ಬಾಣಂತಿ, ಅಪೌಷ್ಠಿಕ ಮಕ್ಕಳ ಆಹಾರ ಖರೀದಿಯಲ್ಲೂ ಅಕ್ರಮ; 2 ಕೋಟಿ ಮೊತ್ತದ ನಕಲಿ ಬಿಲ್‌ ಸೃಷ್ಟಿ

ಬೆಂಗಳೂರು; ಮೂರು ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು ಮತ್ತು ತೀವ್ರ ಅಪೌಷ್ಠಿಕ ಮಕ್ಕಳಿಗೆ ಶೇಂಗಾ, ತೊಗರಿಬೇಳೆ, ಹೆಸರುಕಾಳು, ಹೆಸರು ಬೇಳೆ, ಉಪ್ಪು, ಬೆಲ್ಲ ಸೇರಿದಂತೆ ಇನ್ನಿತರೆ ಪೂರಕ ಪೌಷ್ಠಿಕ ಆಹಾರ ಖರೀದಿಸಲಾಗಿದೆ ಎಂದು ನಕಲಿ ಬಿಲ್‌ ತಯಾರಿಸಿ ಅಂದಾಜು 2 ಕೋಟಿ ರೂ. ಅಧಿಕ ಮೊತ್ತದ ಅಕ್ರಮ ನಡೆಸಿರುವುದು ಇದೀಗ ಬಹಿರಂಗವಾಗಿದೆ.

 

ಈ ಪ್ರಕರಣದ ಕುರಿತಂತೆ ತನಿಖೆ ನಡೆಸಬೇಕು ಎಂದು ಇಲಾಖೆಯ ಉಪ ನಿರ್ದೇಶಕರು ಸರ್ಕಾರದ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ.

 

ವಿಶೇಷವೆಂದರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರ ತವರು ಜಿಲ್ಲೆಯಲ್ಲಿಯೇ ಈ ಪ್ರಕರಣ ನಡೆದಿದೆ. ಪತ್ರ ಬರೆದು ಮೂರ್ನಾಲ್ಕು ದಿನಗಳಾದರೂ ಇಲಾಖೆ ಸಚಿವರಾಗಲೀ, ಸರ್ಕಾರದ ಕಾರ್ಯದರ್ಶಿಗಳಾಗಲೀ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ಇಲಾಖೆಯ ಉಪ ನಿರ್ದೇಶಕರು ಸರ್ಕಾರದ ಕಾರ್ಯದರ್ಶಿಗೆ 2023ರ ಡಿಸೆಂಬರ್‍‌ 20ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೇಂದ್ರದ ಪಾಲು (ಲೆಕ್ಕ ಶೀರ್ಷಿಕೆ; 2235-00-101-0-61 ಲಿಂಕ್‌ ಶೀರ್ಷಿಕೆ 2236-02-197-7-01) 28.16 ಕೋಟಿ ರು., ರಾಜ್ಯದ ಪಾಲಿನ 28.22 ಕೋಟಿ ರು.ಗಳು ಬೆಳಗಾವಿ ಜಿಲ್ಲೆಗೆ ಬಿಡುಗಡೆಯಾಗಿತ್ತು. ಈ ಮೊತ್ತವನ್ನು ಬೆಳಗಾವಿ ಜಿಲ್ಲೆಯ 14 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 9 ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕೆ ಘಟಕಗಳ ಮುಖಾಂತರ ಅಕ್ರಮವಾಗಿ ಬಿಲ್‌ ತಯಾರಿಸಲಾಗಿತ್ತು ಎಂದು ಪತ್ರದಿಂದ ತಿಳಿದು ಬಂದಿದೆ.

 

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ತಾಲೂಕಿನ ಉಪನಿರ್ದೇಶಕ ಆರ್‍‌ ನಾಗರಾಜ್‌ ಮತ್ತಿತರರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿರುವ ಪ್ರಕರಣದ ಕುರಿತು ತನಿಖೆ ನಡೆಸಬೇಕು,’ ಎಂದು ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಬೆಳಗಾವಿ ಗ್ರಾಮೀಣ, ರಾಮದುರ್ಗ, ಬೈಲಹೊಂಗಲ ಮತ್ತು ಸವದತ್ತಿಯಲ್ಲಿನ ಎಂಎಸ್‌ಪಿಎಸಿಗಳಿಗೆ ಅನಿರೀಕ್ಷಿತ ಭೇಟಿ, ತಪಾಸಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಲಿ ಉಪನಿರ್ದೇಶಕರು ಸರ್ಕಾರಕ್ಕೆ 2 ಕೋಟಿ ರು. ವಂಚನೆ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಿರುವುದು ಪತ್ರದಿಂದ ತಿಳಿದು ಬಂದಿದೆ.

 

‘ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಾಗಲೀ ಸ್ಟಾಕ್‌ ತೆಗೆದುಕೊಳ್ಳದೇ ಸರ್ಕಾರಕ್ಕೆ ಮೋಸ ಮಾಡಿ ವಂಚಿಸಿ ಸುಮಾರ 2 ಕೋಟಿ ರು. ಅಕ್ರಮ ಬಿಲ್‌ ತಯಾರಿಸಿ 6 ತಿಂಗಳಿನಿಂದ 3 ವರ್ಷದ ಮಕ್ಕಳು, 3-6 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು ಮತ್ತು ತೀವ್ರ ಅಪೌಷ್ಠಿಕ ಮಕ್ಕಳ ಹೊಟ್ಟೆ ಮೇಲೆ ಹೊಡೆದು ಪೂರಕ ಪೌಷ್ಠಿಕ ಆಹಾರವನ್ನು ನೀಡದೇ ಸುಳ್ಳು ಬಿಲ್‌ ತಯಾರಿಸಲಾಗಿದೆ,’ ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.

 

ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ಮತ್ತು ನಗರ ತಾಲೂಕುಗಳ ಎಂಎಸ್‌ಪಿಸಿಯಲ್ಲಿ ಬೆಂಗಳೂರಿನ ರಾಜಾಜಿನಗರದ ಜಗಾದಿ ಎಂಟರ್‍‌ ಪ್ರೈಸೆಸ್‌ (ಜಿಎಸ್‌ಟಿ ನಂ GST/UIN NO 29AADPU5024DIZS) ಹೆಸರಿನಲ್ಲಿ ಟ್ಯಾಕ್ಸ್‌ ಇನ್‌ವಾಯ್ಸ್‌ ಬಿಲ್‌ನ್ನು 2023ರ ಅಕ್ಟೋಬರ್‍‌ 1ರ JE/23-24/25 ಬಿಲ್‌ನಲ್ಲಿ ಪೂರಕ ಪೌಷ್ಠಿಕ ಆಹಾರ ಪಡೆಯಲಾಗಿದೆ ಎಂದು ನಕಲಿ ಬಿಲ್‌ ಸೃಷ್ಟಿಸಲಾಗಿದೆ ಎಂದು ಉಪ ನಿರ್ದೇಶಕರು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

 

ಶೇಂಗಾ ಬೀಜ, (1,550 ರು) ಕೆ ಜಿ ದರ 120 ರು. ನಂತೆ 1,86,000 ರು., 99 ರು. ನಂತೆ 900 ಕೆ ಜಿ ಹುರಿಗಡಲೆ, 89,100 ಒಟ್ಟು 2,75,100 ರು., 2023ರ ಅಕ್ಟೋಬರ್‍‌ 1ರಂದು ಬಿಲ್‌ ಸಂಖ್ಯೆ (JE/23/24 ) ಕೆ ಜಿ ಗೆ 110 ರು. ದರದಂತೆ 2,150 ಕೆ ಜಿ ಹೆಸರುಕಾಳಿಗೆ 2,36,000 ರು., 120 ರು ದರದಂತೆ 390 ಕೆ ಜಿ ಹೆಸರುಬೇಳೆಗೆ 44,850 ರು., ಕೆ ಜಿ 18 ರು.ನಂತೆ 125 ಕೆ ಜಿ ಉಪ್ಪಿಗೆ 2,250 ರು, ಕೆ ಜಿ 50 ರು,ನಂತೆ 2,172 ಕೆ ಜಿ ಬೆಲ್ಲಕ್ಕೆ 1,08,600 ರು. ಒಟ್ಟು 4,57,000 ರು.ಗಳ ಬಿಲ್‌ ತಯಾರಿಸಲಾಗಿದೆ ಎಂದು ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಬೆಳಗಾವಿ ಗ್ರಾಮೀಣ ಮತ್ತು ನಗರ ಎಂಎಸ್‌ಪಿಸಿಗಳಲ್ಲಿ ಒಟ್ಟು 7,45,855 ರು., ರಾಮದುರ್ಗ ಎಂಎಸ್‌ಪಿಸಿ (ಬಿಲ್‌ ಸಪ್ಲೈ ನಂ JE/23/24 20 ) ನಕಲಿ ಬಿಲ್‌ ತಯಾರಿಸಲಾಗಿದೆ. ಇಲ್ಲಿಯೂ 110 ರು. ದರದಲ್ಲಿ 3,000 ಕೆ ಜಿ ಹೆಸರುಕಾಳಿಗೆ 3,30,000 ರು., ಕೆ ಜಿ 120 ರು. ದರದಲ್ಲಿ 810 ಕೆ ಜಿ ತೊಗರಿಬೇಳೆಗೆ 97,200 ರು., ಕೆ ಜಿ 18 ರು.ದರದಲ್ಲಿ 175 ಕೆ ಜಿ ಉಪ್ಪಿಗೆ 3,150 ರು., ಕೆ ಜಿ 50 ರು. ನಂತೆ 1,080 ಕೆ ಜಿ ಬೆಲ್ಲಕ್ಕೆ 69,000 ರು., ಹೀಗೆ ಒಟಟ್ಉ 5,53,350 ರು.ಗಳ ಬಿಲ್‌ ತಯಾರಿಸಲಾಗಿದೆ ಎಂದು ಪರಿಶೀಲನೆ ವೇಳೆಯಲ್ಲಿ ಪತ್ತೆ ಮಾಡಲಾಗಿದೆ.

 

‘ಬೆಳಗಾವಿ ಗ್ರಾಮೀಣ ಮತ್ತು ನಗರ ತಾಲೂಕು, ರಾಮದುರ್ಗ, ಬೈಲಹೊಂಗಲ, ಸವದತ್ತಿ ತಾಲೂಕಿನ ಎಂಎಸ್‌ಪಿಸಿಗಳಲ್ಲಿ ಸದಸ್ಯರು, ಉಪ ನಿರ್ದೇಶಕರು ಸುಳ್ಳು ಬಿಲ್‌ ಸೃಷ್ಟಿಸಲಾಗಿದೆ. ಎಂಎಸ್‌ಪಿಸಿ ಸದಸ್ಯರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಸ್ಟಾಕ್‌ ಇಶ್ಯೂ ಪ್ರಮಾಣ ಪತ್ರಗಳಿಗೆ ಸಹಿ ಪಡೆದಿದ್ದಾರೆ. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಿಸಿಕೊಂಡು ಬಿಲ್‌ ತಯಾರಿಸಲಾಗಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಚೇರಿಯಿಂದ ಮೇಲು ಸಹಿ ಪಡೆಯಲಾಗಿದೆ,’ ಎಂದು ಉಪ ನಿರ್ದೇಶಕರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

 

ಎಂಎಸ್‌ಪಿಸಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳು ಈ ಅಕ್ರಮ, ಅನ್ಯಾದ ವಿರುದ್ಧ ಮಾತನಾಡದೇ ಉಪ ನಿರ್ದೇಶಕರಿಗೂ ವರದಿ ಸಲ್ಲಿಸದೇ ಇರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದಂತಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.

 

‘ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿ ವಂಚಿಸಿರುವುದರಿಂದ ಹಿಂದಿನ ಉಪನಿರ್ದೇಶಕ ಆರ್‍‌ ನಾಗರಾಜ್‌, ಪ್ರಥಮ ದರ್ಜೆ ಸಹಾಯಕ ವಿಕ್ರಮ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಉನ್ನತ ಮಟ್ಟದ ತನಿಖೆ ಮಾಡಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಈ ಮೂಲಕ ಪ್ರಸ್ತಾವನೆ ಮತ್ತು ವಾಸ್ತವಾಂಶಗಳನ್ನು ತಮ್ಮ ಗಮನಕ್ಕೆ ತರಲಾಗಿದೆ,’ ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts