ಬೆಂಗಳೂರು; ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಮುಂಗಡವಾಗಿ 20 ಲಕ್ಷ ರು. ಬಿಡುಗಡೆ ಮಾಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಸಂಬಂಧ ಯಾವುದೇ ದಾಖಲೆಗಳನ್ನೂ ಒದಗಿಸಿಲ್ಲ.
ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಸಮೀಕ್ಷೆ ಸಂಬಂಧವೂ ಎರಡೂ ಇಲಾಖೆಗಳೂ ಆರ್‍ಟಿಐ ಅಡಿ ಯಾವುದೇ ದಾಖಲೆಗಳನ್ನೂ ನೀಡಿಲ್ಲ. ಇದರ ನಡುವೆಯೇ ಸಾರಿಗೆ ಇಲಾಖೆಯು ಸಹ 20 ಲಕ್ಷ ರು. ಮುಂಗಡವಾಗಿ ಬಿಡುಗಡೆ ಮಾಡಿರುವ ಸಂಬಂಧದ ಕಡತವನ್ನೇ ಒದಗಿಸಿಲ್ಲ. ಬದಲಿಗೆ ಸಾರಿಗೆ ಇಲಾಖೆಯು ಹೊರಡಿಸಿದ್ದ ಆದೇಶವನ್ನೇ ಒದಗಿಸಿ ಕೈ ತೊಳೆದುಕೊಂಡಿದೆ.
ಆರ್ಥಿಕ ಇಲಾಖೆಯ ಅಧಿಸೂಚನೆಯನ್ನಾಧರಿಸಿ ಸಮೀಕ್ಷೆ ನಡೆಸಲು ಸಾರಿಗೆ ಇಲಾಖೆಯು ಎಂ2ಎಂ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ಗೆ 2023ರ ಸೆ.20ರಂದು ಆದೇಶ ನೀಡಿತ್ತು. 25 ಲಕ್ಷ ರು.ಗಳನ್ನು ಕೆಎಸ್‌ಆರ್‍ಟಿಸಿ ಸಂಸ್ಥೆಗೆ ಬಿಡುಗಡೆಗೊಳಿಸಿತ್ತು.
ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಶೇ.80ರಷ್ಟು ಮೊತ್ತವನ್ನು ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ಇಲಾಖೆಯು ಆದೇಶಿಸಿತ್ತು.
ಕರ್ನಾಟಕ ಸರ್ಕಾರದಿಂದ ಅನುಷ್ಠಾನಗೊಳಿಸಿರುವ ನಾಲ್ಕು ಖಾತರಿಗಳ ಕುರಿತು ಎಂ2ಎಂ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನಿಂದ ಸಮೀಕ್ಷೆ ನಡೆಸಲು ಸಾರಿಗೆ ಇಲಾಖೆಯ ಪಾಲಿನ ಮೊತ್ತವಾದ 25 ಲಕ್ಷ ರು.ಗಳ ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮಕ್ಕೆ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.ಬಿಡುಗಡೆ ಮಾಡಿರುವ ಶೇ.80ರಷ್ಟು ಮೊತ್ತವನ್ನು ಎಂ2ಎಂ ಮೀಡಿಯಾ ನೆಟ್‌ವರ್ಕ್ ಎಲ್‌ಎಲ್‌ಪಿಗೆ ಕೂಡಲೇ ಪಾವತಿಸಿ ಸರ್ಕಾರಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಉಳಿದ ಶೇ.20ರಷ್ಟು ಮೊತ್ತವನ್ನು ಸೆ.2023ರ ಒಳಗಾಗಿ ಪಾವತಿಸಿ ಸರ್ಕಾರಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ ಎಸ್ ಅವರು 2023ರ ಸೆ.20ರಂದು ಆದೇಶದಲ್ಲಿ ಸೂಚಿಸಿದ್ದರು.
ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ
‘ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಆದರೆ ವರದಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕೇ ಅಥವಾ ಸರ್ಕಾರಕ್ಕೆ ಸಲ್ಲಿಸಬೇಕೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಸಮೀಕ್ಷೆ ವರದಿ ಬಗ್ಗೆ ನಮಗೇನು ಮಾಹಿತಿಯಿಲ್ಲ,’ ಎಂದು ಗ್ಯಾರಂಟಿ ಅನುಷ್ಠಾನ ಹೊಣೆ ಹೊತ್ತಿರುವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದರು.
ಆದರೆ ಈ ಸಂಬಂಧ ಕೆಎಸ್‌ಆರ್‍ಟಿಸಿಯು ಸಾರಿಗೆ ಇಲಾಖೆಯು ಹೊರಡಿಸಿರುವ ಆದೇಶವನ್ನು ಹೊರತುಪಡಿಸಿ ನಿಗಮದಲ್ಲಿ ನಡೆದಿರುವ ಪತ್ರ ವ್ಯವಹಾರಗಳು, ವ್ಯವಹಾರ ಪುಟಗಳು, ಟಿಪ್ಪಣಿ ಹಾಳೆಗಳು, ಎಂ2ಎಂ ಮೀಡಿಯಾ ನೆಟ್‌ವರ್ಕ್‌ನೊಂದಿಗೆ ಮಾಡಿಕೊಂಡಿರುವ ಎಂಒಯು ಸೇರಿದಂತೆ ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ನಡೆಯು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಸಚಿವ ರಾಮಲಿಂಗಾರೆಡ್ಡಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರ ಪ್ರತಿಕ್ರಿಯೆಗಾಗಿ ‘ದಿ ಫೈಲ್’ ಪ್ರಯತ್ನಿಸಿತು. ಆದರೆ ಇಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ಪ್ರತಿಕ್ರಿಯೆ ದೊರಕಿದ ಬಳಿಕ ಈ ವರದಿಯನ್ನು ನವೀಕರಿಸಲಾಗುತ್ತದೆ.
ಟೆಂಡರ್, ದರಪಟ್ಟಿ ಅಹ್ವಾನವಿಲ್ಲ
ಇನ್ನು, ಸಮೀಕ್ಷೆ ವೆಚ್ಚವು 5 ಲಕ್ಷ ರು. ಮಿತಿ ದಾಟಿರುವ ಕಾರಣ ಸರ್ಕಾರವು ಟೆಂಡರ್, ದರಪಟ್ಟಿ ಆಹ್ವಾನಿಸಬೇಕಿತ್ತು. ಆದರೆ ಈ ಎಲ್ಲಾ ಪ್ರಕ್ರಿಯೆಗಳನ್ನು ಬದಿಗೊತ್ತಿ ನೇರವಾಗಿ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಸಮೀಕ್ಷೆ ಹೊಣೆಗಾರಿಕೆ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೇ ಈ ಪ್ರಕರಣದಲ್ಲಿ 4(ಜಿ) ವಿನಾಯಿತಿಯನ್ನೂ ಸರ್ಕಾರವು ದುರ್ಬಳಕೆ ಮಾಡಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು.
5 ಲಕ್ಷ ರು. ಮೇಲ್ಪಟ್ಟ ಕೆಲಸವಾಗಿರುವುದರಿಂದ ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್ ಕರೆಯಲು ಆರ್ಥಿಕ ಇಲಾಖೆಯು ಸೂಚಿಸಬೇಕಿತ್ತು. ಮೇಲಾಗಿ ಗ್ಯಾರಂಟಿ ಯೋಜನೆಗಳ ಕುರಿತಾಗಿ ನಡೆಸುವ ಸಮೀಕ್ಷೆಯು ಅತ್ಯಂತ ಅಗತ್ಯ ಮತ್ತು ತುರ್ತಿನ ಕಾಮಗಾರಿ, ಅಥವಾ ಸಂಗ್ರಹಣೆ ಅಲ್ಲದಿದ್ದರೂ ಇದೇ ಕಂಪನಿಗೇ ಆರ್ಥಿಕ ಇಲಾಖೆಯು 4 (ಜಿ) ವಿನಾಯಿತಿ ನೀಡಿದ್ದು ಸಂಶಯಗಳಿಗೆ ಕಾರಣವಾಗಿತ್ತು.