ಜೈಲಿನ ಗ್ರಂಥಾಲಯದಲ್ಲಿ ಗಾಂಜಾ; ಅಧೀಕ್ಷಕಿ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್‍‌, ಗುಂಪು ಘರ್ಷಣೆಗೆ ತಿರುವು

ಬೆಂಗಳೂರು; ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿನ ಗ್ರಂಥಾಲಯದಲ್ಲಿರುವ ಪುಸ್ತಕಗಳಲ್ಲಿ ನಿಷೇಧಿತ ವಸ್ತುವಾದ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬುದನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ಪತ್ತೆ ಹಚ್ಚಿದೆ.

 

ಜಿಲ್ಲಾ ಕಾರಾಗೃಹದಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ನಡೆದಿದ್ದ ವಿಚಾರಣಾಧೀನ ಕೈದಿಗಳ ಮಧ್ಯೆಯ ಮಾತಿನ ಚಕಮಕಿ, ಹೊಡೆದಾಟ ಮತ್ತು ಗುಂಪು ಘರ್ಷಣೆ ಪ್ರಕರಣದ ಕುರಿತು ಮುಚ್ಚಿದ ಲಕೋಟೆಯಲ್ಲಿ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಡಿಜಿಪಿ ಅವರಿಗೆ 2024ರ ಫೆ.3ರಂದು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.  ಗಾಂಜಾ ಸೇರಿದಂತೆ ಮತ್ತಿತರ ಸಂಗತಿಗಳ ಕುರಿತು ವರದಿಯಲ್ಲಿ  ಹಲವು ಮಹತ್ವದ ಅಂಶಗಳಿವೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಭಾಗೀರಥಿ ಮತ್ತಿತರರ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿಯು ಗೃಹ ಸಚಿವ ಡಾ ಜಿ ಪರಮೇಶ್ವರ್ ಮೇಲೆ ಮುಗಿಬಿದ್ದಿತ್ತು. ಇದರ ನಡುವೆಯೇ ದಾವಣಗೆರೆ ಜಿಲ್ಲೆಯ ಕಾರಾಗೃಹದ ಗ್ರಂಥಾಲಯದಲ್ಲಿಯೇ ಗಾಂಜಾ ಸಿಗುತ್ತಿತ್ತು ಎಂದು ಸಲ್ಲಿಕೆಯಾಗಿರುವ ತನಿಖಾ ವರದಿಯು ಮುನ್ನೆಲೆಗೆ ಬಂದಿದೆ.

 

ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಹಲವು ಬಾರಿ ಗುಂಪು ಘರ್ಷಣೆಗಳಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರು ಈ ಬಗ್ಗೆ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

 

ತನಿಖಾ ವರದಿ ಆಧರಿಸಿ ದಾವಣಗೆರೆ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಭಾಗೀರಥಿ ಮತ್ತಿತರ ವಿರುದ್ಧ ಐಪಿಸಿ ಮತ್ತು ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಹಾಗೂ ಕಲಂ 42 ಹಾಗೂ ಎನ್‌ಡಿಪಿಎಸ್‌ ಕಾಯ್ದೆ 20(ಬಿ) (ii) ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

‘ನಿಯಮಗಳ ಅನುಸಾರ ಕರ್ತವ್ಯ ನಿರ್ವಹಿಸದೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟು ಈ ಘಟನೆಯಲ್ಲಿ ಶಾಮೀಲಾದ ದಾವಣಗೆರೆಯ ಜಿಲ್ಲಾ ಕಾರಾಗೃಹ ಅಧಿಕಾರಿ, ಸಿಬ್ಬಂದಿ ಹಾಗೂ ಘಟನೆಗೆ ಸಂಬಂಧಿಸಿದ ವಿಚಾರಣೆ ಬಂಧಿಗಳ ವಿರುದ್ಧ ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022ರ ನಿಯಮ 42 ಅಡಿಯಲ್ಲಿ ಮತ್ತು ಸೂಕ್ತ ಕಾನೂನಿನಡಿಯಲ್ಲಿ ದೂರನ್ನು ದಾಖಲಿಸಿದೆ,’ ಎಂದು ಎಫ್‌ಐಆರ್‍‌ನಲ್ಲಿ ಹೇಳಲಾಗಿದೆ.

 

ಐಪಿಸಿ ಮತ್ತು ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಹಾಗೂ ಕಲಂ 42 ಹಾಗೂ ಎನ್‌ಡಿಪಿಎಸ್‌ ಕಾಯ್ದೆ 20(ಬಿ) (ii) ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

ನ್ಯಾಯಾಧೀಶರಿಗೆ ದೂರರ್ಜಿ

 

ವಿಶೇಷವೆಂದರೇ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವಿನ ಗುಂಪು ಘರ್ಷಣೆ ಮತ್ತು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾದ ಗಾಂಜಾ ಮತ್ತಿತರ ವಸ್ತುಗಳು ಕೈದಿಗಳಿಗೆ ಸಿಗುತ್ತಿವೆ ಎಂದು ಬಿಡುಗಡೆಗೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬರು ನೇರವಾಗಿ ನ್ಯಾಯಾಧೀಶರ ಗಮನಕ್ಕೆ ತಂದು ದೂರರ್ಜಿ ಸಲ್ಲಿಸಿದ್ದರು ಎಂದು ಗೊತ್ತಾಗಿದೆ.

 

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕಾರಾಗೃಹಕ್ಕೆ ದಿಢೀರ್‍‌ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಹಲ್ಲೆಗೊಳಗಾಗಿದ್ದ ಬಂಧಿಗಳ ವಿಚಾರಣೆ ನಡೆಸಿದ್ದರು ಎಂದು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

ತನಿಖೆಯ ವಿವರ

 

ಗುಂಪು ಘರ್ಷಣೆಯಲ್ಲಿ ತೊಡಗಿದ್ದ ವಿಚಾರಣೆ ಬಂಧಿ (ಸಂಖ್ಯೆ 325/23) ಸುನೀಲ್‌, ಪವನಕುಮಾರ್‍‌ (ವಿಚಾರಣೆ ಬಂಧಿ ಸಂಖ್ಯೆ 326/23), ಇಮ್ರಾನ್‌ ಖಾನ್‌, ಸಲ್ಮಾನ್‌ ಖಾನ್‌ ಮಾದಕ ದ್ರವ್ಯ ಸೇವನೆ ಮಾಡಿ ಬಂಧಿಗಳಿಗೆ ಹಲ್ಲೆ ಮಾಡಿದ್ದರು. ಈ ಬಗ್ಗೆ 2024ರ ಜನವರಿ 31ರಂದು ಬಂಧಿಗಳ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

 

‘ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲು ದಾವಣಗೆರೆ ಜಿಲ್ಲಾಸ್ಪತ್ರೆಯ ತಜ್ಞರು ಬಂದಿದ್ದರು. ಇವರು ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷಿಸಿದ್ದರು. ಮಾದಕ ವಸ್ತು ಸೇವನೆ ಮಾಡಿದ್ದರು ಎಂಬುದನ್ನು ಮೂತ್ರ ಪರೀಕ್ಷೆಯಿಂದ ಸಾಬೀತುಪಡಿಸಿದ್ದರು. ಅಲ್ಲದೇ ಈ ಸಂಬಂಧ ಲಿಖಿತ ವರದಿ ಮತ್ತು ಪರೀಕ್ಷಾ ವರದಿಯನ್ನು ಸಲ್ಲಿಸಲು ವೈದ್ಯಕೀಯ ತಂತ್ರಜ್ಞರಿಗೆ ಸೂಚಿಸಿದ್ದರು,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಅಲ್ಲದೇ 2024ರ ಜನವರಿ 31ರಂದು ನ್ಯಾಯಾಧೀಶರು ಮತ್ತು ಜಿಲ್ಲಾ ಆಸ್ಪತ್ರೆಯ ತಂತ್ರಜ್ಞರೊಂದಿಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಮತ್ತೋರ್ವ ಬಂಧಿ ಸಂಜಿತ್‌ ಸಿಂಗ್‌ ತಾನಾಗಿಯೇ ನ್ಯಾಯಾಧೀಶರ ಮುಂದೆ ಬಂದು ಕಾರಾಗೃಹದಲ್ಲಿ ಗಾಂಜಾ ಇರುವುದನ್ನು ತೋರಿಸಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

ಬಂಧಿಗಳು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಪ್ರಭಾರ ಅಧೀಕ್ಷಕರಾದ ಭಾಗೀರಥಿ ಎಲ್‌ ಮತ್ತು ಜೈಲರ್‍‌ ಕೆ ಎಸ್‌ ಮಾನ್ವಿ ಅವರನ್ನು ವಿಚಾರಿಸಲಾಗಿತ್ತು. ಆದರೆ ಇದರ ಬಗ್ಗೆ ತಿಳಿದಿಲ್ಲ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮುಂದೆ ಹೇಳಿದ್ದರು ಎಂಬುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಪುಸ್ತಕದಲ್ಲಿತ್ತು ಗಾಂಜಾ

 

ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಯನ್ನು ಗ್ರಂಥಾಲಯದ ಬಳಿ ವಿಚಾರಣಾಧೀನ ಕೈದಿ ಕರೆದುಕೊಂಡು ಹೋಗಿದ್ದ.

 

ಈ ವೇಳೆಯಲ್ಲಿ ‘ ಗ್ರಂಥಾಲಯದಲ್ಲಿದ್ದ ಪುಸ್ತಕ ESSENTIAL PEDIATRIC NURSING SECOND EDITION PIYUSH GUPTA ಪುಸ್ತಕದ ಪುಟ ಸಂಖ್ಯೆ 75ರಿಂದ 386ರ ಮಧ್ಯ ಭಾಗದಲ್ಲಿ ಸುಮಾರು 3 ಇಂಚು ಉದ್ದ 2 ಇಂಚು ಅಗಲ, 1 ಇಂಚು ಆಳದಲ್ಲಿ ಪುಸ್ತಕದ ಹಾಳೆ ಕತ್ತರಿಸಲಾಗಿತ್ತು. ಈ ಪುಸ್ತಕದೊಳಗೆ 2024ರ ಜನವರಿ 23ರ ಉದಯವಾಣಿ ದಿನಪತ್ರಿಕೆ ಕಾಗದದಲ್ಲಿ ಸುತ್ತಿಟ್ಟಿದ್ದ 3 ಇಂಚು ಉದ್ದ 2 ಇಂಚು ಅಗಲವಿದ್ದ ಪ್ಲಾಸ್ಟಿಕ್‌ ಕವರ್‍‌ನಲ್ಲಿ ಗಾಂಜಾದಂತೆ ಕಾಣುವ ವಸ್ತುವಿತ್ತು. ಜತೆಗೆ ಮೊಬೈಲ್‌ ಚಾರ್ಜಿಂಗ್‌ ಮಾಡಲು ಬಳಸುವ ಬಿಳಿ ಬಣ್ಣದ ಡಾಟಾ ಕೇಬಲ್‌ ಕೂಡ ಇತ್ತು,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಅಲ್ಲದೇ ದಾವಣಗೆರೆ ಜಿಲ್ಲಾ ಕಾರಾಗೃಹದ ಗ್ರಂಥಾಲಯದಲ್ಲಿ ನಿಷೇಧಿತ ವಸ್ತು ದೊರೆತಿತ್ತು. ‘ಗ್ರಂಥಾಲಯದ ಉಸ್ತುವಾರಿಗೆ ಯಾವುದೇ ಸಿಬ್ಬಂದಿಯನ್ನು ನೇಮಿಸರಲಿಲ್ಲ. ಅಧೀಕ್ಷಕರಾದ ಭಾಗೀರಥಿ ಅವರ ಉಸ್ತುವಾರಿಯಲ್ಲಿಯೇ ಇತ್ತು.  ಬೀಗದ ಕೀ ಯನ್ನು ಕಾರಾಗೃಹದ ಅಧೀಕ್ಷಕಿ ಭಾಗೀರಥಿ ಅವರ ಕೊಠಡಿಯಲ್ಲಿ ಇಡಲಾಗುತ್ತಿತ್ತು. 2024ರ ಜನವರಿ 31ರಂದು ಕೊಠಡಿಯ ಬೀಗದ ಕೀಯನ್ನು ಕಚೇರಿ ಸ್ವಚ್ಛತಾ ಕೆಲಸಕ್ಕೆ ನಿಯೋಜಿತವಾಗಿದ್ದ ಹೇಳುತ್ತಿರುವ ರಂಜನ್‌ (ವಿಚಾರಣೆ ಬಂಧಿ ಸಂಖ್ಯೆ 1236/19) ಇವರಿಗೆ ತಂದುಕೊಟ್ಟಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ಹೇಳಲಾಗಿದೆ.

 

ಮುಚ್ಚಿದ ಲಕೋಟೆಯಲ್ಲಿ ಪೆನ್‌ ಡ್ರೈವ್‌ನಲ್ಲಿದ್ದ ದೂರವಾಣಿ ಸಂಭಾಷಣೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿತ್ತು. ಇದು ವಿಚಾರಣೆ ಬಂಧಿಗಳಿಬ್ಬರ ನಡುವಿನ ದೂರವಾಣಿ ಸಂಭಾಷಣೆ ಆಗಿದೆ ಎಂದು ಕಂಡು ಬಂದಿತ್ತು. ಇದನ್ನು ತನಿಖೆಯಿಂದ ಖಚಿತಪಡಿಸಿಕೊಳ್ಳಬೇಕಿದೆ ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

2024ರ ಜನವರಿ 27 ಮತ್ತು 28ರಂದು ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದ ಬಂಧಿಗಳ ನಡುವಿನ ಗುಂಪು ಘರ್ಷಣೆಗೆ ಸಂಬಂಧಿಸಿದ ಪ್ರಾಥಮಿಕ ತನಿಖೆಯನ್ನು 2024ರ ಜನವರಿ 28ರಂದು ಕೈಗೊಳ್ಳಲಾಗಿತ್ತು.

 

ಉತ್ತರ ಪ್ರದೇಶ ಮೂಲದ ವಿಚಾರಣಾಧೀನ ಕೈದಿ ಮತ್ತು ಸ್ಥಳೀಯ ಕೈದಿಗಳ ಮಧ್ಯೆ ಗುಂಪು ಘರ್ಷಣೆ ಆಗಿತ್ತು. ಇಬ್ಬರು ಕೈದಿಗಳ ತಲೆಗೆ ಪೆಟ್ಟಾಗಿತ್ತು. ಸಂಜಿತ್‌ ಸಿಂಗ್‌, ಬೋಲೆ, ಸುನೀಲ್‌, ಪವನಕುಮಾರ್‍‌, ಅಭಿಲಾಷ್‌, ವೆಂಕಟೇಶ, ರಮೇಶ, ಮಂಜುನಾಥ, ಆಕಾಶ, ಹನುಮಂತ, ಇಮ್ರಾನ್‌ಖಾನ್‌, ಸಲ್ಮಾನ್‌ ಖಾನ್‌ ಎಂಬ ವಿಚಾರಣಾಧೀನ ಕೈದಿಗಳ ವಿರುದ್ಧ ಬಸವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts