ಬೆಂಗಳೂರು; ಸುಳ್ಳು ಸುದ್ದಿಗಳನ್ನು ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ‘ದ ಪಾಲಿಸಿ ಫ್ರಂಟ್’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದೆ.
ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿರುವ ಕೆಎಸ್‌ಎಂಸಿ ಅಂಡ್ ಎ ಯು ‘ದ ಪಾಲಿಸಿ ಫ್ರಂಟ್’ ಗೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಿಲ್ಲ.
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ 4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.
ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು. ಆದರೆ ಕೆಎಸ್‌ಎಂಸಿ ಅಂಡ್ ಎ ಕಂಪನಿಯು ತನ್ನ ಹಂತದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿದೆ.
ಅದಷ್ಟೇ ಅಲ್ಲ, ಕಡತವನ್ನು ಒದಗಿಸಲು ನಿರಾಕರಿಸುವ ಮೂಲಕ ‘ದ ಪಾಲಿಸಿ ಫ್ರಂಟ್’ ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಸ್ಟೇಟ್ ಮಾರ್ಕೇಂಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ‘ದ ಪಾಲಿಸಿ ಫ್ರಂಟ್’ ಮೂಲಕ ಪ್ರಚಾರ ಮಾಡಲು ತಿಂಗಳಿಗೆ 60.00 ಲಕ್ಷ ರು. ನಂತೆ ಒಟ್ಟಾರೆ ವಾರ್ಷಿಕವಾಗಿ 7.20 ಕೋಟಿ ರು. ವೆಚ್ಚ ಮಾಡುತ್ತಿದೆ. 2023ರ ಅಕ್ಟೋಬರ್ 3ರಂದೇ ಕಾರ್ಯಾದೇಶವನ್ನೂ ನೀಡಿದೆ.
ಈ ಎಲ್ಲ ವಿಚಾರಗಳ ಸಂಬಂಧ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒಳಗೊಂಡತೆ ಎಲ್ಲಾ ಮಾಹಿತಿ ಕೋರಿ ಅರ್ಜಿ ಸಲ್ಲಿಸಿತ್ತು.
ಕೋರಿದ್ದ ಮಾಹಿತಿಯಲ್ಲೇನಿತ್ತು?
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳ ಪ್ರತಿ ದಿನದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಜಾಹೀರಾತು/ಸುದ್ದಿಗಳನ್ನು ಪ್ರಕಟಿಸಲು ದ ಪಾಲಿಸಿ ಫ್ರಂಟ್ ಬೆಂಗಳೂರು ಇವರ ಸೇವೆಯನ್ನು 2023-24ನೇ ಸಾಲಿನ ಆಗಸ್ಟ್ ತಿಂಗಳಿನಿಂದ ಮಾರ್ಚ್ 2026ರವರೆಗೆ ಪಡೆಯುವ ಸಂಬಂಧ ಕೆಎಸ್‌ಎಂಸಿ ಅಂಡ್ ಎ ಯು ದ ಪಾಲಿಸಿ ಫ್ರಂಟ್ ಕಂಪನಿ/ ಸಂಸ್ಥೆ/ಏಜೆನ್ಸಿಗೆ ನೀಡಿರುವ ಕಾರ್ಯಾದೇಶದ ಪ್ರತಿ ಒದಗಿಸುವುದು. ಮತ್ತು ಒಪ್ಪಂದದ ಪ್ರತಿ, ಟರ್ಮ್ಸ್ ಆಫ್ ರೆಫರೆನ್ಸ್, ಟರ್ಮ್ಸ್ ಆಫ್ ಕಂಡೀಷನ್ಸ್, ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೆರೆದಿರುವ ಸಮಗ್ರ ಕಡತವನ್ನು ಒದಗಿಸಬೇಕು ಎಂದು ಆರ್‌ಟಿಐ ಅರ್ಜಿಯಲ್ಲಿ 2023ರ ನವೆಂಬರ್ 21ರಂದು ಕೋರಿತ್ತು.
ಈ ಅರ್ಜಿಯನ್ನು ಒಂದು ತಿಂಗಳವರೆಗೆ ತನ್ನ ಬಳಿ ಇಟ್ಟುಕೊಂಡಿದ್ದ ಕೆಎಸ್‌ಎಂಸಿ ಅಂಡ್ ಎ ಯು ಒಂದು ಪುಟದ ಉತ್ತರ ಮತ್ತು ಕಾರ್ಯಾದೇಶ ಪತ್ರವನ್ನಷ್ಟೇ 2023ರ ಡಿಸೆಂಬರ್ 15ರಂದು ನೀಡಿದೆ. ಆದರೆ ಕಡತವನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಲು ನಿರಾಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಡತ ನಿರಾಕರಿಸಲು ನೀಡಿರುವ ಕಾರಣಗಳಿವು
‘ತಾವು ಕೋರಿರುವ ಮಾಹಿತಿಗಳು ರಾಜ್ಯದ ಆಡಳಿತ ಕಾರ್ಯತಂತ್ರದ ಮತ್ತು ಆರ್ಥಿಕ ಹಿತಾಸಕ್ತಿಯ ವಿಷಯಗಳನ್ನು ಹಾಗೂ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ತಾವು ಕೋರಿರುವ ಮಾಹಿತಿಗಳು ಸಂಸ್ಥೆಯ ಹಾಗೂ ಸರಬರಾಜುದಾರರ/ಟೆಂಡರ್‌ದಾರರ ನಡುವಿನ ಖರೀದಿ ನಿರ್ವಹಣೆಯ ವ್ಯವಹಾರ ಕುರಿತ ಷರತ್ತು ಮತ್ತು ನಿಬಂಧನೆಗಳ ಮಾಹಿತಿಯಾಗಿರುತ್ತದೆ.ಈ ಹಿನ್ನೆಲೆಯಲ್ಲಿ ಸಮಗ್ರ ಕಡತವನ್ನು ಒದಗಿಸಲು ಬರುವುದಿಲ್ಲ,’ ಎಂದು ಕೆಎಸ್‌ಎಂಸಿ ಅಂಡ್ ಎ ಯು ಉತ್ತರ ಒದಗಿಸಿದೆ.
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ವಿಶೇಷವೆಂದರೇ ‘ದ ಪಾಲಿಸಿ ಫ್ರಂಟ್‘ ಎಂಬುದು ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯೇ ಆಗಿಲ್ಲ ಎಂದು ತಿಳಿದು ಬಂದಿದೆ. ಆದರೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಎಂಸಿ ಅಂಡ್ ಎ ಮೂಲಕ ‘ದ ಪಾಲಿಸಿ ಫ್ರಂಟ್’ ನ ಸೇವೆಯನ್ನು ಒಂದು ವರ್ಷದ ಅವಧಿಯವರೆಗೆ 7.20 ಕೋಟಿ ರು.ಗಳನ್ನು ವೆಚ್ಚದಲ್ಲಿ ಪಡೆದಿರುವುದು ಶಂಕೆಗೆ ಕಾರಣವಾಗಿತ್ತು.
ಮತ್ತೊಂದು ವಿಶೇಷವೆಂದರೇ ಇದೇ ಕೆಎಸ್‌ಎಂಸಿಎ ಮೂಲಕ ‘ದ ಪಾಲಿಸಿ ಫ್ರಂಟ್’ನ ಸೇವೆಯನ್ನು 2026ರ ಮಾರ್ಚ್‌ವರೆಗೆ 35.68 ಕೋಟಿ ರು. ವೆಚ್ಚದಲ್ಲಿ (ತಿಂಗಳಿಗೆ 99.12 ಲಕ್ಷ ರು. ) ಪಡೆಯಲು ಪ್ರಸ್ತಾವನೆ ಸಲ್ಲಿಸಿತ್ತು. ಕಡೆಯಲ್ಲಿ ಆರ್ಥಿಕ ಇಲಾಖೆಯು ಪ್ರತಿ ತಿಂಗಳ ವೆಚ್ಚವನ್ನು 60.00 ಲಕ್ಷ ರು ಕ್ಕಿಳಿಸಿದೆಯಲ್ಲದೇ ಸೇವೆಯನ್ನು ಒಂದು ವರ್ಷದ ಅವಧಿಯವರೆಗೆ ಮಾತ್ರ ನಿಗದಿಪಡಿಸಿತ್ತು.
ನಿಗೂಢ
ವಿಶೇಷವೆಂದರೇ ಆಡಳಿತ ಇಲಾಖೆಯಾದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾಪಿಸಿರುವ ‘ದ ಪಾಲಿಸಿ ಫ್ರಂಟ್’ ಹೆಸರು ಕೂಡ ನಿಗೂಢವಾಗಿದೆ. ‘ದ ಪಾಲಿಸಿ ಫ್ರಂಟ್’ ಎಂಬುದು ಪ್ರೈವೈಟ್ ಲಿಮಿಟೆಡ್ಡೋ, ಸಾರ್ವಜನಿಕ ಸ್ವಾಮ್ಯದ ಕಂಪನಿಯೋ, ಪಾಲುದಾರಿಕೆ ಕಂಪನಿಯೋ, ಎಲ್‌ಎಲ್‌ಪಿಯೋ, ಸರ್ಕಾರೇತರ ಸಂಸ್ಥೆಯೋ, ಇದು ಯಾರಿಗೆ ಸೇರಿದೆ, ಇದರ ಯೋಜನಾ ನಿರ್ದೇಶಕರು ಯಾರು, ಕಂಪನಿಯೇ ಆಗಿದ್ದಲ್ಲಿ ಇದರ ಮಾಲೀಕರು ಯಾರು, ನಿರ್ದಿಷ್ಟವಾಗಿ ಇದಕ್ಕೇ ಗುತ್ತಿಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿದವರು ಯಾರು, ಇದರ ಪೂರ್ವಾಪರವೇನು, ಈ ಹಿಂದೆ ಸರ್ಕಾರದ ಯೋಜನೆಗಳು, ಸಾಧನೆಗಳ ಪ್ರಚಾರ, ಸುಳ್ಳು ಸುದ್ದಿಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸಿತ್ತೇ ಎಂಬುದನ್ನು ಟಿಪ್ಪಣಿ ಹಾಳೆಯಲ್ಲಿ ಎಲ್ಲಿಯೂ ಉಲ್ಲೇಖಿಸದೇ ರಹಸ್ಯವಾಗಿರಿಸಿರುವುದನ್ನು ಸ್ಮರಿಸಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ಕೊಟ್ಟ ಸರ್ಕಾರ
ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು. ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.
ಈ ಉದ್ದೇಶಕ್ಕಾಗಿ ತಿಂಗಳಿಗೆ 99.12 ಲಕ್ಷ ರು. ಅನುದಾನ ಒದಗಿಸಬೇಕು ಮತ್ತು ಈ ಪ್ರಸ್ತಾವಕ್ಕೆ ಕರ್ನಾಟಕ ಪಾರದರ್ಶಕ ಕಾಯ್ದೆಯ 4(ಜಿ) ವಿನಾಯಿತಿ ನೀಡಬೇಕು ಎಂದು ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಕೋರಿದ್ದರು. ಒಂದೊಮ್ಮೆ ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಒಪ್ಪಿದ್ದಲ್ಲಿ 35.68 ಕೋಟಿ ರು. ವೆಚ್ಚ ಆಗುತ್ತಿತ್ತು. ಗ್ಯಾರಂಟಿಗಳ ಸಮೀಕ್ಷೆಗೆ ಎಂ2ಎಂ ಕಂಪನಿಗೆ ಒಂದು ಕೋಟಿ ರು. ಅನುದಾನವನ್ನು ನೀಡಿದ್ದನ್ನು ಸ್ಮರಿಸಬಹುದು.