ವಿಶ್ರಾಂತ ಕುಲಪತಿ ಮಹೇಶಪ್ಪ ವಿರುದ್ಧ ಸಿವಿಲ್‌ ದಾವೆ, ನಷ್ಟ ವಸೂಲಿಗೆ ರಾಜ್ಯಪಾಲರ ಅನುಮೋದನೆ

ಬೆಂಗಳೂರು; ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ ಹೆಚ್‌ ಮಹೇಶಪ್ಪ ಅವರ ವಿರುದ್ಧ ಸಿವಿಲ್ ದಾವೆ ಮತ್ತು ಈಗಾಗಲೇ ಉಂಟಾಗಿರುವ  ಆರ್ಥಿಕ ನಷ್ಟ ವಸೂಲಿ ಮಾಡಲು ಹಾಲಿ ಕುಲಪತಿ ಮತ್ತು ಕುಲಸಚಿವರಿಗೆ ನಿರ್ದೇಶನ ನೀಡಲು ರಾಜ್ಯಪಾಲ ಥಾವರ್‍‌ಚಂದ್‌ ಗೆಹ್ಲೋಟ್‌ ಅವರು ಅನುಮೋದನೆ ನೀಡಿದ್ದಾರೆ.

 

ಅಲ್ಲದೇ ಸಿವಿಲ್‌ ದಾವೆ ದಾಖಲಾದ ಕೂಡಲೇ ಬಾಧಿತ ಮಹೇಶಪ್ಪ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಅವಕಾಶ ಸಿಗದಂತೆ ತಕ್ಷಣವೇ ವಿಶ್ವವಿದ್ಯಾಲಯದ ಹಾಲಿ ಕುಲಪತಿ, ಕುಲಸಚಿವರು ಕೇವಿಯಟ್‌ ಅರ್ಜಿ ದಾಖಲಿಸಲು ಸಹ ಉನ್ನತ ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.

 

ಪ್ರೊ. ಹೆಚ್‌ ಮಹೇಶಪ್ಪ ಅವರು ಕುಲಪತಿ ಆಗಿದ್ದ ಅವಧಿಯಲ್ಲಿ ಬೋಧಕ ವೃಂದದ ನೇಮಕಾತಿ, ಸಿವಿಲ್‌ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೇಶವ ನಾರಾಯಣ್‌ ಸಮಿತಿ, ಮತ್ತೊಬ್ಬ ನ್ಯಾಯಾಧೀಶ  ಅಶೋಕ್‌ ಬಿ ಇಂಚಿಗೇರಿ ಸೇರಿದಂತೆ ಇನ್ನಿತರೆ ತನಿಖಾ ಸಮಿತಿಗಳು ವರದಿ ನೀಡಿದ್ದವು. ಈ ಪೈಕಿ ಅಶೋಕ್‌ ಇಂಚಿಗೇರಿ ಅವರು ನೀಡಿದ್ದ ವರದಿ ಆಧರಿಸಿ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರವು ರಾಜ್ಯಪಾಲರ ಅನುಮೋದನೆ ಕೋರಿತ್ತು.

 

ಸರ್ಕಾರವು ಸಲ್ಲಿಸಿದ್ದ ಅನುಮೋದನೆ ಪ್ರಸ್ತಾವನೆಗೆ ರಾಜ್ಯಪಾಲ ಥಾವರ್‍‌ಚಂದ್‌ ಗೆಹ್ಲೋಟ್‌ ಅವರು 2024ರ ಫೆ. 16ರಂದೇ ಒಪ್ಪಿಗೆ ನೀಡಿದ್ದರು. ಈ ಸಂಬಂಧ  ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರಿಗೆ ನಿರ್ದೇಶನ ನೀಡಿರುವ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2024ರ ಫೆ.29ರಂದು ಪತ್ರ (ED 03 TGL 2024) ಬರೆದಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಸಚಿವ ಡಾ ಎಂ ಸಿ ಸುಧಾಕರ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಎಚ್‌ ಬಿ ವಾಲೀಕಾರ್‍‌ ಅವರ ವಿರುದ್ಧದ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣೆ ವರದಿಯನ್ನು ರಾಜ್ಯಪಾಲರು ಇತ್ತೀಚೆಗಷ್ಟೇ ಕೇಳಿದ್ದರು. ಇದರ ಬೆನ್ನಲ್ಲೇ ಇದೀಗ ವಿಟಿಯುನಲ್ಲಿ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಹೆಚ್‌ ಮಹೇಶಪ್ಪ ಮತ್ತು ಕುಲಸಚಿವ ಡಾ ಕೆ ಇ ಪ್ರಕಾಶ್ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಹಿಂದಿನ ಉಪ ಕುಲಪತಿಗಳಾದ ಪ್ರೊ ಹೆಚ್‌ ಮಹೇಶಪ್ಪ ಅವರ ಕರ್ತವ್ಯ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಆಗಿರುವ ಆರ್ಥಿಕ ನಷ್ಟದ ಕುರಿತು ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ಇವರ ವಿರುದ್ಧ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ ವಿಶ್ವವಿದ್ಯಾಲಯಕ್ಕೆ ಆಗಿರುವ ಆರ್ಥಿಕ ನಷ್ಟವನ್ನು ವಸೂಲು ಮಾಡಲು ಹಾಗೂ ತಕ್ಷಣವೇ  ಕಾನೂನು ರೀತಿ ಕ್ರಮ ಕೈಗೊಳ್ಳಲು ವಿಶ್ವವಿದ್ಯಾಲಯದ ಪ್ರಸ್ತುತ ಉಪ ಕುಲಪತಿ ಹಾಗೂ ಕುಲಸಚಿವರಿಗೆ ನಿರ್ದೇಶನ ನೀಡುವ ಬಗ್ಗೆ ರಾಜ್ಯಪಾಲರು 2024ರ ಫೆ.16ರಂದು ಅನುಮೋದನೆ ನೀಡಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಆಶೋಕ್ ಬಿ ಹಿಂಚಿಗೇರಿ ಅವರ ನೇತೃತ್ವದ ಏಕ ಸದಸ್ಯ ಸಮಿತಿಯಲ್ಲಿ ಹಿಂದಿನ ಉಪ ಕುಲಪತಿ ಡಾ ಹೆಚ್‌ ಮಹೇಶಪ್ಪ ಮತ್ತು ಹಿಂದಿನ ಕುಲಸಚಿವ ಡಾ ಕೆ ಇ ಪ್ರಕಾಶ್‌ ಅವರ ವಿರುದ್ಧ ಸಿವಿಲ್‌ ದಾವೆ ಹೂಡಲು ಮತ್ತು ನಷ್ಟವನ್ನ ವಸೂಲು ಮಾಡಲು ಶಿಫಾರಸ್ಸು ಮಾಡಿತ್ತು. ಇದನ್ನು ವಿಟಿಯುನ  156ನೇ ಕಾರ್ಯಕಾರಿ ಪರಿಷತ್‌ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.

ವಿಶ್ರಾಂತ ಕುಲಪತಿ ಮಹೇಶಪ್ಪ, ಕುಲಸಚಿವ ವಿರುದ್ಧ ಕ್ರಿಮಿನಲ್ ಪ್ರಕರಣ; ರಾಜ್ಯಪಾಲರ ಅನುಮೋದನೆಗೆ ಸಿದ್ಧತೆ

 

‘ಅದರಂತೆ 1994ರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿನಿಯಮ ಅಧ್ಯಾಯ -II 3(3)ರ ನಿಯಮಗಳಂತೆ ಸದರಿಯವರ ಮೇಲೆ ಸಿವಿಲ್‌ ದಾವೆ ಹೂಡಿ ವಿಶ್ವವಿದ್ಯಾಲಯಕ್ಕೆ ಆಗಿರುವ ನಷ್ಟವನ್ನು ವಸೂಲು ಮಾಡಲು ಮತ್ತು ಇಂತಹ ಅವ್ಯವಹಾರಗಳಲ್ಲಿ ತೊಡಗಿರುವ ಉಪ ಕುಲಪತಿಗಳು ಹಾಗೂ ರಿಜಿಸ್ಟ್ರಾರ್‍‌ಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮೋದನೆ ಕೋರಿದೆ,’ ಎಂದು ಶ್ರೀಕರ್‍‌ ಎಂ ಎಸ್‌ ಅವರು ಟಿಪ್ಪಣಿಯಲ್ಲಿ ವಿವರಿಸಿದ್ದರು.

 

ವಿಶ್ರಾಂತ ಕುಲಪತಿ ವಾಲೀಕಾರ್‍‌ ವಿರುದ್ಧ ಕ್ರಿಮಿನಲ್‌, ಸಿವಿಲ್‌ ಮೊಕದ್ದಮೆ; ವರದಿ ಸಲ್ಲಿಸಲು ರಾಜ್ಯಪಾಲರ ಸೂಚನೆ

 

ಮಹೇಶಪ್ಪ ಅವರ ವಿರುದ್ಧ ಕೇಳಿ ಬಂದಿದ್ದ 24 ಆರೋಪಗಳ ತನಿಖೆ ನಡೆಸಲು ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎನ್‌ ಕೇಶವನಾರಾಯಣ ಅವರ ನೇತೃತ್ವದಲ್ಲಿ ತನಿಖೆ ತಂಡ ರಚಿಸಿದ್ದರು.

 

ಈ ಸಮಿತಿಯು ತನಿಖೆ ನಡೆಸಿದ್ದ ಪ್ರಕರಣಗಳ ವಿವರ

 

ಬೆಳಗಾವಿ ವಿಟಿಯು ಕ್ಯಾಂಪಸ್‌ಗೆ ನೀರು ಪೂರೈಕೆಗಾಗಿ ಅನಗತ್ಯವಾಗಿ 3.32 ಕೋಟಿ ಖರ್ಚು

 

ಸ್ಥಗಿತಗೊಂಡಿರುವ ಇ-ವಿದ್ಯಾ ಆನ್‌ಲೈನ್‌ ಕಲಿಕಾ ವ್ಯವಸ್ಥೆಗೆ 3.07 ಕೋಟಿ ವೆಚ್ಚ

 

ಅವಧಿ ಠೇವಣಿ ಬಡ್ಡಿಯಲ್ಲಿ 1.15 ಕೋಟಿ ನಷ್ಟ

 

ಸಾಫ್ಟ್‌ವೇರ್‍‌ ಖರೀದಿ ಮತ್ತು ನಿಗದಿತ ಸಮಯದಲ್ಲಿ ಪ್ರಯೋಗಾಲಯ ಸ್ಥಾಪಿಸದೇ ಸಾಫ್ಟ್‌ವೇರ್‍‌ ಬಳಸದೇ ಇದ್ದದ್ದರಿಂದ

75.5 ಲಕ್ಷ ಅನಗತ್ಯ ಖರ್ಚು

 

ಪರೀಕ್ಷಾ ವಿಭಾಗಕ್ಕೆ ಡಿಜಿಟಲ್‌ ಮೌಲ್ಯಮಾಪನ ವ್ಯವಸ್ಥೆ ಅಳವಡಿಕೆಗಾಗಿ ವಿವೇಚನೆ ಇಲ್ಲದೇ ಟೆಂಡರ್‍‌ ಸ್ವೀಕಾರ

 

ಮಿತಿ ಮೀರಿದ ದರಕ್ಕೆ ವಿಟಿಯುನ ಪರೀಕ್ಷಾ ಮೇಲ್ವಿಚಾರಣೆ ವ್ಯವಸ್ಥೆ ಹೊರಗುತ್ತಿಗೆ ನೀಡಿರುವುದು

 

ವಿವಿ ಕಾಲೇಜು ಬೋಧಕ ಸಿಬ್ಬಂದಿಗೆ ಎಐಸಿಟಿಇ ವೇತನ ಶ್ರೇಣಿ ನೀಡುವುದಕ್ಕಾಗಿ 41.93 ಕೋಟಿ ಪಾವತಿ

 

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ವಿಟಿಯುನ ಅಡ್ವಾನ್ಸ್ಡ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ 37.36 ಕೋಟಿ ಅಂದಾಜು ವೆಚ್ಚದಲ್ಲಿ ಪಿಜಿ ಬ್ಲಾಕ್‌ ಹಾಸ್ಟೆಲ್‌ ನಿರ್ಮಾಣ 

 

ಭೋಜನ ಶಾಲೆ ನಿರ್ಮಾಣಕ್ಕೆ ಟೆಂಡರ್‍‌ ಪಡೆದವರು ಮಿತಿಗಿಂತ ಹೆಚ್ಚು ದರ ಉಲ್ಲೇಖಿಸಿದ್ದರೂ ಮರು ಟೆಂಡರ್‍‌ ಕರೆಯುವ ಆಯ್ಕೆಯನ್ನು ಪರಿಗಣಿಸದೇ ಇದ್ದದ್ದು

 

ಬೆಳಗಾವಿ ವಿಟಿಯುನಲ್ಲಿ ಎರಡನೇ ಹಂತದ ಸಿವಿಲ್‌ ಕಾಮಗಾರಿಗೆ ಸಂಬಂಧಿಸಿದಂತೆ ಹೈದರಾಬಾದ್‌ನ ರಾಮ್‌ಕಿ ಇನ್ಫ್ರಾಸ್ಟಕ್ಚರ್‍  ಕಂಪನಿಯಿಂದ  50.20 ಲಕ್ಷ ರಾಯಧನ ಪಡೆಯದೇ ಇದ್ದದ್ದು

 

ವಿಟಿಯು ಕ್ಯಾಂಪಸ್‌ನಲ್ಲಿ ಡಾಟಾ ಸೆಂಟರ್‍‌ ಅಳವಡಿಕೆಗೆ 35.35 ಲಕ್ಷ ವೆಚ್ಚ ಮಾಡಿದ್ದು

 

ಬಳ್ಳಾರಿಯ ಸುಗಣ ಕನ್‌ಸ್ಟ್ರಕ್ಷನ್ಸ್‌ ಉಲ್ಲೇಖಿಸಿದ್ದ ಅತ್ಯಂತ ಕಡಿಮೆ 21.90 ಲಕ್ಷ ಮೊತ್ತದ ಟೆಂಡರ್‍‌ನಿಂದ ಆದ ನಷ್ಟ

 

ಬೆಳಗಾವಿ ವಿಟಿಯು ಅತಿಥಿ ಗೃಹದ ವಿಸ್ತರಣೆಗಾಗಿ ಎಸ್‌ ಡಿ ಗೌರವ್‌ ಎಂಬುವರಿಗೆ ಅನಧಿಕೃತವಾಗಿ ಹಣ ಪಾವತಿ ಮಾಡಿದ್ದು

 

ಗುತ್ತಿಗೆ ನಿಯಮಗಳಿಗೆ ವಿರುದ್ಧವಾಗಿ ಟೀಕಯಾಸ್‌ ಸೊಲ್ಯೂಷನ್ಸ್‌ ಕಂಪನಿಗೆ 1.32 ಕೋಟಿ ಮೊತ್ತವನ್ನು ಮೊದಲೇ ಪಾವತಿಸಿದ್ದು

 

ಕಲ್ಬುರ್ಗಿಯಲ್ಲಿರುವ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ 2.25 ಕೋಟಿ ಮೊತ್ತದ ಅವ್ಯವಹಾರ

 

ಟೆಂಡರ್‍‌ ನಿಯಮ ಪಾಲಿಸದೇ ಎಎಂಸಿ ಡಿಜಿಟಲ್‌ ಡುಪ್ಲಿಕೇಟರ್ಸ್‌ ಸಂಸ್ಥೆಗೆ 13.35 ಲಕ್ಷ ಮೊತ್ತದ ಗುತ್ತಿಗೆ ನೀಡಿಕೆ

 

ಟೆಂಡರ್‍‌ ನಿಯಮ ಪಾಲಿಸದೇ 500 ಕಂಪ್ಯೂಟರ್‍‌ಗಳಿಗೆ 31 ಲಕ್ಷ ವೆಚ್ಚದಲ್ಲಿ ಮೈಕ್ರೋ ಸಾಫ್ಟ್‌ವೇರ್‍‌ 

 

ಮತ್ತು 15.20 ಲಕ್ಷ ಮೊತ್ತದ ಡ್ಯುಪ್ಲೋ ಮಾಸ್ಟರ್‍‌ ರೋಲ್ಸ್‌ ಹಾಗೂ ಡ್ಯುಪ್ಲೋ ಇಂಕ್‌ ಪೌಚ್‌ಗಳ ಖರೀದಿ

 

ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಮೈಸೂರು ಮತ್ತು ಬೆಳಗಾವಿಯ ಡಾಟಾ ಸೆಂಟರ್‍‌ಗಳಿಗೆ ಕಲಿಕಾ ಮೇಲ್ವಿಚಾರಣೆ ವ್ಯವಸ್ಥೆ ಅಳವಡಿಕೆ

 

ಜ್ಞಾನ-ಎಕ್ಸ್‌ ಅಡಿಯಲ್ಲಿ ಇ-ಕಲಿಕೆ ಶುಲ್ಕವಾದ 1.4 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದು

 

26.25 ಲಕ್ಷ ವೆಚ್ಚದಲ್ಲಿ ಅಳವಡಿಸಿದ್ದ ಸ್ವಯಂ ಚಾಲನಾ ತಂತ್ರಾಂಶವೊಂದು ಕೆಲಸ ನಿಷ್ಪ್ರಯೋಜಕವಾಗಿರುವುದು

 

168 ಬೋಧಕ ಸಿಬ್ಬಂದಿ ನೇಮಕದಲ್ಲಿ ಅವ್ಯವಹಾರ

 

1994ರ ವಿಟಿಯು ಕಾಯ್ದೆಯ ಸೆಕ್ಷನ್‌ 19 (3)ರ ಅಡಿಯ್ಲಿ ಡಾ ಎಚ್‌ ಎನ್‌ ಜಗನ್ನಾಥ ರೆಡ್ಡಿ ಅವರನ್ನು ವಿಟಿಯುನ ಕಾರ್ಯಕಾರಿ ಮಂಡಳಿಯ ಯುಜಿಸಿ ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯಪಾಲರು ನೇಮಕ ಮಾಡಿದ್ದನ್ನು ಗೌರವಿಸದೇ ಮತ್ತು ಪಾಲಿಸದೇ ಇದ್ದದ್ದು

 

ವಿದ್ಯಾರ್ಥಿಗಳ ಕೋರ್ಸ್‌ ಮತ್ತು ಕಾಲೇಜು ಬದಲಾವಣೆಗೆ ಸಂಬಂಧಿಸಿದಂತೆ ನಡೆದ ಅಕ್ರಮ

 

ವಿವಿ ನಡೆಸಿದ ವಿವಿಧ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿನ ಅವ್ಯವಹಾರಗಳು

 

ವಿವಿಯ ಶೈಕ್ಷಣಿಕ ಮತ್ತು ಆಡಳಿತ ಸಂಬಂಧಿಸಿದ ಇತರ ಯಾವುದೇ ಪ್ರಕರಣ ಕುರಿತು ತನಿಖೆ ನಡೆಸಲು ಸೂಚಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts