ಪ್ರತಾಪ್‌ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್‍‌ ನೇತೃತ್ವದ ಮಹಜರು ವರದಿ ಬಹಿರಂಗ

ಬೆಂಗಳೂರು; ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಬೆಲೆಬಾಳುವ ಮರಗಳನ್ನು ಕಡಿದಿರುವ ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೀಗ ತಹಶೀಲ್ದಾರ್‍‌ ಮಮತಾ ಅವರು ಸಲ್ಲಿಸಿದ್ದ ಮಹಜರು ವರದಿ ಸಹ ಇದೀಗ ಬಹಿರಂಗವಾಗಿದೆ.

 

ಹಾಸನ ಜಿಲ್ಲೆಯ ನಂದಗೋಡನಹಳ್ಳಿ ಸರ್ವೆ ನಂಬರ್‍‌ 16ರಲ್ಲಿದ್ದ ಒಟ್ಟು 40-35 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ಮರಗಳ ಕಡಿತಲೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದ್ದ ತಹಸೀಲ್ದಾರ್‍‌ ಈ ಕುರಿತಾದ ಮಹಜರು ವರದಿಯನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಸಲ್ಲಿಸಿದ್ದಾರೆ. ಈ ಮಹಜರು ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಕ್ರಮವಾಗಿ ಮರಗಳ ಕಡಿತಲೆ ಮಾಡಿರುವುದನ್ನು ಆರಂಭದಲ್ಲಿ ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರು ಪತ್ತೆ ಹಚ್ಚಿದ್ದರು. ಮೊದಲು ಸ್ಥಳ ಪರಿಶೀಲನೆ ನಡೆಸಿದ್ದ ತನ್ವೀರ್‍‌ ಅಹ್ಮದ್‌ ಅವರು ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಮರಗಳ ಕಡಿತಲೆ ಆಗಿರುವುದನ್ನು ತಹಶೀಲ್ದಾರ್‍‌ ಅವರ ಗಮನಕ್ಕೆ ತಂದಿದ್ದರು ಎಂಬುದು ಮಹಜರು ವರದಿಯಿಂದ ಗೊತ್ತಾಗಿದೆ.

 

ವರದಿಯಲ್ಲೇನಿದೆ?

 

ಅರೇಹಳ್ಳಿ ಹೋಬಳಿ ನಂದಗೋಡನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಮನೆಗಳ ಸಕ್ರಮೀಕರಣ ಸಂಬಂಧ ಸ್ವೀಕೃತವಾದ ಅರ್ಜಿಗಳ ಮನೆಗಳ ಸ್ಥಳ ಪರಿಶೀಲನೆ ನಡೆಸುವ ಸಲುವಾಗಿ ಈ ಕಚೇರಿಯ ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರನ್ನು ನಿಯೋಜಿಸಲಾಗಿತ್ತು.

 

ಇದೇ ಗ್ರಾಮದ ಸರ್ವೆ ನಂಬರ್‍‌ 16ರಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಸರ್ವೆ ನಂಬರ್‍‌ ನ ರಸ್ತೆ ಬದಿಯಲ್ಲಿ ಮರಗಳನ್ನು ಕಡಿತಲೆ ಮಾಡಿರುವುದನ್ನು ಗಮನಿಸಿದ್ದರು. ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ದಾಖಲೆಗಳನ್ನು ಕೇಳಿ ವಿಚಾರಿಸಿದಾಗ ಯಾವುದೇ ದಾಖಲೆಗಳನ್ನು ಸ್ಥಳದಲ್ಲಿ ಇದ್ದವರು ಒದಗಿಸಿರುವುದಿಲ್ಲ ಎಂದು ಮಹಜರು ವರದಿಯಲ್ಲಿ ಹೇಳಲಾಗಿದೆ.

 

ಈ ಕುರಿತು ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರು ಈ ಅಂಶವನ್ನು ದೂರವಾಣಿ ಮೂಲಕ ತಹಸೀಲ್ದಾರ್‍‌ ಗಮನಕ್ಕೆ ತಂದಿದ್ದರು. ನಂತರ ತಹಶೀಲ್ದಾರ್‍‌ ಮಮತಾ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.

 

ಸರ್ವೆ ನಂಬರ್‍‌ನಲ್ಲಿದ್ದದ್ದು 40-35 ಎಕರೆ

 

ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 16ರಲ್ಲಿ ಒಟ್ಟು 40-35 ಎಕರೆ ಜಮೀನು ಇದೆ. ಪ್ರಕಾಶ್‌ (4-28 ಎಕರೆ ), ಸಂಜೀವ್‌ ಶೆಟ್ಟಿ ( 4-10), ಸಿ ಜಿ ನಾಗರಾಜು (1-03), ಮಹಾದೇವಮ್ಮ (0-21), ದೇವಕಿ (0-02), ಮಂಜಪ್ಪ (2-18), ರಾಜು (1-06), ಕಾಳಮ್ಮ (1-02), ಲಲಿತಮ್ಮ (0-05), ಜಯಪ್ರಕಾಶ್‌ (2-18), ಗುಲಾಬಿ ಶೆಟ್ಟಿ, ಹೇಮಾವತಿ (1-20), , ಪ್ರೇಮಾ (1-20), ನಾರಾಯಣಶೆಟ್ಟಿ (3-10), ತಾಯಮ್ಮ (4-00), ಕೃಷ್ಣೇಗೌಡ (4-0), ರಾಕೇಶ್‌ ಶೆಟ್ಟಿ (4-0), ಗೋಮಾಳ (4-32) ಖಾತೆದಾರರಿದ್ದಾರೆ ಎಂದು ಮಹಜರು ವರದಿಯಲ್ಲಿ ಹೇಳಲಾಗಿದೆ.

 

ಮೂಲತಃ ಈ ಸರ್ವೆ ನಂಬರ್‍‌ ಸರ್ಕಾರಿ ನಂಬರ್‍‌ ಆಗಿದೆ. ನಂತರದಲ್ಲಿ ಹಲವು ಜನರಿಗೆ ಮಂಜೂರಾಗಿದೆ. ಪ್ರಸ್ತುತ ಸರ್ಕಾರಿ ಗೋಮಾಳ 4-32 ಎಕರೆ ಗೋಮಾಳ ಸೇರಿ ಒಟ್ಟು 40-35 ಎಕರೆ ಜಮೀನಿದೆ. ಈ ಪೈಕಿ ಸ್ಥಳ ಪರಿಶೀಲನೆ ವೇಳೆ ಗಮನಿಸಿದಂತೆ ಮತ್ತು ತಾಲೂಕು ಮೋಜಣಿದಾರರ ಪರಿಶೀಲನೆ ನಡೆಸಿದ್ದರು.

 

ಅಂದಾಜು 12-00 ಎಕರೆ ಪ್ರದೇಶದಲ್ಲಿ ಕಾಡು ಜಾತಿ ಹಾಗೂ ಮನ್ನಾ ಜಾತಿಗೆ ಸೇರಿದ ಹೊನ್ನೆ, ನಂದಿ, ಗರಿಗೆ, ಹೆಬ್ಬೇವು, ಹೆಬ್ಬಲಸು, ಮಾವು , ಹಲಸು ಹಾಗೂ  ಇತರೆ ಕಾಡು ಜಾತಿಯ ಅಂದಾಜು 25-30 ಲೋಡ್‌ನಷ್ಟು ಮರಗಳನ್ನು ಕಡಿದು ಮರಗಳನ್ನು ತುಂಡು ತುಂಡಾಗಿ ದಿಮ್ಮಿಗಳಾಗಿ ಕತ್ತರಿಸಿ ರಾಶಿ ಮಾಡಲಾಗಿದ್ದು ಕೆಲವು ಮರಗಳನ್ನು ಬೇರು ಸಹಿತ ಕಿತ್ತು ಹಾಕಲಾಗಿದೆ ಎಂದು ಮೋಜಣಿದಾರರ ಪರಿಶೀಲನೆಯಿಂದ ಗೊತ್ತಾಗಿದೆ.

 

‘ಸದರಿ ದಿನದಂದು ಮಧ್ಯಾಹ್ನ 3.08 ನಿಮಿಷದ ಸಮಯಕ್ಕೆ ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಸೂಚಿಸಲಾಗಿತ್ತು. ಆದರೆ ನಾನು ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹಾಜರಾಗಿದ್ದರು. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು. ಈ ಸಂಬಂಧ ಅನುಮತಿ ಪಡೆದಿಲ್ಲ ಮತ್ತು ಗಮನಕ್ಕೂ ಬಂದಿರುವುದಿಲ್ಲ ಎಂದು ಉತ್ತರಿಸಿದ್ದಾರೆ,’ ಎಂದು ತಹಶೀಲ್ದಾರ್‍‌ ಅವರ ಮಹಜರು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

ಮರ ಕಡಿಯಲು ಉಪಯೋಗಿಸುfತಿದ್ದ 2 ಮರ ಕತ್ತರಿಸುವ ಯಂತ್ರ, 2 ಹಿಟ್ಯಾಚಿ, 1 ಟ್ರೇಲರ್‍‌, ಅಂದಾಜು 25-30 ಲೋಡ್‌ ಕತ್ತರಿಸಿದ ವಿವಿಧ ಜಾತಿಯ ಮರಗಳನ್ನು ತಹಶೀಲ್ದಾರ್‍‌ ಅವರು ಜಫ್ತಿ ಮಾಡಿದ್ದರು.
ಬೇಲೂರು ತಾಲೂಕಿನ ತಹಶೀಲ್ದಾರ್‍‌, ವಲಯ ಅರಣ್ಯಾಧಿಕಾರಿಗಳು, ಅರೇಹಳ್ಳಿ ಠಾಣೆಯ ಆರಕ್ಷಕ ಉಪ ನಿರೀಕ್ಷಕರು, ಸಾಮಾಜಿಕ ಭದ್ರತಾ ಯೋಜನೆ ಶಾಖೆಯ ಶಿರಸ್ತೆದಾರ್, ಬೇಲೂರು ತಾಲೂಕಿನ ರಾಜಸ್ವ ನಿರೀಕ್ಷಕರು, ತಾಲೂಕು ಮೋಜಣಿದಾರಾರು, ತುಂದೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಅವರ ತಂಡ 2023ರ ಡಿಸೆಂಬರ್‍‌ 16ರಂದು ಮಹಜರು ನಡೆಸಿದ್ದರು.

 

ಏನಿದು ಪ್ರಕರಣ?

 

ಹಾಸನ ಜಿಲ್ಲೆಯ ನಂದಗೋಡನಹಳ್ಳಿಯಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದಿರುವ ವಿಕ್ರಂ ಸಿಂಹ, ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಆ ಜಮೀನಿನಲ್ಲಿದ್ದ ಮರಗಳನ್ನು ಕತ್ತರಿಸಿದ್ದರು. ಅಲ್ಲದೆ, ಆ ಮರಗಳನ್ನು ಸಾಗಾಟ ಮಾಡಿದ್ದರು. ಹಾಗಾಗಿ, ಅವರ ಮೇಲೆ ಎಫ್ಐಆರ್ ದಾಖಲಾಗಿತ್ತು.

 

ಆಗಿನಿಂದಲೂ ಅವರನ್ನು ವಿಚಾರಣೆಗೊಳಪಡಿಸಲು ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳು ಪ್ರಯತ್ನಿಸಿದ್ದರೂ ಅವರು ಸಿಕ್ಕಿರಲಿಲ್ಲ. ಹಾಸನದ ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಜಮೀನೊಂದರಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದ ಆರೋಪ ಹೊತ್ತಿದ್ದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರು ಗುರಿಯಾಗಿದ್ದರಿಂದ ಅವರನ್ನು ಡಿ. 30ರಂದು ಪೊಲೀಸರು ಬಂಧಿಸಿದ್ದರು.

 

ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಪ್ರತಿಕ್ರಿಯಿಸಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹಾಗಾಗಿಯೇ, ನನ್ನ ತಮ್ಮನನ್ನು ಮರಕಡಿದ ಪ್ರಕರಣದಲ್ಲಿ ಆರೋಪಿಯಾಗಿಸಿ ಆತನನ್ನು ಜೈಲಿಗೆ ಕಳಿಸಲು ಪ್ರಯತ್ನಿಸಿದ್ದಾರೆ’’ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts