ಬೆಂಗಳೂರು; ಆಹಾರ ಧಾನ್ಯ ದುರುಪಯೋಗ, ದಾಖಲೆಗಳ ಅಸಮರ್ಪಕ ನಿರ್ವಹಣೆ ಹೆಸರಿನಲ್ಲಿ ರಾಜ್ಯದ ಹಲವೆಡೆ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಗಳಿಂದ ಹಣ ವಸೂಲಿಗಿಳಿದಿದ್ದಾರೆ. ಹಣ ನೀಡದ ಹೊರತು ಖಾಸಗಿ ಶಾಲೆಗಳಿಂದ ಶಿಕ್ಷಣಾಧಿಕಾರಿಗಳು ಕದಲುತ್ತಿಲ್ಲ. ಕಡೆಗೆ ಬೇಡಿಕೆ ಇರಿಸಿದ್ದರ ಪೈಕಿ ಕನಿಷ್ಠ ಶೇ.25ರಷ್ಟು ಹಣವನ್ನು ಪಡೆದಿರುವುದು ಇದೀಗ ಬಹಿರಂಗವಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಶಿಕ್ಷಣಾಧಿಕಾರಿಗಳ ವಿರುದ್ಧ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸಿವೆ. ಈ ಕುರಿತು ಸಚಿವ ಮಧು ಬಂಗಾರಪ್ಪ ಅವರಿಗೂ ಹಲವು ದೂರುಗಳು ಸಲ್ಲಿಕೆಯಾಗಿವೆ ಎಂದು ಗೊತ್ತಾಗಿದೆ.
ಈ ಪೈಕಿ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ಮಂಡ್ಯ ಸೇರಿದಂತೆ ಹಲವು ಖಾಸಗಿ ಶಾಲೆಗಳಿಗೆ ಪಿಎಂ ಪೋಷಣ್ ಸಹಾಯಕ ನಿರ್ದೇಶಕರಾದ ಗೀತಾ ಸಿ ಎಸ್ ಎಂಬುವರು ಪರಿಶೀಲನೆ ನಡೆಸಿ 2024ರ ಮಾರ್ಚ್ 11ರಂದು ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆಹಾರ ಧಾನ್ಯಗಳ ದುರುಪಯೋಗ ಮತ್ತು ದಾಖಲೆಗಳು ಅಸಮರ್ಪಕವಾಗಿವೆ ಎಂದು ಶಿಕ್ಷಣಾಧಿಕಾರಿಗಳು, ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರನ್ನು ಬೆದರಿಸಿರುವುದು ತನಿಖಾ ವೇಳೆಯಲ್ಲಿ ದೃಢಪಟ್ಟಿರುವುದು ವರದಿಯಿಂದ ಗೊತ್ತಾಗಿದೆ.
ಈ ಸಂಬಂಧ ಬೇಡಿಕೆ ಇರಿಸಿರುವ ಹಣವನ್ನು ಕೊಟ್ಟರೇ ಮಾತ್ರ ಸರ್ಕಾರಕ್ಕೆ ಮತ್ತು ಇಲಾಖೆಗೆ ಯಾವುದೇ ದೂರು ಸಲ್ಲಿಕೆಯಾಗದಂತೆ ನೋಡಿಕೊಳ್ಳಲಾಗುವುದು. ಇಲ್ಲವಾದಲ್ಲಿ ದೂರು ನೀಡಲಾಗುವುದು ಎಂದು ಶಿಕ್ಷಣಾಧಿಕಾರಿಗಳು ಬೆದರಿಕೆ ಒಡ್ಡಿರುವುದು ಸಹ ವರದಿಯಿಂದ ತಿಳಿದು ಬಂದಿದೆ.
ಮದ್ದೂರು ತಾಲೂಕಿನ ಪ್ರಕರಣ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಲಾ ನೆಹರು ಬಾಲಿಕ ಪ್ರೌಢಶಾಲೆಗೆ ಶಿಕ್ಷಣಾಧಿಕಾರಿಗಳು 2023ರ ಡಿಸೆಂಬರ್ 26ರಂದು ಭೇಟಿ ನೀಡಿದ್ದರು. ಅವರು ಮಧ್ಯಾಹ್ನದವರೆಗೆ ದಾಖಲೆಗಳನ್ನು ಪರಿಶೀಲಿಸಿದ್ದರು. ‘ನೀವು ಸರಿಯಾಗಿ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ, ಆಹಾರ ಪದಾರ್ಥಗಳನ್ನು ದುರುಪಯೋಗ ಮಾಡಿರುತ್ತೀರಿ,’ ಎಂದು ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದರು.
ಆದರೆ ಯಾವ ದಾಖಲೆ ತಪ್ಪಿದೆ, ಎಲ್ಲಿ ದುರುಪಯೋಗ ಆಗಿದೆ ಎಂದು ತಿಳಿಸಿರಲಿಲ್ಲ. ಆದರೂ ಶಿಕ್ಷಣಾಧಿಕಾರಿಗಳು ವಿನಾ ಕಾರಣ ಆರೋಪ ಮಾಡಿ ತಲಾ 2,000 ರು.ಗಳನ್ನು ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕರು ಪಿ ಎಂ ಪೋಷಣ್ ಸಹಾಯಕ ನಿರ್ದೇಶಕರಾದ ಗೀತಾ ಸಿ ಎಸ್ ಅವರಿಗೆ ತಪಾಸಣೆ ವೇಳೆ ಮೌಖಿಕವಾಗಿ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಲಿಖಿತವಾಗಿ ಬರೆದುಕೊಡಲು ಭಯ ಪಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಮಳವಳ್ಳಿ ಪ್ರಕರಣ
ಮಳವಳ್ಳಿ ತಾಲೂಕಿನ ಆದರ್ಶ ವಿದ್ಯಾಲಯದ ಮಾರೇಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿನ ಮುಖ್ಯ ಶಿಕ್ಷಕ ಶಿವರಾಜ್ ಅವರು ಕೂಡ ಶಿಕ್ಷಣಾಧಿಕಾರಿಗಳು ಹಣ ಪಡೆದಿರುವ ಬಗ್ಗೆ ಲಿಖಿತವಾದ ದೂರು ನೀಡಿದ್ದರು.
ಈ ಶಾಲೆಗೂ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿಗಳು ‘ದಾಖಲೆಗಳು ಸಮರ್ಪಕವಾಗಿಲ್ಲ, ಆಹಾರ ಧಾನ್ಯ ದುರುಪಯೋಗ ಮಾಡಿರುವ ಬಗ್ಗೆ ನಿಮ್ಮ ಮೇಲೆ ದೂರು ನೀಡಬಾರದೆಂದರೇ 25,000 ರು.ಗಳನ್ನು ನೀಡಬೇಕು,’ ಎಂದು ಬೇಡಿಕೆ ಇರಿಸಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.
ಈ ಸಂಬಂಧ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಿಗೆ ಯಾವುದೇ ಸಮಜಾಯಿಷಿ ನೀಡಲು ಶಿಕ್ಷಣಾಧಿಕಾರಿಗಳು ಅವಕಾಶ ನೀಡದೆಯೇ ಹಣ ಪಡೆದಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮಂಡ್ಯ ತಾಲೂಕಿನ ಪ್ರಕರಣ
ಮಂಡ್ಯ ತಾಲೂಕಿನ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿಯೂ ಶಿಕ್ಷಣಾಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿಯ ಮುಖ್ಯ ಶಿಕ್ಷಕರಾದ ಸೇಂಟ್ ಮೇರಿ ಪೌಲಿಕ್ ಅವರನ್ನು ಶಿಕ್ಷಣಾಧಿಕಾರಿಗಳು ನಿಂದಿಸಿದ್ದರು. ಶಿಕ್ಷಣಾಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿದ್ದರಲ್ಲದೇ ‘ ಅಸಮರ್ಪಕವಾದ ದಾಖಲೆಗಳ ಹಾಗೂ ಆಹಾರ ಧಾನ್ಯಗಳ ದುರುಪಯೋಗ ಎಂದು ತಿಳಿಸಿದ್ದರು.
ಆದರೆ ಯಾವ ರೀತಿ ದಾಖಲೆ ಸರಿಯಿಲ್ಲ, ಎಲ್ಲಿ ಆಹಾರ ಧಾನ್ಯ ದುರುಪಯೋಗವಾಗಿದೆ ಎಂಬ ಬಗ್ಗೆ ತಿಳಿಸಿರಲಿಲ್ಲ. ಮಧ್ಯಾಹ್ನದವರೆಗೂ ಮುಖ್ಯ ಶಿಕ್ಷಕರನ್ನು ನಿಂದಿಸಿದ್ದಾರೆ. ಎಷ್ಟು ಹೊತ್ತಾದರೂ ಅವರ ಕಛೇರಿಯಿಂದ ಹೊರ ಹೋಗದೇ ಕುಳಿತಿದ್ದರು. ಆಗ ಮುಖ್ಯ ಶಿಕ್ಷಕರು 5,000 ರು.ಗಳನ್ನು ನೀಡಿದ ನಂತರ ಅಲ್ಲಿಂದ ತೆರಳಿದ್ದಾರೆ,’ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಪ್ರಕರಣದ ಬಗ್ಗೆ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ ಮುಖ್ಯ ಶಿಕ್ಷಕರು ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಲಿಖಿತವಾಗಿ ದೂರು ನೀಡಲಾಗುವುದು ಎಂದು ಸಿ ಎಸ್ ಗೀತಾ ಅವರಿಗೆ ತಿಳಿಸಿದ್ದಾರೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ ಮುಖ್ಯ ಶಿಕ್ಷಕರು ವರ್ಗಾವಣೆಯಾದಾಗ ಅಥವಾ ನಿವೃತ್ತಿ ಹೊಂದಿದಾಗ ಒಬ್ಬರೇ ತಪಾಸಣೆ ಹೆಸರಿನಲ್ಲಿ ಶಾಲೆಗೆ ಭೇಟಿ ನೀಡಿ ಅಲ್ಲಿಯೂ ತಪ್ಪುಗಳನ್ನು ಹುಡುಕಿ ಇಂತಿಷ್ಟೇ ಹಣ ನೀಡಬೇಕು ಎಂದು ಶಿಕ್ಷಣಾಧಿಕಾರಿಗಳು ಹಣ ಪಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
‘ನಾನು ಅಲ್ಲಿಗೆ ಭೇಟಿ ನೀಡಿದಾಗ ಮಂಡ್ಯ ಜಿಲ್ಲೆಯ ಇತರೆ ಸಹಾಯಕ ನಿರ್ದೇಶಕರು ಕರೆ ಮಾಡಿ ತಮ್ಮ ತಾಲೂಕುಗಳಲ್ಲೂ ಸಹ ಶಿಕ್ಷಣಾಧಿಕಾರಿಗಳು ಶಾಲೆಗಳಿಂದ ಹಣ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮನ್ನು ರಾಜ್ಯ ಕಚೇರಿಗೆ ಕರೆಸಿದರೆ ಸಂಪೂರ್ಣ ಮಾಹಿತಿಯನ್ನೂ ನೀಡುವುದಾಗಿ ತಿಳಿಸಿದ್ದಾರೆ,’ ಎಂದು ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.