ಬೆಂಗಳೂರು; ಅಕ್ರಮವಾಗಿ ಮರಗಳ ಕಡಿತಲೆ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಬೇಲೂರು ತಾಲೂಕಿನಲ್ಲಿ ದಾಖಲಾಗಿದ್ದ ಎಫ್‌ಐಆರ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸೋದರ ವಿಕ್ರಂ ಸಿಂಹ ಅವರ ಹೆಸರು ಇಲ್ಲ ಎಂಬುದಕ್ಕೆ ಎಫ್‌ಐಆರ್ ಪ್ರತಿಯ ಪುರಾವೆ ಒದಗಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಪಂಥಾಹ್ವಾನ ಒಡ್ಡಿದ್ದಾರೆ.
ಇದೇ ಪ್ರಕರಣದಲ್ಲಿ ತಹಶೀಲ್ದಾರ್ ನೇತೃತ್ವದ ಸ್ಥಳ ತನಿಖಾ ತಂಡವು ನೀಡಿದ್ದ ಮಹಜರ್ ವರದಿಯನ್ನೇ ಅರಣ್ಯ ಇಲಾಖೆಯ ಅಧಿಕಾರಿಗಳು ತಿರಸ್ಕರಿಸಿದ್ದರು ಎಂಬ ಸಂಗತಿಯು ಮುನ್ನೆಲೆಗೆ ಬಂದಿದ್ದರ ಬೆನ್ನಲ್ಲೇ ಎಫ್ಐಆರ್‍ನಲ್ಲಿ ವಿಕ್ರಂ ಸಿಂಹ ಅವರ ಹೆಸರೇ ಇಲ್ಲ ಎಂಬುದಕ್ಕೆ ಹೆಚ್ ಡಿ ಕುಮಾರಸ್ವಾಮಿ ಅವರು ಒದಗಿಸಿರುವ ಪುರಾವೆಯು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ನೀಡಿದ್ದ ಸ್ಥಳ ತನಿಖಾ ವರದಿ ಮತ್ತು ವಲಯ ಅರಣ್ಯಾಧಿಕಾರಿಗಳಿಗೆ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್’ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಹೆಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ದಾಖಲೆಗಳು ಈ ಪ್ರಕರಣವನ್ನು ರಾಜಕೀಯಕರಣಗೊಳಿಸಿದಂತಾಗಿದೆ.
ಈ ಕುರಿತು ‘ಎಕ್ಸ್’ ಮತ್ತು ಸಾಮಾಜಿಕ ಜಾಲತಾಣದಲ್ಲಿ ಎಫ್‌ಐಆರ್ ಪ್ರತಿಯನ್ನು ಬಿಡುಗಡೆಗೊಳಿಸಿರುವ ಕುಮಾರಸ್ವಾಮಿ ಅವರು ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ತಯಾರು, ನೀವು ಸಿದ್ಧವೇ, ಎಲ್ಲಿ, ಯಾವಾಗ, ಎಷ್ಟೊತ್ತಿಗೆ, ನೀವು ಫಿಕ್ಸ್ ಮಾಡುತ್ತೀರಾ, ನಾನು ಫಿಕ್ಸ್ ಮಾಡಲೇ ಎಂದು ಸವಾಲು ಎಸೆದು ಕಾಂಗ್ರೆಸ್ ಸರ್ಕಾರವನ್ನು ಕೆಣಕಿದ್ದಾರೆ. ಅಲ್ಲದೇ ಇದೇ ಹೇಳಿಕೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಹಾಸನ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರನ್ನೂ ಬಹಿರಂಗ ಚರ್ಚೆಗೆ ಎಳೆದಿದ್ದಾರೆ.
ಸವಾಲು ಒಡ್ಡಿದ ಹೆಚ್‌ಡಿಕೆ
ಪ್ರತಾಪ್ ಸಿಂಹ ಸೋದರ ವಿಕ್ರಂ ಸಿಂಹ ಪ್ರಕರಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ನಾನು ಹೇಳಿದ್ದೆಲ್ಲವೂ ಸತ್ಯ, ಅಪ್ಪಟ ಸತ್ಯ. ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ಆ ದಾಖಲೆಗಳನ್ನು ತೆಗೆದುಕೊಂಡು ಎಲ್ಲಿಗೆ ಬರಲಿ, ಬಹಿರಂಗ ಚರ್ಚೆಗೆ ನಾನು ತಯಾರು. ವಿಕ್ರಂ ಸಿಂಹ ಮರ ಕಡಿದಿದ್ದರೇ ಎಫ್‌ಐಆರ್‍ನಲ್ಲಿ ಅವರ ಹೆಸರಿಲ್ಲ, ಯಾಕೆ? ಎಂದು ಪ್ರಶ್ನಿಸಿದ್ದಾರೆ.
‘ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು, ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೇ, ದಲಿತ ಅಧಿಕಾರಿಗೆ ಶಿಕ್ಷೆಯೇ, ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್‌ನಲ್ಲಿ ಅಡಗಿದೆ, ಯಾವ ತನಿಖೆ ಮಾಡುತ್ತೀರಿ, ಪ್ರತಾಪ್‌ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು, ಅದರ ಹಿಂದಿರುವ ಸಿದ್ಧ ಸೂತ್ರಧಾರನ ಕಳ್ಳ ಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ,’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಪೂರ್ವಾನುಮತಿ ಇಲ್ಲದೆಯೇ ಕಾಡಜಾತಿ ಮತ್ತುಮನ್ನಾ ಜಾತಿಗೆ ಸೇರಿದ ಮರಗಳನ್ನು ಕಟಾವು ಮಾಡಿರುವ ಸಂಬಂಧ ತಹಶೀಲ್ದಾರ್ ನೇತೃತ್ವದ ತನಿಖಾ ತಂಡವು ನೀಡಿದ್ದ ಮಹಜರು ವರದಿಯನ್ನೇ ಅರಣ್ಯಾಧಿಕಾರಿಗಳು ತಿರಸ್ಕರಿಸಿದ್ದರು.
‘ಕಂದಾಯ ಇಲಾಖೆಯ ಸಿಬ್ಬಂದಿಯು ಮಹಜರ್ ಪ್ರತಿಯನ್ನು ತಮಗೆ ನೀಡುವುದಕ್ಕಾಗಿ ತಮ್ಮ ಕಚೇರಿಗೆ ಭೇಟಿ ನೀಡಿದ ವೇಳೆ ತಿರಸ್ಕರಿಸಿರುತ್ತೀರಿ. ಆದ್ದರಿಂದ ಈ ಪತ್ರದೊಂದಿಗೆ ಮಹಜರ್ ಹಾಗೂ ಸದರಿ ದಿನದಂದು ತಾವು ಸ್ಥಳದಲ್ಲಿ ಹಾಜರಿದ್ದ ಬಗ್ಗೆ ಜಿಪಿಎಸ್ ಲೊಕೇಶನ್ ಆಧಾರಿತ ಫೋಟೋವನ್ನು ಇ-ಮೇಲ್ ಮೂಲಕ ಹಾಗೂ ಹಾರ್ಡ್ ಪ್ರತಿಯಲ್ಲಿ ಕಳಿಸಲಾಗಿದೆ,’ ಎಂದು ಪತ್ರದಲ್ಲಿ ಗಮನ ಸೆಳೆದಿದ್ದರು.
ವಲಯ ಅರಣ್ಯಾಧಿಕಾರಿಗಳಿಗೆ ಬರೆದ ಪತ್ರದಲ್ಲೇನಿದೆ?
ವಲಯ ಅರಣ್ಯಾಧಿಕಾರಿಗಳಿಗೆ ಖುದ್ದು ತಹಶೀಲ್ದಾರ್ ಅವರು ಕರೆ ಮಾಡಿ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಸೂಚಿಸಿದ್ದರು. ಆದರೆ ತಹಸೀಲ್ದಾರ್ ಅವರು ಸ್ಥಳಕ್ಕೆ ಭೇಟಿ ಕೊಟ್ಟ ನಂತರವೂ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹಾಜರಾಗಿರರಲಿಲ್ಲ. ಅಲ್ಲದೇ ಮರಗಳ ಕಡಿತಲೆಗೆ ಇಲಾಖೆಯ ಅನುಮತಿ ಪಡೆದಿರುವುದಿಲ್ಲ ಮತ್ತು ಗಮನಕ್ಕೂ ಬಂದಿರುವುದಿಲ್ಲ ಎಂದು ಅರಣ್ಯ ವೀಕ್ಷಕ ಉತ್ತರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿಕ್ರಂ ಸಿಂಹ ವಿರುದ್ಧ ಪ್ರಕರಣ; ಮಹಜರ್ ವರದಿಯನ್ನೇ ತಿರಸ್ಕರಿಸಿದ್ದ ಅರಣ್ಯ ಇಲಾಖೆ,ತಹಶೀಲ್ದಾರ್ ಪತ್ರ ಬಹಿರಂಗ
‘ಆ ಕೂಡಲೇ ದೂರವಾಣಿ ಮುಖೇನ ಸಕಲೇಶಪುರದ ಉಪ ವಿಭಾಗಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ತದನಂತರ ಸಂಜೆ 5.45 ಸುಮಾರಿನಲ್ಲಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಅರೇಹಳ್ಳಿ ಆರಕ್ಷಕ ಉಪ ನಿರೀಕ್ಷಕರು ಸಹ ಹಾಜರಾಗಿದ್ದರು. ಈ ಜಮೀನು ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದು ಮರ ಕಟಾವು ಮಾಡಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಾರದೇ ಇರುವುದು ವಿಷಾದನೀಯವಾಗಿರುತ್ತದೆ,’ ಎಂದು ಪತ್ರದಲ್ಲಿ ವಿವರಿಸಲಾಗಿತ್ತು.
ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲೇನಿದೆ?
ಅರೇಹಳ್ಳಿ ಹೋಬಳಿ ನಂದಗೋಡನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಮನೆಗಳ ಸಕ್ರಮೀಕರಣ ಸಂಬಂಧ ಸ್ವೀಕೃತವಾದ ಅರ್ಜಿಗಳ ಮನೆಗಳ ಸ್ಥಳ ಪರಿಶೀಲನೆ ನಡೆಸುವ ಸಲುವಾಗಿ ಈ ಕಚೇರಿಯ ಶಿರಸ್ತೆದಾರ್ ತನ್ವೀರ್ ಅಹ್ಮದ್ ಅವರನ್ನು ನಿಯೋಜಿಸಲಾಗಿತ್ತು.
ಪ್ರತಾಪ್ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್ ನೇತೃತ್ವದ ಮಹಜರು ವರದಿ ಬಹಿರಂಗ
ಸರ್ವೆ ನಂಬರ್‍ನಲ್ಲಿದ್ದದ್ದು 40-35 ಎಕರೆ
ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ 16ರಲ್ಲಿ ಒಟ್ಟು 40-35 ಎಕರೆ ಜಮೀನು ಇದೆ. ಪ್ರಕಾಶ್ (4-28 ಎಕರೆ ), ಸಂಜೀವ್ ಶೆಟ್ಟಿ ( 4-10), ಸಿ ಜಿ ನಾಗರಾಜು (1-03), ಮಹಾದೇವಮ್ಮ (0-21), ದೇವಕಿ (0-02), ಮಂಜಪ್ಪ (2-18), ರಾಜು (1-06), ಕಾಳಮ್ಮ (1-02), ಲಲಿತಮ್ಮ (0-05), ಜಯಪ್ರಕಾಶ್ (2-18), ಗುಲಾಬಿ ಶೆಟ್ಟಿ, ಹೇಮಾವತಿ (1-20), , ಪ್ರೇಮಾ (1-20), ನಾರಾಯಣಶೆಟ್ಟಿ (3-10), ತಾಯಮ್ಮ (4-00), ಕೃಷ್ಣೇಗೌಡ (4-0), ರಾಕೇಶ್ ಶೆಟ್ಟಿ (4-0), ಗೋಮಾಳ (4-32) ಖಾತೆದಾರರಿದ್ದಾರೆ ಎಂದು ಮಹಜರು ವರದಿಯಲ್ಲಿ ಹೇಳಿರುವುದನ್ನು ಸ್ಮರಿಸಬಹುದು.