ವಿಕ್ರಂ ಸಿಂಹ ವಿರುದ್ಧ ಪ್ರಕರಣ; ಮಹಜರ್‍‌ ವರದಿಯನ್ನೇ ತಿರಸ್ಕರಿಸಿದ್ದ ಅರಣ್ಯ ಇಲಾಖೆ,ತಹಶೀಲ್ದಾರ್‍‌ ಪತ್ರ ಬಹಿರಂಗ

ಬೆಂಗಳೂರು; ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಪೂರ್ವಾನುಮತಿ ಇಲ್ಲದೆಯೇ ಕಾಡಜಾತಿ ಮತ್ತುಮನ್ನಾ ಜಾತಿಗೆ ಸೇರಿದ ಮರಗಳನ್ನು ಕಟಾವು ಮಾಡಿರುವ ಸಂಬಂಧ ತಹಶೀಲ್ದಾರ್‍‌ ನೇತೃತ್ವದ ತನಿಖಾ ತಂಡವು ನೀಡಿದ್ದ ಮಹಜರು ವರದಿಯನ್ನೇ ಅರಣ್ಯಾಧಿಕಾರಿಗಳು ತಿರಸ್ಕರಿಸಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್‌ ಸಿಂಹ ಅವರ ಸೋದರ ವಿಕ್ರಂ ಸಿಂಹ ಅವರನ್ನು ಬಂಧಿಸಿದ್ದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿ ಡಾ ಜಿ ಪರಮೇಶ್ವರ್‍‌ ಆದಿಯಾಗಿ ಇಡೀ ಸರ್ಕಾರವೇ ಸಮರ್ಥಿಸಿಕೊಂಡಿತ್ತು.  ಇದರ ಬೆನ್ನಲ್ಲೇ ಇದೀಗ ತಹಶೀಲ್ದಾರ್‍‌ ನೇತೃತ್ವದ ಸ್ಥಳ ತನಿಖಾ ತಂಡವು ನೀಡಿದ್ದ ಮಹಜರ್‍‌ ವರದಿಯನ್ನೇ ಅರಣ್ಯ ಇಲಾಖೆಯ ಅಧಿಕಾರಿಗಳು ತಿರಸ್ಕರಿಸಿದ್ದರು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಈ ಕುರಿತು ಬೇಲೂರು ತಾಲೂಕಿನ ತಹಶೀಲ್ದಾರ್‍‌ ಮಮತಾ ಅವರು ಬೇಳೂರು ವಲಯದ ಅರಣ್ಯಾಧಿಕಾರಿಗಳಿಗೆ 2023ರ ಡಿಸೆಂಬರ್‍‌ 21ರಂದೇ ಪತ್ರವನ್ನು ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕಂದಾಯ ಇಲಾಖೆಯ ಸಿಬ್ಬಂದಿಯು ಮಹಜರ್‍‌ ಪ್ರತಿಯನ್ನು ತಮಗೆ ನೀಡುವುದಕ್ಕಾಗಿ ತಮ್ಮ ಕಚೇರಿಗೆ ಭೇಟಿ ನೀಡಿದ ವೇಳೆ ತಿರಸ್ಕರಿಸಿರುತ್ತೀರಿ. ಆದ್ದರಿಂದ ಈ ಪತ್ರದೊಂದಿಗೆ ಮಹಜರ್‍‌ ಹಾಗೂ ಸದರಿ ದಿನದಂದು ತಾವು ಸ್ಥಳದಲ್ಲಿ ಹಾಜರಿದ್ದ ಬಗ್ಗೆ ಜಿಪಿಎಸ್‌ ಲೊಕೇಶನ್‌ ಆಧಾರಿತ ಫೋಟೋವನ್ನು ಇ-ಮೇಲ್‌ ಮೂಲಕ ಹಾಗೂ ಹಾರ್ಡ್‌ ಪ್ರತಿಯಲ್ಲಿ ಕಳಿಸಲಾಗಿದೆ,’ ಎಂದು ಪತ್ರದಲ್ಲಿ ಗಮನ ಸೆಳೆದಿದ್ದರು ಎಂಬುದು ಗೊತ್ತಾಗಿದೆ.

 

ಅರಣ್ಯ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶದ ಸುತ್ತ ಅಕ್ರಮವಾಗಿ ಮರಗಳ ಕಡಿತಲೆ ಮಾಡುತ್ತಿರುವ ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ್‍‌ ಖಂಡ್ರೆ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಂದಗೋಡನಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದ ಮಹಜರು ವರದಿಯನ್ನು ಅರಣ್ಯ ಇಲಾಖೆಯು ಸ್ವೀಕರಿಸಿರಲಿಲ್ಲ ಎಂದು ತಹಶೀಲ್ದಾರ್‍‌ ಅವರು ಬರೆದಿರುವ ಪತ್ರವು ಚರ್ಚೆಗೆ ಗ್ರಾಸವಾಗಿದೆ.

 

ವಲಯ ಅರಣ್ಯಾಧಿಕಾರಿಗಳಿಗೆ ಬರೆದ ಪತ್ರದಲ್ಲೇನಿದೆ?

 

ವಲಯ ಅರಣ್ಯಾಧಿಕಾರಿಗಳಿಗೆ ಖುದ್ದು ತಹಶೀಲ್ದಾರ್‍‌ ಅವರು ಕರೆ ಮಾಡಿ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಸೂಚಿಸಿದ್ದರು. ಆದರೆ ತಹಸೀಲ್ದಾರ್‍‌ ಅವರು ಸ್ಥಳಕ್ಕೆ ಭೇಟಿ ಕೊಟ್ಟ ನಂತರವೂ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹಾಜರಾಗಿರರಲಿಲ್ಲ. ಅಲ್ಲದೇ ಮರಗಳ ಕಡಿತಲೆಗೆ ಇಲಾಖೆಯ ಅನುಮತಿ ಪಡೆದಿರುವುದಿಲ್ಲ ಮತ್ತು ಗಮನಕ್ಕೂ ಬಂದಿರುವುದಿಲ್ಲ ಎಂದು ಅರಣ್ಯ ವೀಕ್ಷಕ ಉತ್ತರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

‘ಆ ಕೂಡಲೇ ದೂರವಾಣಿ ಮುಖೇನ ಸಕಲೇಶಪುರದ ಉಪ ವಿಭಾಗಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ತದನಂತರ ಸಂಜೆ 5.45 ಸುಮಾರಿನಲ್ಲಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಅರೇಹಳ್ಳಿ ಆರಕ್ಷಕ ಉಪ ನಿರೀಕ್ಷಕರು ಸಹ ಹಾಜರಾಗಿದ್ದರು. ಈ ಜಮೀನು ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದು ಮರ ಕಟಾವು ಮಾಡಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಾರದೇ ಇರುವುದು ವಿಷಾದನೀಯವಾಗಿರುತ್ತದೆ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

 

ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ನಿಯಮಗಳು 1969 ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ನಿಯಮಗಳಡಿ ಅನುಮತಿ ಪಡೆಯಬೇಕು. ಆದರೆ ಈ ಯಾವ ಅನುಮತಿಯನ್ನೂ ಪಡೆಯದೇ ಬೆಲೆಬಾಳುವಂತಹ ಮರಗಳ ಕಡಿತಲೆ ಮಾಡಿರುವವರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.

 

‘ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಸದರಿ ಮರಗಳ ಅಂದಾಜು ಮೌಲ್ಯದೊಂದಿಗೆ ಕಚೇರಿಗೆ ತುರ್ತಾಗಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸದರಿ ಕೆಲಸದಲ್ಲಿ ನಿರ್ಲಕ್ಷ್ಯತನ ಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು,’ ಎಂದು ಎಚ್ಚರಿಕೆ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಬೆಲೆಬಾಳುವ ಮರಗಳನ್ನು ಕಡಿದಿರುವ ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೀಗ ತಹಶೀಲ್ದಾರ್‍‌ ಮಮತಾ ಅವರು ಸಲ್ಲಿಸಿದ್ದ ಮಹಜರು ವರದಿ ಮುನ್ನೆಲೆಗೆ ಬಂದಿತ್ತು.

 

ಹಾಸನ ಜಿಲ್ಲೆಯ ನಂದಗೋಡನಹಳ್ಳಿ ಸರ್ವೆ ನಂಬರ್‍‌ 16ರಲ್ಲಿದ್ದ ಒಟ್ಟು 40-35 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ಮರಗಳ ಕಡಿತಲೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದ್ದ ತಹಸೀಲ್ದಾರ್‍‌ ಈ ಕುರಿತಾದ ಮಹಜರು ವರದಿಯನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಸಲ್ಲಿಸಿದ್ದರು.

 

ಅಕ್ರಮವಾಗಿ ಮರಗಳ ಕಡಿತಲೆ ಮಾಡಿರುವುದನ್ನು ಆರಂಭದಲ್ಲಿ ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರು ಪತ್ತೆ ಹಚ್ಚಿದ್ದರು. ಮೊದಲು ಸ್ಥಳ ಪರಿಶೀಲನೆ ನಡೆಸಿದ್ದ ತನ್ವೀರ್‍‌ ಅಹ್ಮದ್‌ ಅವರು ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಮರಗಳ ಕಡಿತಲೆ ಆಗಿರುವುದನ್ನು ತಹಶೀಲ್ದಾರ್‍‌ ಅವರ ಗಮನಕ್ಕೆ ತಂದಿದ್ದರು.

 

ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲೇನಿದೆ?

 

ಅರೇಹಳ್ಳಿ ಹೋಬಳಿ ನಂದಗೋಡನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಮನೆಗಳ ಸಕ್ರಮೀಕರಣ ಸಂಬಂಧ ಸ್ವೀಕೃತವಾದ ಅರ್ಜಿಗಳ ಮನೆಗಳ ಸ್ಥಳ ಪರಿಶೀಲನೆ ನಡೆಸುವ ಸಲುವಾಗಿ ಈ ಕಚೇರಿಯ ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರನ್ನು ನಿಯೋಜಿಸಲಾಗಿತ್ತು.

 

ಇದೇ ಗ್ರಾಮದ ಸರ್ವೆ ನಂಬರ್‍‌ 16ರಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಸರ್ವೆ ನಂಬರ್‍‌ ನ ರಸ್ತೆ ಬದಿಯಲ್ಲಿ ಮರಗಳನ್ನು ಕಡಿತಲೆ ಮಾಡಿರುವುದನ್ನು ಗಮನಿಸಿದ್ದರು. ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ದಾಖಲೆಗಳನ್ನು ಕೇಳಿ ವಿಚಾರಿಸಿದಾಗ ಯಾವುದೇ ದಾಖಲೆಗಳನ್ನು ಸ್ಥಳದಲ್ಲಿ ಇದ್ದವರು ಒದಗಿಸಿರುವುದಿಲ್ಲ ಎಂದು ಮಹಜರು ವರದಿಯಲ್ಲಿ ಹೇಳಲಾಗಿದೆ.

 

ಈ ಕುರಿತು ಶಿರಸ್ತೆದಾರ್‍‌ ತನ್ವೀರ್‍‌ ಅಹ್ಮದ್‌ ಅವರು ಈ ಅಂಶವನ್ನು ದೂರವಾಣಿ ಮೂಲಕ ತಹಸೀಲ್ದಾರ್‍‌ ಗಮನಕ್ಕೆ ತಂದಿದ್ದರು. ನಂತರ ತಹಶೀಲ್ದಾರ್‍‌ ಮಮತಾ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.

ಪ್ರತಾಪ್‌ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್‍‌ ನೇತೃತ್ವದ ಮಹಜರು ವರದಿ ಬಹಿರಂಗ

 

ಸರ್ವೆ ನಂಬರ್‍‌ನಲ್ಲಿದ್ದದ್ದು 40-35 ಎಕರೆ

 

ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 16ರಲ್ಲಿ ಒಟ್ಟು 40-35 ಎಕರೆ ಜಮೀನು ಇದೆ. ಪ್ರಕಾಶ್‌ (4-28 ಎಕರೆ ), ಸಂಜೀವ್‌ ಶೆಟ್ಟಿ ( 4-10), ಸಿ ಜಿ ನಾಗರಾಜು (1-03), ಮಹಾದೇವಮ್ಮ (0-21), ದೇವಕಿ (0-02), ಮಂಜಪ್ಪ (2-18), ರಾಜು (1-06), ಕಾಳಮ್ಮ (1-02), ಲಲಿತಮ್ಮ (0-05), ಜಯಪ್ರಕಾಶ್‌ (2-18), ಗುಲಾಬಿ ಶೆಟ್ಟಿ, ಹೇಮಾವತಿ (1-20), , ಪ್ರೇಮಾ (1-20), ನಾರಾಯಣಶೆಟ್ಟಿ (3-10), ತಾಯಮ್ಮ (4-00), ಕೃಷ್ಣೇಗೌಡ (4-0), ರಾಕೇಶ್‌ ಶೆಟ್ಟಿ (4-0), ಗೋಮಾಳ (4-32) ಖಾತೆದಾರರಿದ್ದಾರೆ ಎಂದು ಮಹಜರು ವರದಿಯಲ್ಲಿ ಹೇಳಲಾಗಿದೆ.

SUPPORT THE FILE

Latest News

Related Posts