ಪ್ಯಾನಿಕ್‌ ಬಟನ್‌ ಟೆಂಡರ್‍‌ ಅಕ್ರಮದ ಮತ್ತೊಂದು ಮುಖ; ಒಂದೆಡೆ ಸಿಐಡಿ ತನಿಖೆ, ಇನ್ನೊಂದೆಡೆ ಅರ್ಹತೆಯ ಮಾನ್ಯತೆ

ಬೆಂಗಳೂರು; ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಅಳವಡಿಸಲು ಅರ್ಹ ಸಂಸ್ಥೆಗಳು ಎಂದು ಸರ್ಕಾರ ಮಾಡಿದ್ದ ಪಟ್ಟಿಯಲ್ಲಿ ರೋಸ್‌ ಮೆರ್ಟಾ ಆಟೋ ಟೆಕ್‌  ಕಂಪನಿಯ ಹೆಸರಿರುವುದು ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

 

ಸ್ಮಾರ್ಟ್ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವಲ್ಲಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂಬ ಪ್ರಕರಣದಲ್ಲಿ ಇದೇ ರೋಸ್‌ ಮೆರ್ಟಾ ಟೆಕ್ನಾಲಜೀಸ್‌ ಕಂಪನಿಯೂ ಸೇರಿದಂತೆ ಇದಕ್ಕೆ ಸಹಕರಿಸಿದ್ದರು ಎಂದು ಆರೋಪಕ್ಕೆ ಗುರಿಯಾಗಿರುವ ನಿವೃತ್ತ ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರ ವಿರುದ್ಧವೂ ಸಿಐಡಿ ತನಿಖೆಗೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲು ಕ್ರಮಕೈಗೊಳ್ಳಬೇಕು ಎಂದು ಈಗಾಗಲೇ ನಿರ್ದೇಶನ ನೀಡಿದೆ.

 

ಇದರ ಬೆನ್ನಲ್ಲೇ ಪ್ಯಾನಿಕ್‌ ಬಟನ್‌ ಸಾಧನ ಸರಬರಾಜು ಮಾಡಲು ಅರ್ಹ ಸಂಸ್ಥೆಗಳ ಪಟ್ಟಿಯಲ್ಲಿ ರೋಸ್‌ ಮೆರ್ಟಾ ಕಂಪನಿಯೂ ಇರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿದೆ.

 

ಈ ಯೋಜನೆಯಲ್ಲಿ ನಡೆದಿದೆ  ಎನ್ನಲಾದ 1,200 ಕೋಟಿ ರು. ಮೊತ್ತದ ಹಗರಣದ ಕುರಿತು ಪ್ರಾಥಮಿಕ ತನಿಖೆ  ನಡೆಸದೆಯೇ ಇದೀಗ  ಹೊಸದಾಗಿ  ಅಲ್ಪಾವಧಿ ಟೆಂಡರ್‍‌ ಕರೆಯಲು ಸಾರಿಗೆ ಇಲಾಖೆಯು  ಮುಂದಾಗಿದೆ. ಇದರ ಬೆನ್ನಲ್ಲೇ ನಿರ್ದಿಷ್ಟವಾಗಿ ರೋಸ್‌ ಮೆರ್ಟಾ ಆಟೋ ಟೆಕ್‌ ಪ್ರೈವೈಟ್‌ ಲಿಮಿಟೆಡ್‌ ಕೂಡ ಅರ್ಹ ಸಂಸ್ಥೆಗಳ ಪಟ್ಟಿಯಲ್ಲಿರುವುದು ಸಾರಿಗೆ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಪ್ರಕರಣದ ಮತ್ತೊಂದು ಮುಖವೊಂದು ಅನಾವರಣವಾದಂತಾಗಿದೆ.

 

ರಾಜ್ಯದಲ್ಲಿ ನಿರ್ದಿಷ್ಟಪಡಿಸಿದ ವಾಹನಗಳಿಗೆ ಲೊಕೇ‍ಷನ್‌ ಟ್ರಾಕಿಂಗ್‌ ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸಲು ಒಟ್ಟು 12 ಕಂಪನಿಗಳನ್ನು ಅರ್ಹ ಸಂಸ್ಥೆಗಳು ಎಂದು ಇಲಾಖೆಯು ಪಟ್ಟಿ ಮಾಡಿತ್ತು. ಈ ಪಟ್ಟಿಯಲ್ಲಿನ 10ನೇ ಕ್ರಮ ಸಂಖ್ಯೆಯಲ್ಲಿ ರೋಸ್‌ ಮೆರ್ಟಾ ಆಟೋ ಟೆಕ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯನ್ನೂ ರಾಜ್ಯ ಸರ್ಕಾರವು ಅಂಗೀಕರಿಸಿ ಮಾನ್ಯತೆ ನೀಡಿತ್ತು.

 

ಈ ಕಂಪನಿಯನ್ನು ಮಾನ್ಯತೆ ಪಟ್ಟಿಯಲ್ಲಿ ಸೇರಿಸುವ ಮುನ್ನ ಸಾರಿಗೆ ಇಲಾಖೆ ಅಧಿಕಾರಿಗಳು ರೋಸ್ ಮೆರ್ಟಾದ ವಿರುದ್ಧ ಕೇಳಿ ಬಂದಿದ್ದ ಆರೋಪ ಮತ್ತು ಸಿಐಡಿ ತನಿಖೆಗೆ ವಹಿಸಲು ಮುಂದಾಗಿರುವುದನ್ನು ಪರಿಶೀಲಿಸಿರಲಿಲ್ಲವೇ, ಪರಿಶೀಲಿಸಿದ ನಂತರವೂ ಈ ಕಂಪನಿಗೆ ಮಾನ್ಯತೆ ನೀಡಿದ್ದಾದರೂ ಹೇಗೆ  ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

 

 

ರೋಸ್‌ ಮೆರ್ಟಾ ಪ್ರಕರಣದ ಹಿನ್ನೆಲೆ

 

ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌ಗೆ  ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಇಲಾಖೆ ವಿಚಾರಣೆ ನಡೆದಿತ್ತು. ಈ ಪ್ರಕರಣವು ಹಿಂದಿನ ಬಿಜೆಪಿ ಸರ್ಕಾರದ ಗಮನದಲ್ಲಿತ್ತಾದರೂ ಯಾವುದೇ ಕ್ರಮ ವಹಿಸಿರಲಿಲ್ಲ.

 

ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವಹಿಸಲು  ಗೃಹ ಇಲಾಖೆಗೆ ಸಾರಿಗೆ ಇಲಾಖೆಯಿಂದ  ಕಡತ  (TD 33/TDS/2021/PART-1) ಬಂದಿತ್ತು. ನಿವೃತ್ತ  ಐಪಿಎಸ್‌ ಶಿವಕುಮಾರ್‍‌ ಅವರ ವಿರುದ್ಧದ ಪ್ರಕರಣದ ಕುರಿತು ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತಾದ ಕಡತವನ್ನು  ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದ್ದರು.

 

ಆ ನಂತರ ಇದೇ ಕಡತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ರವಾನೆಯಾಗಿತ್ತು. ಸರಿಸುಮಾರು 2 ತಿಂಗಳ ಕಾಲ ಈ ಕಡತವು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿಯೇ ಇತ್ತು. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಂಡಿರಲಿಲ್ಲ. 2 ತಿಂಗಳ ನಂತರ ಕಡತವು ಸಾರಿಗೆ ಇಲಾಖೆಗೆ ಹಿಂದಿರುಗಿತ್ತು.

 

ಈ ಬೆಳವಣಿಗೆ ನಡುವೆಯೇ ಇದೇ ರೋಸ್‌ಮೆರ್ಟಾ ಟೆಕ್ನಾಲಾಜೀಸ್‌ ಸಂಸ್ಥೆಯ ಅಕ್ರಮ ಅವ್ಯವಹಾರದಲ್ಲಿ ಭಾಗಿ ಆಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸಾರಿಗೆ ಆಯುಕ್ತರಿಗೆ (ಸಾರಿಗೆ-ರಸ್ತೆ ಸುರಕ್ಷತೆ) 2023ರ ಅಕ್ಟೋಬರ್‍‌ 17ರಂದು ಪತ್ರ (ಟಿಡಿ 33 ಟಿಡಿಎಸ್‌ 2022 (ಭಾಗ-1)  ಬರೆದಿದ್ದರು.

 

ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಹಿಂದಿನ ಆಯುಕ್ತ ಐಪಿಎಸ್‌ ಅಧಿಕಾರಿ ಶಿವಕುಮಾರ್‍‌ ಹಾಗೂ ರೋಸ್‌ ಮೆರ್ಟಾ ಟೆಕ್ನಾಲಾಜೀಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ರಾಯಭಾಗ್‌ನ ಅಂಜುಮನ್‌ ಇ ಇಸ್ಲಾಂನ  ಎಫ್‌ ಎಂ ಮಿರ್ಜಿ ಎಂಬುವರು ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದರು.

