ಬಿಜೆಪಿ ಸರ್ಕಾರದ ಹಗರಣಗಳ ಕುರಿತು ಸ್ಪಷ್ಟ ಉತ್ತರ ನೀಡದ ಸರ್ಕಾರ; ಸದನದಲ್ಲಿ ಉತ್ತರಿಸದೇ ಹಿಂದೇಟು

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್‌ ಪಕ್ಷವು ಅಧಿಕಾರ ಹಿಡಿದು 6 ತಿಂಗಳನ್ನು ಪೂರೈಸಿದೆ.  ಆದರೀಗ ಈ ಹಗರಣಗಳನ್ನೇ ಸದನದಲ್ಲಿ ಹೆಸರಿಸಲು ಹಿಂದೇಟು ಹಾಕಿದೆ.

 

ಬಿಟ್‌ ಕಾಯಿನ್‌, ಕೋವಿಡ್‌ ಹಗರಣ, 40 ಪರ್ಸೆಂಟ್‌, ಪಿಎಸ್‌ಐ, ಕಾಕಂಬಿ, ಪ್ರಾಧ್ಯಾಪಕರ ನೇಮಕಾತಿ ಸೇರಿದಂತೆ ಮತ್ತಿತರೆ ಇಲಾಖೆಗಳಲ್ಲಿ ಹಗರಣ ನಡೆಯುತ್ತಿದೆ ಎಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಬೊಬ್ಬೆ ಹೊಡೆದಿತ್ತು. ಈ ಎಲ್ಲದರ ಕುರಿತು ತನಿಖೆ ನಡೆಸಲಾಗುವುದು ಎಂದೂ ಹೇಳಿತ್ತು.

 

ಅದರಂತೆ ಪ್ರಮುಖ ಹಗರಣಗಳ ಕುರಿತು ಏಕ ವ್ಯಕ್ತಿ ನ್ಯಾಯಾಂಗ ತನಿಖಾ ಆಯೋಗವನ್ನೂ ರಚಿಸಿದೆ. ಆದರೆ ಇವುಗಳ ಕುರಿತು ಸದನದಲ್ಲಿ ಮಾಹಿತಿಯನ್ನು ನೀಡಲು ಹಿಂದೇಟು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಹಿಂದಿನ ಸರ್ಕಾರದ ಹಗರಣಗಳ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರಿಗೆ ವಿಧಾನಸಭೆಯಿಂದ ಚುನಾಯಿತರಾದ ತಿಪ್ಪಣ್ಣಪ್ಪ ಅವರು ಪ್ರಶ್ನೆ ಕೇಳಿದ್ದರು.

 

 

1. ರಾಜ್ಯದ ಹಿಂದಿನ ಸರ್ಕಾರದ ಹಗರಣಗಳು ಯಾವುವು?

 

2. ಯಾವ ಯಾವ ಹಗರಣದ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ; ತನಿಖೆ ಯಾವ ಹಂತದಲ್ಲಿದೆ

 

ಈ ಎರಡೂ ಪ್ರಶ್ನೆಗಳಿಗೆ ಮೂರೇ ಮೂರು ಸಾಲಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಉತ್ತರಿಸಿದ್ದಾರೆ.

 

 

‘ಹಿಂದಿನ ಸರ್ಕಾರದ ಹಗರಣಗಳ ಕುರಿತಾಗಿ ರಾಜ್ಯದ ಯಾವುದೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದಿಲ್ಲ,’ ಎಂದು ಮಾಹಿತಿ ಒದಗಿಸಿದ್ದಾರೆ.

 

ಬಿಜೆಪಿ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪವನ್ನೇ ತನ್ನ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು, ಪೇ ಸಿಎಂ ಹಾಗೂ ಇನ್ನೂ ಮುಂತಾದ ಅಭಿಯಾನಗಳನ್ನು ಆಯೋಜಿಸಿತ್ತು. ಹಿಂದಿನ ಸರ್ಕಾರದ ವಿರುದ್ಧ ಮಾಡಿದ್ದ ಎಲ್ಲಾ ಆರೋಪಗಳಿಗೆ ಕಾನೂನಾತ್ಮಕ ಅಂತ್ಯ ನೀಡಲು ಆಯೋಗಗಳನ್ನು ರಚಿಸಿದೆ. ಆದರೂ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಸದನದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಒದಗಿಸದೇ ನುಣುಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಪಿಎಸ್ಐ ನೇಮಕಾತಿ ಹಗರಣ, ಗುತ್ತಿಗೆದಾರರ ವಲಯದ ಲಂಚದ ಆರೋಪ, ಶೇ. 40ರಷ್ಟು ಕಮೀಷನ್ ದಂಧೆ ಮುಂತಾದ ಎಲ್ಲಾ ರೀತಿಯ ಆರೋಪಗಳನ್ನು ತನಿಖೆಗೊಳಪಡಿಸಿದೆ.

 

‘ನಮಗೆಲ್ಲಾ ಗೊತ್ತಿರುವಂತೆ ಪಿಎಸ್ ಐ ನೇಮಕಾತಿ ಹಗರಣ, ಗುತ್ತಿಗೆದಾರರ ವಲಯದಿಂದ ಬಂದಿದ್ದ 40 ಪರ್ಸೆಂಟ್ ಕಮೀಷನ್ ದಂಧೆ ಆರೋಪಗಳು ಸೇರಿ ಅನೇಕ ಗಂಭೀರ ಆರೋಪಗಳು ಸರ್ಕಾರದ ವಿರುದ್ಧ ಕೇಳಿಬಂದಿದ್ದವು. ಇಂಥ ಕೆಲವು ಹಗರಣಗಳ ಬಗ್ಗೆ ತನಿಖೆ ನಡೆಸಲಾಗಿದೆಯಾದರೂ ಅವು ತೃಪ್ತಿಕರವಾಗಿಲ್ಲ. ಹಾಗಾಗಿ, ನೂತನ ಕಾಂಗ್ರೆಸ್ ಸರ್ಕಾರ ಆ ಎಲ್ಲಾ ಹಗರಣಗಳ ಮರು ತನಿಖೆ ಮಾಡುತ್ತದೆ. ಜೊತೆಗೆ, ತನಿಖೆಯಾಗದೇ ಉಳಿದಿರುವ ಕೆಲವು ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ,’ ಎಂದು ಎಂ ಬಿ ಪಾಟೀಲ್‌ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

 

ಅಲ್ಲದೇ ‘ಬಿಜೆಪಿ ಸರ್ಕಾರದಲ್ಲಿ ಆಗಿರುವ ಹಗರಣಗಳ ವಿರುದ್ಧವೇ ಕಾಂಗ್ರೆಸ್ ಹೋರಾಡಿ ಅಧಿಕಾರಕ್ಕೆ ಬಂದಿದೆ. ಈಗ ನಾವು ಸುಮ್ಮನಾದರೆ ಜನರು ನಮ್ಮನ್ನು ತಪ್ಪಾಗಿ ಅರ್ಥೈಸುತ್ತಾರೆ. ನಾವು ಮಾಡಿರುವ ಆರೋಪಗಳಿಗೆ ಸೂಕ್ತವಾದ ನ್ಯಾಯವನ್ನು ಜನರ ಮುಂದೆ ಇಡಬೇಕಾಗಿದೆ. ಹಾಗಾಗಿ, ನಾವು ಬಿಜೆಪಿ ಸರ್ಕಾರದಲ್ಲಿ ಕೇಳಿಬಂದ ಎಲ್ಲಾ ಹಗರಣಗಳನ್ನು ಮರು ತನಿಖೆಗೆ ಒಳಪಡಿಸುವ ಅವಶ್ಯಕತೆಯಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ತಮ್ಮ ಬಳಿ ಹೇಳಿದ್ದಾರೆ,’ ಎಂದು ಎಂ ಬಿ ಪಾಟೀಲ್‌ ಅವರೇ ಹೇಳಿಕೆ ನೀಡಿದ್ದರು.

 

ಅದರಂತೆ ಜಸ್ಟೀಸ್‌ ಮೈಕಲ್‌ ಕುನ್ಹಾ, ನಾಗಮೋಹನ್‌ ದಾಸ್‌, ವೀರಪ್ಪ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ.

 

ಕೋವಿಡ್‌ ಹಗರಣ

 

ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಲವು ರೀತಿಯಲ್ಲಿ ಅಕ್ರಮಗಳು ನಡೆದಿದ್ದವು. ವೆಂಟಿಲೇಟರ್‍‌, ಪಲ್ಸ್‌ ಆಕ್ಸಿಮೀಟರ್‍‌, ಪಿಪಿಇ ಕಿಟ್‌, ಸ್ಯಾನಿಟೈಸರ್‍‌, ಗ್ಲೌಸ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಸದನದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಅವಧಿಯಲ್ಲಿಯೇ ಸಿದ್ದರಾಮಯ್ಯ ಅವರು ಹಗರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 50 ಮುಖಗಳು

 

ಬಿಟ್‌ ಕಾಯಿನ್‌ ಹಗರಣ

 

2019ರಲ್ಲಿ ರಾಜ್ಯ ಸರಕಾರದ ಇ- ಪ್ರೊಕ್ಯೂರ್‌ಮೆಂಟ್‌ ಹ್ಯಾಕ್‌ ಮಾಡಿ ಹಣ ದೋಚಲಾಗಿತ್ತು.  ಕೇಸ್‌ನ ಭಾಗವಾಗಿ ಸಿಕ್ಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಹರ್ವಿಂದರ್‌ ಸಿಂಗ್‌, ನಿತಿನ್‌, ದರ್ಶಿತ್‌ನನ್ನು ಬಂಧಿಸಲಾಗಿತ್ತು.   ಈ ಮೂವರು ಆರೋಪಿಗಳು ಶ್ರೀಕಿ ಹ್ಯಾಕ್‌ ಮಾಡಿ ದೋಚಿದ್ದ ಬಿಟ್‌ ಕಾಯಿನ್‌ ವರ್ಗಾವಣೆಯಲ್ಲಿ ಶಾಮೀಲಾಗಿದ್ದರು. ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ತನಿಖೆ ಚುರುಕುಗೊಳಿಸಿದ್ದ   ವಿಶೇಷ ತನಿಖಾ ತಂಡ (ಎಸ್‌ಐಟಿ), ಉತ್ತರ ಭಾರತ ಮೂಲದ ಮೂವರು ಆರೋಪಿಗಳನ್ನು ಬಂಧಿಸಿತ್ತು.

 

ಪಿಎಸ್ಐ ಹಗರಣವೇನು?

 

2022ರಲ್ಲಿ ಹೊರಬಿದ್ದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ 2021ರ ಅಕ್ಟೋಬರ್ ನಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದಿತ್ತು.

ಭ್ರಷ್ಟಾಚಾರ, ಅಧಿಕಾರ-ಹಣ ದುರುಪಯೋಗ, ಅಕ್ರಮಗಳ ಸುತ್ತ ‘ದಿ ಫೈಲ್‌’ನ ಪ್ರಮುಖ 130 ವರದಿಗಳು

ಈ ನೇಮಕಾತಿಯಲ್ಲಿ, ಲಂಚ ಪಡೆದು ಕೆಲವರಿಗೆ ಪಿಎಸ್ಐ ಹುದ್ದೆಗಳನ್ನು ನೀಡಿದ ಆರೋಪಗಳು ಕೇಳಿಬಂದಿದ್ದವು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಇಡೀ ಪ್ರಕರಣದ ಕಿಂಗ್ ಎಂದು ಹೇಳಲಾದ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಡಿವೈಎಸ್ ಪಿ ಮಲ್ಲಿಕಾರ್ಜುನ ಸೇರಿದಂತೆ ಈ ಪ್ರಕರಣದಲ್ಲಿ 53 ಜನರು ಬಂಧನಕ್ಕೊಳಗಾಗಿದ್ದರು. ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳೇ ಬಂಧನಕ್ಕೊಳಗಾಗುವಂತಿತ್ತು.

 

ಶೇ. 40 ಲಂಚ ಹಗರಣ

 

ವಿವಿಧ ಕಾಮಗಾರಿಗಳು ಗುತ್ತಿಗೆದಾರರ ವಲಯವು, ಬಿಜೆಪಿ ಸರ್ಕಾರದ ಸಚಿವರು ಶೇ. 40ರಷ್ಟು ಕಮೀಷನ್ ಕೇಳುತ್ತಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು. ಕಾಮಗಾರಿಗಳ ಗುತ್ತಿಗೆಯ ಟೆಂಡರ್ ಗಳನ್ನು ಪಡೆಯಲು ಕಾಮಗಾರಿಯ ಅಂದಾಜು ವೆಚ್ಛದ ಶೇ. 40ರಷ್ಟನ್ನು ಲಂಚವಾಗಿ ಮುಂಗಡವೇ ನೀಡಿದರೆ ಮಾತ್ರ ಟೆಂಡರ್ ನೀಡಲಾಗುತ್ತದೆ ಎಂದು ಆರೋಪಿಸಿದ್ದರು.

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

 

ಕಾಕಂಬಿ ಹಗರಣ

 

ಎಂ2 ಲೈಸೆನ್ಸ್‌ ಇಲ್ಲದಿದ್ದರೂ ಮಹಾರಾಷ್ಟ್ರ ಮೂಲದ ಕೆ ಎನ್ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 260 ಕೋಟಿ ರು. ಮೌಲ್ಯದ ಕಾಕಂಬಿ ಎತ್ತುವಳಿಗೆ ಅನುಮತಿ ನೀಡಲಾಗಿತ್ತು. ಈ ಕುರಿತು ಪ್ರಿಯಾಂಕ್‌ ಖರ್ಗೆ ಮತ್ತು ರಮೇಶ್‌ಬಾಬು ಅವರು ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.

ಕಾಕಂಬಿ ಹಗರಣಕ್ಕೆ ಕಾಂಗ್ರೆಸ್‌ ಸರ್ಕಾರದಿಂದಲೇ ಕ್ಲೀನ್‌ ಚಿಟ್‌; ಅಬಕಾರಿ ಆಯುಕ್ತರ ವರದಿ ಬಹಿರಂಗ

ವಿಶೇಷವೆಂದರೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲೇ ಕಾಕಂಬಿ ಹಗರಣವೇ ನಡೆದಿಲ್ಲ ಮತ್ತು ಯಾವುದೇ ತರದಲ್ಲೂ ಆರ್ಥಿಕ ನಷ್ಟವುಂಟಾಗಿಲ್ಲ ಎಂದು ಅಬಕಾರಿ ಆಯುಕ್ತರೇ ವರದಿ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts