ಇಲಾಖೆ, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳಲ್ಲಿ ಖಾಸಗಿ ಇ-ಮೇಲ್‌ ಬಳಕೆ; ಸರ್ಕಾರದ ಮಾಹಿತಿ ಸೋರಿಕೆ?

ಬೆಂಗಳೂರು; ಕರ್ನಾಟಕ ಸರ್ಕಾರದ ಇಲಾಖೆಗಳು, ನಿಗಮ,ಮಂಡಳಿ, ಸ್ವಾಯತ್ತೆ ಸಂಸ್ಥೆಗಳ ಮುಖ್ಯಸ್ಥರು, ವಿಶ್ವವಿದ್ಯಾಲಯಗಳ ಕುಲಪತಿಗಳು ಸರ್ಕಾರದ ಇ-ಮೇಲ್‌ ಬಳಕೆ ಮಾಡದೇ ಖಾಸಗಿ ಇ-ಮೇಲ್‌ ಬಳಸುತ್ತಿದ್ದಾರೆ. ಇದರಿಂದ ಸರ್ಕಾರದ ಮಾಹಿತಿಗಳು ಸೋರಿಕೆಯಾಗುತ್ತಿವೆ!

 

ಇಂತಹದ್ದೊಂದು ಆತಂಕಕಾರಿ ಸುದ್ದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು ಬಹಿರಂಗಗೊಳಿಸಿದ್ದಾರೆ.

 

ಸರ್ಕಾರದ ಇಲಾಖೆ, ನಿಗಮ, ಮಂಡಳಿ,ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಖಾಸಗಿ ಇ-ಮೇಲ್‌ ಬಳಕೆ ಮಾಡದೇ ಸರ್ಕಾರದ ಇ-ಮೇಲ್‌ ಬಳಕೆ ಮಾಡಬೇಕು ಎಂಬ ಬಗ್ಗೆ 2023ರ ನವೆಂಬರ್‌ 21ರಂದೇ ಡಾ ಶಾಲಿನಿ ರಜನೀಶ್‌ ಅವರು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಾರಿಗೆ, ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೆಎಸ್‌ಎಸ್‌ಐಡಿಸಿ, ಉನ್ನತ ಶಿಕ್ಷಣ, ಕೆಹಚ್‌ಬಿ, ಡಿಪಿಎಆರ್‌ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿ ಖಾಸಗಿ ಇ-ಮೇಲ್‌ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಸಾರಿಗೆ ಇಲಾಖೆಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಇ-ಮೇಲ್‌ ಬಳಕೆ ಮಾಡಲಾಗುತ್ತಿದೆ ಎಂಬುದು ಸುತ್ತೋಲೆಯಿಂದ ತಿಳಿದು ಬಂದಿದೆ.

 

ಸುತ್ತೋಲೆಯಲ್ಲೇನಿದೆ?

 

ಸರ್ಕಾರದ ಇಲಾಖೆ, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳ ಕಚೇರಿ ಕೆಲಸದ ನಿಮಿತ್ತ ಸಂಬಂಧಪಟ್ಟ ಅಧಿಕಾರಿಗಳ ಹುದ್ದೆಗಳ ಅನುಗುಣವಾಗಿ ಇ-ಮೇಲ್‌ಗಳನ್ನು 2005ನೇ ಇಸವಿಯಿಂದ ಸೃಷ್ಟಿಸಿ ಒದಗಿಸಲಾಗುತ್ತಿದೆ. ಕೆಲವು ಇಲಾಖೆ, ನಿಗಮ, ಮಂಡಳೀ, ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಇ-ಮೇಲ್‌ ಬಳಕೆ ಮಾಡದೇ ಖಾಸಗಿ ಇ-ಮೇಲ್‌ಗಳನ್ನು ಸೃಷ್ಟಿಸಿಕೊಂಡು ಕಚೇರಿ ಕೆಲಸ ನಿರ್ವಹಣೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

 

ಖಾಸಗಿ ಇ-ಮೇಲ್‌ಗಳನ್ನು ಬಳಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಸರ್ಕಾರದ ಇಲಾಖೆ, ನಿಗಮ, ಮಂಡಳಿ,ಸ್ವಾಯತ್ತ ಸಂಸ್ಥೆಗಳೊಂದಿಗೆ ವ್ಯವಹರಿಸಲು ಅನಾನುಕೂಲವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಯಾವ ಹುದ್ದೆಗೆ ಸಂಬಂಧಪಟ್ಟ ಅಧಿಕಾರಿಗಳ ಇ-ಮೇಲ್‌ ಎಂದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಖಾಸಗಿ ಇ-ಮೇಲ್‌ ಬಳಸುವುದರಿಂದ ಸರ್ಕಾರದ ಮಾಹಿತಿಗಳು ಸೋರಿಕೆಯಾಗುವ ಸಂಭವ ಉಂಟಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

 

ಸರ್ಕಾರದ ಎಲ್ಲಾ ಇಲಾಖೆ, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳ ಕಚೇರಿ ಕೆಲಸಕ್ಎಕ ಸಂಬಂಧಪಟ್ಟ ಅಧಿಕಾರಿಗಳ ಹುದ್ದೆಗಳಿಗುನುಣವಾಗಿ ಇ-ಮೇಲ್‌ಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸೃಜಿಸಿದ ಇ-ಮೇಲ್‌ಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಡಾ ಶಾಲಿನಿ ರಜನೀಶ್‌ ಅವರು ಸೂಚಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts