ಹಾಸಿಗೆ ಪೂರೈಕೆ ಟೆಂಡರ್‌; 50 ಲಕ್ಷ ರು. ವಂಚನೆ ಆರೋಪ, ಅನಂತ್‌ ನಾಯಕ್‌ ಸೇರಿ 4 ಮಂದಿ ವಿರುದ್ಧ ಎಫ್‌ಐಆರ್‍‌

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆ  ಅಧೀನದ ಹಾಸ್ಟೆಲ್‌ಗಳಿಗೆ ಹಾಸಿಗೆ ಮತ್ತು ಕಂಬಳಿ   ಸರಬರಾಜು ಟೆಂಡರ್‌ ಕೊಡಿಸುವುದಾಗಿ ನಂಬಿಸಿ 50 ಲಕ್ಷ ಪಡೆದು ವಂಚಿಸಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಅನಂತ್‌ನಾಯಕ್‌ ಮತ್ತಿತರರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಇದೀಗ ಬಹಿರಂಗವಾಗಿದೆ.

 

ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವ 2 ತಿಂಗಳ ಮೊದಲು ಅಂದರೆ 2023ರ ಫೆ. 2ರಂದು  ನಡೆದಿರುವ ಈ ಪ್ರಕರಣದ ಕುರಿತು  2023ರ ಜುಲೈ  13ರಂದು ಎಫ್‌ಐಆರ್‍‌ ದಾಖಲಾಗಿರುವುದು ತಿಳಿದು ಬಂದಿದೆ. ಸದ್ಯ ಈ ಪ್ರಕರಣವು ಪ್ರಾಥಮಿಕ ವಿಚಾರಣೆ ಹಂತದಲ್ಲಿದೆ ಎಂದು ಗೊತ್ತಾಗಿದೆ.

 

ವಿಶೇಷವೆಂದರೇ  ಮುಖ್ಯಮಂತ್ರಿ  ತಮಗೆ ಆತ್ಮೀಯರು ಎಂದು  ಆರೋಪಿಗಳು  ಹೇಳಿಕೊಂಡಿದ್ದರು ಎಂಬ ಅಂಶವನ್ನೂ  ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.  ರಾಜ್ಯದ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿರುವ  ಅನಂತ್‌ನಾಯಕ್‌ ಅವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿರುವುದು ಪ್ರಗತಿಪರರಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

‘ಮುಖ್ಯ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ತನಗೆ ಆತ್ಮೀಯರು ಎಂದು ನಂಬಿಸಿ ಎರಡು ಕಂತುಗಳಲ್ಲಿ 50 ಲಕ್ಷ ರು.ಗಳನ್ನು ಪಡೆದಿದ್ದರು. ಮಾತುಕತೆಯಂತೆ ಟೆಂಡರ್‌ ಕೊಡಿಸಿರಲಿಲ್ಲ ಮತ್ತು ಪಡೆದಿದ್ದ 50 ಲಕ್ಷ ರು.ಗಳನ್ನು ವಾಪಸ್‌ ನೀಡಿರಲಿಲ್ಲ,’  ಎಂದು ಗೊಲ್ಲ ಸಮುದಾಯಕ್ಕೆ ಸೇರಿದ ವಿಜಯ್‌ ಸುಹಾಸ್‌ ಎಂಬುವರು ದೂರರ್ಜಿ ನೀಡಿದ್ದರು. ಇದನ್ನಾಧರಿಸಿ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ 2023ರ ಜುಲೈ 13ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಆರೋಪಿಗಳ ವಿರುದ್ಧ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ 1860, ಸೆಕ್ಷನ್‌ 420, 417, 419, 406, 34 ಅಡಿಯಲ್ಲಿ 2023ರ ಜುಲೈ 13ರಂದೇ ಎಫ್‌ಐಆರ್‌ ದಾಖಲಾಗಿದೆ.

 

ಅನಂತ್‌ ನಾಯಕ್‌ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ಉಳಿದಂತೆ ದೀಪಕ್‌ ಕುಮಾರ್‌ ಪಾಟೀಲ್‌ (ಎ 2), ವಿಜಯ್‌ ರಾಠೋಡ್‌ (ಎ 3), ಅಭಿಷೇಕ್‌ ಗೌಡ ( ಎ 4) ಅವರನ್ನು ಆರೋಪಿಯನ್ನಾಗಿಸಿರುವುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

 

ಎಫ್‌ಐಆರ್‌ನಲ್ಲೇನಿದೆ?

 

ದೂರುದಾರ ವಿಜಯ್‌ ಸುಹಾಸ್‌ ಎಂಬುವರಿಗೆ ವಸಂತ್‌ ಅವರ ಮುಖಾಂತರ ಪರಿಚಯವಾಗಿದ್ದ ಅನಂತ್‌ ನಾಯಕ್‌ ಎಂಬುವರು ತಾನು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು.  ತನ್ನ ಸ್ನೇಹಿತ ದೀಪಕ್‌ ಕುಮಾರ್‌ ಪಾಟೀಲ್‌ ಅವರ ಮೂಲಕ ಹಾಸ್ಟೆಲ್‌ಗಳಿಗೆ ಹಾಸಿಗೆ, ಕಂಬಳಿ ಸರಬರಾಜು ಮಾಡುವ ಟೆಂಡರ್‌ ಕೊಡಿಸುತ್ತೇನೆ. ಇದಕ್ಕಾಗಿ 50 ಲಕ್ಷ ರು.ಗಳನ್ನು ಕೊಡಬೇಕು ಎಂದು ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. ಇದೇ ಅಂಶವನ್ನು  ಎಫ್‌ಐಆರ್‍‌ನಲ್ಲಿ  ಉಲ್ಲೇಖಿಸಲಾಗಿದೆ.

 

ಮುಖ್ಯಮಂತ್ರಿಗಳು ಆತ್ಮೀಯರು ಎಂದಿದ್ದ ಆರೋಪಿ

 

ಅನಂತ್‌ನಾಯಕ್‌ ಅವರು  50 ಲಕ್ಷ ರು.ಗಳನ್ನು ಕೇಳಿದ್ದರು ಎಂದು ಆರೋಪಿಸಿರುವ  ವಿಜಯ್‌ ಸುಹಾಸ್‌ ಯಾದವ್‌ ಅವರು,  ಆ ಹಣವನ್ನು ನೀಡಲು  ನಿರಾಕರಿಸಿದ್ದರು ಎಂಬ ಅಂಶವನ್ನು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿದೆ.  ಆ ಸಂದರ್ಭದಲ್ಲಿ ‘ನನ್ನ ಮೇಲೆ ನೀನು ಅನುಮಾನಪಡಬೇಡ. ನನಗೆ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮುಖ್ಯಮಂತ್ರಿಗಳು ಬಹಳ ಆತ್ಮೀಯರಾಗಿದ್ದಾರೆ. ನೀನು ಏನು ಭಯಪಡಬೇಡ. ನಿನಗೆ ಇದರಿಂದ ಒಳ್ಳೆ ಸಂಭಾವನೆ ಬರುತ್ತದೆ. ಹೆಚ್ಚು ಲಾಭ ಸಿಗುತ್ತದೆ,’ ಎಂದು ತಿಳಿಸಿದ್ದರು ಎಂದು ಎಫ್‌ಐಆರ್‍‌ನಲ್ಲಿ  ಹೇಳಲಾಗಿದೆ.

 

50 ಲಕ್ಷ ಕೊಡಲೇಬೇಕು ಎಂದಿದ್ದ ಆರೋಪಿ

 

ಅನಂತ್‌ ನಾಯಕ್‌ ಅವರ ಮಾತನ್ನು ನಂಬಿದ್ದ ವಿಜಯ್‌ ಸುಹಾಸ್‌ ಎಂಬುವರು 50 ಲಕ್ಷ ರು.ಗಳನ್ನು ಎರಡು ಕಂತುಗಳಲ್ಲಿ ನೀಡಿದ್ದರು.

 

‘ನಿನ್ನ ಕೆಲಸ ಮಾಡಿಕೊಡುತ್ತೇನೆ, ನಿನ್ನ ಹಣಕ್ಕೆ ಭದ್ರತೆಗಾಗಿ ನಾವು ಚೆಕ್‌ ಅಥವಾ ಬಾಂಡ್‌ ಬರೆದು ಕೊಡುತ್ತೇನೆ ಎಂದು ಹೇಳಿದ್ದರು. ಹಾಗೂ ಅನಂತ್‌ ನಾಯಕ್‌ ಅವರ ಸ್ನೇಹಿತರಾದ ವಿಜಯ್‌ ರಾಥೋಡ್‌, ಅಭಿಷೇಕ್‌ ಗೌಡ ಅವರು ದೀಪಕ್‌ ಕುಮಾರ್‌ ಪಾಟೀಲ್‌ ಅವರ ಮೇಲೆ ನನಗೆ ಒಳ್ಳೆಯ ರೀತಿಯಲ್ಲಿ ಹೇಳಿ ನಂಬಿಕೆ ಬರುವಂತೆ ಮಾತನಾಡಿದ್ದರು. ಇದರಿಂದ ನಾನು ಇವರ ಮಾತನ್ನು ನಂಬಿ ವಿವಿಧ ದಿನಾಂಕಗಳಂದು ಅನಂತ್‌ ನಾಯಕ್‌ ಮತ್ತು ದೀಪಕ್‌ ಕುಮಾರ್‌ ಪಾಟೀಲ್‌ ಅವರಿಗೆ 25 ಲಕ್ಷ ರು.ಗಳನ್ನು ನನ್ನ ಸ್ನೇಹಿತರಾದ ಕೆ ನಾಗೇಶ್‌ ಮತ್ತು ಕೆ ಎನ್‌ ವಸಂತ್‌ಕುಮಾರ್‌ ಸಮಕ್ಷಮದಲ್ಲಿ ನೀಡಿರುತ್ತೇವೆ,’ ಎಂದು  ವಿಜಯ್‌ ಸುಹಾಸ್‌ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಆದರೆ ಅನಂತ್‌ ನಾಯಕ್‌ ಅವರು 50 ಲಕ್ಷ ರು. ಕೊಡಲೇಬೇಕು ಎಂದು ಕೇಳಿದ್ದರು ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.  ಈ ಮೊತ್ತವನ್ನು ನೀಡದಿದ್ದಲ್ಲಿ ಕೆಲಸ ಆಗುವುದಿಲ್ಲ ಎಂದು ಹೇಳಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

‘ಅನಂತ್‌ ನಾಯಕ್‌ ಅವರು 50 ಲಕ್ಷ ರು. ಕೊಡಲೇಬೇಕು ಎಂದಿದ್ದರು. ಇಲ್ಲವಾದಲ್ಲಿ ನಿನ್ನ ಕೆಲಸ ಆಗುವುದಿಲ್ಲವೆಂದು ಹೇಳಿದಾಗ ನಾನು ಈ ವಿಚಾರವನ್ನು ನನ್ನ ಸ್ನೇಹಿತ ಶ್ರೀನಿವಾಸಮೂರ್ತಿ ಅವರಿಗೆ ತಿಳಿಸಿದ್ದೆ. ನನ್ನ ಸ್ನೇಹಿತ ಶ್ರೀನಿವಾಸಮೂರ್ತಿ ಅವರ ಕಡೆಯಿಂದ 25 ಲಕ್ಷ ರು.ಗಳನ್ನು ದೀಪಕ್‌ ಕುಮಾರ್‌ ಪಾಟೀಲ್‌ ಮತ್ತು ಅನಂತ್‌ನಾಯಕ್‌ ಅವರಿಗೆ ನಗದಾಗಿ ಒಟ್ಟು 50 ಲಕ್ಷ ರು.ಗಳನ್ನು ನನ್ನ ಸ್ನೇಹಿತರಾದ ಕೆ ನಾಗೇಶ್‌ ಮತ್ತು ಕೆ ಎನ್‌ ವಸಂತ್‌ಕುಮಾರ್‌ ಸಮಕ್ಷಮ ನೀಡಿರುತ್ತೇವೆ.,’ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಚೆಕ್‌, ಬಾಂಡ್‌ ಬರೆದುಕೊಟ್ಟಿದ್ದ ಆರೋಪಿ

 

ವಿಜಯ್‌ ಸುಹಾಸ್‌ ಅವರಿಂದ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಆರೋಪಿಗಳು ಚೆಕ್‌ ಮತ್ತು ಬಾಂಡ್‌ ಬರೆದುಕೊಟ್ಟಿದ್ದರು ಎಂಬುದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

‘ಈ ಸಮಯದಲ್ಲಿ ದೀಪಕ್‌ಕುಮಾರ್‌ ಪಾಟೀಲ್‌ ಅವರು ಈ ಹಣದ ಭದ್ರತೆಗಾಗಿ yes bank current account NO 05136340000462 ಚೆಕ್‌ ನಂ 920302ರಲ್ಲಿ 25 ಲಕ್ಷ,  920303  ಸಂಖ್ಯೆಯ ಚೆಕ್‌ ನಲ್ಲಿ 25 ಲಕ್ಷ ರು.ಗಳನ್ನು ನಮೂದು ಮಾಡಿ ನಮಗೆ ಕೊಟ್ಟಿರುತ್ತಾನೆ. ಹಾಗೂ ಇದಕ್ಕೆ 2023ರ ಫೆ. .2ರಂದು ನಮೂದಿಸಿ ಬಾಂಡ್‌ ಸಹ ಬರೆದುಕೊಟ್ಟಿರುತ್ತಾನೆ,’ ಎಂದು ದೂರುದಾರ  ವಿವರಿಸಿರುವುದು ಗೊತ್ತಾಗಿದೆ.

 

ಈ ಚೆಕ್‌ನ್ನು ಬ್ಯಾಂಕ್‌ಗೆ ಹಾಕಲು ವಿಜಯ್‌ ಸುಹಾಸ್‌ ಮುಂದಾಗಿದ್ದರು. ‘ಆಗ ದೀಪಕ್‌ಕುಮಾರ್‌ ಪಾಟೀಲ್‌ ಅವರು ನೀವು ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಬೇಡಿ. ನನಗೆ ಒಂದು ವಾರದಲ್ಲಿ ಯಾವುದೋ ಹಣ ಬರಬೇಕು, ಹಣ ಬಂದ ನಂತರ ಹಣ ನೀಡಿ ಚೆಕ್‌ಗಳನ್ನು ವಾಪಡ್‌ ಪಡೆಯುತ್ತೇನೆ ಎಂದು ತಿಳಿಸಿದ್ದರು. ಹೀಗಾಗಿ ನಾವು ಬ್ಯಾಂಕ್‌ಗೆ ಚೆಕ್‌ ಹಾಕಿರುವುದಿಲ್ಲ,’ ಎಂದು ದೂರಿನಲ್ಲಿ ಹೇಳಲಾಗಿದೆ.

 

ಹಣ ನೀಡಲು ಸಬೂಬು ಹೇಳಿದ್ದ ಆರೋಪಿಗಳು

 

ಟೆಂಡರ್‌ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡಿದ್ದರು ಎಂದು ಆರೋಪಕ್ಕೆ ಗುರಿಯಾಗಿರುವ ಆರೋಪಿಗಳು ಟೆಂಡರ್‌ ಕೊಡಿಸಿರಲಿಲ್ಲ ಎಂದು ದೂರುದಾರ ತನ್ನ ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ. ಅಲ್ಲದೇ  ಹಣ ವಾಪಸ್‌ ಕೊಡಿ ಎಂದು ದೂರುದಾರ ಆರೋಪಿಗಳನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗಿದೆ.

 

‘ಆದರೆ ದೀಪಕ್‌ ಕುಮಾರ್‌ ಪಾಟೀಲ್‌ ಅವರು ನಮ್ಮಿಂದ 50 ಲಕ್ಷ ರು.ಗಳನ್ನು ನಗದಾಗಿ ಪಡೆದುಕೊಂಡು ನಂತರ ಯಾವುದೇ ಟೆಂಡರ್‌ ಕೊಡಿಸದೇ ಇದ್ದ ಕಾರಣ ನಾನು ಹಲವಾರು ಬಾರಿ ದೀಪಕ್‌ ಕುಮಾರ್‌ ಪಾಟೀಲ್‌, ಅನಂತ್‌ ನಾಯಕ್‌ ಅವರ ಬಳಿ ಹೋಗಿ ಟೆಂಡರ್‌ ಕೊಡಿಸುವಂತೆ ಕೇಳಿದ್ದೆವು. ಇಲ್ಲವಾದಲ್ಲಿ ನಮ್ಮ ಹಣವನ್ನು ವಾಪಸ್‌ ಕೊಡಿಸುವಂತೆ ಕೇಳಿದಾಗ ಅವರು ಇಂದು, ನಾಳೆ ಹಣ ಕೊಡುವುದಾಗಿ ಹೇಳಿಕೊಂಡು ಸಬೂಬು ಹೇಳಿಕೊಂಡು ದಿನಗಳನ್ನು ಮುಂದೂಡಿರುತ್ತಾರೆ,’ ಎಂದು ವಿವರಿಸಲಾಗಿದೆ.

 

ಹಣ ಕೊಡುವುದಿಲ್ಲ, ನಿಮಗೊಂದು ಗತಿ ಕಾಣಿಸುತ್ತೇನೆ

 

ಅಷ್ಟೇ ಅಲ್ಲ ‘ಅವರು ನಾವು ಹಣ ಕೊಡುವುದಿಲ್ಲ, ನಿಮ್ಮಿಂದ ಏನು ಆಗುತ್ತೋ ಅದನ್ನು ಮಾಡಿಕೊಳ್ಳಿ, ನಾನು ಯಾವುದಕ್ಕೂ ಹೆದರುವುದಿಲ್ಲ. ಪುನಃ ನೀವು ನನ್ನ ಬಳಿ ಹಣ ಕೇಳಿಕೊಂಡು ಬಂದರೆ ನನಗೆ ಇರುವ ಅಧಿಕಾರವನ್ನು ಉಪಯೋಗಿಸಿಕೊಂಡು ನಿಮಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ,’ ಎಂದೂ  ದೂರಲಾಗಿದೆ.

 

 

ಈ ಸಂಬಂಧ ಅನಂತ್‌ ನಾಯಕ್‌ ಮತ್ತು ದೂರುದಾರ ವಿಜಯ್‌ ಸುವಾಸ್‌ ಅವರ  ಅವರ ಪ್ರತಿಕ್ರಿಯೆಗಾಗಿ ‘ದಿ ಫೈಲ್‌’ ಸಂಪರ್ಕಿಸಿತ್ತು. ವಾಟ್ಸಾಪ್‌ ಸಂದೇಶ ಮತ್ತು ವಾಟ್ಸಾಪ್‌ ಕರೆ ಮಾಡಿತ್ತಾದರೂ ಅನಂತ್‌ ನಾಯಕ್‌ ಮತ್ತು ವಿಜಯ್‌ ಸುವಾಸ್‌  ಅವರು ಕರೆ ಸ್ವೀಕರಿಸಲಿಲ್ಲ ಮತ್ತು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಾಗುತ್ತದೆ.

 

ಈ ವರದಿ ಪ್ರಕಟವಾದ ನಂತರ ಒಂದನೇ ಆರೋಪಿ ಅನಂತ್‌ನಾಯಕ್‌ ಅವರ ವಕೀಲರಾದ ರಮೇಶ್‌ ಅವರು ‘ದಿ ಫೈಲ್‌’ಗೆ ವಾಟ್ಸಾಪ್‌ ಮೂಲಕ 8.45ಕ್ಕೆ  ಪ್ರತಿಕ್ರಿಯೆ ಕಳಿಸಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಕೊಡಲಾಗಿದೆ.

 

‘ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ದೂರುದಾರರಾದ ವಿಜಯ್‌ ಯಾದವ್‌ ಎಂಬುವರಿಗೂ ಮತ್ತು ಆರೋಪಿಯಾದಂತಹ ಅನಂತ ಅವರಿಗೆ ಯಾವುದೇ ರೀತಿ ಸಂಬಂಧವಿಲ್ಲ ಮತ್ತು ಪರಿಚಯವಿಲ್ಲ. ಒಟ್ಟಾರೆ ವ್ಯವಹಾರ ಇರುವುದು ಕೃಷ್ಣಮೂರ್ತಿ ಮತ್ತು ದೀಪಕ್‌ ಪಾಟೀಲ್‌ಗೆ. ಅದಕ್ಕಾಗಿ ಒಬ್ಬ ವಕೀಲರಾಗಿ ಕಾನೂನಿನ ಸಲಹೆ ಮತ್ತು ಅಗ್ರಿಮೆಂಟ್‌ ನ್ನು 2023ರ ಜುಲೈ 13ರಂದು  ಮಾಡಿಕೊಟ್ಟಿದ್ದು. ಅನಂತ್‌ ನಾಯಕರನ್ನು ಭೇಟಿಯಾಗಿ  ಹಣಕಾಸಿನ ವ್ಯವಹಾರದ ಬಗ್ಗೆ ಒಬ್ಬ ವಕೀಲರಾಗಿ ಅಗ್ರಿಮೆಂಟ್‌ ಮಾಡಿಕೊಟ್ಟಿದ್ದು ಸದರಿ ಅಗ್ರಿಮೆಂಟ್‌ ಪತ್ರಕ್ಕೆ ಅನಂತ್‌ ನಾಯಕ  ಸಾಕ್ಷಿ ಸಹಿ ಮಾಡಿದ್ದಾರೆ. ಅನಂತ್‌ ನಾಯಕ್‌ ಗೆಳೆಯರ ಸಹಾಯದಿಂದ ದೀಪಕ್‌ ಪಾಟೀಲ್‌ ಅವರನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಗ ಪೊಲೀಸರು  ದೀಪಕ್‌ ಅವರಿಂದ ಕೃಷ್ಣಮೂರ್ತಿ ಅವರಿಗೆ 25 ಲಕ್ಷ ರು. ಕೊಡಿಸಿದರು. ಜೊತೆಗೆ ಮುಚ್ಚಳಿಕೆ ಪಡೆದುಕೊಂಡಿದ್ದಾರೆ,’  ಎಂದು ಅನಂತ್‌ ನಾಯಕ್‌ ಅವರ ಪರ ವಕೀಲರಾದ ರಮೇಶ್‌ ಅವರು ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.

SUPPORT THE FILE

Latest News

Related Posts