ಬೆಂಗಳೂರು; ಖಾಸಗಿ ಸಂಘ ಸಂಸ್ಥೆಗಳ ಮೂಲಕ ಪರ್ಯಾಯವಾಗಿ ರಚಿಸಲು ಹೊರಟಿರುವ ಫ್ಯಾಕ್ಟ್ ಚೆಕ್ ಘಟಕಕ್ಕೆ ವಾರ್ಷಿಕ 7.50 ಕೋಟಿ ರು. ವೆಚ್ಚ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ.
ಗೃಹ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಿದೆ. ಇಲಾಖೆಯಲ್ಲಿಯೇ ನುರಿತ ಸಿಬ್ಬಂದಿ ಇದರ ಉಸ್ತುವಾರಿ ಹೊತ್ತಿದ್ದಾರೆ. ಆದರೂ ಸಹ ಪರ್ಯಾಯವಾಗಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಮಾಡಲು ವಾರ್ಷಿಕ 7.50 ಕೋಟಿ ರು. ವೆಚ್ಚ ಮಾಡಲು ಮುಂದಾಗಿರುವುದು ಇಲಾಖೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವವರ ಪತ್ತೆಗಾಗಿ ಮಾಹಿತಿ ತಿರುಚುವಿಕೆ ಪತ್ತೆ ಘಟಕಕ್ಕೆ ವಾರ್ಷಿಕ 7.50 ಕೋಟಿ ರು.ದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಹೀಗಾಗಿ ಕಂಪನಿ, ಏಜೆನ್ಸಿ, ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪ್ರಸ್ತಾವನೆಯ ಕಡತವನ್ನು ಪಡೆದುಕೊಂಡಿದೆ.
ಫ್ಯಾಕ್ಟ್ ಚೆಕ್ ತಂಡಕ್ಕೆ ವಾರ್ಷಿಕ 50 ಲಕ್ಷ, ವಿಶ್ಲೇಷಣೆ ತಂಡಕ್ಕೆ 6 ಕೋಟಿ ಮತ್ತು ಮೂಲ ಸೌಕರ್ಯಕ್ಕೆ 1 ಕೋಟಿ ರು. ಎಂದು ವೆಚ್ಚದ ಪ್ರಸ್ತಾವನೆ ಸರ್ಕಾರದ ಮುಂದಿದೆ. ಅದೇ ರೀತಿ ವಿಶ್ಲೇಷಣೆ ತಂಡಕ್ಕೆ ಮೂಲ ಸೌಕರ್ಯಗಳಿಗೆ 1 ಕೋಟಿ, ತಾಂತ್ರಿಕ ಪರವಾನಗಿಗೆ 2.5 ಕೋಟಿ ರು., ಮಾನವ ಸಂಪನ್ಮೂಲಕ್ಕೆ 1.5ಕೋಟಿ, ಕಾರ್ಯಕ್ರಮಗಳ ನಿರ್ವಹಣೆಗಾಗಿ 1.0 ಕೋಟಿ ರು. ಎಂದು ವೆಚ್ಚದ ಪ್ರಸ್ತಾವನೆಯಲ್ಲಿರುವುದು ಗೊತ್ತಾಗಿದೆ.
ಸೆಂಟರ್ ಅಫ್ ಎಕ್ಸ್‌ಲೆನ್ಸ್ ಸೈಬರ್ ಸೆಕ್ಯೂರಿಟಿಯ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡು ಅವರು ಈ ಪ್ರಸ್ತಾವನೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ಸರ್ಕಾರಕ್ಕೆ ವಿವರಿಸಿದ್ದಾರೆ. ತಪ್ಪು ಮಾಹಿತಿ ಮತ್ತು ದುರ್ಮಾಹಿತಿಗಳ ನಡುವಿನ ವ್ಯತ್ಯಾಸದ ಕುರಿತು ಉದಾಹರಣೆಗಳನ್ನು ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕವನ್ನು ಗೃಹ ಇಲಾಖೆಯಲ್ಲಿಯೇ ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಹಾಗೂ ಚಟುವಟಿಕೆಗಳನ್ನುನಡೆಸಲು ನುರಿತ ಸಂಸ್ಥೆಗಳನ್ನು ಎಂಪ್ಯಾನಲ್‌ಮೆಂಟ್ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದರು.
‘ಆರಂಭದ ನಾಲ್ಕು ತಿಂಗಳವರೆಗೆ ಸದರಿ ಘಟಕವನ್ನು ಕಾರ್ಯಗತಗೊಳಿಸುವಲ್ಲಿ ಸಹಾಯವಾಗುವಲ್ಲಿ ಕೆ-ಟೆಕ್ ಸೆಂಟ್ ಆಫ್ ಎಕ್ಸಲೆನ್ಸ್ ಸೈಬರ್ ಸೆಕ್ಯೂರಿಟಿ , ಮಾಹಿತಿ ತಂತ್ರಜ್ಞಾನ ಇಲಾಖೆಯ ವತಿಯಿಂದ ಗೃಹ ಇಲಾಖೆಗೆ ತಾಂತ್ರಿಕ ಬೆಂಬಲ ನೀಡಲಾಗುವುದು. ಹಾಗೂ ಮುಂದಿನ ಹಂತವನ್ನು ಗೃಹ ಇಲಾಖೆಯೇ ಘಟಕದ ಕಾರ್ಯಾಚರಣೆ ಮುಂದುವರೆಸಲಿದೆ,’ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿದ್ದರು.
ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸಂಬಂಧಿಸಿದಂತೆ ನುರಿತ ಸಂಸ್ಥೆಗಳಿಂದ ಈಗಾಗಲೇ ಆಸಕ್ತಿ ವ್ಯಕ್ತಪಡಿಸುವಿಕೆ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆ ಪ್ರಕ್ರಿಯೆಗಾಗಿ ತಜ್ಞರನ್ನೊಳಗೊಂಡ ಮೌಲ್ಯಮಾಪನ ಸಮಿತಿಯನ್ನೂ ರಚಿಸಿದೆ ಎಂದು ಗೊತ್ತಾಗಿದೆ.
ಆದರೆ ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣ ನಿಗಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಧಾನಸಭೆಗೆ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಫೇಕ್ ನ್ಯೂಸ್‌ಗಳನ್ನು ಹರಡುವವರ ವಿರುದ್ಧ ರಾಜ್ಯ ಸರ್ಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಹರೀಶ್ ಪೂಂಜಾ ಅವರು ನಿಯಮ 73 ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.
ಉತ್ತರದಲ್ಲೇನಿದೆ?
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸಲಾಗಿದೆ. ಈ ಎಲ್ಲಾ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.
ಈ ಘಟಕಗಳು ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ, ಎಕ್ಸ್ (ಟ್ವಿಟ್ಟರ್) , ಯೂ ಟ್ಯೂಬ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಾರೆ.
ಯಾವುದಾದರೂ ಸುಳ್ಳು ಸುದ್ದಿ, ಪ್ರಚೋದನಾತ್ಮಕ ಸಂದೇಶ ಕಂಡುಬಂದಲ್ಲಿ ಕೂಡಲೇ ಆಯಾ ಘಟಕಗಳ ಮಟ್ಟದಲ್ಲಿಯೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈವರೆಗೆ ಒಟ್ಟು 155 ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಬೆಂಗಳೂರು ನಗರದಲ್ಲಿ 60, ಮಂಗಳೂರು ನಗರದಲ್ಲಿ 25, ಬೆಳಗಾವಿ ನಗರದಲ್ಇ 8, ಕಲ್ಬುರ್ಗಿ ನಗರದಲ್ಲಿ 11, ಕೆಜಿಎಫ್‌ನಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 1, ಉತ್ತರ ಕನ್ನಡದಲ್ಲಿ 28, ವಿಜಯನಗರದಲ್ಲಿ 8, ಹಾವೇರಿಯಲ್ಲಿ 1, ಬಳ್ಳಾರಿಯಲ್ಲಿ 2, ಬೀದರ್‍ನಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.
ಸುಳ್ಳು ಸುದ್ದಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಶೀಘ್ರವೇ ಫ್ಯಾಕ್ಟ್ ಚೆಕ್ ಕಮಿಟಿ ರಚಿಸಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ನಡೆ ಬಗ್ಗೆ ಯಾವುದೇ ಆತಂಕ ಬೇಡ. ನಾವೇನೂ ರಾಜಕೀಯ ದ್ವೇಷ ಸಾಧಿಸಲು ಹೊರಟಿಲ್ಲ. ಮಾಧ್ಯಮಗಳನ್ನು ನಿಯಂತ್ರಣದಲ್ಲಿಡುವುದೂ ಇದರ ಉದ್ದೇಶವಲ್ಲ. ಈ ಬಗ್ಗೆ ಯಾರಲ್ಲೂ ಆತಂಕಬೇಡ. ಸುಳ್ಳು ಮಾಹಿತಿಯ ಸೃಷ್ಟಿಯ ಬಗ್ಗೆ ಹಾಗೂ ಇದರ ಪರಿಣಾಮದ ಬಗ್ಗೆ ಸಮಿತಿ ನಿಗಾ ಇಡಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು.
ಫ್ಯಾಕ್ಟ್ ಚೆಕ್ ಸಮಿತಿ ಕಾರ್ಯನಿರ್ವಹಣೆ ಹೇಗಿರುತ್ತದೆ?
ಫ್ಯಾಕ್ಟ್ ಚೆಕಿಂಗ್ ತಂಡ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸಲಿದೆ. ಹಾಗೂ ಸುದ್ದಿಯ ಮೂಲ ಪತ್ತೆಗೆ ಕೆಲಸ ಮಾಡಲಿದೆ. ವಿಶ್ಲೇಷಣಾ ತಂಡ ಸುಳ್ಳು ಮಾಹಿತಿಯ ಸೃಷ್ಟಿಯ ಬಗ್ಗೆ ಹಾಗೂ ಇದರ ಪರಿಣಾಮದ ಬಗ್ಗೆ ನಿಗಾ ಇಡಲಿದೆ. ಹಾಗೂ ಸುಳ್ಳು ಸುದ್ದಿಯ ಬಗ್ಗೆ ಪೂರ್ವ ಮಾಹಿತಿಯನ್ನು ನೀಡಲಿದೆ.
ಸಾಮರ್ಥ್ಯ ಬಲವರ್ಧನೆ ತಂಡ, ಸುಳ್ಳು ಸುದ್ದಿಯ ಬಗ್ಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲಿದೆ. ಈ ಎಲ್ಲಾ ತಂಡಗಳ ಕಾರ್ಯ ನಿರ್ವಹಣೆಯನ್ನು ಮೇಲುಸ್ತುವಾರಿ ಸಮಿತಿ ವಹಿಸಲಿದೆ.
ಫ್ಯಾಕ್ಟ್ ಚೆಕ್ ಪ್ರಕ್ರಿಯೆ ಹೇಗೆ?
ಸಾರ್ವಜನಿಕರು ಸುಳ್ಳು ಸುದ್ದಿಯ ಬಗ್ಗೆ ದೂರು ನೀಡಬಹುದು ಹಾಗೂ ಫ್ಯಾಕ್ಟ್ ಚೆಕ್ ಏಜೆನ್ಸಿಗಳು ಸುಳ್ಳು ಸುದ್ದಿಯ ಬಗ್ಗೆ ಪರಿಶೀಲನೆ ನಡೆಸಲಿದೆ.
ದೂರು ಸಲ್ಲಿಕೆಯಾದ ಕೂಡಲೇ ಫ್ಯಾಕ್ಟ್ ಚೆಕ್ ಸಮಿತಿ ಪ್ರಾಥಮಿಕ ಪರಿಶೀಲನೆ ನಡೆಸಲಿದೆ. ಈ ಮಾಹಿತಿಯ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆಯೇ ಎಂದು ಪರಿಶೀಲನೆ ನಡೆಸಲಿದೆ. ಇದು ಪೂರ್ಣಗೊಂಡ ಬಳಿಕ ಮೊದಲ ಹಂತದ ವಿಶ್ಲೇಷಣೆ ಮಾಡಲಿದೆ. ನಂತರ ಅಂತಿಮ ವರದಿಯನ್ನು ಸಲ್ಲಿಸಲಿದೆ.
ಈ ವರದಿಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಮೇಲುಸ್ತುವಾರಿ ಸಮಿತಿ ವಿಶ್ಲೇಷಣೆ ಮಾಡಲಿದೆ. ಸುಳ್ಳು ಸುದ್ದಿಯ ವಿರುದ್ಧ ಕಾನೂನು ಕ್ರಮದ ಅಗತ್ಯವಿದ್ದರೆ ಪೊಲೀಸ್ ದೂರು ದಾಖಲಿಸಲಿದೆ. ಹಾಗೂ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಲಿದೆ ಎಂದು ಮಾಹಿತಿ ಒದಗಿಸಿದ್ದರು.