120 ಎಕರೆ ಮೀಸಲು ಅರಣ್ಯದಲ್ಲಿ ಹೈಟೆಕ್‌ ಕೈಗಾರಿಕೆ ಪ್ರದೇಶ ನಿರ್ಮಾಣಕ್ಕೆ ಪ್ರಸ್ತಾವ; ಅರಣ್ಯ ಕಾಯ್ದೆ ಉಲ್ಲಂಘನೆ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿರುವ 120-00 ಎಕರೆ ಜಮೀನು ಕಾಯ್ದಿಟ್ಟ  ಅರಣ್ಯ ಪ್ರದೇಶವಾಗಿದ್ದರೂ ಹೈಟೆಕ್‌ ಕೈಗಾರಿಕೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಲ್ಲಿಕೆಯಾಗಿದೆ.

 

ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅಥವಾ ಮಂಜೂರು ಮಾಡುವುದು ಅರಣ್ಯ ಸಂರಕ್ಷಣಾ ಕಾಯ್ದೆ (1980ರ) ಅನ್ವಯ ಉಲ್ಲಂಘನೆಯಾಗಲಿದೆ ಎಂದು ಗೊತ್ತಿದ್ದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇಂತಹದೊಂದು ಪ್ರಸ್ತಾವವನ್ನು ಸಲ್ಲಿಸಿದೆ.

 

ಈ ಸಂಬಂಧ ಅಧಿಕಾರಿಗಳು ಸಚಿವ ಎಂ ಬಿ ಪಾಟೀಲ್‌ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವ ಈಶ್ವರ್‌ ಖಂಡ್ರೆ  ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸರ್ವೇ ನಂಬರ್‌ನಲ್ಲಿರುವ ಅರಣ್ಯ ಪ್ರದೇಶದ ಕುರಿತಾಗಿ 2024ರ ಫೆ.9ರಂದು  ವಾಸ್ತವಾಂಶದ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

120 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡುವ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್‌ 28ರಂದು ಸಭೆ ನಡೆಸಿರುವುದು ಗೊತ್ತಾಗಿದೆ.

 

ಈ ಸಭೆಯಲ್ಲಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

 

ಮತ್ತೊಂದು ವಿಶೇಷವೆಂದರೇ ಇದೇ  ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಕೈಗಾರಿಕೆ ಪ್ರದೇಶದಲ್ಲಿ 28 ಎಕರೆ 2,219 ಚದುರ ಅಡಿ ವಿಸ್ತೀರ್ಣದ ಜಮೀನನ್ನು ಅಭಿವೃದ್ದಿಗೊಳಿಸುವ ಸಲುವಾಗಿ 2007ರ ಜೂನ್‌ 7ರಂದು ಕಾನ್‌ಕಾರ್ಡ್‌ ಕಂಪನಿ ಪರವಾಗಿ ಕೆಐಎಡಿಬಿಯು ಭೋಗ್ಯಕ್ಕೆ ನೀಡಿತ್ತು. ಅಲ್ಲದೇ  ಭೋಗ್ಯ ಮತ್ತು ಮಾರಾಟದ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸ್ವತ್ತನ್ನು ಒತ್ತೆಯಿಟ್ಟು ಪ್ರತಿಷ್ಠಿತ ಕಂಪನಿಯೊಂದು ಖಾಸಗಿ ಬ್ಯಾಂಕ್‌ನಿಂದ ಅಂದಾಜು 2,500 ಕೋಟಿ ರು. ಸಾಲವನ್ನು ಎತ್ತಿತ್ತು.

 

ಕೆಐಎಡಿಬಿ ಸ್ವತ್ತು ಅಡವಿರಿಸಿ 2,500 ಕೋಟಿ ರು. ಸಾಲ; ಭೋಗ್ಯ ಕರಾರಿನ ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಹೀಗಿದ್ದರೂ ಸಹ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಇದೇ ಜಾಗದಲ್ಲಿ ಹೈಟೆಕ್‌ ಕೈಗಾರಿಕೆ ಪ್ರದೇಶವನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

 

ಜಿಲ್ಲಾಧಿಕಾರಿ ವರದಿಯಲ್ಲೇನಿದೆ?

 

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ ಗ್ರಾಮದ ಸರ್ವೆ ನಂಬರ್‌ 1ರಲ್ಲಿ ಹಾಲಿ ಪಹಣಿಯಂತೆ ಒಟ್ಟು 711 ಎಕರೆ ಇದೆ. ಇದರ ಕಾಲಂ 9ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹೆಸರಿಗೆ 711 ಎಕರೆ ಮತ್ತು ಸರ್ಕಾರದ ಹೆಸರಿಗೆ 120 ಎಕರೆ ಖಾತೆ ನಮೂದಾಗಿದೆ. ಹಾಲಿ ಜಮೀನಿನ ಸ್ಥಿತಿಯಂತೆ ಅಂದಾಜು ಸುಮಾರು ಮನೆಗಳೂ (ದಿಣ್ಣೂರು ಮತ್ತು ಗೋಪಾಲಕೃಷ್ಣ ಬಡಾವಣೆ) 40 ಎಕರೆ, 12 ಎಕರೆ ಪೊಲೀಸ್‌ ಠಾಣೆ ಮತತು ವಸತಿ ಗೃಹಕ್ಕೆ 4 ಕೆರೆ, ಅರಣ್ಯ ಇಲಾಖೆಗೆ ಸುಮಾರು 62 ಎಕರೆ, ದೇವಸ್ಥಾನಕ್ಕೆ 2.32 ಎಕರೆ, ಕೆಇಬಿಗೆ 1.19 ಎಕರೆ, ಸ್ಮಸಾನಕ್ಕೆ 2.20 ಎಕರೆ, ಪಶು ಆಸ್ಪತ್ರೆಗೆ 0.09 ಗುಂಟೆ, ರೈಲ್ವೇ ಇಲಾಖೆಗೆ 225 ಎಕರೆ, ಮೆಟ್ರೋಗೆ 44.36 ಎಕರೆ ಮತ್ತು ಇತರೆ ಕಂಪನಿಗಳಿಗೆ 175 ಎಕರೆ ಇರುವುದು ಕಂಡು ಬಂದಿದೆ.

 

ಅಲ್ಲದೇ ಗ್ರಾಮಸ್ಥರಿಗೆ  ಈ ಹಿಂದೆಯೇ ತಲಾ 5 ಎಕರೆಯಂತೆ ಮಂಜೂರಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ (ಡಬ್ಲ್ಯೂಪಿ 7200/2008, 29765-66/2009) ಕಾನ್‌ಕಾರ್ಡ್‌ ಇಂಡಿಯಾಲಿ ಪ್ರೈ ಲಿ ಅವರು ಅರಣ್ಯ ಇಲಾಖೆ ಮತ್ತು ಇತರೆ 36 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

 

ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಅರಣ್ಯ ಇಲಾಖೆಯು (ಡಬ್ಲ್ಯೂಪಿ 4283/2012, 8578/2012, 4205/2012) ಪ್ರಕರಣ ದಾಖಲಿಸಿದೆ. ಈ ಪ್ರಕರಣಗಳು ವಿಚಾರಣೆ ನಡೆದು ವಜಾಗೊಂಡಿದೆ. ಈ ಆದೇಶಗಳಲ್ಲಿ ಇದು ಕಾಯ್ದಿಟ್ಟ ಅರಣ್ಯ ಜಮೀನಾಗಿರುವುದಿಲ್ಲ ಎಂದು ಉಲ್ಲೇಖಿಸಿರುವುದನ್ನು ಜಿಲ್ಲಾಧಿಕಾರಿ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಸರ್ಕಾರದ ಅರೆ ಸರ್ಕಾರಿ ಪತ್ರದಲ್ಲಿ ಕಾಡುಗೋಡಿ ಪ್ಲಾಂಟೇಷನ್‌ ಗ್ರಾಮದ ಸರ್ವೆ ನಂಬರ್‌ 01ರಲ್ಲಿನ ಜಮೀನು ಸರ್ಕಾರಿ ಜಮೀನು ಎಂದು ಉಲ್ಲೇಖಿಸಲಾಗಿದೆ. 204.26 ಎಕರೆ ಜಮೀನಿನ ಪೈಕಿ ಭಾಗಶಃ ಬಡಾವಣೆಗಳು, ಮನೆಗಳು, ಕಾಲೋನಿ, ಪೊಲೀಸ್‌ ಠಾಣೆ, ವಸತಿಗೃಹ, ಬಿಎಂಆರ್‌ಸಿಎಲ್‌ಗೆ 40 ಎಕರೆ ಜಮೀನು ಉಪಯೋಗವಾಗಿದೆ. ಪ್ರಸ್ತುತ ಸುಮಾರು 120 ಎಕರೆ ಸರ್ಕಾರಿ ಜಮೀನು ಉಳಿದಿದೆ ಎಂದು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ತಿಳಿಸಿದ್ದಾರೆ. ಮತ್ತು 120 ಎಕರೆ ಜಮೀನನ್ನು ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಲು ವರದಿ ಸಲ್ಲಿಸಲಾಗಿದೆ  ಎಂಬ ಅಂಶವನ್ನೂ ಜಿಲ್ಲಾಧಿಕಾರಿ ಅವರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಆದರೆ ಕೆ ಆರ್‌ ಪುರ  ವಲಯ ಅರಣ್ಯಾಧಿಕಾರಿಗಳು ಸರ್ವೆ ನಂಬರ್‌ 1ರಲ್ಲಿನ ಜಮೀನು ಮೀಸಲು ಅರಣ್ಯ ಭೂಮಿ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಈ ಅರಣ್ಯ ಭೂಮಿಯಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ಮಾಡುವುದು ಅರಣ್ಯ ಕಾಯ್ದೆ ಮತ್ತು ಕಾನೂನು ಉಲ್ಲಂಘನೆಯಾಗಲಿದೆ. ಹೀಗಾಗಿ ಈ ಭೂಮಿಯ ಮೋಜಣಿ ಮಾಡುವುದು, ಸ್ವಾಧೀನಪಡಿಸಿಕೊಳ್ಳುವುದು, ಹಸ್ತಾಂತರಿಸುವ ಮುನ್ನ ಅರಣ್ಯ ಸಂರಕ್ಷಣ ಕಾಯ್ದೆ 1980ರ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಹೀಗಾಗಿ 120 ಎಕರೆ ಮೀಸಲು ಅರಣ್ಯ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಸಮಾಲೋಚಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

 

ಹಾಗೆಯೇ ಕಾಡುಗೋಡಿ ಪ್ಲಾಂಟೇಷನ್‌ ಸರ್ವೆ ನಂಬರ್‌ 1ರಲ್ಲಿನ ಪ್ರದೇಶಕ್ಕೆ ಸಂಬಂಧಿಸಿದಂತೆ ಅರಣ್ಯವಲ್ಲ ಎಂದು ಮತ್ತೊಂದು ಅಧಿಸೂಚನೆಯಾಗಲೀ ಅಥವಾ ಆದೇಶವಾಗಲೀ ಹೊರಡಿಸಿಲ್ಲ. ಈ ಪ್ರದೇಶವೂ ಇಂದಿಗೂ ಕಾಡುಗೋಡಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಅಲ್ಲದೇ 1896ರ ಮತ್ತು 1901 ಅಧಿಸೂಚನೆ ಪ್ರಕಾರ ಈಗಲೂ ಇದು ಅರಣ್ಯವಾಗಿದೆ. ಹೀಗಾಗಿ ರಾಜ್ಯದ/ಕೇಂದ್ರದ ಈ ಹಿಂದೆ ಇದ್ದ ಹಾಗೂ ಪ್ರಸ್ತುತ ಇರುವ ಎಲ್ಲಾ ಅರಣ್ಯ ಕಾಯ್ದೆಗಳಡಿಯಲ್ಲಿ ಬರುತ್ತದೆ. ಈ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅರಣ್ಯ (ಸಂರಕ್ಷಣಾ ಕಾಯ್ದೆ) ಕಾಯ್ದೆ 1980ರಂತೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ.

 

ಈ ಆದೇಶಕ್ಕೆ ವ್ಯತರಿಕ್ತವಾಗಿ ಯಾವುದೇ ನ್ಯಾಯಮಂಡಳಿ ಅಥವಾ ಉಚ್ಛ ನ್ಯಾಯಾಲಯ ಸೇರಿದಂತೆ ಯಾವುದೇ ನ್ಯಾಯಾಲಯಗಳು ಆದೇಶ ಹೊರಡಿಸಬಾರದು ಎಂದು ಉಚ್ಛರಿಸಲಾಗಿದೆ ಎಂಬ ಅಂಶವನ್ನು  ವರದಿಯಲ್ಲಿ ಪ್ರತಿಪಾದಿಸಲಾಗಿದೆ.

 

ಕಂದಾಯ ಅಧಿಕಾರಿಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಯಾವುದೇ ಅಧಿಕಾರವಿಲ್ಲ. ಒಂದೊಮ್ಮೆ ಮಾಡಿದ್ದರೂ ಅದು ಊರ್ಜಿತವಲ್ಲ ಹಾಗೂ ಅದು ಅಸಿಂಧು ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts