ಆರ್‌ಎಸ್‌ಎಸ್‌ ವಿರೋಧಿ ಘೋಷಣೆ; 22 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಪೂರ್ವಾನುಮತಿ

ಬೆಂಗಳೂರು; ಹಾವೇರಿಯ ಸವಣೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆಯಲ್ಲಿ ಆರ್‌ಎಸ್‌ಎಸ್‌ ವಿರೋಧಿ ಘೋಷಣೆ ಕೂಗಿರುವುದು ಮತ್ತು ಸೌಹಾರ್ದತೆಗೆ ಘಾತಕವಾಗುವ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ 22 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪೂರ್ವಾನುಮತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ವಿರೋಧಿ ಕೃತ್ಯವನ್ನು ಖಂಡಿಸಿ ಹಾವೇರಿಯ ಸವಣೂರಿನಲ್ಲಿ 2021ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆಯಲ್ಲಿ ಆರೋಪಿತರು ಆರ್‌ಎಸ್‌ಎಸ್‌ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಅಲ್ಲದೇ ಆರೋಪಿತರು ಉದ್ದೇಶಪೂರ್ವಕವಾಗಿ ವಿವಿಧ ಗುಂಪುಗಳ ಮಧ್ಯೆ ದ್ವೇಷವನ್ನುಂಟು ಮಾಡಲು ಯತ್ನಿಸಿದ್ದರು. ಈ ಮೂಲಕ ಸೌಹಾರ್ದತೆಗೆ ಘಾತಕವಾಗುವ ಕೃತ್ಯಗಳು ಎಸಗಿರುವುದು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿದ್ದರು ಎನ್ನಲಾದ ಕೃತ್ಯವನ್ನು ತನಿಖಾಧಿಕಾರಿಗಳು ದೃಢಪಡಿಸಿರುವುದು ತಿಳಿದು ಬಂದಿದೆ.

 

ತನಿಖಾಧಿಕಾರಿಗಳು ಸಲ್ಲಿಸಿದ್ದ ವರದಿ ಆಧರಿಸಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಪೊಲೀಸ್‌ ಮಹಾನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಅಂಗೀಕರಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ಆರೋಪಿತರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು  ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ HD/159/2023-CR­_A-Home Department, computer number 1204502) ಲಭ್ಯವಾಗಿವೆ.

 

ಪ್ರಕರಣದ ವಿವರ

 

ತ್ರಿಪುರಾ ರಾಜ್ಯದಲ್ಲಿ ನಡೆದಿದ್ದ ಮುಸ್ಲಿಂ ವಿರೋಧಿ ಕೃತ್ಯವನ್ನು ಖಂಡಿಸಿ ಹಾವೇರಿಯ ಸವಣೂರಿನ ಬಂಕಾಪುರ ವೃತ್ತದಲ್ಲಿ 2021ರ ನವೆಂಬರ್‌ 15ರಂದು ಪ್ರತಿಭಟನೆ ನಡೆದಿತ್ತು. ಮುಸ್ಲಿಂ ಸಮುದಾಯದ ಇತರೆ ಜನರನ್ನು ಅಕ್ರಮವಾಗಿ ಗುಂಪು ಸೇರಿಸಿಕೊಂಡು ಸವಣೂರು ಪಟ್ಟಣದಲ್ಲಿ ಅನ್ಯ ಕೋಮಿನವರ ಭಾವನೆಗಳಿಗೆ ಧಕ್ಕೆ ಮತ್ತು ವೈರ, ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಘೋಷಣೆಗಳನ್ನು ಕೂಗಿದ್ದರು.

 

‘ಹಮ್‌ ಸೇ ಜೋ ಟಕರಾಯೇಗಾ ವೋ ಮಿಟ್ಟಿ ಮೇ ಮಿಲಜಾಯೇಗಾ ಹಮ್‌ಸೇ ಕಡವಾ ಹೈ ವೋ ಆರ್‌ಎಸ್‌ಎಸ್‌ ಕಾ ಬಡವಾ ಹೈ, ಅರ್‌ಎಸ್‌ಎಸ್‌ ವಾಲೋಂಕೋ ಗೋಲಿ ಮಾರೋ, ಸಾಲಂಕೋ, ಆರ್‌ಎಸ್‌ಎಸ್‌ ಮುರ್ದಾಬಾದ್‌ ಎಂಬ ಘೋಷಣೆಗಳನ್ನು ಕೂಗುತ್ತಾ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ಕೋಮು ಗಲಭೆಗಳಿಗೆ ಪ್ರಚೋದಕ ಘೋಷಣೆಗಳನ್ನು ಕೂಗಿದ್ದರು,’ ಎಂದು ಆರೋಪಿಸಿದ್ದ ಪೊಲೀಸ್‌ ಇಲಾಖೆಯ ಸಿಬ್ಬಂದಿ ಮಹೇಶ್‌ ಸುರೇಶಪ್ಪ ಕೇಲೂರ ಎಂಬುವರು ದೂರು ನೀಡಿದ್ದರು.

 

ಈ ದೂರನ್ನಾಧರಿಸಿ 22 ಮಂದಿ ಆರೋಪಿತರ ವಿರುದ್ಧ ಐಪಿಸಿ 143, 153 ಎ(1) (ಎ)(ಬಿ) 149ರ ಅಡಿಯಲ್ಲಿ ಮೊಕದ್ದಮೆ (ಮೊ.ಸಂ. 205/2021) ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್‌ ಸುರೇಶಪ್ಪ ಕೇಲೂರ ಅವರು ಆರ್‌ಎಸ್‌ಎಸ್‌ ವಿರೋಧಿ ಘೋಷಣೆಗಳನ್ನು ಕೂಗಿರುವ ಕುರಿತು ವಾಟ್ಸಾಪ್‌ಗಳಲ್ಲಿ ಹರಿದಾಡಿದ್ದ ವಿವಾದಿತ ವಿಡಿಯೋ ಮತ್ತು ಆಡಿಯೋ ಸಿಡಿ ಮತ್ತು ಭಾವಚಿತ್ರ ಹಾಗೂ ಅವರು ಪ್ರತಿಭಟನೆಯ ಚಿತ್ರೀಕರಣ ಮಾಡಿದ್ದ ವಿಡಿಯೋವನ್ನು ಪುರಾವೆಯನ್ನಾಗಿ ಒದಗಿಸಿದ್ದರು.

 

ಈ ಎಲ್ಲಾ ಸಾಕ್ಷ್ಯ ಮತ್ತು ಪುರಾವೆಗಳನ್ನಾಧರಿಸಿ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗಳು ಆರೋಪಿತರು ಐಪಿಸಿ 153 (ಎ), 295 (ಎ) 505 (2) ಅಡಿಯಲ್ಲಿ ಆರೋಪಿತರು ಕೃತ್ಯವೆಸಗಿ ಶಿಕ್ಷಾರ್ಹ ಅಪರಾಧ ಎಸಗಿರುವುದನ್ನು ದೃಢಪಡಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿತರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು 2023ರ ಸೆ.1ರಂದು ಸರ್ಕಾರದ ಪೂರ್ವಾನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಈ ಪ್ರಸ್ತಾವನೆಯನ್ನು ಒಳಾಡಳಿತ ಇಲಾಖೆಯ ಕಾನೂನು ಅಧಿಕಾರಿಗಳು ಪರಿಶೀಲಿಸಿದ್ದರು.

 

‘ತನಿಖೆ ವೇಳೆಯಲ್ಲಿ ಕಲೆ ಹಾಕಿದ್ದ ಪುರಾವೆಗಳು, ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳಿಂದ ಆರೋಪಿತರು ಕೃತ್ಯವೆಸಗಿರುವುದು ದೃಢಪಟ್ಟಿದೆ. ಈ ವಿವರಣೆಗಳ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ಆರೋಪಿತರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸಿಆರ್‌ಪಿಸಿ 196 (1)(ಎ) ಅಡಿ ಪೂರ್ವಾನುಮತಿ ನೀಡಬಹುದು,’ ಎಂದು ಹಿರಿಯ ಕಾನೂನು ಅಧಿಕಾರಿಯಾದ ಸರೋಜ ಸಿ ಕೆ ಅವರು 2024ರ ಫೆ.12ರಂದು ಅಭಿಪ್ರಾಯ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts