ಎನ್‌ಇಪಿ ಮುಂದಿರಿಸಿ ಅಕ್ರಮ ನೇಮಕ ಸಕ್ರಮಗೊಳಿಸಿದ ಸರ್ಕಾರ; ಕಸದ ಬುಟ್ಟಿಗೆ ಸೇರಿದ ತನಿಖಾ ವರದಿಗಳು

ಬೆಂಗಳೂರು; ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳಿಗೆ ಸೂಕ್ತ ವಿದ್ಯಾರ್ಹತೆ ಇಲ್ಲದಿದ್ದರೂ ಅವರ ಹಿತಾಸಕ್ತಿ ಕಾಯುವ ಉದ್ದೇಶದಿಂದ ಅನುಮೋದನೆ ಪಡೆಯದೇ ಕೋರ್ಸ್‌ಗಳನ್ನೇ ಬದಲಾಯಿಸಿತ್ತು. ಈ ಪ್ರಕ್ರಿಯೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಕ್ಷಾ ಕವಚವನ್ನಾಗಿ ಬಳಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಬಿಜೆಪಿಯ ಮಾಜಿ ಸಚಿವ ಹಾಗೂ ಸಂಸದರೊಬ್ಬರ ಅಳಿಯ ಎಂದು ಹೇಳಲಾಗಿರುವ ಸಹಾಯಕ ಪ್ರಾಧ್ಯಾಪಕರೊಬ್ಬರು  ಸೇರಿದಂತೆ ಮೂವರು ಬೋಧಕರು ನ್ಯಾನೋ ಟೆಕ್ನಾಲಜಿ ವಿಷಯದಲ್ಲಿ ಸೂಕ್ತ ವಿದ್ಯಾರ್ಹತೆ ಹೊಂದಿರಲಿಲ್ಲ. ಆದರೂ ಸಹ ಅವರ ಪ್ರೊಬೇಷನರಿ (ಖಾಯಂಪೂರ್ವ ಸೇವಾ ಅವಧಿ ಮುಕ್ತಾಯ) ಅವಧಿಯನ್ನು ಹಿಂದಿನ ಸರ್ಕಾರವು ಘೋಷಣೆ ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಸೂಕ್ತ ವಿದ್ಯಾರ್ಹತೆಯೇ ಇರಲಿಲ್ಲ ಎಂದು ತನಿಖಾ ಆಯೋಗಗಳು ಸಾಬೀತುಪಡಿಸಿದ್ದ  ವರದಿಯನ್ನೂ ಈಗಿನ ಕಾಂಗ್ರೆಸ್‌ ಸರ್ಕಾರವು ಬದಿಗಿರಿಸಿ  ಡಾ ಸಿ ಎಸ್‌ ಆನಂದ್‌ ಕುಮಾರ್‌ ಅವರನ್ನು  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿ ನೇಮಿಸಿದೆ. ಇದಕ್ಕೆ ಸಚಿವ ಡಾ ಎಂ ಸಿ ಸುಧಾಕರ್‌ ಕೂಡ ಅನುಮೋದನೆ ನೀಡಿದ್ದರು ಎಂಬುದು ತಿಳಿದು ಬಂದಿದೆ.

 

ಈ ಪ್ರಕರಣದ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಇದೇ ನೇಮಕಾತಿ ಪ್ರಕರಣದಲ್ಲಿ ಅಕ್ರಮಗಳು, ಲೋಪ, ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಸರ್ಕಾರವು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಕೇಶವ ನಾರಾಯಣ ನೇತೃತ್ವದ ಏಕ ಸದಸ್ಯ ಆಯೋಗ, ಎ ಜಿ ಆಡಿಟ್‌, ಮತ್ತು ವಿಟಿಯು ನೇಮಿಸಿದ್ದ ಎಂ ಜಿ ವೆಂಕಟೇಶಯ್ಯ ಅವರು ನೀಡಿದ್ದ ವರದಿ ನೀಡಿತ್ತು.

 

ಡಾ ಆನಂದ ಕುಮಾರ್‌ ಸಿ ಎಸ್‌, ಡಾ ಪ್ರಸನ್ನ ಡಿ ಎಸ್‌, ಡಾ ದಿನೇಶ್‌ ರಂಗಪ್ಪ ಅವರು ಸೂಕ್ತ ವಿದ್ಯಾರ್ಹತೆ ಹೊಂದಿಲ್ಲ ಎಂದು ತನಿಖಾ ಆಯೋಗದ ವರದಿಯಲ್ಲಿ ಹೆಸರಿಸಿತ್ತು. ಈ ಪೈಕಿ ಡಾ ಆನಂದ ಕುಮಾರ್‌ ಸಿ ಎಸ್‌ ಅವರು ಮಾಜಿ ಸಚಿವ ಹಾಗೂ ಮಾಜಿ ಸಂಸದರೊಬ್ಬರ ಅಳಿಯ ಎಂಬ ಕಾರಣಕ್ಕೆ ಮೂವರ ಪ್ರೊಬೇಷನರಿ ಅವಧಿಯನ್ನು ಘೋಷಿಸಲಾಗಿದೆ ಎಂದು ಗೊತ್ತಾಗಿದೆ.

 

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೇಶವನಾರಾಯಣ ಅವರ ನೇತೃತ್ವದ ಏಕ ಸದಸ್ಯ ಆಯೋಗದ ತನಿಖಾಧಿಕಾರಿ ವರದಿಯ ಅನ್ವಯ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ಬಾಕಿ ಇತ್ತು. ಅಲ್ಲದೇ ನೇಮಕಾತಿ ಪ್ರಕ್ರಿಯೆ, ಖಾಯಂಪೂರ್ವ ಅವಧಿ ಘೋಷಣೆಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳಲ್ಲಿ ವಿಟಿಯು ಅನುಸರಿಸಿರುವ ಕ್ರಮಗಳು ಹಾಗೂ ನಿರ್ಧಾರಗಳ ಕುರಿತು ಸರ್ಕಾರಕ್ಕೆ ಯಾವುದೇ ಮಾಹಿತಿ ಒದಗಿಸಿರಲಿಲ್ಲ.

 

ಈ ಮೂವರಿಗೂ ಸೂಕ್ತ ವಿದ್ಯಾರ್ಹತೆ ಇಲ್ಲ ಎಂದು ಸಾಬೀತುಪಡಿಸಿದ್ದ ನ್ಯಾಯಾಂಗ ತನಿಖಾ ಆಯೋಗದ ವರದಿಗಳನ್ನೂ ಕಸದ ಬುಟ್ಟಿಗೆ ಎಸೆದಿದ್ದ ಹಿಂದಿನ ಸರ್ಕಾರವು ಪ್ರೊಬೇಷನರಿ ಅವಧಿಯನ್ನು ಘೋಷಣೆ ಮಾಡಿರುವುದು ವಿವಿ ವಲಯದಲ್ಲಿ ತೀವ್ರ  ಚರ್ಚೆಗೆ ಗ್ರಾಸವಾಗಿದೆ.

 

ನ್ಯಾನೋ ಟೆಕ್ನಾಲಜಿ ಕೋರ್ಸಿಗೆ ನೇಮಕವಾಗಿದ್ದ ಬೋಧಕ ಸಿಬ್ಬಂದಿಗಳು ಸೂಕ್ತ ವಿದ್ಯಾರ್ಹತೆ ಹೊಂದಿಲ್ಲ ಮತ್ತು ಇವರ ನೇಮಕಾತಿಯು ಎಐಸಿಟಿಯು ಮಾರ್ಗಸೂಚಿ, ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಕೇಶವನಾರಾಯಣ, ಎ ಜಿ ಆಡಿಟ್‌ ಮತ್ತು ವಿಟಿಯು ನೇಮಿಸಿದ್ದ ವಿಚಾರಣೆ ಸಮಿತಿಯ ತನಿಖೆಯಲ್ಲಿ ಸಾಬೀತಾಗಿತ್ತು.

 

ವಿಶೇಷವೆಂದರೇ ಈ ಮೂವರು ಬೋಧಕರು ನೇಮಕಗೊಂಡಿದ್ದ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಹೊಂದಿಲ್ಲ ಎಂದು ನೀಡಿದ್ದ ವರದಿ ಅನುಸಾರ ಇವರನ್ನು   ಸೇವೆಯಿಂದಲೇ ವಿಮುಕ್ತಿಗೊಳಿಸಲು ಆದೇಶ ಹೊರಡಿಸಿತ್ತು. ಆ ನಂತರ ಈ ಮೂವರು ಬೋಧಕರು ಹೈಕೋರ್ಟ್‌ ಮೊರೆ ಹೋಗಿ ಸೇವೆಯಿಂದ ವಿಮುಕ್ತಿಗೊಳಿಸಿದ ಆದೇಶಕ್ಕೆ ಮಧ್ಯಂತರ ಆದೇಶ ತಂದು ಸೇವೆಯಲ್ಲಿ ಮುಂದುವರೆದಿದ್ದರು.

 

ಮತ್ತೊಂದು ವಿಶೇಷವೆಂದರೇ  ಈ ಮೂವರಿಗೆ ಪ್ರೊಬೇ‍ಷನರಿ ( ಖಾಯಂ ಪೂರ್ವ ಸೇವಾ ಅವಧಿಯ ಮುಕ್ತಾಯ)ಯನ್ನು ಘೋಷಿಸುವ ಒಂದೇ ಉದ್ದೇಶದಿಂದ ಕೋರ್ಸ್‌ಗಳ ಪದನಾಮವನ್ನೇ ಬದಲಾಯಿಸಲಾಗಿತ್ತು ಎಂಬುದು ಕಡತದಲ್ಲಿರುವ ಟಿಪ್ಪಣಿ ಹಾಳೆಗಳಿಂದ  ತಿಳಿದು ಬಂದಿದೆ.

 

ಅನುಮೋದನೆಯನ್ನೇ ಪಡೆದಿರಲಿಲ್ಲ

 

ಕೆಲವು ಕೋರ್ಸ್‌ಗಳಲ್ಲಿ ಕಾರ್ಯಕಾರಿ ಪರಿಷತ್‌ ಅನುಮೋದನೆ ಮತ್ತು ಸರ್ಕಾರದ ಅನುಮೋದನೆಯನ್ನೇ ಪಡೆಯದೇ ಬದಲಾವಣೆ ಮಾಡಿ ವಿಟಿಯು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಒಟ್ಟು 20  ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳನ್ನು ನೇಮಕ ಮಾಡಿತ್ತು.

 

 

ಇದಾದ ನಂತರ 2013-14ರ ನೇಮಕಾತಿ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆನ್ನು ಅಂದಿನ ಕಾಂಗ್ರೆಸ್‌ ಸರ್ಕಾರವೇ ತಡೆಹಿಡಿದು 2013ರ ಜುಲೈ 17, 20, 25 ಮತ್ತು 2014ರ ಜನವರಿ 16ರಂದು ನಿರ್ದೇಶನ ನೀಡಿತ್ತು.

 

‘ಸರ್ಕಾರದಿಂದ ನಿರ್ದೇಶನ ನೀಡಲಾಗಿದ್ದರೂ ಸಹ ನೇಮಕಾತಿ ಪ್ರಕ್ರಿಯೆಯನ್ನು ವಿಟಿಯು ನಡೆಸಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಈ ನೇಮಕಾತಿಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಆದೇಶಗಳನ್ನು ನೀಡಿರುವುದಕ್ಕೆ ಸರ್ಕಾರದಿಂದ ಯಾವುದೇ ಪೂರ್ವಾನುಮೋದನೆ ಪಡೆದಿರುವುದು ತಿಳಿದು ಬಂದಿರುವುದಿಲ್ಲ,’ ಎಂದು ಉನ್ನತ ಶಿಕ್ಷಣ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿದೆ.

 

ಅದೇ ರೀತಿ 168 ಬೋಧಕರ ಹುದ್ದೆಗಳ ಸೃಜನೆಗೆ ಸರ್ಕಾರವು 2012ರಲ್ಲಿ ಅನುಮೋದನೆ ನೀಡಿತ್ತು. ಈ ಆದೇಶದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ಎಐಸಿಟಿಇ ನಿಯಮಗಳನ್ನು ಮತ್ತು ರಾಜ್ಯ ಸರ್ಕಾರದ ನೇಮಕಾತಿ ಮೀಸಲಾತಿ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು.

 

‘ಆದರೂ ವಿಟಿಯುನಿಂದ ನೇಮಕಗೊಂಡ ಬೋಧಕರು ನೇಮಕಗೊಂಡ ಹುದ್ದೆಗೆ ವಿಷಯ ಸೂಕ್ತತೆ (not found suitable for the post) ಹೊಂದಿಲ್ಲ. ಇದು ಎಐಸಿಟಿಇ ನಿಯಮಾವಳಿಗಳಿಗೆ ವಿರುದ್ಧವಾಗಿರುತ್ತದೆ. ಸೂಕ್ತ ಮತ್ತು ಗುಣಮಟ್ಟದ ಬೋಧನೆಯಿಂದ ವಿದ್ಯಾರ್ಥಿಗಳು ವಂಚಿತರಾಗಿರುವುದು ವಿಷಾದನೀಯವಾಗಿರುತ್ತದೆ,’ ಎಂದು ಕೇಶವನಾರಾಯಣ, ಎ ಜಿ ಆಡಿಟ್‌ ಮತ್ತು ವಿಟಿಯು ನೇಮಿಸಿದ್ದ ಡಾ ಎಂ ಜಿ ವೆಂಕಟೇಶ್‌ಮೂರ್ತಿ ನೇತೃತ್ವದ ವಿಚಾರಣೆ ಸಮಿತಿಯು ಒಂದೇ ತೆರನಾಗಿ ದೃಢೀಕರಿಸಿತ್ತು.

 

ಎನ್‌ಇಪಿ ರಕ್ಷಾ ಕವಚ ಮಾಡಿಕೊಂಡ ಸರ್ಕಾರ

 

ನ್ಯಾನೋ ಬಯೋ ಟೆಕ್ನಾಲಜಿನಿಂದ ನ್ಯಾನೋ ಟೆಕ್ನಾಲಜಿ ಬದಲಾಗಿ ಎಐಸಿಟಿಇ ಅನುಮೋದಿಸಿದ್ದ ನ್ಯಾನೋ ಸೈನ್ಸ್‌ ಮತ್ತು ಟೆಕ್ನಾಲಜಿ ಕೋರ್ಸ್‌ನ್ನು ಬದಲಾವಣೆ ಮಾಡುವ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಅಭ್ಯರ್ಥಿಗಳ ಅರ್ಹತೆಯ ದೃಷ್ಟಿಕೋನದಿಂದ ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶಿಸಿತ್ತು.

 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂದಿನ ಬಿಜೆಪಿ ಸರ್ಕಾರವು ಬಳಸಿಕೊಂಡಿತ್ತು.

 

‘ತಂತ್ರಜ್ಞಾನ, ವಿಜ್ಞಾನ, ಕಲೆ, ಗಣಿತಶಾಸ್ತ್ರ, ಮಾನವಿಕರು ಮತ್ತು ವೃತ್ತಿಪರ ಕ್ಷೇತ್ರಗಳನ್ನು ಒಟ್ಟಾಗಿ ಬೆಸೆದ ಕೌಶಲ್ಯವನ್ನು ಹೊಂದಿದ ಪದವಿ ಶಿಕ್ಷಣವನ್ನು ಜಾರಿಗೊಳಿಸುವುದು ಉದ್ದೇಶವಾಗಿದೆ. ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆದೇಶದ ಅನ್ವಯ ವಿಟಿಯುನಲ್ಲಿಯೂ ಇದನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಈ ನೀತಿಯ ಪ್ರಕಾರ ತಂತ್ರಜ್ಞಾನ/ಇಂಜಿನಿಯರಿಂಗ್‌ ವಿಷಯಗಳ ಜತೆಗೆ ಅಂತರ ವಿಷಯಗಳಾದ ತಂತ್ರಜ್ಞಾನ, ವಿಜ್ಞಾನ, ಕಲೆ, ಗಣಿತಶಾಸ್ತ್ರ ಇತ್ಯಾದಿಗಳ ಕುರಿತು ಕೋರ್ಸ್‌ಗಳನ್ನು ಪ್ರಾರಂಭ ಮಾಡುತ್ತಿದೆ,’ ಎಂದು ಅಧಿಸೂಚನೆ ಹೊರಡಿಸಿತ್ತು.

 

ಇದನ್ನಾಧರಿಸಿ ನ್ಯಾನೋ ಸೈನ್ಸ್‌ ಮತ್ತು ಟೆಕ್ನಾಲಜಿ ಕೋರ್ಸ್‌ ಸಹ ಎಐಸಿಟಿಇ ಮಾನ್ಯತೆ ಹೊಂದಿದ್ದು ಮತ್ತು ಅಂತರ ವಿಷಯಗಳನ್ನು ಒಳಗೊಂಡಿದೆ. ಈ ಕೋರ್ಸ್‌ಗೆ ತಂತ್ರಜ್ಞಾನ ಅಥವಾ ವಿಜ್ಞಾನದ ಪದವಿ, ಸ್ನಾತಕೋತ್ತರ ಪದವಿಗಳನ್ನು ಬೋಧಕ ಹುದ್ದೆಯ ಅರ್ಹತೆಗೆ ಪರಿಗಣಿಸಬಹುದು ಎಂಬ ತೀರ್ಮಾನಕ್ಕೆ ಬಂದಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

‘ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ನ್ಯಾನೋ ಟೆಕ್ನಾಲಜಿ ವಿಭಾಗವನ್ನು ವಿಟಿಯು ಅನ್ವಯಿಕ ವಿಜ್ಞಾನಗಳ ವಿಭಾಗವೆಂದು ಪುನರ್‌ ವಿಂಗಡಿಸಿ ಕಾರ್ಯನಿರ್ವಹಿಸುತ್ತಿರುವುರಿಂದ ನ್ಯಾನೋ ಬಯೋ ಟೆಕ್ನಾಲಜಿಯಿಂದ ಎಐಸಿಟಿಇ ಅನುಮೋದಿತ ಕೋರ್ಸಾದ ನ್ಯಾನೋ ಸೈನ್ಸ್‌ ಮತ್ತು ಟೆಕ್ನಾಲಜಿಗೆ ಕೋರ್ಸ್‌ನ್ನು ಬದಲಾವಣೆ ಮಾಡಲು ಸರ್ಕಾರದ ಸಹಮತಿ ಕೋರಬಹುದು,’ ಎಂದು ಸಲ್ಲಿಸಿದ್ದ ಕಡತಕ್ಕೆ ಅಂದಿನ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು 2023ರ ಮಾರ್ಚ್‌ 15ರಂದೇ ಅನುಮೋದನೆ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಸಚಿವರ ಅನುಮೋದನೆ ದೊರೆತ ಕೇವಲ ಐದೇ ಐದು ದಿನದಲ್ಲಿ ಅಂದರೇ 2023ರ ಮಾರ್ಚ್‌ 20ರಂದು ಉನ್ನತ ಶಿಕ್ಷಣ ಇಲಾಖೆಯು ವಿಟಿಯು ಕುಲಸಚಿವರಿಗೆ ಪತ್ರ ಬರೆದಿತ್ತು.

 

ಅಲ್ಲದೇ   ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ  ಬೋಧಕರ ಖಾಯಂ ಪೂರ್ವ ಸೇವಾ ಅವಧಿ ಮುಕ್ತಾಯದ ಘೋಷಣೆ ಮಾಡಲು ಸಹಮತಿ ನೀಡಿ ಪತ್ರ ಬರೆದಿತ್ತು.

 

.

 

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಟಿಯುನಲ್ಲಿ ನಡೆದಿರುವ ಈ ಪ್ರಕರಣದ ಕುರಿತು ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts