ಕಳಪೆ ಸ್ಯಾನಿಟೈಸರ್‌ ಪೂರೈಕೆ ಸಾಬೀತು; ‘ದಿ ಫೈಲ್‌’ ವರದಿ ಎತ್ತಿ ಹಿಡಿದ ತನಿಖಾಧಿಕಾರಿ, ಹಣ ವಸೂಲಿಗೆ ಶಿಫಾರಸ್ಸು

ಬೆಂಗಳೂರು; ಕೋವಿಡ್‌ ಸಂದರ್ಭದಲ್ಲಿ ಆಂಧ್ರ ಪ್ರದೇಶ ಮೂಲದ ಎಸ್‌ಪಿವೈ ಆಗ್ರೋ ಇಂಡಸ್ಟ್ರೀಸ್‌ ರಾಜ್ಯಕ್ಕೆ ಕಳಪೆ ಮಟ್ಟದ  ಸ್ಯಾನಿಟೈಸರ್‌ ಸರಬರಾಜು ಮಾಡಿತ್ತು ಎಂದು ‘ದಿ ಫೈಲ್‌’ ಪ್ರಕಟಿಸಿದ್ದ ತನಿಖಾ ವರದಿಯನ್ನೇ ಇದೀಗ  ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಲೆಕ್ಕ ಪರಿಶೋಧನಾಕಾರಿಗಳು ದೃಢಪಡಿಸಿದ್ದಾರೆ.

 

ಕೋವಿಡ್‌ ಅವಧಿಯಲ್ಲಿ ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ  ಭ್ರಷ್ಟಾಚಾರ ಆಗಿದೆ ಮತ್ತು ಕಂಪನಿಗಳು ಸರಬರಾಜು ಮಾಡಿದ್ದ ಸ್ಯಾನಿಟೈಜರ್‌ಗಳು ಕಳಪೆ ಮಟ್ಟದ್ದು ಎಂದು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಸ್ಯಾನಿಟೈಸರ್‌ ಖರೀದಿಯಲ್ಲಿ ಎಳ್ಳಷ್ಟೂ ಅಕ್ರಮಗಳು ನಡೆದಿಲ್ಲ ಎಂದು ಹಿಂದಿನ  ಆರೋಗ್ಯ ಸಚಿವ ಶ್ರೀರಾಮುಲು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದರು.

 

ಈ ವರದಿಗಳನ್ನಾಧರಿಸಿ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದರು. ಈ ದೂರನ್ನಾಧರಿಸಿ ಲೋಕಾಯುಕ್ತದ ತಾಂತ್ರಿಕ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವರದಿಯಲ್ಲೇನಿದೆ?

 

ಸ್ಪೈ ಆಗ್ರೋ ಇಂಡಸ್ಟ್ರೀಸ್‌ ಲಿಮಿಟೆಡ್‌ ಸರಬರಾಜು ಮಾಡಿದ್ದ ಸ್ಯಾನಿಟೈಜರ್‌ ಕಳಪೆ ಮಟ್ಟದ್ದಾಗಿದೆಎ ಂದು ತಪಾಸಣೆ ಸಂಸ್ಥೆಯು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗೆ ಪಾವತಿಸಲಾದ ಮೊತ್ತಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಬಹುದಾಗಿತ್ತದೆ. ಅಲ್ಲದೇ 4.02 ಕೋಟಿ ರು.ಗಳನ್ನು ನ್ನು ಸಂಬಂಧಪಟ್ಟವರಿಂದ ವಸೂಲಿಸಿ ಸರ್ಕಾರದ ಇಲಾಖೆಗೆ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಬಹುದು ಎಂದು ಲೆಕ್ಕ ಪರಿಶೋಧನಾಧಿಕಾರಿ ಎಂ ಪಿ ಶಿವನಾಗ ಅವರು ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

 

ಸ್ಯಾನಿಟೈಸರ್‌ ತಯಾರಿಕೆಯ ಎಳ್ಳಷ್ಟೂ ಅನುಭವ ಇಲ್ಲದ ಮತ್ತು ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಅನರ್ಹಗೊಳಿಸಿರುವ ಆಂಧ್ರ ಮೂಲದ ರಾಜಕೀಯ ಹಿನ್ನೆಲೆ ಹೊಂದಿರುವ ಎಸ್ ಪಿ ವೈ ಆಗ್ರೋ ಇಂಡಸ್ಟ್ರೀಸ್‌ನಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು 4.02 ಕೋಟಿ ರು. ಮೊತ್ತದಲ್ಲಿ ಸ್ಯಾನಿಟೈಸರ್‌ನ್ನು ಖರೀದಿಸಿದ್ದನ್ನು  ‘ದಿ ಫೈಲ್‌’ ಇದೀಗ ಹೊರಗೆಡವಿತ್ತು.

