ರಸ್ತೆ ಅಭಿವೃದ್ಧಿಗೆ 245.37 ಕೋಟಿ ರು. ಅನುದಾನ ಲಭ್ಯವಿಲ್ಲ; ಕೈಚೆಲ್ಲಿದ ಇಲಾಖೆ, ಶಾಸಕರ ಕೆಂಗಣ್ಣು!

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳ ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಸಲ್ಲಿಸಿರುವ ಕೋರಿಕೆ ಈಡೇರಿಸಲು ಸರ್ಕಾರದ ಬಳಿ 245.37 ಕೋಟಿ ರು. ಅನುದಾನವೂ ಇಲ್ಲ.

 

ಅಷ್ಟೇ ಅಲ್ಲ ಹಿಂದಿನ ವರ್ಷದ ಹಾಗೂ ಪ್ರಸಕ್ತ ಸಾಲಿನಲ್ಲಿ (ಲೆಕ್ಕ ಶೀರ್ಷಿಕೆ;5054) ಮಂಜೂರಾತಿ ದೊರೆತಿರುವ ಕಾಮಗಾರಿ ಬಾಕಿ ಬಿಲ್‌ ಪಾವತಿಸಲು 5,210 ಕೋಟಿ ರು. ಬೇಕಿದೆ. ಹಾಗೂ ಲೆಕ್ಕ ಶೀರ್ಷಿಕೆ 3054 ರ ಅಡಿ ಮಂಜೂರಾತಿ ದೊರೆತಿರುವ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಸಲು 700 ಕೋಟಿ ರು. ಸೇರಿ 5,820 ಕೋಟಿ ರು. ಅನುದಾನ ಹೊಂದಿಸಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

 

ಒಟ್ಟಾರೆ 5,820 ಕೋಟಿ ರು. ಹೊಂದಿಸಬೇಕಿರುವ ಅನಿವಾರ್ಯತೆಯಲ್ಲಿರುವ ಸರ್ಕಾರವು ಇದೀಗ ಸಚಿವರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಸಲ್ಲಿಸಿರುವ ಕೋರಿಕೆಯನ್ನು ಈಡೇರಿಸಲು ಅಸಹಾಯಕತೆ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

 

ಇದರ ಟಿಪ್ಪಣಿಯ ಪ್ರತಿಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಳೆದ ನವೆಂಬರ್‌ನಿಂದಲೂ ಸಚಿವರು, ಶಾಸಕರು ಸಲ್ಲಿಸಿರುವ ಕೋರಿಕೆ, ಮನವಿಗಳು, ಪ್ರಸ್ತಾವನೆಗಳನ್ನು ಕ್ರೋಢಿಕರಿಸಿರುವ ಇಲಾಖೆಯ ಅಧಿಕಾರಿಗಳು, 245.37 ಕೋಟಿ ರು. ಹೊಂದಿಸುವ ಬಗ್ಗೆ ಕಸರತ್ತು ನಡೆಸಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಕುರಿತು ನವೆಂಬರ್‌ 23ರಿಂದಲೂ ಅಧಿಕಾರಿಗಳ ಹಂತದಲ್ಲಿ ನಿರಂತರವಾಗಿ ಸಭೆ ನಡೆಯುತ್ತಲೇ ಇದೆ. ಅದರೆ 245.37 ಕೋಟಿ ರು. ಅನುದಾನವಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

 

‘ಸಚಿವರು, ಶಾಸಕರು, ಜನಪ್ರತಿನಿಧಿಗಳು ಸಲ್ಲಿಸಿರುವ ಕೋರಿಕೆಗಳನ್ನು ಪರಿಶೀಲಿಸಲಾಗಿ ಇವರು ಕೋರಿರುವ 245.37 ಕೋಟಿ ರು.ಗಳ ಅನುದಾನ ಲಭ್ಯವಿಲ್ಲದೇ ಇರುವುದರಿಂದ ಹೆಚ್ಚುವರಿಯಾಗಿ ಅನುದಾನ ಮಂಜೂರಾತಿಗಾಗಿ ಆರ್ಥಿಕ ಇಲಾಖೆಗೆ ಕೋರಬೇಕಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಇದಲ್ಲದೇ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ, ಮಳೆ ಪರಿಹಾರ ಕಾರ್ಯಕ್ರಮ ಮತ್ತು ಗ್ರಾಮೀಣ ರಸ್ತೆಗಳ ಕಾರ್ಯಕ್ರಮದಡಿಯಲ್ಲಿ ಇದುವರೆಗೂ 5,543.82 ಕೋಟಿ ರು. ಬಿಡುಗಡೆಯಾಗಿದೆ. ಆದರೂ ಇನ್ನೂ ಹೆಚ್ಚುವರಿಯಾಗಿ 4,961.20 ಕೋಟಿ ರು. ಅನುದಾನದ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ.

 

ಗ್ರಾಮೀಣ ರಸ್ತೆಗಳಿಗಾಗಿ (ಲೆಕ್ಕ ಶೀರ್ಷಿಕೆ;5054-03-337-0-75) ಅಡಿಯಲ್ಲಿ 2023-24ರಲ್ಲಿ ಒದಗಿಸಿದ್ದ 700 ಕೋಟಿ ರು. ಪೈಕಿ 320.86 ಕೋಟಿ ರು. ವೆಚ್ಚವಾಗಿದೆ. ಹೀಗಾಗಿ 2024-25ನೇ ಸಾಲಿನಲ್ಲಿ 4,961.20 ಕೋಟಿ ರು. ಒದಗಿಸಬೇಕು ಎಂದು ಇಲಾಖೆಯು ಪ್ರಸ್ತಾವಿಸಿದೆ ಎಂದು ಗೊತ್ತಾಗಿದೆ.

 

‘ಸದ್ಯ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದ ಒಟ್ಟು 33,500 ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ಕೆರೆಗಳ ಜೀರ್ಣೋದ್ಧಾರ ಮಾಡಿ ಜನ, ಜಾನುವಾರುಗಳಿಗೆ ನೀರು ಒದಗಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ, ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸುವುದು ಅಷ್ಟೊಂದು ಸುಲಭವಲ್ಲ,’ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

SUPPORT THE FILE

Latest News

Related Posts