‘ಪ್ರಕರಣವು ಘೋರ ಸ್ವರೂಪ, ಯಾವುದೇ ಜಾಮೀನಿಗೆ ಅರ್ಹನಿರುವುದಿಲ್ಲ’; ಸರ್ಕಾರಿ ಅಭಿಯೋಜಕರ ಆಕ್ಷೇಪ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆ  ಅಧೀನದ ಹಾಸ್ಟೆಲ್‌ಗಳಿಗೆ  ಹಾಸಿಗೆ ಮತ್ತು ಕಂಬಳಿ  ಸರಬರಾಜು ಟೆಂಡರ್‌ ಕೊಡಿಸುವುದಾಗಿ ನಂಬಿಸಿ  50 ಲಕ್ಷ ಪಡೆದು ವಂಚಿಸಿದ್ದಾರೆ ಎಂಬ ಗುರುತರ ಆರೋಪಿತ ಪ್ರಕರಣದಲ್ಲಿ ಒಂದನೇ ಆರೋಪಿ ಅನಂತ್‌ ನಾಯಕ್‌ ಅವರು ಸಲ್ಲಿಸಿರುವ  ಜಾಮೀನು ಅರ್ಜಿಯನ್ನು  ನ್ಯಾಯದ ಹಿತದೃಷ್ಟಿಯಲ್ಲಿ  ತಿರಸ್ಕರಿಸಬೇಕು ಎಂದು ಸರ್ಕಾರಿ ಅಭಿಯೋಜಕ ಬಿ ಎಂ ಬಿಷ್ಟಗೊಂಡ ಅವರು ನ್ಯಾಯಾಧೀಶರಿಗೆ ಆಕ್ಷೇಪ ಸಲ್ಲಿಸಿದ್ದಾರೆ.

 

ಅನಂತ್‌ನಾಯಕ್‌ ಮತ್ತಿತರರ ವಿರುದ್ಧ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ 2023ರ ಜುಲೈ 13ರಂದು ಎಫ್ಐಆರ್‍‌ ದಾಖಲಾಗಿತ್ತು. ಈ ಸಂಬಂಧ ಒಂದನೇ ಆರೋಪಿ ಅನಂತ್‌ ನಾಯಕ್‌ ಅವರು ರಾಮಮೂರ್ತಿ ನಗರ ಪೋಲಿಸ್ ಠಾಣೆ  ಇನ್ಸ್‌ಪೆಕ್ಟರ್‍‌ ಅವರಿಗೆ ಸ್ವಯಂ ಹೇಳಿಕೆಯನ್ನು ಸಲ್ಲಿಸಿದ್ದರು ಎಂದು ಗೊತ್ತಾಗಿದೆ. ಸರ್ಕಾರಿ ಅಭಿಯೋಜಕರ ಆಕ್ಷೇಪ ಮತ್ತು ಅನಂತ್‌ನಾಯಕ್‌ ಅವರು ಠಾಣಾಧಿಕಾರಿಗೆ ಸಲ್ಲಿಸಿರುವ ಸ್ವಯಂ ಹೇಳಿಕೆಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಅರ್ಜಿಯು ಇಂದು ವಿಚಾರಣೆಗೆ ಬರಲಿದೆ ಎಂದು ಗೊತ್ತಾಗಿದೆ.

 

‘ಈ ಪ್ರಕರಣವು ಘೋರ ಸ್ವರೂಪದ್ದಾಗಿದ್ದು ಅರ್ಜಿದಾರರಿಗೆ ಜಾಮೀನು ನೀಡಿದಲ್ಲಿ  ಮತ್ತೆ ಇಂತಹ ಪ್ರಕರಣಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಸಮಾಜದ ಮೇಲೆ ಅದರಲ್ಲೂ ಯುವಜನತೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ,’ ಎಂದು ಆಕ್ಷೇಪದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸರ್ಕಾರಿ ಅಭಿಯೋಜಕರ ಆಕ್ಷೇಪವೇನು?

 

 

1. ತನಿಖಾ ಕಾಲದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪಂಚರ ಸಮಕ್ಷಮ ಸ್ಥಳ ಪಂಚನಾಮೆ ಜರುಗಿಸಲಾಗಿರುತ್ತದೆ.

 

2. ತನಿಖಾ ಕಾಲದಲ್ಲಿ ಪಿರ್ಯಾದುದಾರರಿಂದ ಮತ್ತು ಇತರರಿಂದ ಪಡೆದ ಹಣದಿಂದ ಖರೀದಿ ಮಾಡಿರುವ ಚರ, ಸ್ಥಿರ ಆಸ್ತಿಗಳ ಬಗ್ಗೆ ಮಾಹಿತಿ ಪಡೆದು ಅಮಾನತುಪಡಿಸಬೇಕಾಗಿರುತ್ತದೆ.

 

3. ಸದರಿ ಪ್ರಕರಣವು ಘೋರ ಸ್ವರೂಪದ್ದಾಗಿದ್ದು ಅರ್ಜಿದಾರರಿಗೆ ಜಾಮೀನು ನೀಡಿದಲ್ಲಿ ಮತ್ತೆ ಇಂತಹ ಪ್ರಕರಣಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದ್ದು, ಸಮಾಜದ ಮೇಲೆ ಅದರಲ್ಲೂ ಯುವ ಜನತೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

 

4. ಈ ಪ್ರಕರಣವು ಪ್ರಾಥಮಿಕ ವಿಚಾರಣೆ ಹಂತದಲ್ಲಿರುತ್ತದೆ.

 

 

5. ಆರೋಪಿತರು ಮೇಲ್ನೋಟಕ್ಕೆ ಆಪಾದಿಸಲಾದ ಅಪರಾಧ ಎಸಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

 

6. ಅರ್ಜಿದಾರ ಆರೋಪಿತನಿಗೆ ಜಾಮೀನು ನೀಡಿದಲ್ಲಿ ಸದರಿಯವನು ತಲೆಮರೆಸಿಕೊಂಡು ಸಾಕ್ಷಿಗಳಿಗೆ ಬೆದರಿಸಿ, ಸಾಕ್ಷ್ಯಾಧಾರ ನಾಶ ಮಾಡುವ, ಮತ್ತೆ ಇಂತಹದೇ ಕೃತ್ಯಗಳಲ್ಲಿ ತೊಡಗಿ ಪಿರ್ಯಾದಿಗೆ ತೊಂದರೆ ಉಂಟು ಮಾಡುವ, ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಗಳು ಇರುವುದರಿಂದ ಅರ್ಜಿದಾರ ಆರೋಪಿತನು ಯಾವುದೇ ಜಾಮೀನಿಗೆ ಅರ್ಹನಿರುವುದಿಲ್ಲ.

 

7. ಈ ಹಂತದಲ್ಲಿ ಅರ್ಜಿದಾರ ಆರೋಪಿತನಿಗೆ ಜಾಮೀನು ಮಾಡಿದಲ್ಲಿ ಸದರಿಯವರು ಶಾಶ್ವತವಾಗಿ ತಲೆಮರೆಸಿಕೊಂಡು, ಇಂತಹ ಪ್ರಕರಣಗಳಲ್ಲಿ ಮತ್ತೆ ಭಾಗಿಯಾಗುವ ಸಾಧ್ಯತೆಗಳು ಇರುವುದರಿಂದ ಅರ್ಜಿದಾರ ಆರೋಪಿತನು ಯಾವುದೇ ಜಾಮೀನಿಗೆ ಅರ್ಹನಿರುವುದಿಲ್ಲ.

 

8. ತನಿಖಾಧಿಕಾರಿಯವರು ಸಲ್ಲಿಸಿರುವ ತನಿಖಾ ವರದಿಯನ್ನು ಲಗತ್ತಿಸಿದ್ದು ಅದನ್ನೂ ಸಹ ತಕರಾರಿನ ಒಂದು ಭಾಗವೆಂದು ಪರಿಗಣಿಸುವುದು.

 

9. ಈ ಎಲ್ಲಾ ಕಾರಣಗಳ ಮೂಲಕ ಹಾಗೂ ವಾದದ ಸಮಯದಲ್ಲಿ ಮಂಡಿಸಬಹುದಾದ ಇತರ ಕಾರಣಗಳಿಗಾಗಿ ಅರ್ಜಿದಾರ ಆರೋಪಿತನು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯದ ಹಿತದೃಷ್ಟಿಯಲ್ಲಿ ತಿರಸ್ಕರಿಸಬೇಕು ಎಂದು ಸರ್ಕಾರಿ ಅಭಿಯೋಜಕ ಬಿ ಎಂ ಬಿಷ್ಟಗೊಂಡ ಅವರು ನ್ಯಾಯಾಧೀಶರಿಗೆ ಆಕ್ಷೇಪ ಸಲ್ಲಿಸಿದ್ದಾರೆ.

 

ಅನಂತ್‌ನಾಯಕ್‌ ಅವರು ಸಲ್ಲಿಸಿರುವ ಸ್ವಯಂ ಹೇಳಿಕೆಯಲ್ಲೇನಿದೆ?

 

1. ಈ ಪ್ರಕರಣದ ದೂರುದಾರ ವಿಜಯ್ ಯಾದವ್ ಎಂಬುವವರನ್ನು ನಾನು ಎಂದೂ ಭೇಟಿ ಮಾಡಿಲ್ಲ. ಮುಖತಃ ಎಂದು ನೋಡಿಲ್ಲ. ಅವರ ಪರಿಚಯವಿಲ್ಲ, ಅವರೊಂದಿಗೆ ಎಂದಿಗೂ ಪೊನ್ ಸಂಭಾಷಣೆ ಕೂಡ ಮಾಡಿಲ್ಲ. ಹಾಗಾಗಿ ಅವರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರ ಮಾಡಿಲ್ಲ. ಈ ಆರೋಪಗಳಿಗೂ ನನಗೂ ಯಾವುದೇ ಸಂಬಂಧಿಸಿಲ್ಲ. ಈ ಮೂಲಕ ಇದೊಂದು ದುರುದ್ದೇಶಿತ ದೂರು ಎಂಬುದು ಸ್ಪಷ್ಟವಾಗಿದೆ.

 

 

2. ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆ ಕೃಷ್ಣಮೂರ್ತಿ ಮತ್ತು ವಿಜಯ್ ಎಂಬುವವರಿಬ್ಬರು ಹಳೆಯ ಪರಿಚಯದವರಂತೆ. ಇವರಿಬ್ಬರೂ ಜೊತೆಗೂಡಿ ಬೆಂಗಳೂರಿನ ಸಹಕಾರ ನಗರದ ದೀಪಕ್ ಪಾಟೀಲ್ ಎಂಬುವವ ಜೊತೆಗೆ ಹಣಕಾಸಿನ ವ್ಯವಹಾರ ಮಾಡಲು ನಿರ್ಧರಿಸಿದ್ದರಂತೆ. ಈ ವ್ಯವಹಾರದ ಕುರಿತು ಇವರುಗಳು ನಾಲ್ಕಾರು ಬಾರಿ ಸಭೆಗಳನ್ನು ಮಾಡಿ ವ್ಯವಹಾರ ಆರಂಭಿಸಲಿ ಅಂತಿಮ ನಿರ್ಧಾರಕ್ಕೆ ಬಂದಿದ್ದರಂತೆ.

 

 

3. ಕೃಷ್ಣಮೂರ್ತಿ ಅವರಿಂದ ಸಾಲ ಪಡೆಯಲು ದೀಪಕ್ ಪಾಟೀಲ್ ಒಪ್ಪಿ, ಅದಕ್ಕಾಗಿ ಕಾನೂನು ಸಲಹೆ ಮತ್ತು ಅಗ್ರಿಮೆಂಟ್ ಮಾಡಿಸಿಕೊಳ್ಳಲು  19 ಜುಲೈ 2023 ರಲ್ಲಿ ನನ್ನನ್ನು ಭೇಟಿಯಾದರು. ಈ ಬಗ್ಗೆ ಇಬ್ಬರಲ್ಲಿ ಮಾಹಿತಿ ಪಡೆದು ಅಗತ್ಯ ಪ್ರಚಲಿತ ಕಾನೂನು ಸಲಹೆ ನೀಡಿದೆನು.‌ ಇವರಿಬ್ಬರ ಮಧ್ಯೆ ಆಗುವ ಹಣಕಾಸಿನ ವ್ಯವಹಾರದ ಬಗ್ಗೆ  26 ಜುಲೈ 2023 ರಂದು ಅಗ್ರಿಮೆಂಟ್ ಕರಡು ತಯಾರಿಸಿ ಕೊಟ್ಟೆನು.ಜೊತೆಗೆ ಸದರಿ ಅಗ್ರಿಮೆಂಟ್ ಪತ್ರಕ್ಕೆ ಸಾಕ್ಷಿ ಸಹಿ ಹಾಕಿದೆನು.

 

 

4. ಕೃಷ್ಣಮೂರ್ತಿ ಅವರ ಬಂಧುಗಳಾದ ಶ್ರೀನಿವಾಸ ಮೂರ್ತಿ, ವಸಂತಪ್ಪ ಸೇರಿ ಕೃಷ್ಣಮೂರ್ತಿ ಅವರಿಂದ  ಹಣ ಪಡೆದುಕೊಂಡು ಸ್ವತಃ ಅವರ ಕಾರಿನಲ್ಲಿ ಹೋಗಿ ದೀಪಕ್ ಪಾಟೀಲ್ ಅವರ ಕಚೇರಿಗೆ ಹಣ ತಲುಪಿಸಿದರು. ಇದಕ್ಕೂ ಕೂಡ ನಾನು ಸಾಕ್ಷಿ ಇದ್ದೇನೆ.

 

 

5. ಅನಂತರ ಇವರ ಸಂಪರ್ಕ ನನಗೆ ಇರಲಿಲ್ಲ. ಕೆಲ ದಿನಗಳ ನಂತರ ಕೃಷ್ಣಮೂರ್ತಿ ಅವರು ನನ್ನನ್ನು ಪೊನ್ ನಲ್ಲಿ ಸಂಪರ್ಕಿಸಿ. ದೀಪಕ್ ಪಾಟೀಲ್ ಅವರು ಜೊತೆಗೆ ನಮ್ಮ ವ್ಯವಹಾರ ಬೇಡ. ಅವರು ಸಿಗುತ್ತಿಲ್ಲ, ಏನಾದರೂ ಮಾಡಿ ಹಣ ವಾಪಸು ಕೊಡಿಸಲು ಸಹಾಯ ಮಾಡಿ ಎಂದು ಕೇಳಿಕೊಂಡರು.

 

 

6. ಆಗ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಅವರನ್ನು ಭೇಟಿಯಾಗಿ ಪ್ರಕರಣ ವಿವರಿಸಿ ಅವರ ಸಹಕಾರ ಪಡೆದು ಪಾಟೀಲ್ ಅವರನ್ನು ಹುಡುಕಲು ಪ್ರಾರಂಭಿಸಿದೆ.

 

 

7. ರಾಮಮೂರ್ತಿ ನಗರ ಪೋಲಿಸ್ ಮತ್ತು ನಮ್ಮ ಗೆಳೆಯರ ಸಹಕಾರದಿಂದ ದೀಪಕ್ ಪಾಟೀಲ್ ಅವರನ್ನು ಪತ್ತೆ ಹಚ್ಚಿ ಪೊಲಿಸರಿಗೆ ಒಪ್ಪಿಸಿದೆವು. ಆಗ ಪೊಲೀಸರು ದೀಪಕ್ ಅವರಿಂದ ಕೃಷ್ಣಮೂರ್ತಿ ಅವರಿಗೆ 25 ಲಕ್ಷ ಹಣ ವಾಪಸು ಕೊಡಿಸಿದರು. ಜೊತೆಗೆ ಮುಚ್ಚಳಿಕೆ ಬರೆಸಿಕೊಂಡು ಭದ್ರತಾ ದೃಷ್ಟಿಯಿಂದ ಕೆಲ ಚೆಕ್ ಗಳನ್ನು ದೀಪಕ್ ಅವರಿದ ಪಡೆದುಕೊಂಡರು.

 

ಅನಂತರ ದಿನಗಳಲ್ಲಿ ದೀಪಕ್ ಪಾಟೀಲ್ ನೇರವಾಗಿ ಕೃಷ್ಣಮೂರ್ತಿ ಅವರ ಜೊತೆಗೆ ಸಂಪರ್ಕ ಮತ್ತು ಒಡನಾಟ ಹೆಚ್ಚಿಸಿಕೊಂಡಿದ್ದರು. ಒಂದು ವರ್ಷದವರೆಗೆ ಅವರು ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಈಗ ಅವರನ್ನು ಪೊನ್ ನಲ್ಲಿ ಸಂಪರ್ಕಿಸಲಾಗಿ ಈಗಾಗಲೇ ಮತ್ತೆ 60% ಹಣವನ್ನು ಕೃಷ್ಣಮೂರ್ತಿ ಅವರಿಗೆ ಹಿಂದಿರುಗಿಸಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಖುದ್ದು ಭೇಟಿ ಯಾದಾಗ ಪರಿಶೀಲಿಸಬೇಕಿದೆ.

 

 

8. ಒಬ್ಬ ವಕೀಲನಾಗಿ ಕಾನೂನು ಸಲಹೆ ನೀಡಿ ನನ್ನ ವೃತ್ತಿ ನಿರ್ವಹಿಸಿದ್ದೇನೆ. ಅದಕ್ಕಾಗಿ ಫೀಜು ಪಡೆದಿದ್ದೇನೆ. ವ್ಯವಹಾರಕ್ಕೆ ಸಾಕ್ಷಿ ಆಗಿದ್ದೇನೆ ಅಷ್ಟೆ.

 

 

9. ಅಗತ್ಯವಿದ್ದರೆ ಪೋಲಿಸ್ ತನಿಖೆ ಸಹಕರಿಸುತ್ತೇನೆ. ಈ ಸಂಬಂಧ ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿಯುತ್ತೇನೆ. ನನ್ನ ಮೇಲಿನ ಆರೋಪಗಳನ್ನು ಪರಿಶೀಲಿಸಬೇಕು. ನನ್ನನ್ನು ತೇಜೋವದೆ ಮಾಡುವ ಉದ್ದೇಶದ ಈ ಪ್ರಕರಣವನ್ನು ಕೈಬಿಡಲು ಹೇಳಿಕೆ ನೀಡುತ್ತೇನೆ ಎಂದು ರಾಮಮೂರ್ತಿ ನಗರ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರಿಗೆ ಸ್ವಯಂ ಹೇಳಿಕೆಯಲ್ಲಿ ಕೋರಿರುವುದು ಗೊತ್ತಾಗಿದೆ.

 

ಸಮಾಜ ಕಲ್ಯಾಣ ಇಲಾಖೆ  ಅಧೀನದ ಹಾಸ್ಟೆಲ್‌ಗಳಿಗೆ ಹಾಸಿಗೆ ಮತ್ತು ಕಂಬಳಿ   ಸರಬರಾಜು ಟೆಂಡರ್‌ ಕೊಡಿಸುವುದಾಗಿ ನಂಬಿಸಿ 50 ಲಕ್ಷ ಪಡೆದು ವಂಚಿಸಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಅನಂತ್‌ನಾಯಕ್‌ ಮತ್ತಿತರರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಇದೀಗ ಬಹಿರಂಗವಾಗಿದೆ.

 

ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವ 2 ತಿಂಗಳ ಮೊದಲು ಅಂದರೆ 2023ರ ಫೆ. 2ರಂದು  ನಡೆದಿರುವ ಈ ಪ್ರಕರಣದ ಕುರಿತು  2023ರ ಜುಲೈ  13ರಂದು ಎಫ್‌ಐಆರ್‍‌ ದಾಖಲಾಗಿತ್ತು.

 

ಹಾಸಿಗೆ ಪೂರೈಕೆ ಟೆಂಡರ್‌; 50 ಲಕ್ಷ ರು. ವಂಚನೆ ಆರೋಪ, ಅನಂತ್‌ ನಾಯಕ್‌ ಸೇರಿ 4 ಮಂದಿ ವಿರುದ್ಧ ಎಫ್‌ಐಆರ್‍‌

 

ಮುಖ್ಯಮಂತ್ರಿಗಳು ಆತ್ಮೀಯರು ಎಂದಿದ್ದ ಆರೋಪಿ

 

ಅನಂತ್‌ನಾಯಕ್‌ ಅವರು  50 ಲಕ್ಷ ರು.ಗಳನ್ನು ಕೇಳಿದ್ದರು ಎಂದು ಆರೋಪಿಸಿರುವ  ವಿಜಯ್‌ ಸುಹಾಸ್‌ ಯಾದವ್‌ ಅವರು,  ಆ ಹಣವನ್ನು ನೀಡಲು  ನಿರಾಕರಿಸಿದ್ದರು ಎಂಬ ಅಂಶವನ್ನು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿದೆ.  ಆ ಸಂದರ್ಭದಲ್ಲಿ ‘ನನ್ನ ಮೇಲೆ ನೀನು ಅನುಮಾನಪಡಬೇಡ. ನನಗೆ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮುಖ್ಯಮಂತ್ರಿಗಳು ಬಹಳ ಆತ್ಮೀಯರಾಗಿದ್ದಾರೆ. ನೀನು ಏನು ಭಯಪಡಬೇಡ. ನಿನಗೆ ಇದರಿಂದ ಒಳ್ಳೆ ಸಂಭಾವನೆ ಬರುತ್ತದೆ. ಹೆಚ್ಚು ಲಾಭ ಸಿಗುತ್ತದೆ,’ ಎಂದು ತಿಳಿಸಿದ್ದರು ಎಂದು ಎಫ್‌ಐಆರ್‍‌ನಲ್ಲಿ  ಹೇಳಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts