ಅಲೆಮಾರಿಗಳಿಗೆ ಮನೆ ನಿರ್ಮಾಣ; 206.26 ಕೋಟಿ ರು ಅನುದಾನದ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ 206.26 ಕೋಟಿ ರು.ಗಳ ಅನುದಾನದ ಬಾಕಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುರಿಗಳಿಗೆ ಸಂಬಂಧಿಸಿದಂತೆ ತಮ್ಮ ಪಾಲಿನ ಯಾವುದೇ ಅನುದಾನವನ್ನೂ ಮೀಸಲಿರಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡಲು ಅನುದಾನದ ಕೊರತೆ ಕಾಣಿಸಿಕೊಂಡಿರುವ ಬೆನ್ನಲ್ಲೇ ಇದೀಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮನೆಗಳ ನಿರ್ಮಾಣಕ್ಕೂ ಅನುದಾನ ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ರಾಜೀವ್‌ಗಾಂಧಿ ವಸತಿ ನಿಗಮವು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2024ರ ಜನವರಿ 16ರಂದೇ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

‘ಸಮಾಜ ಕಲ್ಯಾಣ ಇಲಾಖೆಯ (ಆದೇಶ ಸಂಖ್ಯೆ ಸಕಿ 303 ಎಸ್‌ಡಿಸಿ 2022 ದಿನಾಂಕ 02.-8.2022) ಆದೇಶದಲ್ಲಿ ಪ್ರತಿ ಮನೆಗೆ 4 ಲಕ್ಷ ರು. ಘಟಕ ವೆಚ್ಚ ನಿಗದಿಪಡಿಸಿದೆ. (ಅಲೆಮಾರಿ ನಿಗಮದ ಪಾಲಿನ ಅನುದಾನ 2 ಲಕ್ಷ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದ ಅನುದಾನ 2 ಲಕ್ಷ) ಅದರಂತೆ ಮೊದಲ ಹಂತದ 5,313 ಮನೆಗಳ ಗುರಿಗೆ  103.23 ಕೋಟಿ ಹಾಗೂ ಪ್ರಸ್ತುತ ನೀಡಲಾದ 5,000 ಮನೆಗಳ ಗುರಿಗೆ 100 ಕೋಟಿ ರು ಸೇರಿ ಒಟ್ಟು 206.26 ಕೋಟಿ ರು.ಗಳ ಅನುದಾನ ಬಾಕಿ ಇದ್ದು ಕೂಡಲೇ ಬಿಡುಗಡೆಗೊಳಿಸಬೇಕು,’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಈ ಹಿಂದೆ 5 ಲಕ್ಷ ಮನೆಗಳ ಗುರಿಯನ್ನು ನೀಡಲಾಗಿತ್ತು. ಡಾ ಬಿ ಆರ್‍‌ ಅಂಬೇಡ್ಕರ್‍‌ ನಿವಾಸ್‌ ಯೋಜನೆಯ 1,25,00 ಮನೆಗಳ ಗುರಿಯಲ್ಲಿ ಎಸ್‌ ಸಿ ಎಸ್‌ ಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಿ 13,545 ಮನೆಗಳು ಬಾಕಿ ಇವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಅಲೆಮಾರಿ ಸಮುದಾಯದವರಿಗೆ 10,000 ಮನೆಗಳು ನಿಗದಿಪಡಿಸಲಾಗಿತ್ತು. ಈ ಪೈಕಿ 5,313 ಮನೆಗಳ ಗುರಿಯನ್ನು ಮಾತ್ರ ನಿಗದಿಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಗೆ ಮನೆಗಳನ್ನು ಮಂಜೂರು ಮಾಡಲು ವಸತಿ ಇಲಾಖೆಯಿಂದ ಆದೇಶ ಹೊರಡಿಸಿಲ್ಲ. ಈ ಸಂಬಂಧ ರಾಜೀವ್‌ಗಾಂಧಿ ವಸತಿ ನಿಗಮವು ಇಲಾಖೆಯ ಕಾರ್ಯದರ್ಶಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

ಅದೇ ರೀತಿ ಪ್ರಸ್ತುತ ಹೆಚ್ಚುವರಿಯಾಗಿ ನಿಗದಿಪಡಿಸಿರುವ 5000 ಮನೆಗಳ ಗುರಿಗಳನ್ನು ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ 2024ರ ಮಾರ್ಚ್‌ ಅಂತ್ಯದೊಳಗೆ ನಮೂದಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದರು.

 

ವಿಶೇಷವೆಂದರೇ ‘ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸದರಿ ಗುರಿಗಳಿಗೆ ಸಂಬಂಧಿಸಿದಂತೆ ತಮ್ಮ ಪಾಲಿನ ಯಾವುದೇ ಅನುದಾನವನ್ನು ಮೀಸಲಿರಿಸಿರುವುದಿಲ್ಲ. ಈಗಾಗಲೇ ಆರ್ಥಿಕ ಇಲಾಖೆಯ ಟಿಪ್ಪಣಿಯಂತೆ ನಿಗಮದ ಪಾಲಿನ ಅನುದಾನವನ್ನು ವಾಪಸ್‌ ಪಡೆದು ಡಾ ಬಿ ಆರ್‍‌ ಅಂಬೇಡ್ಕರ್‍‌ ನಿವಾಸ್‌ ಯೋಜನೆಗೆ ಬಳಸಿಕೊಂಡು ಸದರಿ ಗುರಿಯಲ್ಲಿ ವಸತಿ ರಹಿತ ಅಲೆಮಾರಿ ಸಮುದಾಯದವರಿಗೆ ನಿಗದಿತ ಗುರಿಗಳ ಅನ್ವಯ ಪರಿಗಣಿಸಬೇಕು. ತಮ್ಮ ಹಂತದಲ್ಲಿ ಪ್ರತಿ ಮನೆಗೆ ಘಟಕ ವೆಚ್ಚ 2.00 ಲಕ್ಷ ರು. ಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು 2024ರ ಜನವರಿ 23ರಂದು ಪತ್ರದಲ್ಲಿ ಕೋರಿತ್ತು ಎಂಬುದು ತಿಳಿದು ಬಂದಿದೆ.

 

ಈ ಉದ್ದೇಶಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ 300.00 ಕೋಟಿ ರು.ಗಳನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನಿಗಮಕ್ಕೆ ಬಿಡುಗಡೆ ಮಾಡಲಾಗಿತ್ತು. ಈ ಅನುದಾನದ ಪೈಕಿ ಪ್ರವಾಹ ಸಂತ್ರಸತರ ಪುನರ್ವಸತಿ ಯೋಜನೆಯ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಒಟ್ಟಾರೆ 140.40 ಕೋಟಿ ರು.ಗಳನ್ನು ಬಳಸಿಕೊಂಡಿತ್ತ. ಬಾಕಿ ಉಳಿದ ಮೊತ್ತವನ್ನು ಡಾ ಬಿ ಆರ್‍‌ ಅಂಬೇಡ್ಕರ್‍‌ ನಿವಾಸ್‌ ಯೋಜನೆಯಡಿ ಪ.ಜಾತಿ ಮತ್ತ ಪ.ಪಂಗಡಗಳ ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ.

 

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯು 10,000 ಮನೆಗಳ ಗುರಿಯನ್ನು ನಿಗದಿಪಡಿಸಿದೆ. ಇದಕ್ಕಾಗಿ 200 ಕೋಟಿ ರು.ಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಒದಗಿಸಲು ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಅಲ್ಲದೇ 2023-24ನೇ ಸಾಲಿನ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕ್ರಿಯಾ ಯೋಜನೆಯಲ್ಲಿ ಅಂಬೇಡ್ಕರ್‍‌ ನಿವಾಸ್‌ ಯೋಜನೆಗೆ 500.00 ಲಕ್ಷ ರು., ಟಿಎಸ್‌ಪಿ ಅಡಿಯಲ್ಲಿ 300.00 ಲಕ್ಷ ರು.ಗಳು ಒಟ್ಟಾರೆಯಾಗಿ 800.00 ಲಕ್ಷ ರು.ಗಳನ್ನು ಹಂಚಿಕೆ ಮಾಡಿತ್ತು. ಇದರ ಪ್ರಕಾರ ಪ್ರತಿ ಫಲಾನುಭವಿಗೆ 2.00 ಲಕ್ಷ ರು.ಗಳ ಸಹಾಯಧನ ನಿಗದಿಪಡಿಸಿತ್ತು.

 

‘ಸಹಾಯಧನ 2.00 ಲಕ್ಷ ರು.ಗಳನ್ನು ವಿಶೇಷ ವರ್ಗಗಳಿಗೆ ಆದ್ಯತೆ ಮೇಲೆ ಮನೆಗಳ ಮಂಜೂರಾತಿ ಮಾಡುವುದು. ಅಲೆಮಾರಿ ಸಮುದಾಯದ 15000 ಫಲಾನುಭವಿಗಳು ವಸತಿ ಸೌಲಭ್ಯಕ್ಕೆ ಆಯ್ಕೆಯಾಗಿರುತ್ತಾರೆ. ಅದರ ಪೈಕಿ ಪರಿಶಿಷ್ಟ ಜಾತಿಯವರಿಗೆ 3,008 ಹಾಗೂ ಪರಿಶಿಷ್ಟ ಪಂಗಡದವರಿಗೆ 2,305 ಮನೆಗಳಿಗೆ ಅನುಮೋದನೆ ನೀಡಲಾಗಿದೆ.

 

ಬಾಕಿ ಉಳಿದ ಮನೆಗಳಿಗೆ ಪ್ರಸಕ್ತ ಸಾಲಿನಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮಂಜೂರಾತಿ ನೀಡುವುದು,’ ಎಂದು 2023ರ ಜುಲೈ 31ರಂದು ನಡೆದಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯು ಅನುಮೋದಿಸಿತ್ತು.

the fil favicon

SUPPORT THE FILE

Latest News

Related Posts