ಗ್ಯಾರಂಟಿ ಸಮೀಕ್ಷೆ; 3 ದಿನದೊಳಗೇ ಪೂರ್ಣಗೊಳಿಸಲು ತೀವ್ರ ಒತ್ತಡ, ಕಾರ್ಯಕರ್ತೆಯರ ಕೆಂಗಣ್ಣು

ಬೆಂಗಳೂರು; ಐದು ಗ್ಯಾರಂಟಿ ಯೋಜನೆಗಳ ಕುರಿತಾಗಿ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ  ಪೂರ್ಣಗೊಳಿಸಬೇಕು ಎಂದು    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ತೀವ್ರ ಒತ್ತಡ ಹೇರಿದ್ದಾರೆ. ಇದರ ಮಧ್ಯೆ ಅಭಿವೃದ್ಧಿ ಆಯುಕ್ತರು ಸಹ ಮುಂದಿನ ಮೂರು ದಿನದೊಳಗೇ ಸಮೀಕ್ಷೆಯನ್ನು ತ್ವರಿತಗೊಳಿಸಬೇಕು ಎಂದು ನಿರ್ದೇಶಿಸಿರುವುದು  ಇದೀಗ ಬಹಿರಂಗವಾಗಿದೆ.

 

ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಚುನಾವಣೆ ಆಯೋಗವು ಸಿದ್ಧತೆಗಳನ್ನು ನಡೆಸುತ್ತಿದೆ. ಈ ಹೊತ್ತಿನಲ್ಲಿಯೇ  ಗ್ಯಾರಂಟಿ ಯೋಜನೆಗಳ ಕುರಿತು ಜನಾಭಿಪ್ರಾಯವನ್ನು ತ್ವರಿತಗತಿಯಲ್ಲಿ ಪಡೆಯಲು ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ  ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಒತ್ತಡ ಹೇರಿದೆ.

 

ಈ ಸಮೀಕ್ಷೆಯನ್ನು 10ರಿಂದ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಕಾಲಕಾಲಕ್ಕೆ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ  ಸೂಚಿಸಿದ್ದಾರೆ. ಹೀಗಾಗಿ  ಅಭಿವೃದ್ಧಿ ಆಯುಕ್ತರು ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು,  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅಂತಿಮವಾಗಿ ಈ ಎಲ್ಲಾ ಒತ್ತಡವು  ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗಳ ಮೇಲೆ ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ನಡುವೆಯೂ  ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಡ ಹೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಮಾರ್ಚ್‌ 11ರಂದು ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿ ಎಂ ಟಿಪ್ಪಣಿಯಲ್ಲೇನಿದೆ?

 

ಕರ್ನಾಟಕ ಸರ್ಕಾರ ನಾಗರೀಕರ ಜೀವನೋಪಾಯಕ್ಕೆ ನೆರವಾಗಲು ಹಾಗೂ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಎದುರಿಸಲು ಐದು ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಉದ್ದೇಶಿತ ನಾಗರಿಕರುಗಳಿಗೆ ಈ ಗ್ಯಾರಂಟಿಗಳನ್ನು ತಲುಪಿಸುವುದು ಅತ್ಯಗತ್ಯ. ಆದ್ದರಿಂದ ಐದು ಗ್ಯಾರಂಟಿಗಳು ಜನಸಾಮಾನ್ಯರಿಗೆ ತಲುಪುತ್ತಿರುವ ಬಗ್ಗೆ, ನಾಗರಿಕರು ಅದರ ಪ್ರಯೋಜನವನ್ನು ಯಾವ ರೀತಿ ಪಡೆಯುತ್ತಿದ್ದಾರೆ ಹಾಗೂ ಈ ಗ್ಯಾರಂಟಿಗಳನ್ನು ಪಡೆಯಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ ಎಂಬ ಬಗ್ಗೆ ವಿಚಾರಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಗೆ ಭೇಟಿ ಕೊಟ್ಟು ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

 

ಈ ಸಮೀಕ್ಷೆ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಹಮಟ್ಟದಲ್ಲಿ ಇದರ ಒಟ್ಟಾರೆ ಮೇಲುಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳೀಗೆ ನೀಡಲಾಗಿದೆ. ಈ ಕುರಿತು ಈಗಾಗಲೇ ಎರಡು ಇಲಾಖೆಗಳ ಸಚಿವರುಗಳಿಗೆ ಸೂಚನೆ ನೀಡಲಾಗಿದೆ.

 

ಈ ಸಮೀಕ್ಷೆಯನ್ನು 10ರಿಂದ 15 ದಿನಗಳಲ್ಲಿ ಮಾಡಿ ಮುಗಿಸುವುದು ಸೂಕ್ತ. ಈ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಕಾರ್ಯದ ಒಟ್ಟಾರೆ ಆಡಳಿತಾತ್ಮಕ ಮೇಲುಸ್ತುವಾರಿಯನ್ನು ಅಭಿವೃದ್ಧಿ ಆಯುಕ್ತರಿಗೆ ವಹಿಸಿದೆ. ಹಾಗೂ ಕಾಲಕಾಲಕ್ಕೆ ಇದರ ಬಗ್ಗೆ ನನಗೆ ವರದಿಯನ್ನು ಸಲ್ಲಿಸಬೇಕು ಎಂದು 2024ರ ಮಾರ್ಚ್‌ 11ರಂದು ಹೊರಡಿಸಿದ್ದ ಟಿಪ್ಪಣಿಯಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು  2024ರ ಮಾರ್ಚ್‌ 11ರ ಅಂತ್ಯಕ್ಕೆ ಶೇ.53ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ತೀವ್ರ ಕೊರತೆ ಕಂಡು ಬಂದಿದೆ. ಹೀಗಾಗಿ ಈ ಸಮೀಕ್ಷೆಯನ್ನು ತ್ವರಿತಗೊಳಿಸಿ ಮುಂದಿನ ಮೂರು ದಿನಗಳಲ್ಲಿ ಸಕಾರಾತ್ಮಕವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಪಂಗಳ ಸಿಇಒಗಳಿಗೆ ಅಭಿವೃದ್ಧಿ ಆಯುಕ್ತರಾದ ಡಾ ಶಾಲಿನಿ ರಜನೀಶ್‌ ಅವರು 2024ರ ಮಾರ್ಚ್‌ 11ರಂದೇ ಟಿಪ್ಪಣಿ ಹೊರಡಿಸಿದ್ದಾರೆ. ಈ ಕುರಿತು 2024ರ ಮಾರ್ಚ್‌ 14ರಂದು ವಿಡಿಯೋ ಸಂವಾದ ಸಭೆಯನ್ನೂ ಆಯೋಜಿಸಿದ್ದಾರೆ. ಇದರ ಪ್ರತಿಯೂ ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ಗೃಹ ಲಕ್ಷ್ಮಿ ಯೋಜನೆ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2024ರ ಮಾರ್ಚ್‌ 11ರ ಅಂತ್ಯಕ್ಕೆ 68,32, 977 ಮಂದಿ ಫಲಾನುಭವಿಗಳೊಂದಿಗೆ  ಸಮೀಕ್ಷೆ ನಡೆಸಲಾಗಿದೆ. ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ 92,25, 840, ಯುವ ನಿಧಿ ಯೋಜನೆ ಸಂಬಂಧ 3,80,690, ಅನ್ನ ಭಾಗ್ಯ ಯೋಜನೆಗೆ 1,51,93,766 ಮಂದಿ, ಶಕ್ತಿ ಯೋಜನೆಗೆ 71,14,060 ಮಂದಿ ಸೇರಿ ಒಟ್ಟಾರೆ 38,747,333 ಸಂಖ್ಯೆಯ ಫಲಾನುಭವಿಗಳ  ಸಮೀಕ್ಷೆ ನಡೆಸಿರುವುದು ಗೊತ್ತಾಗಿದೆ.

 

ಈ ಪೈಕಿ ಆಶಾ ಕಾರ್ಯಕರ್ತೆಯರು 1,20,59,396 ಮಂದಿಯನ್ನು ಅಂಗನವಾಡಿ ಕಾರ್ಯಕರ್ತೆಯರು 2,61,85,056 ಮಂದಿಯನ್ನು ಸಮೀಕ್ಷೆ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ 3,94,277 ಫಲಾನುಭವಿಗಳನ್ನು ಸಮೀಕ್ಷೆ ನಡೆಸಿರುವುದನ್ನು ಹೊರತುಪಡಿಸಿ ರಾಜ್ಯದ ವಿವಿಧ ನಗರಗಳಲ್ಲಿ ಸಮೀಕ್ಷೆ ನಡೆಸಿಲ್ಲ ಎಂಬುದು ತಿಳಿದು ಬಂದಿದೆ.

 

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆಗೆ ರಾಜ್ಯ ಸರ್ಕಾರವು  12 ಕೋಟಿ ರು. ವೆಚ್ಚ ಮಾಡಲಿದೆ.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ. ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

SUPPORT THE FILE

Latest News

Related Posts