ಆಪದ್‌ ಮಿತ್ರ ಕಿಟ್‌ಗಳ ಖರೀದಿಯಲ್ಲಿ ಅಕ್ರಮ; ಬಿಡ್‌ಗಳಿಗೆ ಹೊರಗುತ್ತಿಗೆ ನೌಕರನ ಸಹಿ,ಕೆಟಿಪಿಪಿ ಕಾಯ್ದೆ ಉಲ್ಲಂಘನೆ

ಬೆಂಗಳೂರು; ಆಪದ್‌ ಮಿತ್ರ ಯೋಜನೆಯಡಿಯಲ್ಲಿ ಅಗತ್ಯ ರಕ್ಷಣಾ ಸಾಮಗ್ರಿಗಳ ಖರೀದಿಗೆ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆಯು ಪಾರದರ್ಶಕವಾಗಿರಲಿಲ್ಲ. ಟೆಂಡರ್‍‌ ದಸ್ತಾವೇಜುಗಳಿಗೆ ಸರ್ಕಾರಿ ಅಧಿಕಾರಿಗಳಲ್ಲದ ಮತ್ತು ಯಾವುದೇ ಹೊಣೆಗಾರಿಕೆ ಇಲ್ಲದ ಹೊರಗುತ್ತಿಗೆ ನೌಕರರು  ಸಹಿ ಮಾಡಿದ್ದರು ಎಂಬುದು ಸೇರಿದಂತೆ ಹಲವು ಲೋಪಗಳು ಇದೀಗ ಬಹಿರಂಗವಾಗಿವೆ.

 

ಅಲ್ಲದೇ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಟೆಂಡರ್‍‌ ಪ್ರಕ್ರಿಯೆ ನಡೆದಿತ್ತು. ಇದಲ್ಲದೇ ಇಡೀ ಟೆಂಡರ್‍‌ ಪ್ರಕ್ರಿಯೆಗಳಲ್ಲಿ ಹಲವು ಲೋಪಗಳು ಇದ್ದುದ್ದರಿಂದ ಈ ಸಂಬಂಧ ನಡೆದಿದ್ದ ಎಲ್ಲಾ ಟೆಂಡರ್‍‌ ಪ್ರಕ್ರಿಯೆಗಳನ್ನೂ ಸರ್ಕಾರವು ಇದೀಗ  ರದ್ದುಪಡಿಸಿದೆ.

 

ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ (ಸಂಖ್ಯೆ ಕಂಇ;26 ಇಟಿಸಿ 2021, ದಿನಾಂಕ 15.02.2024) ಲಭ್ಯವಾಗಿದೆ.

 

ಸ್ವಯಂ ಸೇವಕರಿಗೆ ಅನುಕೂಲವಾಗುವಂತೆ ಮುನ್ನೆಚ್ಚೆರಿಕೆಯಾಗಿ ಕಿಟ್‌ ವಿತರಿಸಬೇಕಿತ್ತು. ರೋಪ್‌, ಲೈಫ್‌ ಜಾಕೆಟ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬ್ಯಾಟರಿ ಸೇರಿದಂತೆ ಪ್ರಮುಖ ಸುರಕ್ಷ ಉಪಕರಣಗಳನ್ನು ನೀಡಲಾಗುತ್ತದೆ. ಇವುಗಳನ್ನು ಪ್ರಾಕೃತಿಕ ವಿಕೋಪಗಳಾದಾಗ ಬಳಸಬಹುದಾಗಿತ್ತು.

 

ಇದಕ್ಕಾಗಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಟೆಂಡರ್‍‌ ಪ್ರಕ್ರಿಯೆ ನಡೆಸಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಲೋಪಗಳು ನಡೆದಿದ್ದವು. ಈ ಅವಧಿಯಲ್ಲಿ ಆರ್‍‌ ಅಶೋಕ್‌ ಅವರು ಕಂದಾಯ ಸಚಿವರಾಗಿದ್ದರು. ಟೆಂಡರ್ ರದ್ದುಗೊಳಿಸುವ ಸಂಬಂಧ ಅಧಿಕಾರಿಗಳು ಹಾಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಟೆಂಡರ್‍‌ ರದ್ದುಗೊಂಡಿದ್ದೇಕೆ?

 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಕೆಟಿಪಿಪಿ ಕಾಯ್ದೆಗಳನ್ನು ಉಲ್ಲಂಘಿಸಿ ಟೆಂಡರ್‍‌ ಪ್ರಕ್ರಿಯೆ ನಡೆಸಿತ್ತು.

 

ಪ್ರಕಟಿಸಿದ್ದ ಟೆಂಡರ್‍‌ ದಸ್ತಾವೇಜು ಅಪೂರ್ಣವಾಗಿತ್ತು.

 

ಅದು ಪಾರದರ್ಶಕವಾಗಿರಲಿಲ್ಲ.

 

ಟೆಂಡರ್‍‌ ಪ್ರಕ್ರಿಯೆಗಳಲ್ಲಿನ ತಾಂತ್ರಿಕ ಮತ್ತು ಹಣಕಾಸಿನ ಬಿಡ್‌ಗಳಿಗೆ ಸದಸ್ಯರ ಸಹಿಯೇ ಇರಲಿಲ್ಲ

 

ಕರ್ನಾಟಕ ರಾಜ್ಯ ನೈಸರ್ಗಿಕ ಕೇಂದ್ರದ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಹೊಣೆಗಾರಿಕೆ ಇಲ್ಲದೇ ಇರುವವರ ಸಹಿ ಮಾತ್ರ ಇತ್ತು.

 

ಈ ಎಲ್ಲಾ ಕಾರಣಗಳಿಂದಾಗಿ 2022ರ ಜುಲೈ 16ರಂದು ಹೊರಡಿಸಿದ್ದ ಆದೇಶ ಮತ್ತು ಕೈಗೊಂಡಿದ್ದ ಎಲ್ಲಾ ಟೆಂಡರ್‍‌ ಪ್ರಕ್ರಿಯೆಗಳನ್ನೂ ರದ್ದುಗೊಳಿಸಿರುವುದು 2024ರ ಫೆ.15ರಂದು ಬರೆದಿರುವ ಪತ್ರದಿಂದ ಗೊತ್ತಾಗಿದೆ.

 

ಪ್ರಕರಣದ ವಿವರ

 

ಕೇಂದ್ರ ಸರ್ಕಾರ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸೂಚನೆಯಂತೆ ರಾಜ್ಯದ 11 ಪ್ರವಾಹ ಪೀಡಿತ ಜಿಲ್ಲೆಗಳ 3,400 ಸಮುದಾಯ ಮಟ್ಟದ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಆಪದ್‌ ಮಿತ್ರ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಅನುಷ್ಠಾನಗೊಳಿಸಿತ್ತು.

 

ಈ ಯೋಜನೆ ಭಾಗವಾಗಿಯೇ ತರಬೇತಿ ಪಡೆದಿರುವ ಸ್ವಯಂ ಸೇವಕರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳ ಕಿಟ್‌ ಖರೀದಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಖರೀದಿ ಸಮಿತಿ ರಚಿಸಿತ್ತು.

 

2022ರ ಜೂನ್‌ 29ರಂದು ನಡೆದಿದ್ದ ಸಭೆಯು ಅಗತ್ಯ ರಕ್ಷಣಾ ಸಾಮಗ್ರಿಗಳ ಕಿಟ್‌ನ್ನು ಜೆಮ್‌ ಮತ್ತು ಇ-ಪ್ರೊಕ್ಯೂರ್‍‌ಮೆಂಟ್‌ ಪರವಾನಿಗೆ ಪಡೆದಿರುವ ಕೆಎಸ್‌ಎನ್‌ಡಿಎಂಸಿ ಮೂಲಕ ಟೆಂಡರ್‍‌ ಪ್ರಕ್ರಿಯೆ ನಡೆಸಲು ನಿರ್ಣಯಿಸಿತ್ತು. ಈ ಸಂಬಂಧ 2022ರ ಜುಲೈ 16ರಂದು ಆದೇಶವನ್ನೂ ಹೊರಡಿಸಿತ್ತು. ಈ ಆದೇಶದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಷರತ್ತುಗಳೇನು?

 

ಎನ್‌ಡಿಎಂಎ ನಿಗದಿಪಡಿಸಿದ್ದ ರಕ್ಷಣಾ ಸಾಮಗ್ರಿಗಳನ್ನೊಳಗೊಂಡ ಕಿಟ್‌ ಖರೀದಿಸಬೇಕು. ಈ ಕಿಟ್‌ನಲ್ಲಿ ಪಟ್ಟಿ ಮಾಡಿರುವ ಎಲ್ಲಾ ಸಾಮಗ್ರಿಗಳು ಜೆಮ್‌ನಲ್ಲಿ ಲಭ್ಯವಿದೆ. ಇದರ ಮೂಲಕವೇ ಖರೀದಿಸಬೇಕು. ಟೆಂಡರ್‍‌ ದಾಖಲೆಗಳ ಅನುಸಾರ ಸರಬರಾಜುದಾರರಿಂದ ಪಡೆದಿರುವ ಕಿಟ್‌ಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಎನ್‌ಡಿಎಂಎ ನಿರ್ದೇಶನ ನೀಡಿತ್ತು.

 

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವಾಗಲು ‘ಆಪದ್‌ ಮಿತ್ರ’ ತಂಡವನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ರಚಿಸಿತ್ತು. ಅತಿವೃಷ್ಟಿ, ಭೂ ಕುಸಿತ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳಾದಾಗ ಅಲ್ಲಿನ ಸಂತ್ರಸ್ತರಿಗೆ ಶೀಘ್ರ ನೆರವು, ರಕ್ಷಣೆ ಸಿಗಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಆಪದ್‌ ಮಿತ್ರ’ ಸ್ಥಳೀಯ ಸ್ವಯಂ ಸೇವಕರ ತಂಡವನ್ನು ರಚಿಸುವಂತೆ ಸೂಚಿಸಿತ್ತು.

 

ಕಟ್ಟಡ ಕುಸಿತ, ಪ್ರವಾಹ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳಾದಾಗ ಅಗ್ನಿ ಶಾಮಕ ಸಿಬ್ಬಂದಿ, ವಿಪತ್ತು ನಿರ್ವಹಣಾ ತಂಡಕ್ಕಿಂತ ಮೊದಲು ನೆರವಿಗೆ ಧಾವಿಸುವುದು ಸ್ಥಳೀಯರು. ಇಂತಹ ವೇಳೆ ರಕ್ಷಣೆಗೆ ಧಾವಿಸಿದಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಹೆಚ್ಚಿರುತ್ತದೆ.

 

ಸಂತ್ರಸ್ತರನ್ನು ಹೇಗೆ ಕಾಪಾಡಬೇಕು, ಒಂದು ವೇಳೆ ನೆರವಿಗೆ ಧಾವಿಸಿದಾಗ ತಾವೇ ಅಪಾಯದಲ್ಲಿ ಸಿಲುಕಿದರೆ ಹೇಗೆ ಪಾರಾಗಬೇಕು ಎಂಬುದು ಸ್ಥಳೀಯರಿಗೆ ತಿಳಿದಿರುವುದಿಲ್ಲ. ಹಾಗಾಗಿ ಸ್ಥಳೀಯ ಆಸಕ್ತ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ಸುಸಜ್ಜಿತವಾಗಿ ವಿಪತ್ತು ನಿರ್ವಹಣೆ ತರಬೇತಿ ನೀಡಿದರೆ ಪ್ರವಾಹ, ನೆರೆ, ಅತಿವೃಷ್ಟಿ ಸಂದರ್ಭದಲ್ಲಿ ಕೂಡಲೇ ನೆರವಾಗುವರು. ಇದರಿಂದ ಎಷ್ಟೋ ಪ್ರಾಣ ಹಾನಿ ತಡೆಯಬಹುದು ಎಂಬುದು ಪ್ರಮುಖ ಉದ್ದೇಶವಾಗಿತ್ತು.

 

ಸ್ವಯಂ ಸೇವಕರಿಗೆ ಸಹಾಯ ಧನ, ಸುರಕ್ಷತಾ ಕಿಟ್‌ ವಿತರಣೆಗೆ ತಗಲುವ ವೆಚ್ಚಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ರಾಜ್ಯಗಳಿಗೆ ತಲಾ 45 ಲಕ್ಷ ರೂ. ಅನುದಾನ ನಿಗದಿ ಮಾಡಿತ್ತು. ಬೆಳಗಾವಿ ಜಿಲ್ಲೆಯೊಂದಕ್ಕೇ 25 ಲಕ್ಷ ಬಿಡುಗಡೆಯಾಗಿತ್ತು. 6 ಸಾವಿರ ರೂ. ಮೊತ್ತದ ಕಿಟ್‌ ಅನ್ನು ಎಲ್ಲ ಸ್ವಯಂ ಸೇವಕರಿಗೆ ನೀಡಲಾಗಿತ್ತು.

the fil favicon

SUPPORT THE FILE

Latest News

Related Posts