 

ಅದೇ ರೀತಿ ಸಂಸ್ಥೆಯ ಅಕ್ರಮದ ಬಗ್ಗೆ ಈ ಹಿಂದೆಯೇ ಇಲಾಖೆಯ ಗಮನಕ್ಕೆ ಬಂದಿದ್ದರೂ ಅಗತ್ಯ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗದೇ ಸಂಸ್ಥೆಯ ಸೇವೆಯನ್ನು ಮುಂದುವರೆಸಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿತ್ತು. ಅಲ್ಲದೇ ಇದೇ ಪ್ರಕರಣವನ್ನು  ರಾಜ್ಯ ಕಾಂಗ್ರೆಸ್‌ ಸರ್ಕಾರವು  ಸಿಐಡಿ ತನಿಖೆಗೆ ವಹಿಸಲು ಮುಂದಾಗಿತ್ತು.

ರೋಸ್‌ಮೆರ್ಟಾ ಪ್ರಕರಣ; ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಸಿಐಡಿ ತನಿಖೆ?

 

ಹಾಗೆಯೇ ಒಪ್ಪಂದದ ಉಪ ಬಂಧಗಳ ಅವಕಾಶಗಳನ್ವಯ ಸದರಿ ಸಂಸ್ಥೆಯ ಸೆಕ್ಯುರಿಟಿ ಡಿಪಾಸಿಟ್‌ 1.50 ಕೋಟಿ ರ.ಗಳನ್ನು ಅಂತಿಮ ನಿರ್ಧಾರವಾಗುವವರೆಗೂ ತಡೆಹಿಡಿಯಬೇಕು. ಹಾಗೂ ಸಂಸ್ಥೆಯಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ನಿರ್ದೇಶಿಸಿದ್ದರು.  ಆರ್ಥಿಕ ನಷ್ಟ, ದುರುಪಯೋಗ, ಕರ್ತವ್ಯಲೋಪ ಮತ್ತು ರೋಸ್‌ಮೆರ್ಟಾ ಟೆಕ್ನಾಲಜೀಸ್‌ಗೆ ಸಹಕರಿಸಿದ್ದಾರೆ ಎಂಬ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸುವ ಮುನ್ನ ಆರೋಪಿತ ಅಧಿಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‍‌ ದಾಖಲಿಸಬೇಕು ಎಂದು ನಿರ್ದೇಶನ ನೀಡಿತ್ತು.

ಆರ್ಥಿಕ ನಷ್ಟ, ದುರುಪಯೋಗ, ಕರ್ತವ್ಯಲೋಪ; ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಎಫ್‌ಐಆರ್‌ಗೆ ನಿರ್ದೇಶನ

 

ವಿಶೇಷವೆಂದರೇ ಈ ಕಂಪನಿಯನ್ನೊಳಗೊಂಡಂತೆ ನಿವೃತ್ತ ಐಪಿಎಸ್‌ ಆಧಿಕಾರಿ ಶಿವಕುಮಾರ್‍‌ ಮತ್ತಿತರರ ವಿರುದ್ಧ ಸಿಐಡಿ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದ ಕಾಂಗ್ರೆಸ್‌ ಸರ್ಕಾರವೇ ಇದೀಗ ಲೊಕೇ‍ಷನ್‌ ಟ್ರಾಕಿಂಗ್‌ ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸಲು ಒಟ್ಟು 12 ಕಂಪನಿಗಳನ್ನು ಅರ್ಹ ಸಂಸ್ಥೆಗಳ ಪಟ್ಟಿಯಲ್ಲಿ ಹೆಸರು ಸೇರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

 

 

ಅರ್ಹತೆ ಪಡೆದಿರುವ 13 ಕಂಪನಿಗಳ ಪಟ್ಟಿ

 

ಚೆನ್ನೈನ ಎಪಿಎಂ ಕಿಂಗ್ಸ್‌ಟ್ರಾಕ್‌ ಟೆಕ್ನಾಲಜೀಸ್‌, ಹೊಸದೆಹಲಿಯ ಅಟ್ಲಾಂಟ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ಉತ್ತರ ಪ್ರದೇಶದ ನಿಪ್ಪಾನ್‌ ಆಡಿಯೋಟ್ರಾನಿಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಆರ್‌ಡಿಎಂ ಎಂಟರ್‌ಪ್ರೈಸೆಸ್‌ ಪ್ರೈವೈಟ್‌ ಲಿಮಿಟೆಡ್‌, ಚಂಢೀಗಡ್‌ನ ಬ್ಲಾಕ್‌ ಬಾಕ್ಸ್‌ ಜಿಪಿಎಸ್‌ ಟೆಕ್ನಾಲಜಿ ಒಪಿಸಿ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಇಕೋಗ್ಯಾಸ್‌ ಇಂಪೆಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಕೇರಳದ ಮರ್ಸಿಡ್ಯಾಜ್‌ ಇಂಟರ್‌ನ್ಯಾ‍ಷನಲ್‌ ಪ್ರೈವೈಟ್‌ ಲಿಮಿಟೆಡ್‌, ಹೊಸ ದೆಹಲಿಯ ರೋಡ್‌ ಪಾಯಿಂಟ್‌ ಲಿಮಿಟೆಡ್‌ ಮತ್ತು ರೋಸ್‌ಮೆರ್ಟಾ ಆಟೋ ಟೆಕ್‌ ಪ್ರೈವೈಟ್‌ ಲಿಮಿಟೆಡ್‌, ಟ್ರಾನ್‌ಸೈಟ್‌ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ವಾಲ್ಟಿ ಸೊಲ್ಯುಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ನ್ನು ಅರ್ಹ ಸಂಸ್ಥೆಗಳೆಂದು ಸರ್ಕಾರವು ಅಂಗೀಕರಿಸಿತ್ತು.

 

 

ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್‌ ಸಂಘಟನೆಯೊಂದು ಪ್ರಾಥಮಿಕ ಸಾಕ್ಷ್ಯದ ಮೂಲಕ ನೀಡಿದ್ದ ದೂರಿನ ಕುರಿತೂ ಸಾರಿಗೆ ಇಲಾಖೆಯು ಪ್ರಾಥಮಿಕ ವಿಚಾರಣೆ ನಡೆಸಿಲ್ಲ. ಅಲ್ಲದೇ ಟೆಂಡರ್‍‌ನಲ್ಲಿ  ನಡೆದಿದೆ ಎನ್ನಲಾಗಿರುವ   ಲೋಪ ಮತ್ತು  ಅಕ್ರಮಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅನುಮೋದನೆ ನೀಡದೇ ಇರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಪ್ಯಾನಿಕ್‌ ಬಟನ್‌ ಟೆಂಡರ್‍‌ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍‌ಗೆ ಅನುಮೋದನೆ

 

ದೆಹಲಿಯ ಬಸ್‌ ಹಾಗೂ ಟ್ಯಾಕ್ಸಿಗಳಲ್ಲಿ ಅಳವಡಿಸಿರುವ ಪ್ಯಾನಿಕ್‌ ಬಟನ್‌ಗಳಲ್ಲಿ ಆಪ್‌ ಸರ್ಕಾರ ದೊಡ್ಡ ಹಗರಣ ನಡೆಸಿದೆ ಎಂದು ಬಿಜೆಪಿಯು ಆರೋಪಿಸಿರುವ ನಡುವೆಯೇ ರಾಜ್ಯದಲ್ಲಿಯೂ ಇದೇ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನೀಡಿರುವ ನಿರ್ದೇಶನದ ಹಿಂದೆಯೂ ಹಗರಣದ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಎಲ್‌ಟಿ, ಪ್ಯಾನಿಕ್‌ ಬಟನ್‌ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?

 

ಆದರೆ 13 ಕಂಪನಿಗಳು ನಿಗದಿಪಡಿಸಿದ್ದ ದರವನ್ನೇ ಸರ್ಕಾರವು ಅನುಮೋದಿಸಿರುವುದರಿಂದ ರಾಜ್ಯದಲ್ಲಿರುವ ಅಂದಾಜು 30 ಲಕ್ಷ ವಾಹನಗಳ ಮಾಲೀಕರು ಹೆಚ್ಚುವರಿಯಾಗಿ 4,000 ರು. ತೆತ್ತಂತಾಗುತ್ತದೆ. ಇದರಿಂದ ಈ 13 ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆಯಾಗಿ 1,200 ಕೋಟಿ ರು. ಆರ್ಥಿಕ ಲಾಭವಾಗಲಿದೆ ಎಂಬ ಆರೋಪವೂ ಕೇಳಿ ಬಂದಿದೆ.

the fil favicon

SUPPORT THE FILE

Latest News

Related Posts