

‘ನಿನಗೆಷ್ಟೋ ಧೈರ್ಯ, ಜೀವಂತ ಸುಡಿಸುತ್ತೇನೆ’; ಹಲ್ಲೆ ನಡೆಸಿದ್ದ ಕೆಎಸ್‌ಆರ್‍‌ಟಿಸಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‍‌

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಮತ್ತು ಹಲ್ಲೆ, ಕೊಲೆ, ಅತ್ಯಾಚಾರ ಪ್ರಕರಣಗಳಂತಹ ಅಪರಾಧಗಳ ಸಂಖ್ಯೆಯೂ ಹೆಚ್ಚಿವೆ ಎಂದು ಸದನದಲ್ಲಿ ಪ್ರತಿಪಕ್ಷಗಳು ಆರೋಪಿಸಿದ್ದವು. ಇದರ ಬೆನ್ನಲ್ಲೇ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆಯೇ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ಮತ್ತವರ ಗುಂಪೊಂದು ಹಲ್ಲೆ ನಡೆಸಿರುವುದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹಳಿ ತಪ್ಪಿದೆ ಎಂಬ ಆರೋಪಕ್ಕೆ ಮತ್ತೊಂದು ಸಾಕ್ಷ್ಯ ಲಭಿಸಿದಂತಾಗಿತ್ತು.

 

ಕುಣಿಗಲ್‌ ಮುಖ್ಯ ರಸ್ತೆಯಲ್ಲಿರುವ ಕೆ ಲಕ್ಕಪ್ಪ ವೃತ್ತದ ಬಳಿ ಇರುವ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ಭೇಟಿ ನೀಡಿದ್ದರು. ಗುತ್ತಿಗೆ ಕರಾರನ್ನು ಮಾಡಿಕೊಳ್ಳುವ ಸಂಬಂಧ ಸಹಾಯಕ ಇಂಜಿನಿಯರ್‍‌ ಲಿಂಗರಾಜು ಅವರು ತಕರಾರು ತೆಗೆದಿದ್ದರು. ಈ ಕುರಿತು ಅಧಿಕಾರಿಗಳಿಗೆ ರವಿಕುಮಾರ್‍‌ ಅವರು ಚರ್ಚಿಸಿದ್ದರು. ಆದರೆ ಕಡೇ ಗಳಿಗೆಯಲ್ಲಿ ಈ ಕಾಮಗಾರಿಯು ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದು ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿ ಕೂಡಿದೆ ಎಂದು ರವಿಕುಮಾರ್‍‌ ಅವರು ಸ್ಥಳದಲ್ಲಿಯೇ ಆರೋಪಿಸಿದ್ದರು. ಅಲ್ಲದೇ ಅನಿರ್ದಿಷ್ಟಾವಧಿಯ ಪ್ರತಿಭಟನೆಯನ್ನೂ ನಡೆಸಿದ್ದರು.

 

‘ಮಾನಸಿಕ ಸ್ಥಿಮಿತ ಕಳೆದುಕೊಂಡ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರು ಯಾವನೋ ಅವನು ರಾಯಸಂದ್ರ ರವಿ ಎಂದು ಕಿರುಚಾಡಿ ನನ್ನ ಕ್ಷೇತ್ರದಲ್ಲಿ ನನ್ನ ಅನುಮತಿ ಇಲ್ಲದೇ ಕಾಮಗಾರಿ ಮಂಜೂರು ಮಾಡಿಸಿಕೊಳ್ಳಲು ಎಷ್ಟು ಧೈರ್ಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನಗೆ ತಾಕತ್ತಿದ್ದರೆ ಕೆಲಸ ಮಾಡು ನಿನ್ನೊಂದಿಗೆ ನಿನ್ನ ಕೆಲಸ ಮಾಡಿಸುವ ಯಂತ್ರೋಪಕರಣದೊಂದಿಗೆ ಜೀವಂತ ಸುಡಿಸುತ್ತೇನೆ ಎಂದು ಕೂಗಾಡಿದರು,’ ಎಂದು ರವಿಕುಮಾರ್‍‌ ಅವರು ದೂರಿನಲ್ಲಿ ಘಟನೆಯನ್ನು ವಿವರಿಸಿದ್ದನ್ನು ಸ್ಮರಿಸಬಹುದು.

 

SUPPORT THE FILE

Latest News

Related Posts