 

ಇದೇ ಕಂಪನಿಯು ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಂಧ್ರ ಪ್ರದೇಶಕ್ಕೆ ನೀಡಿರುವ ಸ್ಯಾನಿಟೈಸರ್‌ ಪ್ಯಾಕೇಜ್‌ ದರಕ್ಕೂ ಮತ್ತು ಕರ್ನಾಟಕಕ್ಕೆ ಮಾರಾಟ ಮಾಡಿರುವ ದರದಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿತ್ತು.

 

ಎಳ್ಳಷ್ಟೂ ಅನುಭವವೇ ಇರಲಿಲ್ಲ

 

ಸ್ಯಾನಿಟೈಸರ್‌ ತಯಾರಿಕೆಗೆ ಸಂಬಂಧಿಸಿದಂತೆ ಈ ಕಂಪನಿಯು ನಂದಿ ಬ್ರ್ಯಾಂಡ್‌ ಹೆಸರಿನಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ನ್ನು ತಯಾರಿಸಲು ಆಂಧ್ರ ಪ್ರದೇಶ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ 2020ರ ಮಾರ್ಚ್‌ 19ರಂದು ಪರವಾನಿಗೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಅಂದರೆ 2020 ಮಾರ್ಚ್‌ 20ರಂದು ಅಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರ 2025ರವರೆಗೆ ಪರವಾನಿಗೆ ನೀಡಿ ಆದೇಶ ಹೊರಡಿಸಿತ್ತು.

ಹತ್ತೇ ದಿನದಲ್ಲಿ ಆದೇಶ ನೀಡಿದ್ದ ಇಲಾಖೆ

 

ವಿಶೇಷವೆಂದರೆ ಆಂಧ್ರ ಸರ್ಕಾರದಿಂದ ಪರವಾನಿಗೆ ದೊರೆತ 9 ದಿನದ ಅಂತರದೊಳಗೆ ಅಂದರೆ 2020ರ ಮಾರ್ಚ್‌ 29ರಂದು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿಯು ಈ ಕಂಪನಿಯಿಂದ ಕೊಟೇಷನ್‌ ಪಡೆದಿತ್ತು. ಕೊಟೇಷನ್‌ ಪಡೆದ ಮರು ದಿವಸವೇ ಅಂದರೆ ಮಾರ್ಚ್‌ 30ರಂದು 4.02 ಕೋಟಿ ರು.ಮೊತ್ತಕ್ಕೆ 180 ಎಂ ಎಲ್‌ ಪ್ರಮಾಣದ 30,000 ಬಾಟಲ್‌ ಮತ್ತು 500 ಎಂ ಎಲ್‌ನ 15,000 ಬಾಟಲ್‌ಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲು ಈ ಕಂಪನಿಗೆ ಆದೇಶ ದೊರೆತಿರುವುದು ದಾಖಲೆಯಿಂದ ತಿಳಿದು ಬಂದಿತ್ತು.

 

ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿಗೆ ಸ್ಯಾನಿಟೈಸರ್‌ ಖರೀದಿ; ಪ್ರಭಾವಿ ಸಚಿವರ ನಂಟು?

180 ಎಂ ಎಲ್‌ಗೆ 90 ರು. ಲೆಕ್ಕದಲ್ಲಿ 30,000 ಬಾಟಲ್‌ಗಳಿಗೆ ಒಟ್ಟು 27.00 ಲಕ್ಷ ರು., 500 ಎಂ ಎಲ್‌ ಯುನಿಟ್‌ಗೆ 2,500 ರು. ದರದಲ್ಲಿ ಒಟ್ಟು 15,000 ಯೂನಿಟ್‌ಗಳಿಗೆ 3.75 ಕೋಟಿ ರು. ದರ ನಿಗದಿಪಡಿಸಿತ್ತು.

 

ಆಂಧ್ರದ ಪ್ಯಾಕೇಜ್‌ ಕರ್ನಾಟಕಕ್ಕಿಲ್ಲ

 

ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಆಂಧ್ರ ಪ್ರದೇಶಕ್ಕೆ ಎಸ್‌ಪಿವೈ ಆಗ್ರೋ ಕಂಪನಿ 3,000 ರು. ಮೊತ್ತದಲ್ಲಿ 5 ಲೀಟರ್‌ನ 2 ಕ್ಯಾನ್‌, 500 ಎಂ ಎಲ್‌ನ 1 ಬಾಟಲ್‌ ಮತ್ತು ಅದರ ಜತೆಗೆ ಸ್ಟ್ಯಾಂಡ್‌ನ ಕಿಟ್‌ ಸರಬರಾಜು ಮಾಡಿತ್ತು.  ಆದರೆ ಕರ್ನಾಟಕಕ್ಕೆ ಇದೇ ಕಂಪನಿ 2,500 ರು. ಯುನಿಟ್‌ ದರದಲ್ಲಿ 5 ಲೀಟರ್‌ನ ಒಂದೇ ಒಂದು ಕ್ಯಾನ್‌ನ್ನು ನೀಡಿತ್ತು. ಅಸಲಿಗೆ 5 ಲೀಟರ್‌ ಒಂದು ಕ್ಯಾನ್‌ನ್ನು 1,125 ರು. ದರದಲ್ಲಿ ಸರಬರಾಜು ಮಾಡಲು ಹಲವು ಕಂಪನಿಗಳು ಮುಂದೆ ಬಂದಿದ್ದವು. ಆದರೆ ತಲಾ 5 ಲೀಟರ್‌ ಪ್ರಮಾಣದ 15,000 ಕ್ಯಾನ್‌ಗಳಿಗೆ 3.25 ಕೋಟಿ ನೀಡಿತ್ತು.

ತೆಲಂಗಾಣದಲ್ಲಿ ಅನರ್ಹ

 

ಕೋವಿಡ್‌-19ರ ನಿರ್ವಹಣೆಗಾಗಿ ಸ್ಯಾನಿಟೈಸರ್‌ ಖರೀದಿಗೆ ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ 2020ರ ಏಪ್ರಿಲ್‌ 30ರಂದು ಕರೆದಿದ್ದ ಟೆಂಡರ್‌ನಲ್ಲಿ ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ ಭಾಗವಹಿಸಿತ್ತಾದರೂ ಈ ಕಂಪನಿ ಉತ್ಪನ್ನವಾದ ಹ್ಯಾಂಡ್‌ ರಬ್‌ ಸ್ಯಾನಿಟೈಸರ್‌ನ್ನು ಶಿಫಾರಸ್ಸು ಮಾಡಿರಲಿಲ್ಲ. ಅಲ್ಲದೆ ಈ ಕಂಪನಿಯನ್ನು ಟೆಂಡರ್‌ನಿಂದ ಅನರ್ಹಗೊಳಿಸಿತ್ತು.

ಕಂಪನಿಗಿದೆ ರಾಜಕೀಯ ಹಿನ್ನೆಲೆ

 

ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಸಂಸ್ಥಾಪಕ ಎಸ್‌ ಪಿ ವೈ ರೆಡ್ಡಿ ಮೂಲತಃ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದವರು. ಎಸ್‌ ಪಿ ವೈ ಅವರು ನಂದ್ಯಾಲ ಕ್ಷೇತ್ರದಿಂದ ಒಟ್ಟು 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಇವರು ಆ ನಂತರ ಕಾಂಗ್ರೆಸ್‌ನ್ನೂ ಪ್ರತಿನಿಧಿಸಿದ್ದರು.

‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 50 ಮುಖಗಳು

ಇದಾದ ನಂತರ 2014ರಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದರಲ್ಲದೆ ಆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ತೆಲುಗು ದೇಶಂ ಪಕ್ಷಕ್ಕೆ ಜಿಗಿದಿದ್ದರು. ಆದರೆ ನಂದ್ಯಾಲ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದ ನಂತರ ಜನಸೇನಾ ಪಾರ್ಟಿಗೆ ಸೇರ್ಪಡೆಯಾಗಿದ್ದರು.

the fil favicon

SUPPORT THE FILE

Latest News

Related Posts