ಬೆಂಗಳೂರು; ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್ ವರ್ಕ್ ಕಂಪನಿಗೆ 4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು ಆಡಳಿತಾತ್ಮಕ ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.
ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಯಾರ ಅಭಿಪ್ರಾಯವನ್ನೂ ಪಡೆಯದೇ ನೇರವಾಗಿ 4(ಜಿ) ವಿನಾಯಿತಿಗೆ ಕಡತ ಸಿದ್ಧಪಡಿಸಿ ಎಂದು ನಿರ್ದೇಶಿಸಿ ಒಕ್ಕಣೆ ಹಾಕಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗಗೊಂಡಿದೆ.
‘ದಿ ಫೈಲ್’ ಈ ಕುರಿತು ಆರ್ಥಿಕ ಇಲಾಖೆಯಲ್ಲಿ ತೆರೆದಿರುವ ಸಮಗ್ರ ಕಡತವನ್ನು ಪಡೆದುಕೊಂಡಿದೆ. ಕೋಟಿ ರುಪಾಯಿ ವೆಚ್ಚದಲ್ಲಿ ಎಂ 2ಎಂ ಮೀಡಿಯಾ ನೆಟ್ ವರ್ಕ್ ಕಂಪನಿಯು ಸಮೀಕ್ಷೆ ಕೈಗೊಂಡಿರುವ ಬೆನ್ನಲ್ಲೇ ಆರ್ಥಿಕ ಇಲಾಖೆಯ ಕಡತವು ಮುನ್ನೆಲೆಗೆ ಬಂದಿದೆ.
ಸಮೀಕ್ಷೆಗೆ 4(ಜಿ) ವಿನಾಯಿತಿ ನೀಡುವ ಮುನ್ನ ಆಡಳಿತ ಇಲಾಖೆಗಳ ಅಭಿಪ್ರಾಯವನ್ನೂ ಕೋರಿರುವ ಬಗ್ಗೆ ಯಾವ ದಾಖಲೆಗಳೂ ಆರ್ಥಿಕ ಇಲಾಖೆಯ ಕಡತದಲ್ಲಿ ಕಂಡುಬಂದಿಲ್ಲ. ಪ್ರಸ್ತಾವನೆಯನ್ನು ಆಡಳಿತ ಇಲಾಖೆಗಳಿಂದ ತರಿಸಿಕೊಳ್ಳದೇ ನೇರವಾಗಿ ತಮ್ಮ ಹಂತದಲ್ಲೇ 4(ಜಿ) ವಿನಾಯಿತಿ ನೀಡಿರುವುದು ಅಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಿಎಂ ಕಚೇರಿಗೆ ಪ್ರಸ್ತಾವನೆ ತಲುಪಿತ್ತೇ?
ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯೇ ನೇರವಾಗಿ ಮುಖ್ಯಮಂತ್ರಿ ಹೆಸರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರ ಒಂದು ಪ್ರತಿಯನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ತಲುಪಿಸಿತ್ತು. ಮುಖ್ಯಮಂತ್ರಿಗಳಿಗೆ ವಿಳಾಸಿಸಿ ಸಲ್ಲಿಸುವ ಮನವಿ, ಪ್ರಸ್ತಾವನೆಗಳು ಸೇರಿದಂತೆ ಇತ್ಯಾದಿ ಪತ್ರಗಳನ್ನು ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಕಚೇರಿಯಲ್ಲಿ ನೀಡಲಾಗುತ್ತೆ.
ಅಥವಾ ನೇರವಾಗಿ ಮುಖ್ಯಮಂತ್ರಿಗಳಿಗೇ ಮನವಿ, ಪ್ರಸ್ತಾವನೆ, ಪತ್ರಗಳನ್ನು ಸಲ್ಲಿಸಿದರೂ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಗಳ ಪ್ರಕಾರ ಅದೇ ಪತ್ರಗಳ ಮೇಲೆ ‘ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವುದು’ ಎಂದು ಸಹಜವಾಗಿ ಮುಖ್ಯಮಂತ್ರಿ ಒಕ್ಕಣೆ ಹಾಕುತ್ತಾರೆ. ಇಂತಹ ಮನವಿ, ಪ್ರಸ್ತಾವನೆ ಅಥವಾ ಪತ್ರಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುತ್ತದೆ.
ಆದರೆ ಎಂ2ಎಂ ಮೀಡಿಯಾ ನೆಟ್‌ವರ್ಕ್, ಮುಖ್ಯಮಂತ್ರಿಗಳಿಗೆ ನೇರವಾಗಿ ವಿಳಾಸಿಸಿ ಪ್ರಸ್ತಾವನೆ ಸಲ್ಲಿಸಿತ್ತಾದರೂ ಇದರ ಮೇಲೆ ಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಸಚಿವಾಲಯದ ಯಾವೊಬ್ಬ ಅಧಿಕಾರಿಯ ಒಕ್ಕಣೆಯೂ ಇಲ್ಲ. ಹೀಗಾಗಿ ಈ ಪ್ರಸ್ತಾವನೆಯು ಮುಖ್ಯಮಂತ್ರಿಗಳ ಆಪ್ತ, ಅಧೀನ, ಜಂಟಿ, ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ತಲುಪಿಸಲಾಗಿತ್ತೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯ ನಡೆಸುವುದು ಈ ಮೊದಲೇ ಪೂರ್ವ ನಿರ್ಧರಿತ ವ್ಯವಹಾರವಾಗಿತ್ತೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
Pl. put up for 4(g)
ವಿಶೇಷವೆಂದರೇ ಮುಖ್ಯಮಂತ್ರಿಗಳಿಗೆ ವಿಳಾಸಿಸಿದ್ದ ಪ್ರಸ್ತಾವನೆ ಮೇಲೆಯೇ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ವೆಚ್ಚ) ಡಾ ಪಿ ಸಿ ಜಾಫರ್ ಅವರು Pl. put up for 4(g) ಎಂದು ನೇರವಾಗಿ ಒಕ್ಕಣೆ ಹಾಕಿದ್ದರು.
ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಪ್ರಸ್ತಾವನೆ ಮೇಲೆ ಹಾಕಿದ್ದ ಒಕ್ಕಣೆಯನ್ನಾಧರಿಸಿಯೇ ಆರ್ಥಿಕ ಇಲಾಖೆಯಲ್ಲಿ ಕಡತ ತೆರೆಯಲಾಗಿತ್ತು.
ಅಲ್ಲದೇ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ 4 (ಜಿ) ವಿನಾಯಿತಿ ನೀಡಬೇಕೇ ಬೇಡವೇ ಎಂಬ ಕುರಿತು ಸಾಮಾನ್ಯ ಚರ್ಚೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳೇ ನಡೆದಿಲ್ಲ ಎಂಬುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
26 ಪುಟಗಳನ್ನೊಳಗೊಂಡಿರುವ ಕಡತದಲ್ಲಿ ಆರ್ಥಿಕ ಇಲಾಖೆಯ ಯಾವೊಬ್ಬ ಅಧಿಕಾರಿಯೂ 4(ಜಿ) ವಿನಾಯಿತಿ ನೀಡುವ ಕುರಿತು ಚರ್ಚೆಗಳನ್ನೇ ನಡೆಸಿಲ್ಲ. ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು 7 ಸಾಲುಗಳನ್ನೊಳಗೊಂಡಿರುವ ಟಿಪ್ಪಣಿಯಲ್ಲಿ ನೇರವಾಗಿ 4 (ಜಿ) ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯಲು ಕಡತ ಮಂಡಿಸಿ ಎಂದು ಉಲ್ಲೇಖಿಸಿದ್ದಾರೆ.
ಟಿಪ್ಪಣಿ 4ರಲ್ಲೇನಿದೆ?
The Proposal is to take up evaluation surveys on the gurantees being implemented by the Govt. It is proopsed to take up one survey each in the next fourt months. Each survey will cost Rs 25 lakhs. Hence THE Following may be approved.
a) 4(g) exemption to M/s M2M Media Network for taking 4 surveys at a Total cost of Rs. one crore.
b) Payment of the survey be made as per proposal to the agency from each of the department each month. From Transport (sep), Energy (oct), Wcd (November ) and food (December).
FIle May be Submitted to Hon. CM for as proposed above ಎಂದು 2023ರ ಸೆ.7ರಂದು ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಅನುಮೋದಿಸಬಹುದು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು 2023ರ ಸೆ.8ರಂದು ಕಂಡಿಕೆ 5ರಲ್ಲಿ ಟಿಪ್ಪಣಿ ಹಾಕಿರುವುದು ಕಂಡುಬಂದಿದೆ.
ಇದಾದ ನಂತರ ಇಲಾಖೆಯ ಯಾವೊಬ್ಬ ಅಧಿಕಾರಿಯು 4(ಜಿ) ವಿನಾಯಿತಿ ನೀಡುವ ಮುನ್ನ ಅನುಸರಿಸಬೇಕಾದ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತು ಚಕಾರ ಎತ್ತಿಲ್ಲ. ಕಡೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಂಡಿಕೆ 6ರಲ್ಲಿ ಅನುಮೋದನೆ ನೀಡಿ ಸಹಿ ಹಾಕಿರುವುದು ಕಂಡು ಬಂದಿದೆ.
ಸಾಮಾನ್ಯವಾಗಿ ಆಡಳಿತ ಇಲಾಖೆಗಳು 4(ಜಿ) ವಿನಾಯಿತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತವೆ. ಇದನ್ನು ಪರಿಶೀಲಿಸಿದ ನಂತರ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಲು ಇರಬೇಕಾದ ತುರ್ತು, ಕೆಲವೊಂದು ವಿವರಣೆ, ಸೂಕ್ತ ಸಮರ್ಥನೆ, ಸಮಜಾಯಿಷಿ ಕೋರಿ ಕಡತವನ್ನು ಹಿಂದಿರುಗಿಸುತ್ತದೆ. ಈ ಪ್ರಕ್ರಿಯೆಗಳು ಕೆಲವೊಮ್ಮೆ ತಿಂಗಳುಗಟ್ಟಲೇ ನಡೆಯುತ್ತವೆ. ಆದರೆ ಎಂ2ಎಂ ಮೀಡಿಯಾ ನೆಟ್‌ವರ್ಕ್ ಪ್ರಕರಣದಲ್ಲಿ ಆರ್ಥಿಕ ಇಲಾಖೆಯು ಈ ಯಾವ ಪ್ರಕ್ರಿಯೆಗಳನ್ನೂ ಅನುಸರಿಸಿಲ್ಲ.
ಈ ಕುರಿತು ಪ್ರತಿಕ್ರಿಯೆಗಾಗಿ ಇಲಾಖೆಯ ಅಧಿಕಾರಿಯನ್ನು ‘ದಿ ಫೈಲ್’ ಖುದ್ದು ಸಂಪರ್ಕಿಸಿತ್ತು. ವಿಶೇಷ ಅಧಿಕಾರಿ ಶ್ರೀಕೃಷ್ಣ ಬುಗಟ್ಯಾಗೋಳ ಅವರು ನೋ ಕಾಮೆಂಟ್ಸ್ ಎಂದಷ್ಟೇ ಪ್ರತಿಕ್ರಿಯಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯ ಈದಿನ.ಕಾಮ್ ವೆಬ್‌ಸೈಟ್ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಗ್ಯಾರಂಟಿಗಳ ಕುರಿತಾಗಿ ಐಸೆಕ್, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.
ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ
ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ. ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು.
ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍ಟಿಸಿ
ಹೀಗಿದ್ದರೂ ಸಹ ಗ್ಯಾರಂಟಿಗಳು ಯಶಸ್ಸು ಕಂಡಿವೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯು ಜುಲೈನಲ್ಲಿಯೇ ಬಿಡುಗಡೆಗೊಳಿಸಿರುವ ಸಮೀಕ್ಷೆ ವರದಿಯು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.