ಸರ್ಕಾರ, ಸಂಸ್ಥೆಯ ವಿರುದ್ಧ ವಿಡಿಯೊ ಆರೋಪ; ವೈದ್ಯಾಧಿಕಾರಿ ವಿರುದ್ಧ ವಿಚಾರಣೆಗೆ ಆದೇಶ

ಬೆಂಗಳೂರು; ಸರ್ಕಾರ ಮತ್ತು ಸಂಸ್ಥೆಯ ವಿರುದ್ಧವಾಗಿ ಫೇಸ್‌ಬುಕ್‌ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್‌ ಮಾಡಿರುವುದು ಸೇರಿದಂತೆ ಇನ್ನಿತರೆ ಆರೋಪಗಳಿಗೆ ಗುರಿಯಾಗಿರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ವಿರುದ್ಧ ವಿಚಾರಣೆ ನಡೆಸಲು ರಾಜ್ಯ ಸರ್ಕಾರವು ಮುಂದಾಗಿದೆ.

 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ ರಾಮದಾಸ್‌ ಮಧುಸೂದನ್‌ ಅವರ ವಿರುದ್ಧ ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಇಂಧೂದರ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.

 

ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು 2024ರ ಜನವರಿ 11ರಂದು ಆದೇಶ ( BMCRI-ESTOEST2/17/2022-ADM-DIR-BMCRI ದಿನಾಂಕ 11-01-2024) ಹೊರಡಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸಂಸ್ಥೆಯ ಮೇಲಾಧಿಕಾರಿಗಳ ಮೇಲೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಗೂ ಫೇಸ್‌ಬುಕ್‌ ಅಂತರ್ಜಾಲದಲ್ಲಿ ಸರ್ಕಾರದ ಮತ್ತು ಸಂಸ್ಥೆಯ ವಿರುದ್ಧವಾಗಿ ಮಾತನಾಡಿ ವಿಡಿಯೋಗಳನ್ನು ಅಪ್ಲೋಡ್‌ ಮಾಡುವುದು ಹಾಗೂ ಕರ್ತವ್ಯಕ್ಕೆ ಬಾರದಿರುವುದು, ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಸೌಜನ್ಯಯುತವಾಗಿ ವರ್ತಿಸದಿರುವ ಆರೋಪಗಳು ಸತ್ಯಾಸತ್ಯತೆ ಅರಿಯಲು ಬೈಲಾದ ನಿಯಮಗಳ ನಿಯಮ 11(2) ಅಡಿ ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಇಂಧೂದರ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಆದೇಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

 

ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸುವ ಮೊದಲು ಡಾ ಮಧುಸೂದನ್‌ ರಾಮದಾಸ್‌ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ನೋಟೀಸ್‌ ನೀಡಿತ್ತು. ತಮ್ಮ ಮೇಲಿನ ಆರೋಪಗಳನ್ನು ಮಧುಸೂದನ್‌ ಅವರು ಅಲ್ಲಗಳೆದಿದ್ದರು. ಆದರೆ ಇಲಾಖೆಯು ಅದನ್ನು ಒಪ್ಪಿರಲಿಲ್ಲ ಎಂದು ಗೊತ್ತಾಗಿದೆ.

 

ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ ಮಧುಸೂದನ್‌ ರಾಮದಾಸ್‌ ಅವರು ತಮ್ಮ ಮೇಲಾಧಿಕಾರಿಗಳ ಮೇಲೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿ ಸರ್ಕಾರದ ಮತ್ತು ಸಂಸ್ಥೆಯ ವಿರುದ್ಧವಾಗಿ ಮಾತನಾಡಿ ವಿಡಿಯೋಗಳನ್ನು ಅಪ್ಲೋಡ್‌ ಮಾಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.

 

ಅಲ್ಲದೇ ಕರ್ತವ್ಯಕ್ಕೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ, ಆಸ್ಪತ್ರೆ , ಸಂಸ್ಥೆಯ ಸಿಬ್ಬಂದಿಯೊಂದಿಗೆ ಸೌಜನ್ಯಯುತವಾಗಿ ವರ್ತಿಸುತ್ತಿರಲಿಲ್ಲ ಎಂಬ ಆಪಾದನೆಗೂ ಗುರಿಯಾಗಿದ್ದರು. ಈ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿವೆ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ವರದಿ ನೀಡಿದ್ದರು ಎಂಬುದು ಆದೇಶದಿಂದ ಗೊತ್ತಾಗಿದೆ.

 

ಅವರ ವಿರುದ್ಧ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿವೆ ಎಂದು ನಿರ್ಧರಿಸಿದ್ದ ಸಂಸ್ಥೆಯು ಅವರ ವಿರುದ್ಧ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಅದರಂತೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.

 

ನಂತರ ಮಧುಸೂದನ್‌ ರಾಮದಾಸ್‌ ಅವರಿಗೆ 2023ರ ಮಾರ್ಚ್‌ 29ರಂದು ನೋಟೀಸ್‌ ಜಾರಿಗೊಳಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಮಧುಸೂದನ್‌ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದರು. ಹೀಗಾಗಿ ಅಮಾನತನ್ನು ತೆರವುಗೊಳಿಸಿ ಸೇವೆಗೆ ಪುನರ್‌ ಸ್ಥಾಪಿಸಿ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನೆ ಸಂಸ್ಥೆಗೆ ವರ್ಗಾಯಿಸಿ ಆದೇಶಿಸಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಸೂದನ್‌ ಅವರು ಲಿಖಿತ ಸಮಜಾಯಿಷಿ ನೀಡಿದ್ದರು. ಆದರೆ ಅವರ ವಿರುದ್ಧದ ಆರೋಪಗಳನ್ನು ಅಲ್ಲಗಳೆಯಬಹುದಾದ ಯಾವುದೇ ಸಕಾರಣಗಳು, ಹೇಳಿಕೆಗಳು ಕಂಡು ಬಂದಿರಲಿಲ್ಲ. ಹಾಗೂ ಅದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂದು ಗೊತ್ತಾಗಿದೆ.

 

ಹೀಗಾಗಿ ಅವರ ವಿರುದ್ಧದ ಆರೋಪದ ಸತ್ಯಾಸತ್ಯತೆಯನ್ನು ಅರಿಯುವ ಸಲುವಾಗಿ ಇಲಾಖೆ ವಿಚಾರಣೆ ಮುಂದುವರೆಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಧರಿಸಿತ್ತು ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts