ವಿಧೇಯಕ ಮಂಡನೆಗೆ ಸಿಎಂಗೆ ಅಧಿಕಾರ ನೀಡುವ ನಿಯಮಕ್ಕೆ ತಿದ್ದುಪಡಿ; ರಾಜ್ಯಪಾಲರ ಸಲಹೆ ತಿರಸ್ಕೃತ?

ಬೆಂಗಳೂರು; ತುರ್ತು ಸಂದರ್ಭಗಳಲ್ಲಿ ವಿಧೇಯಕಗಳನ್ನು  ಸಚಿವ ಸಂಪುಟಕ್ಕೆ ಮಂಡಿಸದೇ ವಿಧಾನಮಂಡಲದ ಮುಂದೆ ನೇರವಾಗಿ  ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುವ ಸಂಬಂಧ  ನಿಯಮಗಳಿಗೆ ಸೂಕ್ತ ತಿದ್ದುಪಡಿಯ ಅಗತ್ಯವೇ ಇಲ್ಲ ಎಂಬ ನಿಲುವು ತಳೆದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ರಾಜ್ಯಪಾಲರ ಸಲಹೆಯನ್ನು ತಿರಸ್ಕರಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

ಸಚಿವ ಸಂಪುಟ ಅನುಮೋದನೆಗೆ ಮಂಡಿಸದೇ ಆರು ವಿಧೇಯಕಗಳನ್ನು ವಿಧಾನಮಂಡಲದ ಮುಂದೆ ಮಂಡಿಸಿ ರಾಜ್ಯಪಾಲರ ಆಕ್ಷೇಪಕ್ಕೆ ಗುರಿಯಾಗಿತ್ತು. ಅಲ್ಲದೇ ಈ ಕುರಿತು ಸ್ಪಷ್ಟನೆ ನೀಡಿ ಎಂದು ಸೂಚಿಸಿದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದರು.

 

ಈ ಸಲಹೆ ಕುರಿತಾಗಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಸರ್ಕಾರಕ್ಕೆ ನೀಡಿರುವ ಅಭಿಪ್ರಾಯದಲ್ಲಿ ರಾಜ್ಯಪಾಲರ ಸಲಹೆಯಂತೆ ನಿಯಮಗಳಿಗೆ ತಿದ್ದುಪಡಿ ಅಗತ್ಯವಿಲ್ಲ ಎಂದಿದೆ. ಬದಲಿಗೆ ಸುತ್ತೋಲೆ ಮೂಲಕವೇ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ತಿಳಿಸಿದರೆ ಸಾಕು ಎಂಬ ನಿಲುವು ತಳೆದಿದೆ.  ಇದೇ ಅಭಿಪ್ರಾಯವನ್ನು ರಾಜ್ಯಪಾಲರಿಗೆ ಕಳಿಸಲು ಇಲಾಖೆಯು ಚಿಂತಿಸಿರುವುದು ಗೊತ್ತಾಗಿದೆ.

 

ಈ ಸಂಬಂಧ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು (DPAR/1/ARB/2024-DPAR­_SERV_RULES (Computer Number 1353185) ಲಭ್ಯವಾಗಿವೆ.

 

ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಮೊದಲನೇ ಅನುಸೂಚಿಯ ಮೊದಲನೇ ಅಂಶಕ್ಕೆ ತಿದ್ದುಪಡಿ ಮಾಡದೆಯೇ ವಿಧಾನಮಂಡಲದಲ್ಲಿ ವಿಧೇಯಕಗಳನ್ನು ಮಂಡಿಸಲಾಗಿತ್ತು. ಸರ್ಕಾರದ ಈ ಕ್ರಮದ ಕುರಿತು ರಾಜ್ಯಪಾಲರು ಆಕ್ಷೇಪಿಸಿ 2024ರ ಜನವರಿ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೇ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸುವ ಅಗತ್ಯ ಏನಿತ್ತು ಎಂಬುದರ ಕುರಿತು ಸ್ಪಷ್ಟನೆ ಕೇಳಿದ್ದರು.

 

ಅಲ್ಲದೇ ನಿಯಮಗಳಿಗೆ ತಿದ್ದುಪಡಿ ಆಗುವವರೆಗೂ ಯಾವುದೇ ವಿಧೇಯಕವನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸದೇ ವಿಧಾನಮಂಡಲದಲ್ಲಿ ಮಂಡಿಸಬಾರದೆಂದು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಮೊದಲನೇ ಅನುಸೂಚಿಯ ಮೊದಲನೇ ಅಂಶಕ್ಕೆ ತಿದ್ದುಪಡಿ ತರುವ  ಕುರಿತು ಇಲಾಖೆಯಲ್ಲಿ ಚರ್ಚಿಸಲಾಗಿದೆ.

 

ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು  ಶಾಸನ ರಚನೆ ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ.

 

ಅಭಿಪ್ರಾಯದಲ್ಲೇನಿದೆ?

 

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ)ನಿಯಮಗಳು 1977ರ ನಿಯಮ 20(1)(a) ರೀತಿ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಕಾಯ್ದಿರಿಸಿ ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಕ್ರಮ ಜರುಗಿಸಲು ಅವಕಾಶವಿದೆ. ಆದ್ದರಿಂದ  ಈ ತಿದ್ದುಪಡಿ ಅಗತ್ಯವಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಭಾವಿಸಿದ್ದಲ್ಲಿ ಅದು ಸೂಕ್ತ ಕ್ರಮವಾಗುತ್ತದೆ.

 

ಇನ್ನು ಮುಂದೆ ಯಾವುದೇ ಶಾಸನ ಪ್ರಕ್ರಿಯೆ ವಿಧೇಯಕಗಳನ್ನು ಸಚಿವ ಸಂಪುಟದ ಅನುಮೋದನೆಯಿಲ್ಲದೇ ವಿಧಾನಮಂಡಲದ ಮುಂದೆ ಮಂಡಿಸಬಾರದು. ತುರ್ತು ಸಂದರ್ಭಗಳಲ್ಲಿ ಸಚಿವ ಸಂಪುಟದ ಘಟನೋನತ್ತರ ಅನುಮೋದನೆಗೆ ಕಾಯ್ದಿರಿಸಿ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ವಿಧಾನಮಂಡಲದ ಮುಂದೆ ಮಂಡಿಸಿದರೆ, ಅಂತಹ ವಿಧೇಯಕಗಳನ್ನು ಕೂಡಲೇ ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆದು ನಂತರವೇ ರಾಜ್ಯಪಾಲರಿಗೆ ಕಳುಹಿಸಬೇಕೆಂಂದು ಎಲ್ಲಾ ಕಾರ್ಯದರ್ಶಿಗಳಿಗೆ ಸುತ್ತೋಲೆ ಮುಖೇನ ಸಿಆಸುಇ ಇಲಾಖೆ ತಿಳಿಸಿದರೆ ಸಾಕಾಗುತ್ತದೆ ಎಂದು 2024ರ ಮಾರ್ಚ್‌ 6ರಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

ಹೆಚ್ಚು ಆದಾಯವಿರುವ ದೇಗುಲಗಳಿಗೆ ತೆರಿಗೆ ವಿಧಿಸುವ ಹಿಂದೂ ಧಾರ್ಮಿಕ ದತ್ತಿ ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಹಿಂದಕ್ಕೆ ಕಳಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

 

‘ಕರ್ನಾಟಕ ಸಾರ್ವಜನಿಕ ಪರೀಕ್ಷೆ’ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತ ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ–2023, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮಸೂದೆ, ಬಿಬಿಎಂಪಿ ಮತ್ತು ಇತರೆ ಕಾಯ್ದೆಗಳು, ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್ಸ್‌ ಕೌನ್ಸಿಲ್‌ ಮಸೂದೆ, ನೋಂದಣಿ ಕಾಯ್ದೆ ಮಸೂದೆಗಳನ್ನು ರಾಜ್ಯ ಸರ್ಕಾರವು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts